ಸಾವಿನ ಹಿಂದಿರುವ ಸತ್ಯ… ಸುಳ್ಳು…”ಬಾಸ್” (ಚಿತ್ರವಿಮರ್ಶೆ, ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಬಾಸ್
ನಿರ್ದೇಶಕ : ವಿ. ಲವ
ನಿರ್ಮಾಣ : ಸಿರಿ ಪ್ರೊಡಕ್ಷನ್ಸ್
ಸಂಗೀತ : ಡೇವಿ ಸುರೇಶ್
ಛಾಯಾಗ್ರಹಣ : ಶರತ್
ತಾರಾಗಣ : ತನುಷ್ ಶಿವಣ್ಣ , ವಂದಿತಾ ಗೌಡ , ಪಾಯಲ್ ಚಂಗಪ್ಪ , ಸಂದೀಪ್ ನೀನಾಸಂ , ವಿಜೇಶ್ ಲೀ, ವಿರಾಜ್ , ಭಾವನಾ , ಸುಜನಿತ್ ಶೆಟ್ಟಿ , ಲಕ್ಷ್ಮಣ್ ಪೂಜಾರಿ , ಪ್ರಮೋದ್ , ಭೀಮೇಶ್ ಹಾಗೂ ಮುಂತಾದವರು…
ಈ ಸಮಾಜದಲ್ಲಿ ಒಬ್ಬ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಂಡು , ಯಾವುದೇ ಕ್ಷೇತ್ರದಲ್ಲಿ ದೊಡ್ಡ ಹೆಸರಿನ ಮಾಡಿದವರ ಮೇಲೆ ಹಲವಾರು ಕಣ್ಣುಗಳು ಇದ್ದೇ ಇರುತ್ತದೆ ಎನ್ನಬಹುದು. ಅದರಲ್ಲೂ ಎಲ್ಲವೂ ಸರಿಯಾಗಿದೆ ಎನ್ನುವವರ ಬದುಕಿನಲ್ಲಿ ತಿಳಿದೋ.. ತಿಳಿಯದೋ… ದುರಂತ ಎದುರಾದರೆ ಏನೆಲ್ಲಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಹಾಗೂ ಈ ವಿಚಾರ ಹೇಗೆ ದೊಡ್ಡ ಸುದ್ದಿಯಾಗಿ ಹರಿದಾಡಿರುವುದು ಎಂಬುವುದು ತಿಳಿದಿದೆ.
ಇಂತದ್ದೇ ಒಬ್ಬ ಸ್ಟಾರ್ ಕ್ರಿಕೆಟ್ ಆಟಗಾರನ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸುತ್ತ ಬೆಸೆದುಕೊಳ್ಳುವ ಕಥಾನಕವಾಗಿ ಪ್ರೇಯಸಿ, ಸ್ನೇಹಿತರು , ಮಡದಿ , ಅಭಿಮಾನಿಗಳ ಬಾಂಧವ್ಯ, ಕಾಮುಕನ ವರ್ತನೆ , ರಾಜಕೀಯ ನಾಯಕರ ಷಡ್ಯಂತರ , ಪೊಲೀಸ್ ಇಲಾಖೆಯ ಕಾರ್ಯವೈಖರಿ ನಡುವೆ ರೋಚಕ ವಿಚಾರಗಳ ಮೂಲಕ ಯಾವುದು ಸತ್ಯ… ಯಾವುದು ಸುಳ್ಳು… ಎಂಬ ಪ್ರಶ್ನೆ ಹುಟ್ಟು ಹಾಕುವ ರೀತಿಯಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬಾಸ್”.
ಬಿಸಿಬಿ ಕ್ರಿಕೆಟ್ ಆಟಗಾರ ಎಲ್ಲಾ ಅಭಿಮಾನಿಗಳ ಮೆಚ್ಚಿನ ಬಾಸ್ (ತನುಷ ಶಿವಪ್ಪ). ಯುವ ಆಟಗಾರನ ಪ್ರೋತ್ಸಾಹಿಸುವುದರ ಜೊತೆಗೆ ತನ್ನದೇ ಗೆಳೆಯರ ಬಳಗ ಹಾಗೂ ಅಭಿಮಾನಿಗಳ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿರುವಂತಹ ವ್ಯಕ್ತಿ ಬಾಸ್. ಇದರ ನಡುವೆ ಬಾಸ್ ಪ್ರೇಯಸಿ ಶೀಲ (ವಂದಿತಾ ಗೌಡ) ಗೆ ಅನಾಮಿಕ ವ್ಯಕ್ತಿ ಮೊಬೈಲ್ ವ್ಯಾಪಾರಿ ಶಿವು ಸ್ವಾಮಿ (ಸಂದೀಪ್ ನೀನಾಸಂ) ಅಭಿಮಾನಿ ಎನ್ನುತ್ತಾ ಅನುಚಿತವಾಗಿ ವರ್ತಿಸುತ್ತಾ , ಆಶ್ಲೀಲ ಸಂಭಾಷಣೆ ಮಾಡುತ್ತ ಆಕೆಯ ಬದುಕಿಗೆ ಬಿರುಗಾಳಿಯಾಗಿ ಬರುತ್ತಾನೆ.
ಶಿವ ಸ್ವಾಮಿಗೆ ತಕ್ಕ ಪಾಠ ಕಲಿಸಬೇಕು ಎಂದು ಬಾಸ್ ಗೆಳೆಯರು , ಅಭಿಮಾನಿಗಳ ತಂಡ ದೊಡ್ಡ ಎಡವಟನ್ನ ಮಾಡಿ ಕೊಲೆಗೆ ಕಾರಣರಾಗುತ್ತಾರೆ. ಮುಂದೆ ಅದು ಕಾಣದ ಕೈಗಳ ಮೂಲಕ ರಾಜಕೀಯ ನಾಯಕರ ಷಡ್ಯಂತ್ರದೊಳಗೆ ಸಿಲುಕಿ ಪೊಲೀಸ್ ಇಲಾಖೆಗೆ ಒತ್ತಡ ಮೂಲಕ ತನಿಖೆ ಆರಂಭವಾಗಿ ಸತ್ಯ ಶೋಧನೆಯ ಸುತ್ತ ಎದುರಾಗುವ ಘಟನೆ ಹಲವು ವಿಚಾರಗಳನ್ನು ನೆನಪಿಸುತ್ತ ಕೊನೆಯ ಹಂತವನ್ನು ತಲುಪುತ್ತದೆ. ಅದು ಯಾವ ಪ್ರಕರಣ…
ಯಾವ ಸ್ಟಾರ್ ವಿಚಾರ…
ಸತ್ಯ.. ಸುಳ್ಳು… ಯಾವುದು
ಕ್ಲೈಮಾಕ್ಸ್ ಉತ್ತರ ಏನು…
ಇನ್ನು ಮುಂದೆ ಏನೆಲ್ಲಾ ಎದುರಾಗಬಹುದು ಎಂಬ ಸೂಕ್ಷ್ಮತೆಯ ಜೊತೆಗೆ ಚಿತ್ರ ಗಮನ ಸೆಳೆದಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.
ಇನ್ನು ಈ ಚಿತ್ರದ ನಿರ್ದೇಶಕ ವಿ .ಲವ ಆಯ್ಕೆ ಮಾಡಿಕೊಂಡಿರುವ ವಿಚಾರವೇ ಬಹಳ ಸೂಕ್ಷ್ಮವಾದದ್ದು , ಇದನ್ನು ನಿಭಾಯಿಸಿರುವ ರೀತಿ ಗಮನ ಸೆಳೆಯುವಂತಿದೆ. ಬಹಳಷ್ಟು ಒತ್ತಡ , ಅಡೆತಡೆಗಳ ನಡುವೆ ಸತ್ಯದ ಹುಡುಕಾಟದ ಹಾದಿ ಎಷ್ಟು ಕಠೋರ , ಸಮಸ್ಯೆಯ ಸುಳಿ ಏನೆಲ್ಲಾ ಮಾಡುತ್ತೆ , ಮುಂದೆ ಭವಿಷ್ಯದ ದಾರಿ ಏನು ಎಂಬ ಪ್ರಶ್ನೆಯೊಂದಿಗೆ ಚಿತ್ರ ಎಲ್ಲರನ್ನು ಸೆಳೆಯುವಂತಿದೆ. ನಿರ್ಮಾಪಕ ಹಾಗೂ ನಟನಾಗಿ ತನುಷ ಶಿವಪ್ಪ ಎದುರಿಸಿರುವಂತಹ ಸವಾಲುಗಳು ಹೆಚ್ಚಾಗಿದೆ ಎನ್ನಬಹುದು. ಇಂತಹ ಕಥೆಯನ್ನು ಆಯ್ಕೆ ಮಾಡಿ ಅದಕ್ಕೆ ನಟನಾಗಿ ಜೀವ ತುಂಬುವುದಕ್ಕೂ ಒಂದು ಧೈರ್ಯ ಬೇಕು.
ಅಭಿಮಾನಿಗಳು ಹಾಗೂ ಪ್ರೇಕ್ಷಕರನ್ನ ಸೆಳೆಯುವಂತಹ ವಿಚಾರ ಈ ಚಿತ್ರದಲ್ಲಿ ಇದೆ. ಇನ್ನು ನಟಿ ವಂದಿತಾ ಗೌಡ ತನ್ನ ಪಾತ್ರವನ್ನು ಬಹಳ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ಮತ್ತೊಬ್ಬ ನಟಿ ಪಾಯಲ್ ಚಂಗಪ್ಪ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಸಂದೀಪ್ ನೀನಾಸ ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ . ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಲಯಾಳಂ ಪ್ರತಿಭೆ ವಿಜೇಶ್ ಖಡಕ್ಕಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಕಾಣುತ್ತೆ. ಒಟ್ಟಾರೆ ಒಂದು ಸಾವಿನ ಪ್ರಕರಣ ಹೇಗೆಲ್ಲಾ ಟ್ವಿಸ್ಟ್ ಪಡೆಯುತ್ತೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾದಂತಿದೆ.
