ಹೊಸ ವರ್ಷಕ್ಕೆ ಜನವರಿ 8ರಂದು ‘ಮಿಸ್‌ಮ್ಯಾಚ್’ ಚಿತ್ರ ಬಿಡುಗಡೆ

Spread the love

ಸ್ಯಾಂಡಲ್ ವುಡ್ ಗೆ ಯುವ ಪಡೆಗಳ ತಂಡ ಆಗಮನ. ಹೊಸ ವರ್ಷದ ಆರಂಭಕ್ಕೆ ಪ್ರೀತಿ, ಸ್ನೇಹ ಹಾಗೂ ಹಾಸ್ಯದ ಮನರಂಜನಾತ್ಮಕ ಕಥೆಯೊಂದಿಗೆ ಬರುತ್ತಿದೆ ‘ಮಿಸ್‌ಮ್ಯಾಚ್’ ಸಿನಿಮಾ. ನಿರ್ದೇಶಕ ಸಾಯಿ ಶ್ರೀನಿಧಿ ರೂಪಿಸಿರುವ ಈ ಚಿತ್ರ ಜನವರಿ 8, 2027ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಾಯಿ ಶ್ರೀನಿಧಿ, ನಿರ್ಮಾಪಕ ತೇಜಸ್ ವೆಂಕಟೇಶ್, ನಾಯಕ ಕೌಶಿಕ್ ಗೌಡ, ನಾಯಕಿ ಅಶ್ವಿತಾ ಹೆಗ್ಡೆ, ನಟ ತೇಜೇಶ್ ಎಸ್.ಎಂ. ಹಾಗೂ ನಟಿ ಅಮೃತ ಕೆ.ಪಿ. ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.

ಮಲೆನಾಡಿನ ಪುಟ್ಟ ಊರಿನಲ್ಲಿ ನಡೆಯುವ ಈ ಕಥೆ ವಿಭಿನ್ನ ಮನೋಭಾವದ ನಾಯಕ-ನಾಯಕಿಯ ಪ್ರಪಂಚವನ್ನು ತೆರೆದಿಡುತ್ತದೆ. ನಾಯಕ ನಗರ ಜೀವನವನ್ನು ತೊರೆದು ತನ್ನೂರಿಗೆ ಮರಳಿದರೆ, ನಾಯಕಿ ಅದೇ ಊರಿನಲ್ಲಿದ್ದುಕೊಂಡು ನಗರದ ಸ್ವತಂತ್ರ ಬದುಕಿನ ಕನಸು ಕಾಣುತ್ತಾಳೆ. ಇವರಿಬ್ಬರ ಕನಸು, ಆಸೆ ಹಾಗೂ ಪ್ರೀತಿಯ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತದೆಯೇ ಎಂಬುದೇ ಚಿತ್ರದ ಕುತೂಹಲ. ಇದು ಕುಟುಂಬ ಸಮೇತ ನೋಡಬಹುದಾದ ಮುಗ್ಧ ಪ್ರೇಮಕಥೆಯಾಗಿದ್ದು, ಸಹಜ ಪಾತ್ರಗಳು, ಹಾಸ್ಯ, ಭಾವನಾತ್ಮಕ ಸನ್ನಿವೇಶಗಳು ಹಾಗೂ ಕೆಲವು ಆಕ್ಷನ್ ದೃಶ್ಯಗಳೂ ಚಿತ್ರದಲ್ಲಿವೆ ಎಂದು ನಿರ್ದೇಶಕ ಸಾಯಿ ಶ್ರೀನಿಧಿ ತಿಳಿಸಿದರು.

ಕಳೆದ 13 ವರ್ಷಗಳಿಂದ ಐಟಿ ಮತ್ತು ಎಐ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಪಕ ತೇಜಸ್ ವೆಂಕಟೇಶ್, ತಮ್ಮ ವೃತ್ತಿಜೀವನಕ್ಕೆ ವಿರಾಮ ನೀಡಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ‘ಬಿಟಿಎಸ್’ ಚಿತ್ರದಲ್ಲಿ ಹೂಡಿಕೆದಾರರಾಗಿದ್ದ ಅವರಿಗೆ ಕೌಶಿಕ್ ಅಭಿನಯ ಇಷ್ಟವಾಗಿತ್ತು. ಅವರೊಂದಿಗೆ ಸಿನಿಮಾ ಮಾಡುವ ಆಸೆಯ ಫಲವಾಗಿ ‘ಮಿಸ್‌ಮ್ಯಾಚ್’ ರೂಪುಗೊಂಡಿದೆ. ಸುಮಾರು 40ರಿಂದ 45 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಇಡೀ ಚಿತ್ರತಂಡ ಕುಟುಂಬದಂತೆ ಕೆಲಸ ಮಾಡಿದೆ. ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಅವರ ಹಾಡುಗಳು ಚಿತ್ರದ ವಿಶೇಷ ಆಕರ್ಷಣೆಯಾಗಿದ್ದು, ಈ ಚಿತ್ರದ ಮೂಲಕ ನಿರ್ಮಾಪಕರು ಹೊಸ ಮ್ಯೂಸಿಕ್ ಲೇಬಲ್ ಕೂಡ ಆರಂಭಿಸಿದ್ದಾರೆ.

ನಾಯಕ ಕೌಶಿಕ್ ಗೌಡ ಮಾತನಾಡಿ, “ನಾನು ಹಾಸನದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಿಂದಲೂ ನಟನೆಯ ಆಸೆಯಿತ್ತು. ಕಿರುಚಿತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿ, ಸಾಯಿ ಶ್ರೀನಿಧಿ ಅವರೊಂದಿಗೆ ಸುಮಾರು ಏಳು ವರ್ಷಗಳ ಒಡನಾಟದ ನಂತರ ‘ಮಿಸ್‌ಮ್ಯಾಚ್’ನಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ದೊರೆತಿದೆ. ಅನುಭವಿ ಕಲಾವಿದರು ಹಾಗೂ ತಂತ್ರಜ್ಞರೊಂದಿಗೆ ಕೆಲಸ ಮಾಡಿರುವುದು ಉತ್ತಮ ಅನುಭವ” ಎಂದರು.

ನಾಯಕಿ ಅಶ್ವಿತಾ ಹೆಗ್ಡೆ ಮಾತನಾಡಿ, ನಿರ್ದೇಶಕ ಸಾಯಿ ಶ್ರೀನಿಧಿ ಅವರ ಹಿಂದಿನ ‘ಬಿಟಿಎಸ್’ ಚಿತ್ರದ ಬಗ್ಗೆ ಇದ್ದ ತಮ್ಮ ಅಭಿಪ್ರಾಯಕ್ಕೂ ಅವರು ಹೇಳಿದ ರೊಮ್ಯಾಂಟಿಕ್ ಕಾಮಿಡಿ ಕಥೆಗೂ ಸಾಕಷ್ಟು ವ್ಯತ್ಯಾಸವಿತ್ತು. ‘ಮುಂಗಾರು ಮಳೆ’, ‘ಗಾಳಿಪಟ’ದಂತಹ ಪ್ರೇಮಕಥೆಗಳು ತಮ್ಮ ನೆಚ್ಚಿನ ಚಿತ್ರಗಳಾಗಿದ್ದು, ಇಂತಹ ಜಾನರ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಜೂಡಾ ಸ್ಯಾಂಡಿ ಅವರ ಸಂಗೀತವೂ ಚಿತ್ರದ ಮೇಲಿನ ತಮ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ನಟಿ ಅಮೃತ ಕೆ.ಪಿ. ಕೂಡ ಚಿತ್ರದ ಕಥೆ, ಪಾತ್ರಗಳ ಸಹಜತೆ ಹಾಗೂ ತಂಡದ ಹೊಸತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಉತ್ತಮ ಅನುಭವವಾಗಿದ್ದು, ಪ್ರೇಕ್ಷಕರಿಗೂ ಸಿನಿಮಾ ಹಾಗೂ ಹಾಡುಗಳು ಇಷ್ಟವಾಗುವ ವಿಶ್ವಾಸವಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇನ್ನು ನಟ ತೇಜೇಶ್ ಎಸ್.ಎಂ. ಮಾತನಾಡಿ, ಸ್ನೇಹಿತರ ಗುಂಪಿನಲ್ಲಿ ಸದಾ ತಮಾಷೆ ಮಾಡುತ್ತಾ ಎಲ್ಲರನ್ನೂ ನಗಿಸುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೇಕ್ಷಕರು ತಮ್ಮ ಸ್ನೇಹಿತರ ಬಳಗದಲ್ಲಿರುವ ಯಾರನ್ನಾದರೂ ಈ ಪಾತ್ರದಲ್ಲಿ ಗುರುತಿಸಿಕೊಳ್ಳುವಷ್ಟು ಸಹಜವಾಗಿ ಪಾತ್ರ ಮೂಡಿಬಂದಿದೆ ಎಂದರು. ಚಿತ್ರದಲ್ಲಿ ಕೌಶಿಕ್ ಗೌಡ, ಅಶ್ವಿತಾ ಹೆಗ್ಡೆ, ತೇಜೇಶ್ ಎಸ್.ಎಂ., ಅಮೃತ ಕೆ.ಪಿ. ಸೇರಿದಂತೆ ಹಿರಿಯ ನಟರಾದ ಲಕ್ಷ್ಮಿ ಸಿದ್ದಯ್ಯ, ನಾಗೇಂದ್ರ ಶಾ ಹಾಗೂ ‘ಅಯ್ಯನ ಮನೆ’ ಖ್ಯಾತಿಯ ಅನಿರುದ್ಧ ಆಚಾರ್ಯ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಗಣೇಶ್ ಮಹಾಬಲ ಅವರ ಛಾಯಾಗ್ರಹಣ ಹಾಗೂ ದೀಪಕ್ ಕುಲಾಲ್ ಅವರ ಸಂಕಲನ ಚಿತ್ರಕ್ಕಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಚಿತ್ರವು ಪ್ರೇಕ್ಷಕರಿಗೆ ಪ್ರೀತಿ, ಸ್ನೇಹ, ಹಾಸ್ಯ ಮತ್ತು ಭಾವನೆಗಳ ರಸದೌತಣ ನೀಡುವ ನಿರೀಕ್ಷೆಯಿದೆ. ಹೊಸ ವರ್ಷದ ಮೊದಲ ಮನರಂಜನಾತ್ಮಕ ಪ್ರೇಮಕಥೆಯಾಗಿ ಮೂಡಿಬರುತ್ತಿರುವ ‘ಮಿಸ್‌ಮ್ಯಾಚ್’ ಚಿತ್ರವನ್ನು ಜನವರಿ 8, 2027ರಂದು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು.

Visited 1 times, 1 visit(s) today
error: Content is protected !!