ಕೊಲೆಗಡುಕರ ಅಟ್ಟಹಾಸಕ್ಕೆ ಆತ್ಮ , ಸೇಡಿನ ಸಂಚು ” ಡೆಡ್ಲಿ ಕಿಲ್ಲರ್'” (ಚಿತ್ರವಿಮರ್ಶೆ-ರೇಟಿಂಗ್ : 3/5)

Spread the love

ರೇಟಿಂಗ್ : 3/5
ಚಿತ್ರ : ಡೆಡ್ಲಿ ಕಿಲ್ಲರ್’
ನಿರ್ದೇಶಕ : ಥ್ರಿಲ್ಲರ್ ಮಂಜು
ನಿರ್ಮಾಪಕ : ಪ್ರಶಾಂತ್ ಟಿ.ತಂಬ್ರಳ್ಳಿಮಠ
ಸಂಗೀತ : ವಿನು ಮನಸು
ಛಾಯಾಗ್ರಹಣ : ಮಲ್ಲಿಕಾರ್ಜುನ್
ತಾರಾಗಣ : ಅಭಯ್‌ವೀರ್, ನಿವೀಕ್ಷಾ , ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್, ಪುನೀತ್, ಅಭಿ ಹಾಗೂ ಮುಂತಾದವರು…

ನಮ್ಮ ದೇಶವನ್ನು ಕಾಪಾಡುವ ಸೈನಿಕರನ್ನು ನಾವು ಎಂದು ಮರೆಯುವಂತಿಲ್ಲ. ಇವತ್ತು ಜನಸಾಮಾನ್ಯರು ನೆಮ್ಮದಿಯಿಂದ ಇದ್ದಾರೆ ಎಂದರೆ ಅದಕ್ಕೆ ಅವರೇ ಪ್ರಮುಖ ಕಾರಣ. ಇದರ ನಡುವೆಯೂ ದೇಶದ್ರೋಹಿಗಳು ಸಂಚು ಮಾಡುತ್ತಾ ದುಷ್ಕೃತ್ಯಗಳನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಇಂಥವರನ್ನ ಎಡೆಮುರಿ ಕಟ್ಟಿ ತಕ್ಕ ಪಾಠ ಕಲಿಸುವ ಶಕ್ತಿ ಇರುವುದು ನಮ್ಮ ಪೊಲೀಸ್ ಇಲಾಖೆಗೆ.

ಇಂಥದೇ ಕಥಾನಕ ಮೂಲಕ ದುಷ್ಟರ ಅಟ್ಟಹಾಸಕ್ಕೆ ಸಿಲುಕುವ ಜೋಡಿಗಳ ಬದುಕಿನಲ್ಲಿ ಎದುರಾಗುವ ಕಷ್ಟಗಳು , ಸಾವು , ನೋವಿನ ಸುಳಿಯಲ್ಲಿ ಆತ್ಮದ ಸಂಚಲನದ ಎಳೆಯೊಂದಿಗೆ ಆಕ್ಷನ್ , ಲವ್ , ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಡೆಡ್ಲಿ ಕಿಲ್ಲರ್”. ನಟೋರಿಯಸ್ ಕಿಲ್ಲರ್ ಗಳನ್ನು ಕರ್ನಾಟಕ ಪೊಲೀಸ್ ಒರಿಸ್ಸಾ ದಲ್ಲಿ ಸೆರೆಹಿಡಿದು ಕರೆತರುವಾಗ ಆಂಧ್ರಪ್ರದೇಶದ ದಟ್ಟ ಅರಣ್ಯದಲ್ಲಿ ತಪ್ಪಿಸಿಕೊಳ್ಳುತ್ತಾರೆ.

ಡಾನ್ (ಥ್ರಿಲ್ಲರ್ ಮಂಜು) ಹಾಗೂ ಆತನ ಗ್ಯಾಂಗ್ ಕಾಡಿನೊಳಗೆ ಒಂದು ಭವ್ಯ ಬಂಗಲೆಗೆ ನುಗುತ್ತಾರೆ. ಆ ಮನೆಯಲ್ಲಿ ಜಯಸಿಂಹ (ಅಭಯ್ ವೀರ್) ಮತ್ತು ಆತನ ಮುದ್ದಾದ ಮಡದಿ ಕಾವೇರಿ (ನಿವೀಕ್ಷಾ) ಜೊತೆ ಪ್ರೀತಿ , ಪ್ರಣಯದೊಂದಿಗೆ ಇರುವಾಗಲೇ ಡಾನ್ ಹಾಗೂ ಗ್ಯಾಂಗ್ ಪ್ರವೇಶ ಮಾಡಿ ಜೋಡಿಯನ್ನ ಹಿಂಸಿಸಿ ತೊಂದರೆ ನೀಡಲು ಆರಂಭಿಸುತ್ತಾರೆ.

ಒಂದು ಕಡೆ ಪೊಲೀಸ್ ಹುಡುಕಾಟ ಇದ್ದರೆ , ಮತ್ತೊಂದೆಡೆ ಈ ಕ್ರೂರಿಗಳು ಎಸ್ಕೇಪ್ ಆಗಲು ಪ್ಲಾನ್ ಮಾಡುತ್ತಾರೆ. ಇದರ ನಡುವೆ ವಿಚಿತ್ರ ಘಟನೆಗಳು ಎದುರಾಗಿ ಆತ್ಮ ಗೋಚರವಾಗುತ್ತದೆ. ಒಂದಕ್ಕೊಂದು ಕೊಂಡಿಯಂತೆ ಸಾಗುವಾಗ ಒಂದು ಫ್ಲಾಶ್ ಬ್ಯಾಕ್ ಘಟನೆ ಅಡಗಿರುತ್ತದೆ.  ಅದು ಏನು… ಆತ್ಮ ಯಾರದು… ಪ್ರೇಮಿಗಳ ಪಾಡೇನು… ಕೊಲೆಗಡುಕರ ಗತಿ ಏನು… ಪೊಲೀಸ್ ಹುಡುಕಾಟ ಏನಾಗುತ್ತೆ… ಇದೆಲ್ಲದಕ್ಕೂ ಉತ್ತರ ಸಿಗಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಬಹಳ ವರ್ಷಗಳ ನಂತರ ಥ್ರಿಲ್ಲರ್ ಮಂಜು ನಿರ್ದೇಶನದ ಮೂಲಕ ಮಾಸ್ ಆಕ್ಷನ್ ನೊಂದಿಗೆ ಸಸ್ಪೆನ್ಸ್ , ಥ್ರಿಲ್ಲರ್, ಹಾರರ್ ಹಿನ್ನೆಲೆ ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಡಮಿಲ್ , ಡಿಮಿಲ್ ಎನ್ನುತ್ತಾ ಆಕ್ಷನ್ ಗಳು ಎಷ್ಟು ಫೋರ್ಸ್ ಆಗಿರುತ್ತೋ… ಸಂಭಾಷಣೆಯು ಕೂಡ ಅಷ್ಟೇ ವೇಗವಾಗಿ ಅಬ್ಬರಿಸಿದೆ. ದುಷ್ಟರನ್ನು ಸೆರೆಹಿಡಿದು ಶಿಕ್ಷಿಸಲು ಕರೆತರವಾಗ ವಿಧಿಯೇ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತೇನೆ ಎನ್ನುವ ಅಂಶವನ್ನ ಒಳಗೊಂಡಿದೆ.

ಆತ್ಮದ ಕಥೆ ಹಿಂದಿರುವ ನೋವನ್ನ ಹೇಳಿರುವ ಈ ಚಿತ್ರದಲ್ಲಿ ಆಕ್ಷನ್ ಹೆಚ್ಚು ಆವರಿಸಿಕೊಂಡಿದ್ದು , ಚಿತ್ರಕಥೆ ಬಹಳಷ್ಟು ಕಡಿತ ಮಾಡಬೇಕಿತ್ತು ಅನಿಸುತ್ತದೆ. ಇಂತಹ ಆಕ್ಷನ್ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದ್ದು , ಸಂಗೀತಕ್ಕೆ ಹಿನ್ನೆಲೆ ಸಂಗೀತ ಆವರಿಸಿಕೊಂಡಿದೆ. ನಾಯಕನಿಗೆ ಅಭಿನಯಿಸಿರುವ ಅಭಯ್ ವೀರ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದು, ಆಕ್ಷನ್ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯಾಗಿ ನಿವೀಕ್ಷಾ ತನ್ನ ಪಾತ್ರಕ್ಕೆ ಜೀವ ತುಂಬಲು ಶ್ರಮಪಟ್ಟಿದ್ದಾರೆ.

ಉಳಿದಂತೆ ಅಭಿನಯಿಸಿರುವ ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್, ಪುನೀತ್, ಅಭಿ ಎಲ್ಲರೂ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇದೊಂದು ಲವ್ , ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಹಿನ್ನೆಲೆ ಇರುವ ಈ ಚಿತ್ರ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!