ಗಾಂಜಾ , ಡ್ರಗ್ಸ್ ದಂಧೆಯಲ್ಲಿ ಚದುರಂಗದ ಆಟ…”ಮ್ಯಾಂಗೋ ಪಚ್ಚ” (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಮ್ಯಾಂಗೋ ಪಚ್ಚ
ನಿರ್ದೇಶಕ : ವಿವೇಕ ಪ್ರಕಾಶ್
ನಿರ್ಮಾಪಕರು : ಪ್ರಿಯಾ ಸುದೀಪ್ , ಕಾರ್ತಿಕ್ ಆರ್ ಗೌಡ , ಯೋಗಿ ಜೀ ರಾಜ್
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಶೇಖರ್ ಚಂದ್ರು
ತಾರಾಗಣ : ಸಂಚಿತ್ ಸಂಜೀವ್ , ಕಾಜಲ್ ಕುಂದರ್ , ಮಯೂರ್ ಪಟೇಲ್ , ಉಗ್ರಂ ಮಂಜು , ಜೈ ಗೋಪಿನಾಥ್ , ಹರಿಣಿ ಶ್ರೀಕಾಂತ್ ಹಾಗೂ ಮುಂತಾದವರು…
‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ’… ಎಂಬ ಡೈಲಾಗ್ ನಾಯಕನ ಗುರಿ ಎಂದೆನಿಸಿದರು ಕಥಾವಸ್ತು ಡ್ರಗ್ಸ್ ದಂಧೆಯ ಸುತ್ತ ಬೆಸೆದುಕೊಂಡಿದೆ. ಮಧ್ಯಮ ವರ್ಗ ಕುಟುಂಬದ ಕನಸು , ಆಸೆ , ಪ್ರೀತಿ , ಸಂಬಂಧ , ಒಡನಾಟ , ದಾಯಾದಿಗಳ ದ್ವೇಷ , ಬದುಕಿಗಾಗಿ ಡ್ರಗ್ಸ್ ದಂಧೆಯ ಹಾದಿಗೆ ರಾಜಕೀಯ ನಾಯಕರ ಸಾತ್, ಖಾಕಿಯ ಬೇಟೆ ಹೀಗೆ ಒಂದಷ್ಟು ವಿಚಾರದಗಳೊಂದಿಗೆ ಮಾದಕ ದ್ರವ್ಯ , ಪೆಡ್ಲರ್ ಕುತಂತ್ರ ಎಷ್ಟು ಅಪಾಯಕಾರಿ ಎಂಬ ಸತ್ಯವನ್ನ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮ್ಯಾಂಗೋ ಪಚ್ಚ”.
ನನ್ನ ತಾಯಿ ಪದ್ಮ ಹಾಗೂ ತಮ್ಮ ಶಾಮ ಹಾಗೂ ಪ್ರೀತಿಯ ಗೆಳತಿ ಸೂಜಿ ಜೊತೆ ಜೀವನ ನಡೆಸುವ ಪ್ರಶಾಂತ್ ಪಚ್ಚಿ (ಸಂಚಿತ್ ಸಂಜೀವ್)ಗೆ ಡಿವಿಡಿ ಅಂಗಡಿಯ ಬದುಕು. ತನ್ನ ತಂದೆ ಎರಡನೇ ಮದುವೆ ಆಗಿರುವ ಕಾರಣ ತನ್ನ ಚಿಕ್ಕಮ್ಮ ಅಣ್ಣ ನಾಗಪ್ಪ (ಮಯೂರು ಪಾಟೀಲ್) ನನ್ನ ಕಂಡರೆ ಕೋಪ.

ಇನ್ನು ಪಚ್ಚನ ತಂದೆ ಸಾವಿನ ನಂತರ ಇಬ್ಬರು ಮಕ್ಕಳನ್ನ ಕರೆಸುವ ತಂದೆಯ ಸ್ನೇಹಿತ ಮಹೇಂದ್ರ (ಮೇಯರ್) ರಾಜಕೀಯ ಚದುರಂಗ ಆಟ ಆರಂಭಿಸುತ್ತಾ ಗಾಂಜಾ ಸೊಪ್ಪು ಬೆಳೆಯಲು ಪಚ್ಚ ನಿಗೆ ಮುದ್ದಾಳತ್ವ ನೀಡಿ , ರಾಜಕೀಯ ಕನಸು ಕಾಣುವ ನಾಗಪ್ಪನಿಗೆ ಉಸ್ತುವಾರಿಕೆ ವಹಿಸುತ್ತಾನೆ.
ದಂದೆ ಆರ್ಭಟ ಜೋರದಂತೆ ಹಣದ ಹೊಳೆಯ ಜೊತೆಗೆ ಸುಖ ಸಂತೋಷದ ಜೊತೆಗೆ ಪ್ರೀತಿಯ ಗೆಳತಿ ಸೂಜಿ (ಕಾಜಲ್ ಕುಂದರ್) ಜೊತೆ ಮದುವೆ ಆಗಲು ನಿರ್ಧರಿಸುತ್ತಾನೆ. ಮುಂದೆ ಎದುರಾಗುವ ಒಂದಷ್ಟು ಫ್ಲಾಶ್ ಬ್ಯಾಕ್ ಘಟನೆಗಳು , ಸಾವು , ನೋವುಗಳ ನಿಗೂಢ ಸತ್ಯದ ಅನಾವರಣ ಆಗುತ್ತಾ ಹೋಗುತ್ತದೆ. ಅದು ಏನು… ಯಾಕೆ… ಕ್ಲೈಮ್ಯಾಕ್ ನೀಡುವ ಉತ್ತರ ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಬೆಳ್ಳಿ ಪರದೆಗೆ ನಾಯಕನಾಗಿ ಎಂಟ್ರಿ ಪಡೆದಿರುವ ಸಂಚಿತ್ ಸಂಜೀವ್ ನೋಡಲು ಕಟ್ಟು ಮಸ್ತಿನ ಹುಡುಗ , ಗತ್ತಿನ ಧ್ವನಿ ಕೂಡ ಗಮನ ಸೆಳೆಯುತ್ತದೆ. ಆಕ್ಷನ ಸನ್ನಿವೇಶವನ್ನ ಖಡಕ್ಕಾಗಿ ನಿರ್ವಹಿಸಿದ್ದು , ಪಾತ್ರಕ್ಕೆ ಇನ್ನಷ್ಟು ಪರಿಪಕ್ವತೆ ಅನಿಸುತ್ತದೆ. ಸಿಕ್ಕ ಅವಕಾಶಕ್ಕೆ ಶ್ರಮಪಟ್ಟು ಅಭಿನಯಿಸಿದಂತಿದೆ. ಇನ್ನು ನಾಯಕಿಯಾಗಿ ಕಾಜಲ್ ಕುಂದರ್ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ರಾಜಕೀಯ ನಾಯಕನಾಗಿ ಮಹೇಂದ್ರ ಪಾತ್ರವನ್ನು ನಿರ್ವಹಿಸಿರುವ ಪ್ರತಿಭೆ ಗಮನ ಸೆಳೆಯುವಂತೆ ಜೀವಿಸಿದ್ದಾರೆ.
ಬಹಳ ಗ್ಯಾಪ್ ನಂತರ ಮತ್ತೆ ಮಯೂರ್ ಪಾಟೀಲ್ ತಮ್ಮ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಉಳಿದಂತೆ ಅಭಿನಯಿಸಿರುವ ಉಗ್ರಂ ಮಂಜು , ಜೈ ಗೋಪಿನಾಥ್ , ಹರಿಣಿ ಶ್ರೀಕಾಂತ್ , ಹಂಸ ಪ್ರತಾಪ್ ಸೇರಿದಂತೆ ಎಲ್ಲಾ ಪಾತ್ರಗಳು ಉತ್ತಮ ಸಾತ್ ನೀಡಿದೆ. ಇನ್ನೂ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕದ ವಸ್ತುವಿನ ಚಿತ್ರಗಳು ಬಹಳಷ್ಟು ಬಂದಿದೆ. ಆದರೆ ಚಿತ್ರಕಥೆಯ ಶೈಲಿ ರಿಯಲಿಸ್ಟಿಕ್ ಫೀಲ್ ನೀಡುವ ಹಾದಿಯತ್ತ ಸಾಗಿದ್ದು , ಕಮರ್ಷಿಯಲ್ ಅಂಶದಿಂದ ದೂರ ಉಳಿದಂತಿದೆ.
ಗಾಂಜಾ , ಡ್ರಗ್ಸ್ ಮಾಫಿಯಾ ಎಷ್ಟು ಕರಾಳ ಎಂಬ ಸೂಕ್ಷ್ಮತೆಯನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಮುಗಿಯದ ಅಧ್ಯಾಯ ಎಂಬುದನ್ನು ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ಬರುವ ಸ್ಟಾರ್ ನಾಯಕನ ಮೂಲಕ ಗಮನ ಸೆಳೆಯುತ್ತದೆ. ಹಾಡುಗಳು ಚಿತ್ರದ ಒಳಗೆ ಬೆಸೆದುಕೊಂಡು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ಸಾಗಿದೆ. ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಅಗತ್ಯಕ್ಕೆ ತಕ್ಕಂತೆ ಚಿತ್ರ ನಿರ್ಮಿಸಿರುವ ನಿರ್ಮಾಪಕರ ಆಲೋಚನೆ ಉತ್ತಮವಾಗಿದ್ದು , ಆಕ್ಷನ್ , ಮಾಸ್ ಯೂತ್ ಓರಿಯೆಂಟೆಡ್ ಸಬ್ಜೆಕ್ಟ್ ಆಗಿದ್ದು , ಚಿತ್ರ ಒಮ್ಮೆ ನೋಡುವಂತಿದೆ.