ಸೆನ್ಸಾರ್ ಪಾಸಾದ “ಏಳುಮಲೆ”… ಸೆಪ್ಟೆಂಬರ್ 5ಕ್ಕೆ ಚಿತ್ರ ರಿಲೀಸ್.
ಕರ್ನಾಟಕ – ತಮಿಳುನಾಡು ಗಡಿಭಾಗದ ಪ್ರೇಮಕಥೆ ಏಳುಮಲೆ ಸಿನಿಮಾ ತನ್ನ ಕಂಟೆಂಟ್‌ನಿಂದ ಗಮನಸೆಳೆಯುತ್ತಿದ್ದು, ಇದೀಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು/ಎ ಪ್ರಮಾಣ ಪತ್ರ ತನ್ನದಾಗಿಸಿಕೊಂಡಿದೆ.
ಕ್ರಿಯೇಟಿವ್ ಡೈರೆಕ್ಟರ್ ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಸಿನಿಮಾ ‘ಏಳುಮಲೆ’ ಸೆಪ್ಟಂಬರ್ 5ರಂದು ಬಿಡುಗಡೆಯಾಗುತ್ತಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಏಕ್ ಲವ್ ಯಾ’ ಚಿತ್ರದ ಬಳಿಕ ಖ್ಯಾತ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ಇದಾಗಿದೆ. ಚಿತ್ರದಲ್ಲಿ ರಾಣಾಗೆ ನಾಯಕಿಯಾಗಿ ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಸಾಥ್ ಕೊಟ್ಟಿದ್ದಾರೆ. ಉಳಿದಂತೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಏಳುಮಲೆಯ ಭಾಗವಾಗಿದ್ದಾರೆ.
ಕರ್ನಾಟಕ – ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯನ್ನು ಹೊಂದಿರುವ ಈ ಪ್ರಾಜೆಕ್ಟ್ ಗೆ ತರುಣ್ ಕಿಶೋರ್ ಸುಧೀರ್ ಅವರು ಬಂಡವಾಳ ಹೂಡಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಸಹ ನಿರ್ಮಾಪಕರಾಗಿ ಜೊತೆಯಾಗಿ ನಿಂತಿದ್ದಾರೆ. ಅದ್ವಿತ್ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮಾನ್ ಸಂಗೀತ ಈ ಸಿನಿಮಾಗಿದೆ.
*ಟೈಟಲ್ ಟ್ರ್ಯಾಕ್ ಗೆ ಸಖತ್ ರೆಸ್ಪಾನ್ಸ್*
ಏಳುಮಲೆ ಸಿನಿಮಾದ ಟೈಟಲ್ ಟ್ರ್ಯಾಕ್ ನಿನ್ನೆ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಆನುಮಲೆ, ಜೇನುಮಲೆ, ಕಾಡುಮಲೆ, ಕಾಣುಮಲೆ ಎಂದು ಶುರುವಾಗುವ ಹಾಡಿಗೆ ನಿರ್ದೇಶಕ ಪುನೀತ್ ರಂಗಸ್ವಾಮಿಯವರೇ ಸಾಹಿತ್ಯ ಬರೆದಿದ್ದಾರೆ. ವಿಎಂ ಮಹಾಲಿಂಗಂ ಗೀತೆಗೆ ಧ್ವನಿಯಾಗಿದ್ದು, ಡಿ ಇಮ್ಮಾನ್ ಮ್ಯೂಸಿಕ್ ಹಾಡಿನ ತೂಕ ಹೆಚ್ಚಿಸಿದೆ.