‘ರುದ್ರಾಭಿಷೇಕಂ’ ಆಡಿಯೋ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
ನಮ್ಮ ಸಂಸ್ಕೃತಿ ಕಲೆಯ ತವರೂರು, ಗಂಡು ಮೆಟ್ಟಿದ ನಾಡಿನಲ್ಲಿ ರುದ್ರಾಭಿಷೇಕಂ ಚಿತ್ರದ ಹಾಡು ಬಿಡುಗಡೆಯಾಗುತ್ತಿದೆ. ನಿನ್ನೆಯಾಗಿದ್ರೆ ನಾನು ಬರಲಾಗ್ತಿರಲಿಲ್ಲ, ನಾನೀ ಕಾರ್ಯಕ್ರಮಕ್ಕೆ ಬರಬೇಕೆನ್ನುವುದು ಅಜ್ಜನ ನಿರ್ಧಾರವಾಗಿತ್ತು. ಕನ್ನಡ ಚಿತ್ರರಂಗ ಈಗ ದೊಡ್ಟ ಮಟ್ಟಕ್ಕೆ ಬೆಳೆದಿದೆ. ಹಿಂದಿ, ಇಂಗ್ಲೀಷ್ ಚಿತ್ರಗಳಿಗೆ ಸ್ಪರ್ಧೆ ಮಾಡುವಂಥ ಸಿನಿಮಾಗಳು ನಿರ್ಮಾಣವಾಗುತ್ತಿವೆ. ನೀವೆಲ್ಲ ಕನ್ನಡ ಚಿತ್ರಗಳನ್ನು ಥೇಟರಿನಲ್ಲೇ ನೋಡಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಜನತೆಗೆ ಕರೆ ಕೊಟ್ಟರು. ಸಿದ್ದಾರೂಢ ಮಠದ ಆವರಣದಲ್ಲಿ ರುದ್ರಾಭಿಷೇಕಂ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗಳಲ್ಲೊಂದಾದ ವೀರಗಾಸೆ ಕಲೆಯನ್ನು ಆರಾಧಿಸುತ್ತ ಬಂದ ಕುಟುಂಬ ಹಾಗೂ ವೀರಭದ್ರ ದೇವರ ಇತಿಹಾಸ ಹೇಳುವ ‘ರುದ್ರಾಭಿಷೇಕಂ’ ಚಿತ್ರಕ್ಕೆ ವಸಂತ್ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ವಿಜಯ ರಾಘವೇಂದ್ರ ನಟಿಸಿರೋ ಈ ಚಿತ್ರದ 2 ಹಾಡುಗಳ ಬಿಡುಗಡೆ ಸಮಾರಂಭ ಸಿದ್ದಾರೂಢ ಮಠದ ಆವರಣದಲ್ಲಿ ನೆರವೇರಿತು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ “ಇಂದಲ್ಲ ನಾಳೆ” ಹಾಡಿಗೆ ಚಾಲನೆ ನೀಡಿದರು.
ವಿಜಯ ರಾಘವೇಂದ್ರ ಮಾತನಾಡಿ ಸಿದ್ದಾರೂಢ ಮಠ ನಮ್ಮ ಕುಟುಂಬಕ್ಕೆ ಹೊಸದಲ್ಲ, ಇದು ರಾಜಕುಮಾರ್ ಮಾಮನ ಹೃದಯಕ್ಕೆ ಬಹಳ ಹತ್ತಿರವಾದ ಸ್ಥಳ. ಶಿವಣ್ಣ ಅಪ್ಪು ಮಾಮ ಎಲ್ಲರಿಗೂ ಇದು ಪ್ರಿಯವಾದ ಜಾಗ. ಮೊದಲಬಾರಿಗೆ ವೀರಗಾಸೆ ಕಲಾವಿದನ ಪಾತ್ರವನ್ನು ಅನುಭವಿಸಿ ಮಾಡಿದ್ದೇನೆ. ಚಿತ್ರದಲ್ಲಿ ನನ್ನ ಪೂರ್ವಜರ ಕಾಲದಲ್ಲಿ ನಡೆದ ಘಟನೆ ಈಗಿನ ವ್ಯಕ್ತಿಗೆ ಕನೆಕ್ಟ್ ಆಗುತ್ತಾ ಹೋಗುತ್ತದೆ. ಇಲ್ಲಿ ತಂದೆ, ಮಗನಾಗಿ ಎರಡೂ ಪಾತ್ರದಲ್ಲಿ ನಟಿಸಿದ್ದೇನೆ ಎಂದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡುತ್ತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿ. ನಿರ್ದೇಶಕ ವಸಂತ್ ಕುಮಾರ್ ನನಗೆ ಬಹಳ ದಿನಗಳಿಂದ ಗೊತ್ತು. ನಿರ್ಮಾಪಕರು ನವರತ್ನಗಳ ಥರ ಇದ್ದು, ವರ್ಷಕ್ಕೂ ಹೆಚ್ಚು ಕಾಲ ನಮಗೆ ಅನ್ನ ಹಾಕಿದ್ದಾರೆ. ಇವರಲ್ಲಿ ಒಮ್ಮೆಯೂ ಭಿನ್ನಾಭಿಪ್ರಾಯ ಮೂಡಿಲ್ಲ. ಇಂಥ ನಿರ್ಮಾಪಕರು ಗೆಲ್ಲಬೇಕು. ಈ ಚಿತ್ರವನ್ನು ಎಲ್ಲರೂ ಚಿತ್ರಮುಂದಿರದಲ್ಲೇ ನೋಡಿ ಎಂದರು.
ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಮೂಲಕ ಕೆ.ಎನ್.ಮಂಜುನಾಥ, ಎನ್. ಜಯರಾಮಪ್ಪ,ಕೆ. ವೆಂಕಟೇಶ್, ಬಿ.ಚಿದಾನಂದಮೂರ್ತಿ, ಸುರೇಶ್ ಬಾಬು, ಬಿ.ಕೆ.ಅಶ್ವಥ್ನಾರಾಯಣ, ಎಂ.ಶಿವಕುಮಾರ್, ಕೆ.ಎಸ್. ರವಿಕುಮಾರ್, ಕುಸುಮ ವಸಂತ್ಕುಮಾರ್ ಹೀಗೆ 9 ಜನ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.
ನಿರ್ಮಾಪಕ ಚಿದಾನಂದ್ ಮಾತನಾಡಿ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಥೆ ಇಟ್ಟುಕೊಂಡು, 9 ಜನ ನಿರ್ಮಾಪಕರು ಕನ್ನಡ ಚಿತ್ರರಂಗವನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ್ದೇವೆ ಎಂದರು, ಮತ್ತೊಬ್ಬ ನಿರ್ಮಾಪಕ ಜಯರಾಮ್ ಮಾತನಾಡಿ ಈ ಸಿನಿಮಾ ಆಗಲು ನಿರ್ದೇಶಕರೇ ಕಾರಣ. ವಿ.ಮನೋಹರ್ ಅವರು ಸಿನಿಮಾ ಶುರು ಆದಾಗಿನಿಂದ ನಮ್ಮಜತೆ ಇದ್ದು ಸಹಕಾರ ನೀಡಿದ್ದಾರೆ ಎಂದರೆ, ಇದು ಸ್ನೇಹಿತರಿಗೋಸ್ಕರ ಸ್ನೇಹಿತರೇ ಸೇರಿ ಮಾಡಿರೋ ಚಿತ್ರ ಎಂದು ಶಿವಕುಮಾರ್ ಹೇಳಿದರು.
ನಿರ್ದೇಶಕ ವಸಂತಕುಮಾರ್ ಮಾತನಾಡುತ್ತ ದೈವದ ಹಿನ್ನೆಲೆಯ ಜನಪದ ಕಲೆಯನ್ನು ನಾಡಿನ ಮನೆಮನೆಗೂ ತಲುಪಿಸಬೇಕು ಎನ್ನುವುದೇ ನಮ್ಮ ಉದ್ದೇಶ. ಚಿತ್ರದಲ್ಲಿ ನಾನೂ ಒಬ್ಬ ತತ್ವಜ್ಞಾನಿಯಾಗಿ ನಟಿಸಿದ್ದೇನೆ. ತಂದೆ, ಮಗನ ಜತೆ ಇಡೀ ಚಿತ್ರದಲ್ಲಿ ಸಾಗುವ ನನ್ನ ಪಾತ್ರಕ್ಕೆ ಎರಡು ಗೆಟಪ್ ಇದೆ. ಮನೋಹರ್ ಅವರು ಈ ಸಿನಿಮಾದಿಂದ ನನ್ನನ್ನು ಸಾಹಿತಿಯಾಗಿ ಮಾಡಿದರು. ಅಮಿಕ ಆಡಿಯೋ ಮೂಲಕ ಸಾಂಗ್ ಬಿಡುಗಡೆಯಾಗಿದೆ.
ನಮ್ಮ ಚಿತ್ರ ಒಂದು ಹಬ್ಬದೂಟದಂತಿದ್ದು, ಜೂನ್ 16ಕ್ಕೆ ತೆರೆಗೆ ಬರುತ್ತಿದೆ ಎಂದರು.
ದೇವನಹಳ್ಳಿ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನಲ್ಲಿ 50ಕ್ಕೂ ಹೆಚ್ಚುದಿನ ಚಿತ್ರೀಕರಿಸಲಾಗಿದೆ. ಬಲ ರಾಜವಾಡಿ, ವಿ.ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ, ನವನಿತಾ ಶೆಟ್ಟಿ, ಮಂಜುಳಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿ.ಮನೋಹರ್ ಅವರ ಸಂಗೀತ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
