*’ಡಿಯರ್ ಹಸ್ಬೆಂಡ್’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್*
ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದಲ್ಲಿ ಸೂರಜ್ – ಶರಣ್ಯಾ – ಪ್ರವೀಣ್ ನಟನೆಯ ಹೊಸ ರೊಮ್ಯಾಂಟಿಕ್ ಕ್ರೈಂ-ಥ್ರಿಲ್ಲರ್ ಕಹಾನಿಗೆ ಕಿಚ್ಚ ಸುದೀಪ್ ಸಾಥ್.
‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಹಾಗೂ ‘ನಿರಂತರ ಪ್ರೊಡಕ್ಷನ್ಸ್’ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಟೈಟಲ್ ಟೀಸರ್ ಬಿಡುಗಡೆ ಸಮಾರಂಭ ಬೆಂಗಳೂರಿನ ‘ಫಿನಿಕ್ಸ್ ಮಾಲ್ ಆಫ್ ಏಷ್ಯಾ’ದಲ್ಲಿ ಅದ್ಧೂರಿಯಾಗಿ ನೆರವೇರಿತು. ನಟರಾದ ಸೂರಜ್ ಗೌಡ, ಶರಣ್ಯಾ ಶೆಟ್ಟಿ ಹಾಗೂ ಪ್ರವೀಣ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಹೊಸಚಿತ್ರಕ್ಕೆ ‘ಡಿಯರ್ ಹಸ್ಬೆಂಡ್’ ಎಂದು ಹೆಸರಿಡಲಾಗಿದ್ದು, ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ನಟ ಕಿಚ್ಚ ಸುದೀಪ್, ‘ಡಿಯರ್ ಹಸ್ಬೆಂಡ್’ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟರಾದ ಕುಮಾರ್ ಬಂಗಾರಪ್ಪ, ಪ್ರವೀಣ್ ತೇಜ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕರಾದ ಶಶಾಂಕ್, ಎ. ಪಿ. ಅರ್ಜುನ್, ಕ್ರಿಕೆಟಿಗರಾದ ವೈಶಾಕ್ ವಿಜಯಕುಮಾರ್, ರಿತೇಶ್ ಸೇರಿದಂತೆ ಅನೇಕ ಗಣ್ಯರು ‘ಡಿಯರ್ ಹಸ್ಬೆಂಡ್’ ಟೈಟಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಇನ್ನು ‘ಡಿಯರ್ ಹಸ್ಬೆಂಡ್’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್, ‘ನಾವು ಹೊಸಬರಾಗಿ ಬಂದಾಗ, ಅನೇಕ ಹಿರಿಯರು ನಮಗೆ ಪ್ರೋತ್ಸಾಹಿಸಿ, ಬೆನ್ನು ತಟ್ಟಿದ್ದರು. ಅದೇ ಕೆಲಸವನ್ನು ನಾವು ಈಗ ಹೊಸಬರಿಗೆ ಮಾಡುತ್ತಿದ್ದೇವೆ. ಅಂತಿಮವಾಗಿ ಕನ್ನಡ ಚಿತ್ರರಂಗ ಬೆಳೆಯಬೇಕು. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಹೊಸಬರ ತಂಡದ ಮೂಲಕ ಖಂಡಿತವಾಗಿಯೂ ಹೊಸಥರದ ಸಿನಿಮಾ ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಮಾತನಾಡುತ್ತಾ ನಾನು ಬಾಲ್ಯದಿಂದಲೂ ಸಾಹಸ ಸಿಂಹ ವಿಷ್ಣುವರ್ಧನ್ ರವರ ಅಭಿಮಾನಿ , ಹಾಗೆ ಈ ಒಂದು ಕಾರ್ಯಕ್ರಮಕ್ಕೆ ನಟ ಸುದೀಪ್ ರವರು ಆಗಮಿಸಿ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದು , ನನಗೆ ವಿಷ್ಣು ಸಾರ್ ಚಾಲನೆ ಕೊಟ್ಟಂತೆ ಆಗಿದೆ. ಈ ಒಂದು ದಿನಕ್ಕಾಗಿ ಸುಮಾರು ಒಂದೂವರೆ ವರ್ಷಗಳಿಂದ ನಾವೆಲ್ಲರೂ ಸೇರಿ ಕಾಣುತ್ತಿದ್ದ ಕನಸು, ಈಗ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಕಿಚ್ಚ ಸುದೀಪ್ ಅವರ ಸಹಕಾರ ನಮ್ಮ ಚಿತ್ರಕ್ಕೆ ಸಿಕ್ಕಿರುವುದು ತುಂಬ ಖುಷಿಯಾಗಿದೆ. ಇಂದಿನ ಯುವಕರು ಇಷ್ಟಪಡುವಂಥ ಕಥೆಯೊಂದನ್ನು ಈ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ನೋಡುಗರಿಗೆ ಈ ಸಿನಿಮಾ ಖಂಡಿತವಾಗಿಯೂ ಹೊಸಥರದ ಅನುಭವ ನೀಡಲಿದೆ ಎಂಬ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಲಿದ್ದೇವೆ , ನಿಮ್ಮೆಲ್ಲರ ಪ್ರೀತಿ , ಸಹಕಾರ ನಮ್ಮ ಚಿತ್ರತಂಡದ ಮೇಲೆ ಇರಲಿ ಎಂದು ಕೇಳಿಕೊಂಡರು. ನಿರ್ಮಾಪಕ ಡಾ. ನಿರಂತರ ಗಣೇಶ್ ಮಾತನಾಡುತ್ತ ಸುದೀಪ್ ಸರ್ ಈ ಕಾರ್ಯಕ್ರಮಕ್ಕೆ ಬಂದು ನಮ್ಮ ತಂಡಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ಧನ್ಯವಾದಗಳು ತಿಳಿಸುತ್ತೇನೆ. ನಾನು ‘’ಐರಾವನ್’ ನಂತರ ನಿರ್ಮಾಣ ಮಾಡುತ್ತಿರುವ ಎರಡೇ ಸಿನಿಮಾ ಇದಾಗಿದೆ. ಇದೊಂದು ರೊಮ್ಯಾಂಟಿಕ್ – ಥ್ರಿಲ್ಲರ್ ಕಥಾಹಂದರದ ಸಿನಿಮಾ. ನಿರ್ದೇಶಕ ಗುರುರಾಜ ಕುಲಕರ್ಣಿ ಯಾವಾಗಲೂ ಸಿನಿಮಾದ ಬಗ್ಗೆಯೇ ಯೋಚಿಸುವ ವ್ಯಕ್ತಿ. ಸಿನಿಮಾದಲ್ಲಿ ಸಾಕಷ್ಟು ಅನುಭವವಿರುವಂಥವರು. ಅವರು ಹೇಳಿದ ಕಥೆ ಇಷ್ಟವಾಗಿದ್ದರಿಂದ, ಅದನ್ನು ತೆರೆಮೇಲೆ ತರಲು ಮುಂದಾಗಿದ್ದೇವೆ. ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತ ಸಬ್ಜೆಕ್ಟ್ ಒಳಗೊಂಡಿದೆ. ಎಲ್ಲರ ಸಹಕಾರದಿಂದ ಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ ಎಂದು ಹೇಳಿದರು. ನಟ ಕುಮಾರ್ ಬಂಗಾರಪ್ಪ ಮಾತನಾಡುತ್ತಾ ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ತುಂಬ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಅಂಥ ಒಳ್ಳೆಯ ಸಿನಿಮಾಗಳ ಸಾಲಿಗೆ ಈ ಸಿನಿಮಾ ಕೂಡ ಸೇರ್ಪಡೆಯಾಗುತ್ತದೆ ಎಂಬ ವಿಶ್ವಾಸವಿದೆ. ಹೊಸಬರ ತಂಡದಲ್ಲಿ ನಾನೂ ಕೂಡ ಒಂದು ಭಾಗವಾಗುತ್ತಿರುವುದಕ್ಕೆ ತುಂಬ ಖುಷಿಯಿದೆ ಎಂದರು.

ನಟ ಸೂರಜ್ ಗೌಡ ಮಾತನಾಡುತ್ತ ಇದೊಂದು ಬಹಳ ಇಂಟರೆಸ್ಟಿಂಗ್ ಆಗಿರುವಂತಹ ಕಥೆ. ಈ ‘ಡಿಯರ್ ಹಸ್ಬೆಂಡ್’ ಟೈಟಲ್ಲೇ ಬಹಳ ವಿಭಿನ್ನವಾಗಿದೆ. ನನಗೆ ಇದೊಂದು ಹೊಸತರದ ಪಾತ್ರ. ಚಿತ್ರದ ಸ್ಕ್ರಿಪ್ಟ್ ಬಹಳ ಚೆನ್ನಾಗಿದೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡುತ್ತೇವೆ. ಇಂದು ನಮ್ಮ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ ಸುದೀಪ್ ಸರ್ ಗೆ ತುಂಬಾ ಥ್ಯಾಂಕ್ಸ್ ತಿಳಿಸುತ್ತೇನೆ. ನಮಗೊಂದು ರೀತಿ ಎನರ್ಜಿ ಸಿಕ್ಕಂತಾಗಿದೆ ಎಂದರು. ಮತ್ತೊಬ್ಬ ಯುವ ಪ್ರತಿಭೆ ಪ್ರವೀಣ್ ಮಾತನಾಡುತ್ತ ನಿರ್ದೇಶಕರು ಹೇಳುತ್ತಿರುವ ಕಥೆ ನಿಜಕ್ಕೂ ಅದ್ಭುತವಾಗಿದೆ. ನನಗೆ ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರವಿದೆ. ಈ ಸಿನಿಮಾದ ಕಥೆ, ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ವವಾಗಲಿದೆ ಎಂಬ ಭರವಸೆಯಿದೆ. ಹೊಸ ವರ್ಷದ ಆರಂಭದಲ್ಲಿ ಹೊಸ ಸಿನಿಮಾವನ್ನ ಆರಂಭಿಸಿದ್ದೇವೆ. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದೇವೆ ಎಂದರು. ಇನ್ನು ನಟಿ ಶರಣ್ಯಾ ಶೆಟ್ಟಿ ಮಾತನಾಡುತ್ತಾ ಇದು ಇಂದಿನ ಜನರೇಶನ್ಗೆ ಕನೆಕ್ಟ್ ಆಗುವಂಥ ಯೂತ್ ಫುಲ್ ಸಬ್ಜೆಕ್ಟ್ ಸಿನಿಮಾ. ಇದರಲ್ಲಿ ನಾನು ವಾಸಂತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂಥದ್ದೊಂದು ವಿಭಿನ್ನ ಕಥೆ ಕಲಾವಿದರಿಗೆ ಸಿಗೋದು ಬಹಳ ಅಪರೂಪ. ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ತುಂಬ ಒಳ್ಳೆಯ ಕಥೆಗೆ ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ನೀವೆಲ್ಲರೂ ನಮ್ಮ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.

ಸದ್ಯ ‘ಡಿಯರ್ ಹಸ್ಬೆಂಡ್’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ತಿಂಗಳಾಂತ್ಯದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ. ‘ಡಿಯರ್ ಹಸ್ಬೆಂಡ್’ ಚಿತ್ರದ ಟೈಟಲ್ ಟೀಸರ್ ಗೆ ಸಚಿನ್ ಬಸ್ರೂರು ಹಿನ್ನೆಲೆ ಸಂಗೀತವಿದ್ದು, ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ ಮರವಂತೆ ಸಾಹಿತ್ಯ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ಬಿ. ಎಸ್. ಕೆಂಪರಾಜ್ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಟೈಟಲ್ ಟೀಸರ್ ಬಿಡುಗಡೆ ಮೂಲಕ ಭರದಿಂದ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ‘ಡಿಯರ್ ಹಸ್ಬೆಂಡ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.