ಪಕ್ಕಾ ಕೌಟಂಬಿಕ ಮನರಂಜನೆಯ ಸೆಳೆತ “ಶ್ರೀಮತಿ ಸಿಂಧೂರ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5
ಚಿತ್ರ : ಶ್ರೀಮತಿ ಸಿಂಧೂರ
ನಿರ್ದೇಶಕ : ಆರ್.ಅನಂತ ರಾಜು
ನಿರ್ಮಾಪಕ : ಡಿ.ಎನ್. ನಾಗೀರೆಡ್ಡಿ
ಸಂಗೀತ : ರಾಜೇಶ್‌ ರಾಮನಾಥ್
ಛಾಯಾಗ್ರಹಣ : ಪಿ. ಕೆ. ಹೆಚ್. ದಾಸ್
ತಾರಾಗಣ : ವಿಜಯ ರಾಘವೇಂದ್ರ , ಪ್ರಿಯಾ ಹೆಗಡೆ , ಲಿಯೋ ಮನೋಜ್, ಮಾನಸಿ ಸುಧೀರ್ , ಗಣೇಶ್‌ ರಾವ್, ರೇಷ್ಮಾ.ವಿ, ಪ್ರಸನ್ನ , ಉಗ್ರಂ ರವಿ, ಮಾಸ್ಟರ್ ಮೌರ್ಯ ಹಾಗೂ ಮುಂತಾದವರು…

ಬಹಳ ವರ್ಷಗಳ ನಂತರ ಕುಟುಂಬ ಸಮೇತ ಕುಳಿತು ನೋಡುವಂತಹ ಚಿತ್ರ ಪ್ರೇಕ್ಷಕರ ಮುಂದೆ ಬಂದಂತಿದೆ. ಬದುಕಿನಲ್ಲಿ ಸ್ನೇಹ , ಪ್ರೀತಿ , ನಂಬಿಕೆ , ವಿಶ್ವಾಸ , ದೈವಾನುಗ್ರಹ ಇದ್ದರೆ ಸಂಬಂಧಗಳು ಕೂಡ ಚೆನ್ನಾಗಿ ಸಾಗುತ್ತದೆ. ಒಂದು ವೇಳೆ ಕೆಟ್ಟ ಮನಸ್ಥಿತಿಗಳ ಕೈಚಳಕ ಶುರು ಆದರೆ ಸಮಸ್ಯೆಗಳು ಎದುರಾಗುತ್ತಾ ಹೋಗುತ್ತದೆ. ಅಂತದ್ದೇ ಒಂದು ಸುಂದರ ಪರಿಸರದ ನಡುವೆ ಇರುವ ಶ್ರೀಮಂತ ಕುಟುಂಬಕ್ಕೆ ಸಿಕ್ಕ ದೈವದತ್ತ ವಸ್ತು , ವಡವೆಗಳ ಮೇಲೆ ದುಷ್ಟರ ಕಣ್ಣು ಬಿದ್ದು , ನೆಮ್ಮದಿ ಬದುಕಿಗೆ ಹೇಗೆ ಕಂಟಕವಾಗುತ್ತಾರೆ. ಅದನ್ನು ಎದುರಿಸುವ ಪರಿ ಏನು ಎಂಬುದನ್ನು ಬಹಳ ಸೊಗಸಾಗಿ ತೆರೆಯ ಮೇಲೆ ತಂದಿರುವಂತಹ ಚಿತ್ರ “ಶ್ರೀಮತಿ ಸಿಂಧೂರ”.

ತ್ರೇತಾ ಯುಗದಲ್ಲಿ ಶ್ರೀ ರಾಮನ ಸಹೋದರ ಲಕ್ಷ್ಮಣ ಜೀವಕ್ಕೆ ಕಂಟಕ ಎದುರಾದ ಆಂಜನೇಯ ಸಂಜೀವಿನಿ ಪರ್ವತವನ್ನು ತರುವಾಗ ಒಂದು ಉಲ್ಕೆ ದಟ್ಟ ಅರಣ್ಯದಲ್ಲಿ ಬೀಳುವ ಕಥಾನಕದೊಂದಿಗೆ ಸಾಗಿ ಯುಗ ಯುಗಗಳು ಕಳೆದು ಈಗ ದಿವಾನ್ ಕುಟುಂಬಕ್ಕೆ ಅದು ಸಿಕ್ಕಿ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡುತ್ತಾ ಊರಿನಲ್ಲಿ ಉತ್ತಮ ಹೆಸರನ್ನ ಪಡೆದು ಬಡ ಜನರಿಗೆ ಸಹಾಯ ಮಾಡುತ್ತಾ ನೆಮ್ಮದಿಯಿಂದ ಬದುಕುವ ಮನೆಯ ಹಿರಿಯಳು ಅನ್ನಪೂರ್ಣ ( ಮಾನಸಿ ಸುಧೀರ್) ಆಕೆಯ ಮುದ್ದಿನ ಮಗ ಭರತ್ (ವಿಜಯ ರಾಘವೇಂದ್ರ) ವಿದೇಶದಿಂasdgadgದ ಬೆಂಗಳೂರಿಗೆ ಸ್ನೇಹಿತನ ತಂಗಿ ಮದುವೆಗೆ ಬಂದು ವಿಧಿಯ ಆಟದಂತೆ ಇಂದು (ಪ್ರಿಯ ಹೆಗಡೆ) ಳನ್ನ ಮದುವೆ ಆಗುತ್ತಾನೆ.

ತನ್ನ ತಾಯಿಯ ಮನವೊಲಿಸಿದರು , ಸೋದರ ಮಾವ ಕುಬೇರಪ್ಪ (ಗಣೇಶ ರಾವ್) ಸೇರಿದಂತೆ ಕುಟುಂಬದವರ ಒಪ್ಪಿಗೆ ಇರುವುದಿಲ್ಲ. ಇದರ ನಡುವೆ ಸಂಸಾರದಲ್ಲಿ ಒಂದಷ್ಟು ಘಟನೆ ನಡೆದು ಗರ್ಭಿಣಿಯಾಗಿರುವ ಇಂದು ನಡುವಳಿಕೆ ಬಗ್ಗೆ ಇಲ್ಲಸಲ್ಲದ ಮಾತು ಎದುರಾಗಿ ಆಕೆ ಕುಟುಂಬದಿಂದ ದೂರ ಉಳಿಯುವ ಸ್ಥಿತಿ ಎದುರಾಗುತ್ತದೆ. ಆಂಜನೇಯನ ಪರಮ ಭಕ್ತೆಯಾದ ಇಂದು ಸಮಸ್ಯೆಗಳನ್ನು ಎದುರಿಸಿ ತನ್ನ ಮಗನ ಜೊತೆ ಜೀವನ ಕಳೆಯುತ್ತಾಳೆ. ಮತ್ತೊಂದೆಡೆ ದುಷ್ಟರ ಅಟ್ಟಹಾಸ ಮಿತಿಮೀರುತ್ತದೆ. ಇದಕ್ಕಲ್ಲ ಉತ್ತರ ಏನು ಅನ್ನುವಂತೆ ಒಂದು ಶಕ್ತಿ ಎದುರಾಗುತ್ತದೆ. ಆ ದೈವ ಶಕ್ತಿ ಯಾವುದು…
ಸುಳ್ಳಿಗೆ ಶಿಕ್ಷೆ ಆಗುತ್ತಾ… ಸತ್ಯಕ್ಕೆ ಜಯ ಸಿಗುತ್ತಾ…
ಇದೆಲ್ಲದಕ್ಕೂ ಉತ್ತರ ನೀವು ಚಿತ್ರ ನೋಡಬೇಕು.

ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮನ ಮುಟ್ಟುತ್ತದೆ. ಕುಟುಂಬಗಳಲ್ಲಿ ಇರಬೇಕಾದಂತಹ ಆಚಾರ , ವಿಚಾರ , ಪ್ರೀತಿ-ವಿಶ್ವಾಸ ನಂಬಿಕೆಯ ಜೊತೆಗೆ ದುಷ್ಟರಿಗೆ ತಕ್ಕ ಪಾಠ ಕಲಿಸುವಂತಹ ಅಂಶದ ಜೊತೆಗೆ ದೈವಶಕ್ತಿ , ದುಷ್ಟ ಶಕ್ತಿಯ ನಡುವೆ ಸತ್ಯಕ್ಕೆ ಜಯ ಹೇಗೆ ಸಿಗುತ್ತೆ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ. ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ ಪರಿಣಾಮವೇ ಒಂದು ಅರ್ಥಪೂರ್ಣ ಚಿತ್ರಕ್ಕೆ ಸಾಕ್ಷಿ ಆದಂತಿದೆ.

ಚಿತ್ರಕಥೆಯಲ್ಲಿ ಒಂದಷ್ಟು ಕಡಿತ ಮಾಡಿದ್ದರೆ ಇನ್ನೂ ಸೊಗಸಾಗಿ ಸೆಳೆಯುತ್ತಿತ್ತು. ಇಡೀ ಕುಟುಂಬ ಸಮೇತ ನೋಡುವಂತಹ ಚಿತ್ರ ನೀಡಿರುವ ನಿರ್ಮಾಪಕರ ಧೈರ್ಯವನ್ನ ಒಪ್ಪಲೇಬೇಕು.
ಇನ್ನು ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು , ಅದೇ ರೀತಿ ಕ್ಯಾಮೆರಾ ಕೈ ಚಳಕವು ಕೂಡ ಅದ್ಭುತವಾಗಿದೆ. ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ. ನಾಯಕ ನಟ ವಿಜಯ ರಾಘವೇಂದ್ರ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.

ಕೆಲವು ಸಂದರ್ಭ , ಸನ್ನಿವೇಶಗಳು ಅಣ್ಣಾವ್ರ ಚಿತ್ರಗಳು ನೆನಪಿಸುತ್ತಿದೆ. ಇನ್ನು ನಟಿ ಪ್ರಿಯ ಹೆಗಡೆ ಕೂಡ ತೆರೆಯ ಮೇಲೆ ಮುದ್ದಾಗಿ ಕಾಣಿಸುತ್ತಾರೆ. ಹಾಗೆಯೇ ಸಿಕ್ಕ ಅವಕಾಶಕ್ಕೆ ನ್ಯಾಯ ನೀಡಿದ್ದಾರೆ. ವಿಶೇಷವಾಗಿ ಆಂಜನೇಯನ ಪಾತ್ರ ಮಾಡಿರುವ ಮಾರುತಿ ಕೂಡ ಚಿತ್ರದ ಹೈಲೆಟ್ ಆಗಿದ್ದಾರೆ. ದಿವಾನ್ ಪಾತ್ರದಲ್ಲಿ ನಿರ್ಮಾಪಕ ನಾಗೀ ರೆಡ್ಡಿ ಹಾಗೂ ನಾಯಕನ ತಾಯಿಯ ಪಾತ್ರ ಮಾಡಿರುವ ಮಾನಸಿ ಸುಧೀರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದೆ. ಮನರಂಜನೆಗೆ ಯಾವುದೇ ಕೊರತೆ ಇಲ್ಲದಂತಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

Visited 1 times, 1 visit(s) today
error: Content is protected !!