`A DATE’ ಚಿತ್ರದ ಬ್ಯಾಡ್ ಗೈ ಆಂಥಮ್ ಸಾಂಗ್ ಬಿಡುಗಡೆ.

Spread the love

ಒಂದಕ್ಕಿಂತ ಒಂದು ವಿಭಿನ್ನವಾದ ಪ್ರಯೋಗಶೀಲ ಪ್ರಯತ್ನಗಳಲ್ಲಿಯೇ ಚಿತ್ರರಂಗದ ಜೀವಂತಿಕೆ ಅಡಗಿದೆ. ಅಂಥದ್ದೇ ವಿಶಿಷ್ಟ ಕಥನದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಕನ್ನಡ ಸಿನಿಮಾ `A DATE’. ಮಹಾನಗರಿ ಬೆಂಗಳೂರಿನಲ್ಲಿ ಒಂದೇ ದಿನದ ಅವಧಿಯಲ್ಲಿ ನಡೆಯುವ, ಎರಡು ಪ್ರಮುಖ ಪಾತ್ರಗಳ ಸುತ್ತ ಸಾಗುವ ಈ ಚಿತ್ರಕ್ಕೆ ವಿಮಲ್ ರಾಜ್ ಎನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮತ್ತು ನಂತರದ ತಾಂತ್ರಿಕ ಕಾರ್ಯಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ, ಬ್ಯಾಡ್ ಗೈ ಆಂಥಮ್ ಎಂಬ ಹೊಸಾ ಆವೇಗದ ಹಾಡೊಂದನ್ನು ಬಿಡುಗಡೆಗೊಳಿಸಿದೆ.

ಈಗಿನ ಯುವ ಸಮುದಾಯಕ್ಕೆ ನೇರವಾಗಿ ತಲುಪಿಕೊಳ್ಳುವ ರ್ಯಾಪ್ ಶೈಲಿಯಲ್ಲಿರುವ ಈ ಹಾಡಿಗೆ ಸುಜನಿತ್ ಶೆಟ್ಟಿ ಹಾಗೂ ವಿಮಲ್ ರಾಜ್ ಎನ್ ಸಾಹಿತ್ಯ ಬರೆದಿದ್ದಾರೆ. ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆಯಿರುವ ಈ ಹಾಡಿನ ಮೂಲಕ ದ ಡೇಟ್ನತ್ತ ಪ್ರೇಕ್ಷಕರು ಕುತೂಹಲದ ದೃಷ್ಟಿ ಹಾಯಿಸುವ ಭರವಸೆ ಚಿತ್ರತಂಡಕ್ಕಿದೆ. ಮೂಲತಃ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ವಿಮಲ್ ರಾಜ್ ಎನ್, ಯೂಟ್ಯೂಬ್ನಲ್ಲಿ ಹಲವು ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ತಮ್ಮದೇ ಆದ ಪ್ರೇಕ್ಷಕವರ್ಗವನ್ನು ಹೊಂದಿದ್ದಾರೆ. ಕಿರುಚಿತ್ರಗಳ ಮೂಲಕ ಕಥೆ ಹೇಳುವ ತಮ್ಮದೇ ಶೈಲಿಯನ್ನು ರೂಪಿಸಿಕೊಂಡಿರುವ ಅವರು, ಇದೀಗ `A DATE’ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ, ಹಿರಿತೆರೆಯ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುವ ಉತ್ತರ ಭಾರತದ ಯುವತಿ ಮತ್ತು ದಕ್ಷಿಣ ಭಾರತದ ಯುವಕನ ಸುತ್ತ ಚಿತ್ರದ ಕಥೆ ಸಾಗುತ್ತದೆ. ಭಯ, ಕುತೂಹಲ, ಹಿಂಜರಿಕೆ, ನಂಬಿಕೆ ಮತ್ತು ಭಾವನಾತ್ಮಕ ಸಂಘರ್ಷಗಳ ನಡುವೆ ಅವರ ಒಂದು ದಿನದ ಪಯಣ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥಾಹಂದರ. ಇಂದಿನ ನಗರ ಜೀವನ, ಬದಲಾಗುತ್ತಿರುವ ಸಂಬಂಧಗಳು ಹಾಗೂ ವಿಭಿನ್ನ ಭಾಷೆ ಮತ್ತು ಸಂಸ್ಕೃತಿಗಳಿಗೆ ಸೇರಿದ ಇಬ್ಬರ ನಡುವಿನ ಮಾನವೀಯ ಸಂಪರ್ಕವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಚಿತ್ರ ತೆರೆದಿಡುತ್ತದೆ. ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೇವಲ ಎರಡು ಪ್ರಧಾನ ಪಾತ್ರಗಳ ಮೂಲಕ ಕಥೆಯನ್ನು ಕಟ್ಟಿಕೊಟ್ಟಿರುವುದು ಚಿತ್ರದ ವಿಶೇಷತೆ. ಪಿವಿಆರ್ ಐನಾಕ್ಸ್ ಸಂಸ್ಥೆ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ.

ಬೆಂಗಳೂರಿನ ಐವತ್ತೈದಕ್ಕೂ ಹೆಚ್ಚು ನೈಜ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ನಗರವೂ ಚಿತ್ರದ ಪ್ರಮುಖ ಪಾತ್ರವೊಂದರಂತೆ ಮೂಡಿಬಂದಿದೆ. ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ನಡಿ ಸಮಾನ ಮನಸ್ಕರ ತಂಡ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ, ವಿಮಲ್ ರಾಜ್ ಎನ್ ಸಂಕಲನ ಹಾಗೂ ಸುಜನಿತ್ ಶೆಟ್ಟಿ ಮತ್ತು ವಿಮಲ್ ರಾಜ್ ಎನ್ ಸಾಹಿತ್ಯವಿದೆ. ಶೀಘ್ರೆದಲ್ಲಿಯೇ `A DATE’ ಚಿತ್ರ ಬಿಡುಗಡೆ ದಿನಾಂಕ ಜಾಹೀರಾಗಲಿದೆ.

Visited 1 times, 1 visit(s) today
error: Content is protected !!