ಭಕ್ತಿ – ಶಕ್ತಿಯ ನಡುವೆ ತಂತ್ರಜ್ಞಾನದ ಅಬ್ಬರ… “ರಾಮಾಯಣ” ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ರಾಮಾಯಣ
ನಿರ್ದೇಶನ : ನಿತೇಶ್ ತಿವಾರಿ
ನಿರ್ಮಾಪಕರು ಯಶ್ , ನಮಿತ್ ಮಲ್ಹೋತ್ರಾ
ಸಂಗೀತ : ಎ. ಆರ್ ರೆಹಮಾನ್, ಜಿಮ್ಮರ್
ಛಾಯಾಗ್ರಹಣ : ಪಂಕಜ್ ಕುಮಾರ್, ಮಹೇಶ್
ತಾರಾಗಣ : ಯಶ್, ಸಾಯಿ ಪಲ್ಲವಿ, ರವಿ ದುಬೆ, ಅರುಣ್ ಗೋವಿಲ್, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತಾ, ವಿವೇಕ್ ಒಬೆರಾಯ್, ಅನುಪಮ್ ಖೇರ್ ಹಾಗೂ ಮುಂತಾದವರು…
ತ್ರೇತಾಯುಗದಲ್ಲಿ ಭಗವಾನ್ ವಿಷ್ಣುವಿನ 7ನೇ ಅವತಾರವೇ ಶ್ರೀರಾಮನ ಯುಗ. ‘ರಾಮಾಯಣ ‘ ಒಂದು ಪೌರಾಣಿಕ ಮಹಾಕಾವ್ಯ , ಪ್ರತಿಯೊಬ್ಬ ಭಾರತೀಯನಿಗೂ ರಾಮಾಯಣ ಎಂದಾಕ್ಷಣ ನೆನಪಿಗೆ ಬರುವುದೇ ರಾಮನ ಜನ್ಮಸ್ಥಳ ಅಯೋಧ್ಯೆ ಹಾಗೂ ಲಂಕಾಧಿಪತಿ ದಶಮುಖ ರಾವಣ. ರಾಮಾಯಣದ ಬಗ್ಗೆ ಮಹಾಋಷಿಗಳು ಅವರವರ ದೃಷ್ಟಿಕೋನದಲ್ಲಿ ಬರೆದಂತಹ ಮಹಾಕಾವ್ಯಗಳ ವಿಚಾರ ತಿಳಿದಿದ್ದೇವೆ. ಅದೇ ರೀತಿ ಕಿರುತೆರೆ ವಾಹಿನಿಯಲ್ಲಿ ಪ್ರಸಾರಗೊಂಡ ರಾಮಾಯಣ ಕೂಡ ಜನರ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದಿದೆ. ಈಗ ಬೆಳ್ಳಿ ಪರದೆಯ ಮೇಲೆ ವಿಶೇಷ ತಂತ್ರಜ್ಞಾನದೊಂದಿಗೆ ಮೂಲ ಕಥಾನಕದ ರಾಮಾಯಣವನ್ನು ತನ್ನದೇ ದೃಷ್ಟಿಕೋನದ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ರಾಮನ ಸೌಮ್ಯತೆ , ಸಹನೆಯ ನಡುವೆ ರಾವಣನ ಆರ್ಭಟ ಜೋರಾಗಿದೆ. ರಾಮನ ಹುಟ್ಟಿನ ಮೂಲ… ರಾವಣನ ಆಕ್ರೋಶಕ್ಕೆ ಕಾರಣ… ಎರಡನ್ನು ಸಮಚಿತ್ತವಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದು , ಸೀತೆಯ ಸ್ವಯಂವರ , ಪರಶುರಾಮನ ಆಗಮನ , ದಶರಥ ಮಹಾರಾಜನ ಮಮಕಾರ , ವೇದನೆ , ಮಗನ ಪಟ್ಟಾಭಿಷೇಕಕ್ಕೆ ಕೈಕೆಯ ಬೇಡಿಕೆ , ರಾಮ, ಸೀತೆ ಹಾಗೂ ಲಕ್ಷ್ಮಣನ ವನವಾಸ , ಲಂಕಾಪತಿ ರಾವಣನ ಆಳ್ವಿಕೆ , ಸೂರ್ಪನಕಿಯ ಸೌಂದರ್ಯ , ಕುಂಭಕರ್ಣನ ಶಕ್ತಿ , ಮಾಯಾವಿಗಳ ವರ್ತನೆ, ಪುಷ್ಪಕ ವಿಮಾನದಲ್ಲಿ ಸೀತಾ ಅಪಹರಣ ಜಟಾಯುವಿನ ಹೋರಾಟ ಹಾಗೂ ರಾಮನ ಶಪಥ ಎಲ್ಲವನ್ನು ನಿರ್ದೇಶಕ ಈ ಮೊದಲ ಭಾಗದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಇನ್ನೂ ಹೆಚ್ಚು ಬಿಗಿ ಮಾಡಬಹುದಿತ್ತು. ವಿಶೇಷ ಗ್ರಾಫಿಕ್ಸ್ ತಂತ್ರಜ್ಞಾನ ಚಿತ್ರವನ್ನು ಆವರಿಸಿಕೊಂಡಿದೆ.

ಬೃಹತ್ ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ರಾಮಾಯಣದ ಮೊದಲ ಭಾಗ ಅಬ್ಬರದ ಮೆರೆಗನ್ನ ತುಂಬಿಕೊಂಡಿದೆ. ರಾಮಾಯಣ ಭಾಗ 1 ರಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ತೆರೆಯ ಮೇಲೆ ಬಹಳ ಸುಂದರವಾಗಿ ಕಾಣುತ್ತಾ, ಪಾತ್ರವನ್ನು ಕೂಡ ಅಷ್ಟೇ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಸೀತೆ ಮಾತೆಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಇನ್ನಷ್ಟು ಜೀವ ನೀಡಬಹುದಿತ್ತು ಅನಿಸುತ್ತದೆ.
ಇಡೀ ಚಿತ್ರದ ಕೇಂದ್ರಬಿಂದು ರಾವಣ ಪಾತ್ರಧಾರಿ ನಟ ಯಶ್ ವೇಷ , ಭೂಷಣ , ಹತ್ತು ತಲೆ ರಾವಣನ ನೋಟ ,ನಡೆ ಎಲ್ಲವೂ ಅದ್ಭುತವಾಗಿ ಕಂಡರೂ ಧ್ವನಿಯಲ್ಲಿ ಆ ಗತ್ತು ಕುಗ್ಗಿದಂತೆ ಅನಿಸುತ್ತದೆ . ರಾವಣ ತಾಯಿಯ ಪಾತ್ರಧಾರಿ ಶೋಭನ , ಅದೇ ರೀತಿ ಸೂರ್ಪಣಕಿಯ ಪಾತ್ರಧಾರಿ ರಕುಲ್ ಪ್ರೀತ್ ಸಿಂಗ್ , ಲಕ್ಷ್ಮಣ ಪಾತ್ರಧಾರಿ ರವಿ ದುಬೆ ಸೇರಿದಂತೆ ಒಂದಷ್ಟು ಪಾತ್ರಗಳು ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ.
ಜಟಾಯು ಪಾತ್ರಕ್ಕೆ ಧ್ವನಿ ನೀಡಿರುವ ಅನುಪಮ್ ಕೇರ್ ಹಾಗೂ ಅದೇ ರೀತಿ ಗ್ರಾಫಿಕ್ಸ್ ಮೂಲಕ ಬರುವ ಪಾತ್ರಗಳು ಕೂಡ ರೋಮಾಂಚನ ಗಳಿಸುವಂತೆ ಕಾಣುತ್ತದೆ. ಸಂಭಾಷಣೆಯ ನ್ಯೂನತೆಗಳ ನಡುವೆ ಛಾಯಾಗ್ರಹಕರ ಕೈಚಳಕ , ಸಂಗೀತ , ಹಿನ್ನೆಲೆ ಸಂಗೀತದ ಮೋಡಿ , ವಿಶೇಷ ಗ್ರಾಫಿಕ್ಸ್, ವಸ್ತ್ರ ವಿನ್ಯಾಸ, ಉತ್ತಮವಾಗಿ ಮೂಡಿ ಬಂದಿದೆ. ಒಟ್ನಲ್ಲಿ ಆಧುನಿಕತೆಯ ತಂತ್ರಜ್ಞಾನದ ಮೂಲಕ ಬಂದಿರುವ ರಾಮಾಯಣ ಚಿತ್ರವನ್ನು ಎಲ್ಲರೂ ನೋಡುವಂತಿದೆ.
