Cini NewsTV Serial

ಡಿ.11ರಿಂದ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಗಂಗೆ ಗೌರಿ”.

Spread the love

ಹೊಸ ಥರದ ಮತ್ತು ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನಗೆಲ್ಲುವಲ್ಲಿ ಉದಯ ಟಿವಿ ಯಾವಾಗಲೂ ಮುಂದು. ಈಗ ಅಕ್ಕ ತಂಗಿಯರ ಅಪೂರ್ವ ಬಾಂಧವ್ಯದ ಕಥೆ ಹೇಳುವ ʻಗಂಗೆ ಗೌರಿʼ ಧಾರಾವಾಹಿಯ ಮೂಲಕ ಜನರ ಮನರಂಜಿಸಲು ಉದಯ ಟಿವಿ ಸಜ್ಜಾಗಿದೆ.ಈಗಾಗಲೇ ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ, ಜನನಿ, ನಯನತಾರಾ, ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳು ವೀಕ್ಷಕರ ಮನ ಗೆದ್ದಿವೆ.

ಈಗ ʻಗಂಗೆ ಗೌರಿʼವಿಶೇಷ ನಿರೂಪಣಾ ಶೈಲಿಯೊಂದಿಗೆ ಟಿವಿ ಮನೋರಂಜನಾ ಲೋಕಕ್ಕೆ ಲಗ್ಗೆ ಇಡಲಿದೆ. ಹಸಿರು ಮಲೆನಾಡ ಪುಟ್ಟ ಹಳ್ಳಿಯಲ್ಲಿ ಗಂಗೆ ಗೌರಿ ಎನ್ನುವ ಅಕ್ಕತಂಗಿಯರು. ಯಾರಿಗೂ ಜಗ್ಗದ ಬಗ್ಗದ, ಮಾತಿಗಿಂತ ಏಟೇ ಸರಿ ಎನ್ನುವ ಹುಡುಗಿ ತಂಗಿ ಗಂಗೆಯಾದರೆ, ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಶಾಂತ ಮೃದು ಸ್ವಭಾವದ ಅಕ್ಕ ಗೌರಿ. ಸ್ವಭಾವ ಬೇರೆಯಾದರೂ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಅನ್ಯೋನ್ಯತೆ.

ಇವರ ನಡುವೆ ಹುಡುಗನೊಬ್ಬ ಬಂದರೆ ಏನಾಗಬಹುದು? ಅವರ ಜೀವನದಲ್ಲಿ ಯಾವ ಥರಹದ ಬದಲಾವಣೆಗಳು ಆಗುತ್ತವೆ? ತಂಗಿಗೋಸ್ಕರ ಅಕ್ಕ ಗೌರಿ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ ಅಥವಾ ಅಕ್ಕ ಮತ್ತು ಪ್ರೀತಿಯ ನಡುವೆ ಗಂಗೆಯ ಆಯ್ಕೆ ಏನು? ಇವೆಲ್ಲ ಮೀರಿ ದೈವೇಚ್ಛೆ ಏನು? ಎನ್ನುವುದರ ಸುತ್ತ ಕುತೂಹಲ ಭರಿತ ತಿರುವುಗಳ ಕಥಾಹಂದರ ಇದಾಗಿದೆ. ಕಳಸದ ಹಸಿರಿನ ನಡುವೆ, ಮಲೆನಾಡ ಸುಂದರ ಹಳ್ಳಿ ಬದುಕಿನ ಹಿನ್ನೆಲೆಯ ಈ ಕಥೆ ನೋಡುಗರ ಮನಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.

ಈಗಾಗಲೇ ಅನೇಕ ಕನ್ನಡ ಅದ್ಭುತ ಸೀರಿಯಲ್ಗಳನ್ನು ನಿರ್ಮಾಣ ಮಾಡಿದ ವೃದ್ಧಿ ಕ್ರಿಯೇಶನ್ ಈ ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತಿದೆ. ಅನುಭವಿ ನಿರ್ದೇಶಕ ವಿನೋದ್ ದೋಂಡಾಳೆ ನಿರ್ದೇಶನದಲ್ಲಿ ಗಂಗೆ ಗೌರಿ ಮೂಡಿಬರುತ್ತಿದೆ.ದರ್ಶ್ ಚಂದ್ರಪ್ಪ, ಶ್ರೀವಿದ್ಯಾ ಶಾಸ್ತ್ರಿ, ದರ್ಶಿನಿ ಗೌಡ, ರೇಣುಕಾ ಬಾಲಿ, ಹೇಮಾ ಬೆಳ್ಳೂರು, ಅಪೂರ್ವ ಭಾರಧ್ವಾಜ್, ರೋಹಿತ್ ಶ್ರೀನಾಥ್, ಅಭಿಜಿತ್, ಲಕ್ಷ್ಮೀ ಸಿದ್ದಯ್ಯ ಅವರಂತಹ ಖ್ಯಾತ ಕಲಾವಿದರ ದಂಡೇ ಈ ಸೀರಿಯಲ್ನಲ್ಲಿದೆ.

ʻಗಂಗೆ ಗೌರಿʼನಮ್ಮ ಹೆಮ್ಮೆಯ ನಿರ್ಮಾಣ . ಇದು ಬೇರೆ ಸೀರಿಯಲ್ಗಳಿಗಿಂತ ವಿಭಿನ್ನವಾಗಿದೆ. ಮಲೆನಾಡಿನ ಸುಂದರ ತಾಣಗಳಿಗೆ ಹೋಗಿ ಶೂಟ್ ಮಾಡಿಕೊಂಡು ಬಂದಿದ್ದೇವೆ. ಸೀರಿಯಲ್ ನಡುವೆ ಕನ್ನಡ ಭಾವಗೀತೆಗಳನ್ನು ಬಳಸಿದ್ದೇವೆ. ಕನ್ನಡತನ ಇದರಲ್ಲಿ ಎದ್ದು ಕಾಣಿಸುತ್ತೆ. ಖಂಡಿತ ಇದು ನಮ್ಮ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.” – ವರ್ಧನ್ ಹರಿ, ನಿರ್ಮಾಪಕ “ಗಂಗೆ ಗೌರಿ” ಇದೇ ಡಿಸೆಂಬರ್‌ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.

Visited 2 times, 1 visit(s) today
error: Content is protected !!