ಸದ್ದಿಲ್ಲದೆ ‘ಡಿಯರ್ ಹಸ್ಬೆಂಡ್’ ಸಾಂಗ್ಸ್ ರೆಕಾರ್ಡಿಂಗ್ ಕಂಪ್ಲೀಟ್

Spread the love

ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಹೊಸಚಿತ್ರ ‘ಡಿಯರ್ ಹಸ್ಬೆಂಡ್’ . ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ‘ಡಿಯರ್ ಹಸ್ಬೆಂಡ್’ ಚಿತ್ರದ ತೆರೆ ಹಿಂದಿನ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ಸದ್ದಿಲ್ಲದೆ, ‘ಡಿಯರ್ ಹಸ್ಬೆಂಡ್’ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯವನ್ನೂ ಕೂಡ ಮಾಡಿ ಮುಗಿಸಿದೆ.

ಇನ್ನು ‘ಡಿಯರ್ ಹಸ್ಬೆಂಡ್’ ಚಿತ್ರದ ಕೊನೆಯ ಹಾಡಿಗೆ ಬಾಲಿವುಡ್ ನ ಖ್ಯಾತ ಗಾಯಕ ನಕಾಶ್ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಈ ಹಾಡಿನ ಧ್ವನಿಮುದ್ರಣ ಕಾರ್ಯ ನಡೆಯಿತು. ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಮಾಲಾಶ್ರೀ ಸಿಕ್ಕಳೋ… ಮೆಲ್ಲನೆ ನಕ್ಕಳೋ…’ ಎಂದು ಆರಂಭವಾಗುವ ಟಪೋರಿ ಶೈಲಿಯ ಈ ಹಾಡಿನ ಸಾಲುಗಳಿಗೆ ಪ್ರಮೋದ ಮರವಂತೆ ಸಾಹಿತ್ಯವಿದ್ದು, ಮುಂಬೈನಿಂದ ಬೆಂಗಳೂರಿಗೆ ಬಂದ ಬಾಲಿವುಡ್ ನ ಖ್ಯಾತ ಗಾಯಕ ನಕಾಶ್ ಈ ಹಾಡಿಗೆ ಧ್ವನಿಯಾಗಿ ಮೆರಗು ತಂದಿದ್ದಾರೆ.

‘ಡಿಯರ್ ಹಸ್ಬೆಂಡ್’ ಚಿತ್ರದ ಹಾಡುಗಳ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ‘ಈಗಾಗಲೇ ‘ಡಿಯರ್ ಹಲ್ಬೆಂಡ್’ ಚಿತ್ರದ ಒಂದಷ್ಟು ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಇದೀಗ ಬಾಕಿಯಿದ್ದ ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಕೂಡ ಪೂರ್ಣವಾಗಿದೆ. ಗಾಯಕ ನಕಾಶ್ ಅವರು ಸಿನಿಮಾದಲ್ಲಿ ಈ ಹಾಡಿನ ಹಿನ್ನೆಲೆ, ಸಾಹಿತ್ಯದ ಅರ್ಥವನ್ನು ತಿಳಿದುಕೊಂಡು ತುಂಬ ಖುಷಿಯಿಂದ ಈ ಹಾಡನ್ನು ಹಾಡಿದ್ದಾರೆ. ರಾತ್ರಿ ಶುರುವಾದ ಈ ಹಾಡಿನ ರೆಕಾರ್ಡಿಂಗ್ ಮುಂಜಾನೆವರೆಗೂ ನಡೆಯಿತು. ಈ ಹಾಡನ್ನು ಈ ಸಿನಿಮಾದ ಯುಎಸ್ಪಿ ಎಂದೇ ಹೇಳಬಹುದು’ ಎಂದು ವಿವರಣೆ ನೀಡಿದ್ದಾರೆ.

‘ಇಲ್ಲಿಯವರೆಗೆ ಸಂಗೀತ ನಿರ್ದೇಶ ವೀರ್ ಸಮರ್ಥ್ ಮತ್ತು ಗೀತ ಸಾಹಿತಿ ಪ್ರಮೋದ್ ಮರವಂತೆ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಹಾಡುಗಳದ್ದು ಒಂದು ಶೈಲಿಯಾಗಿದ್ದರೆ, ಈ ಹಾಡು ಅದೆಲ್ಲದಕ್ಕಿಂತ ವಿಭಿನ್ನವಾದ ಮತ್ತೊಂದು ಶೈಲಿಯಲ್ಲಿದೆ. ಖಂಡಿತವಾಗಿಯೂ ಹೊಸತರದಲ್ಲಿ ಮೂಡಿಬಂದಿರುವ ಈ ಹಾಡು ಕನ್ನಡದ ಸಿನಿಪ್ರಿಯರನ್ನ ಸೆಳೆಯಲಿದೆ. ಮಂಡ್ಯ ಹಿನ್ನೆಲೆಯಲ್ಲಿ ಈ ಹಾಡು ನೋಡುಗರನ್ನು ಕೂತಲ್ಲೇ ಕುಣಿಸುವಂತೆ ತೆರೆಮೇಲೆ ಬರಲಿದೆ’ ಎಂದು ಹಾಡಿನ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ)

ಈ ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ನಟರಾದ ಪ್ರವೀಣ್ ಗೌಡ, ಗೀತ ಸಾಹಿತಿ ಪ್ರಮೋದ್ ಮರವಂತೆ ಸೇರಿದಂತೆ ಚಿತ್ರತಂಡದ ಅನೇಕರು ಹಾಜರಿದ್ದರು.

ಇನ್ನು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ನಟರಾದ ಸೂರಜ್ ಗೌಡ, ಶರಣ್ಯಾ ಶೆಟ್ಟಿ, ಪ್ರವೀಣ್, ಕುಮಾರ ಬಂಗಾರಪ್ಪ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ ಮರವಂತೆ ಸಾಹಿತ್ಯ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಸಂಪತ್ ಡಿ. ಆರ್ ನಿರ್ಮಾಣ ವಿನ್ಯಾಸ ಮತ್ತು ಬಿ. ಎಸ್. ಕೆಂಪರಾಜ್ ಈ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ನಟ ಕಿಚ್ಚ ಸುದೀಪ್, ‘ಡಿಯರ್ ಹಸ್ಬೆಂಡ್’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ‘ಡಿಯರ್ ಹಸ್ಬೆಂಡ್’ ಚಿತ್ರದ ಮುಂದಿನ ಹಂತದ ಚಿತ್ರೀಕರಣವನ್ನು ಬೆಂಗಳೂರು, ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಗೋವಾ ಮತ್ತಿತರ ಕಡೆಗಳಲ್ಲಿ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ. ಸದ್ಯ ಭರದಿಂದ ‘ಡಿಯರ್ ಹಸ್ಬೆಂಡ್’ ಚಿತ್ರದ ಕೆಲಸಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ‘ಡಿಯರ್ ಹಸ್ಬೆಂಡ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.

Visited 1 times, 1 visit(s) today
error: Content is protected !!