“ಧೈರ್ಯಂ ಸರ್ವತ್ರ ಸಾಧನಂ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಸ್ವಾಮೀಜಿಗಳು.
ಬೆಳ್ಳಿ ಪರದೆಯ ಮೇಲೆ ಮತ್ತೊಂದು ಸೂಕ್ಷ್ಮ ವಿಚಾರದ ನೈಜ್ಯ ಘಟನೆಯ ಚಿತ್ರ ಬರಲು ಸಜ್ಜಾಗಿದೆ. ಬಹಳಷ್ಟು ಶ್ರಮಪಟ್ಟು ಚಿತ್ರರಂಗದಲ್ಲಿ ಒಬ್ಬ ಯಶಸ್ವಿ ನಿರ್ಮಾಪಕನಾಗಿ ಗುರುತಿಸಿಕೊಂಡು ತಮ್ಮ ಎ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಆನಂದ್ ಬಾಬು.ಜಿ ನಿರ್ಮಾಣದಲ್ಲಿ ಸಿದ್ಧವಾಗಿರುವಂತಹ ಚಿತ್ರ . “ಧೈರ್ಯಂ ಸರ್ವತ್ರ ಸಾಧನಂ”. ಈ ಚಿತ್ರವನ್ನು ಅನುಭವಿ ಯುವ ನಿರ್ದೇಶಕ ಎ.ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ , ಗೀತರಚನೆ ಹಾಗೂ ನಿರ್ದೇಶನ ಮಾಡಿದ್ದಾರೆ. ಈ “ಧೈರ್ಯಂ ಸರ್ವತ್ರ ಸಾಧನಂ” ( ಡಿ ಎಸ್ ಎಸ್ ) ಚಿತ್ರದ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿದ್ದು , ಈ ಒಂದು ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೋವಿ ಗುರುಪೀಠ , ಶ್ರೀಶ್ರೀಶ್ರೀ ಹನುಮಂತನಾಥ ಸ್ವಾಮೀಜಿಗಳು ಕುಂಚಿಟಿಗರ ಮಠ ಎಲೆರಾಂಪುರ, ತುಮಕೂರು. , ಶ್ರೀಶ್ರೀಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಆರ್ಯ ಈಡಿಗ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ, ಚಿತ್ರದ ಟ್ರೈಲರ್ ಬಗ್ಗೆ ಹಾಗೂ ಚಿತ್ರ ತಂಡದ ಶ್ರಮವನ್ನ ಗಮನಿಸಿ ಶುಭವನ್ನು ಹಾರೈಸಿದರು. ಇನ್ನು ವಿಶೇಷವಾಗಿ ಈ ಯುವ ತಂಡಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್ ಅನ್ನ ವೀಕ್ಷಿಸಿ ಒಂದು ವಿಭಿನ್ನವಾದ ಕಥೆಯನ್ನ ತೆರೆಯ ಮೇಲೆ ತರುತ್ತಿದ್ದಾರೆ. ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಪರದೆಯ ವೀಡಿಯೋ ಮೂಲಕ ಶುಭ ಹಾರೈಸಿದರು.
ನಂತರ ಸಿನಿಮಾ ಹುಟ್ಟಿಕೊಂಡ ಬಗೆಯನ್ನು ಅಣುಕು ಪ್ರದರ್ಶನದ ಮೂಲಕ ಕಲಾವಿದರು , ತಂತ್ರಜ್ಘರು ತೋರಿಸಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಎ . ಆರ್. ಸಾಯಿ ರಾಮ್ ಮಾತನಾಡುತ್ತಾ ಬಿಡಿ ಭಾಗಗಳು ಕೂಡಿಕೊಂಡು ಗನ್ ಆಗಿದೆ. ಒಬ್ಬೋಬ್ಬರೇ ಸೇರಿಕೊಂಡು ಚಿತ್ರ ಸಿದ್ದಗೊಂಡಿದೆ. ವಿಶೇಷವೆಂದರೆ ಇದೊಂದು ಸತ್ಯ ಘಟನೆಯ ಅಂಶಗಳನ್ನು ಒಳಗೊಂಡಿದೆ. ಯಾರ ಕಥೆ. ಎಲ್ಲಿ ಆಗಿದ್ದು? ಎಂಬುದನ್ನು ಕೊನೆಯಲ್ಲಿ ಆ ವ್ಯಕ್ತಿಗಳ ಭಾವಚಿತ್ರ ಹಾಗೂ ಪೂರ್ಣ ವಿವರವು ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಅವರುಗಳ ಬಳಿ ಅನುಮತಿ ಪಡೆಯಲಾಗಿದೆ. ಘಟನೆ ನಡೆದಂತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ಪಾತ್ರಧಾರಿಯು ಬದುಕಿದ್ದು, ಅವರು ಚಿತ್ರ ನೋಡಲು ಬರುತ್ತಾರೆ. ಮಾಧ್ಯಮದವರು ಪ್ರೋತ್ಸಾಹ ನೀಡಬೇಕೆಂದು ಕೋರಿಕೊಂಡರು.
ಇನ್ನು ಈ ಚಿತ್ರದ ನಿರ್ಮಾಪಕ ಆನಂದ್ ಬಾಬು. ಜಿ ಮಾತನಾಡುತ್ತಾ ಆಕಸ್ಮಿಕವಾಗಿ ಒಂದು ಕಾರ್ಯಕ್ರಮದಲ್ಲಿ ಸಿಕ್ಕ ನಿರ್ದೇಶಕರು ತುಂಬಾ ಆತ್ಮೀಯರಾದರು , ನಂತರ ಒಂದು ದಿನ ಅವರ ಮನೆಗೆ ಹೋದಾಗ ನಿರ್ದೇಶಕ ಸಾಯಿ ಅವರ ತಾಯಿ ತಮ್ಮ ಮಗನಿಗೆ ಅವಕಾಶ ನೀಡುವುದಾಗಿ ಹೇಳಿ ಬಹಳಷ್ಟು ಮೋಸ ಆಗಿದೆ ಅವನು ನಿರ್ದೇಶನ ಆಗಬೇಕೆಂಬ ಆಸೆ ಏನಾಗುತ್ತೋ ಏನೋ ಎಂದು ಕಣ್ಣಿರಿಟ್ಟರು , ಅವರಲ್ಲಿ ನನ್ನ ತಾಯಿಯನ್ನು ಕಂಡೆ , ನಾನು ಅವರಿಗೆ ಮಾತು ಕೊಟ್ಟಂತೆ ಸಾಯಿ ಇಂದು ನಿರ್ದೇಶಕರಾಗಿದ್ದಾರೆ. ಜೀವ ಹಾಗೂ ಜೀವನ ಕೊಟ್ಟ ತಾಯಿಯನ್ನ ಸದಾ ಕಾಪಾಡಿಕೊಳ್ಳಿ ಎಂದು ನಿರ್ದೇಶಕರಿಗೆ ಕಿವಿ ಮಾತನ್ನ ಹೇಳಿದರು. ಅದೇ ರೀತಿ ಚಿತ್ರದ ನಾಯಕ ವಿವಾನ್ ತಾಯಿಗೆ ಕೊಟ್ಟ ಮಾತಿನಂತೆ ಅವರು ಇಂದು ಹೀರೋ ಆಗಿದ್ದಾರೆ. ನಾನು ಹೇಳಿದಂತೆ ನಡೆದುಕೊಂಡಿದ್ದೇನೆ. ಚಿತ್ರ ಕೂಡ ಉತ್ತಮವಾಗಿ ಬಂದಿದೆ. ಎಲ್ಲರೂ ಶ್ರಮಪಟ್ಟಿದ್ದಾರೆ ಈ ಚಿತ್ರವನ್ನು ನೀವೆಲ್ಲರೂ ನೋಡಿ ಗೆಲ್ಲಿಸಬೇಕು ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ವಿವಾನ್.ಕೆ.ಕೆ. ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಹಾಗೆಯೇ ನಾಯಕಿಯಾಗಿ ಅನುಷಾ ರೈ ಸೇರಿದಂತೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಯಶ್‌ಶೆಟ್ಟಿ , ವರ್ಧನ್, ಪ್ರದೀಪ್‌ಪೂಜಾರಿ ಸೇರಿದಂತೆ ಹಲವು ಕಲಾವಿದರು ತಮ್ಮ ಪಾತ್ರಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಹಾಗೆಯೇ ಉಗ್ರಂ ಚಿತ್ರದ ಛಾಯಾಗ್ರಾಹಕ ರವಿಕುಮಾರ್ ಸನಾ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದು , ಚಿತ್ರದ ಕಥೆ ಹಾಗೂ ತಂಡದ ಆಸಕ್ತಿಯಿಂದ ನಾನು ಈ ತಂಡದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡರು.
ಸಾಹಸ ನಿರ್ದೇಶಕ ಕುಂಗುಫು ಚಂದ್ರು ಕೂಡ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಚ್ಚಿಕೊಂಡರು. ಇನ್ನು ಈ ಚಿತ್ರದಲ್ಲಿ ಬಲ ರಾಜವಾಡಿ, ಚಕ್ರವರ್ತಿ ಚಂದ್ರಚೂಡ್, ಪ್ರದೀಪ್ ಪೂಜಾರಿ , ರಾಮ್ ಪವನ್, ಮೀನಾ, ಪದ್ಮಿನಿ ಶೆಟ್ಟಿ, ಅರ್ಜುನ್‌ಪಾಳೆಗಾರ, ರಾಮ್‌ನಾಯಕ್, ಹೊಂಗಿರಣ ಚಂದ್ರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಹೃದಯಶಿವ, ಕಿನ್ನಾಳ್‌ರಾಜ್, ಅರಸು ಅಂತಾರೆ ಸಾಹಿತ್ಯದ ಐದು ಹಾಡುಗಳಿಗೆ ಜ್ಯೂಡಾಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಶ್ರೀಕಾಂತ್ ಸಂಕಲನ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು, ಕೊರಟಗೆರೆ, ದೇವರಾಯನದುರ್ಗ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆಯಂತೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಇದೇ ತಿಂಗಳು 23ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಧೈರ್ಯಂ ಸರ್ವತ್ರ ಸಾಧನಂ ಚಿತ್ರ ಬಿಡುಗಡೆಯಾಗುತ್ತಿದೆ.