Cini NewsSandalwood

ಡಿಸೆಂಬರ್ 01 ರಂದು ತೆರೆಯ ಮೇಲೆ “ಅರ್ದಂಬರ್ಧ ಪ್ರೇಮಕಥೆ” ಜರ್ನಿ.

ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಿಂದಲೂ ಹೊಸತನಕ್ಕೆ ಹೆಚ್ಚು ತೆರೆದುಕೊಂಡವರು. ಕನ್ನಡ ಚಿತ್ರರಂಗ ಇನ್ನೂ ಫಿಲ್ಮ್ ಬಳಸಿ ಸಿನಿಮಾ ಮಾಡುತ್ತಿದ್ದಾಗಲೇ ಡಿಜಿಟಲ್ ಫಾರ್ಮ್ಯಾಟಿನಲ್ಲಿ ಸಿನಿಮಾ ರೂಪಿಸಿದವರು. ತುಘ್ಲಕ್, ನಮ್ ಏರಿಯಾಲ್ ಒಂದಿನ, ಹುಲಿರಾಯ ಮೊದಲಾದ ಚಿತ್ರಗಳು ಅರವಿಂದ್ ಅವರ ವಿಭಿನ್ನ ಚಿಂತನೆಗೆ ಸಾಕ್ಷಿ. ಈ ಹಿಂದೆ ಅರವಿಂದ್ ಕೌಶಿಕ್ ಆಯ್ಕೆ ಮಾಡಿಕೊಂಡಿದ್ದ ಕಲಾವಿದರು, ತಂತ್ರಜ್ಞರೆಲ್ಲಾ ಇವತ್ತಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗಾಗಿ ಇನ್ನೇನು ತೆರೆಗೆ ಬರಲು ಸಿದ್ದಗೊಂಡಿರುವ ಅವರ ʻಅರ್ದಂಬರ್ಧ ಪ್ರೇಮಕಥೆʼಯ ಬಗ್ಗೆ ಕೂತೂಹಲಗಳು ಗರಿಗೆದರಿಕೊಂಡಿವೆ.

ಈ ಚಿತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾಗಿ ಹೆಚ್ಚು ಹೆಸರು ಮಾಡಿದ ನಟಿ ದಿವ್ಯಾ ಉರುಡುಗ ಮತ್ತು ಬೈಕರ್ ಅರವಿಂದ್ ಕೆ.ಪಿ. ಜೊತೆಯಾಗಿ ನಟಿಸಿದ್ದಾರೆ. ನಿಜಜೀವನದಲ್ಲೂ ಈ ಜೋಡಿ ಒಂದಾಗಲಿದೆ ಎನ್ನುವ ಗುಮಾನಿ ಇರುವುದು ಕೂಡಾ ʻಅರ್ದಂಬರ್ಧ ಪ್ರೇಮಕಥೆʼಯ ಕುರಿತಾಗಿ ಕ್ಯೂರಿಯಾಸಿಟಿ ಹೆಚ್ಚಲು ಕಾರಣವಾಗಿದೆ.

ಸದ್ಯಕ್ಕೆ ಅರವಿಂದ್ ಮತ್ತು ದಿವ್ಯಾ ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿದ್ದಾರೆ. ಪ್ರತೀ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರನ್ನು ಖುದ್ದು ಭೇಟಿ ಮಾಡಿ ಚಿತ್ರದ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ಡಿಸೆಂಬರ್ ೧ರಂದು ʻಅರ್ದಂಬರ್ಧ ಪ್ರೇಮಕಥೆʼ ತೆರೆಗೆ ಬರುತ್ತಿದೆ. ʻಅರ್ದಂಬರ್ಧ ಪ್ರೇಮಕಥೆʼ ಕೂಡಾ ಜರ್ನಿ ಕಥಾವಸ್ತುವನ್ನು ಹೊಂದಿದ್ದು ಈಗ ಈ ಚಿತ್ರದ ನಾಯಕ-ನಾಯಕಿ ಕೂಡಾ ಜರ್ನಿಯ ಮುಖಾಂತರ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.

ಬಕ್ಸಸ್ ಮೀಡಿಯಾ, ಆರ್.ಎ.ಸಿ ವಿಷುವಲ್ಸ್ ಮತ್ತು ಲೈಟ್ ಹೌಸ್ ಮೀಡಿಯಾದ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ಮಿಸಿದೆ. ದಿವ್ಯಾ ಮತ್ತು ಅರವಿಂದ್ ಜೊತೆಗೆ ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ ಬಹುಕಾಲದ ನಂತರ ಬಣ್ಣ ಹಚ್ಚಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಸ್ವತಃ ಅರವಿಂದ್ ಕೌಶಿಕ್ ಅವರೇ ಸಂಕಲನ ಮಾಡಿದ್ದು , ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

 

error: Content is protected !!