ವಿಂಟೇಜ್ ದುನಿಯಾದಲ್ಲಿ “ಕೆ.ಡಿ” ದರ್ಬಾರ್ ( ಚಿತ್ರವಿಮರ್ಶೆ- ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5
ಚಿತ್ರ : ಕೆಡಿ
ನಿರ್ದೇಶಕ : ಜೋಗಿ ಪ್ರೇಮ್
ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ವಿಲಿಯಂ ಡೇವಿಡ್
ತಾರಾಗಣ : ದ್ರುವ ಸರ್ಜಾ, ರೀಶ್ಮಾ ನಾಣಯ್ಯ , ಸಂಜಯ ದತ್, ಶಿಲ್ಪಾ ಶೆಟ್ಟಿ , ರವಿಚಂದ್ರನ್, ರಮೇಶ್ ಅರವಿಂದ್ , ಸುದೀಪ್, ರವಿಶಂಕರ್, ಯಶ್ ಶೆಟ್ಟಿ ಹಾಗೂ ಮುಂತಾದವರು…

ಅದ್ದೂರಿ ವೆಚ್ಚದ ನಿರ್ವಾಣ…
ಕಾಲಘಟ್ಟದ ದೃಶ್ಯ ವೈಭವ…
ಹಾಡುಗಳ ವರ್ಣಮಯ ಸದ್ದು…
ದೊಡ್ಡ ತಾರಾ ಬಳಗದ ಸಂಗಮ…

ಲಾಂಗು ಮಚ್ಚುಗಳ ರಕ್ತ ಸಿಕ್ತ ಅಧ್ಯಾಯ…
ಅತಿಯಾದ ಮಾತಿನ ಚಕಮಕಿ…
ಅಂಡರ್ ವರ್ಲ್ಡ್ ಕಥೆಯ ಪುನರಾವರ್ತನೆ…

ಭೂಗತ ಲೋಕದ ದುನಿಯಾ, ದರ್ಬಾರ್, ರಾಜಕೀಯ ಚದುರಂಗ , ಪೊಲೀಸ್ ಹಾಗೂ ರೌಡಿಗಳ ನಡುವಿನ ಸಮರ , ಅಣ್ಣ ತಮ್ಮಂದಿರ ಬಾಂಧವ್ಯ , ಸ್ನೇಹಿತರ ಒಡನಾಟ, ಪ್ರೀತಿಯ ಸೆಳೆತದ ನಡುವೆ ಅತಿರೇಕ ಎನಿಸುವ ರಕ್ತದೊಕುಳಿಯ ಸುತ್ತ ಅಬ್ಬರದ ಸದ್ದು , ಮಾತಿನ ಚಿಕ್ಕಮಕಿಯ ನಡುವೆ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕೆ.ಡಿ”.
ತನ್ನ ಹಿಡಿತದಲ್ಲಿ ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡು ಅಂಡರ್ವರ್ಲ್ಡ್ ಜಗತ್ತನ್ನೇ ಆಳುವಂತಹ ವ್ಯಕ್ತಿ ಡಾರ್ಕ್ ದೇವಾ (ಸಂಜಯ್ ದತ್). ತನ್ನ ಹೆಂಡತಿ ಸತ್ಯವತಿ (ಶಿಲ್ಪ ಶೆಟ್ಟಿ) ಎಂದರೆ ಪಂಚಪ್ರಾಣ.

ಇನ್ನು ಬಲಗೈ ಬಂಟ ಕವಿ (ಯಶ್ ಶೆಟ್ಟಿ) ಹಾಗೂ ಸಹಚರ ಸದಾ ಇವರನ್ನ ಕಾಯುವುದೇ ಕೆಲಸ. ದೇವನ ಆರ್ಭಟಕ್ಕೆ ಇಡೀ ಪೊಲೀಸ್ ಇಲಾಖೆಗೆ ತತ್ತರಿಸಿ ಅವನನ್ನ ಮಟ್ಟ ಹಾಕಿಕೊಳ್ಳಲು ದೊಡ್ಡ ಸಂಚನ್ನೇ ರೂಪಿಸಿದರು ಯಾವುದೇ ಪ್ರಯೋಜನ ಆಗುವುದಿಲ್ಲ. ಇದು ಇನ್ಸ್ಪೆಕ್ಟರ್ ಸೂರಪ್ಪ (ರವಿಶಂಕರ್) ಗೆ ದೊಡ್ಡ ತಲೆನೋವಾಗಿರುತ್ತದೆ. ಅದೇ ಮಾರ್ಕೆಟ್ ಏರಿಯಾದಲ್ಲಿ ಸೀಮೆ ಎಣ್ಣೆ ವ್ಯಾಪಾರ ಮಾಡುವ ಕಾಳಿದಾಸ (ಧ್ರುವ ಸರ್ಜಾ). ನಿಗೆ ಡಾರ್ಕ್ ದೇವಣ್ಣ ಎಂದರೆ ದೇವರಿಗಿಂತ ಹೆಚ್ಚು ಎನ್ನುವಂತಹ ಪ್ರೀತಿ , ಗೌರವ. ಮನೆ ಕಡೆ ಹೆಚ್ಚು ಗಮನಿಸಿದ ಕಾಳಿ ಬಾಲ್ಯದಲ್ಲಿ ಅಣ್ಣ ಧರ್ಮ (ರಮೇಶ್ ಅರವಿಂದ್)ಮಾತು ಕೇಳಿದೆ ಓದುಬಿಟ್ಟು ಮನೆಯಿಂದ ದೂರವೇ ಉಳಿಯುತ್ತಾನೆ. ಇದರ ನಡುವೆ ತನ್ನ ಮಾತೆ ಬಂಡವಾಳ ಮಾಡಿಕೊಂಡು ಬಜಾರಿಯಾಗಿ ವರ್ತಿಸುವ ಮಚ್ಚು ಲಕ್ಷ್ಮಿ (ರೀಶ್ಮಾ ನಾಣಯ್ಯ) ಕಾಳಿಯ ಜೊತೆ ಜಟಾಪಟಿ ಮಾಡುತ್ತಲೇ ಪ್ರೀತಿಯಲ್ಲಿ ಮುಳುಗುತ್ತಾಳೆ.

ಕಾಳಿಗೆ ಅಣ್ಣ ಧರ್ಮ ಎಂದರೆ ಭಯ , ಗೌರವ ಹಾಗೂ ತನ್ನ ಅಕ್ಕ-ತಂಗಿಯರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾನೆ. ಇನ್ನು ಶಾಲಾ ಶಿಕ್ಷಕನಾದ ಧರ್ಮ ತನ್ನ ಬಾಲ್ಯದ ಗೆಳೆಯ ಅಣ್ಣಯ್ಯಪ್ಪ (ರವಿಚಂದ್ರನ್) ಮಾಜಿ ಎಂಎಲ್ಎ ಬಳಿ ಶಾಲೆ ದುರಸ್ತಿ ಬಗ್ಗೆ ಮಾತನಾಡುತ್ತಾನೆ. ಇದರ ನಡುವೆ ಡಾರ್ಕ್ ದೇವ ಅಂಡರ್ ವರ್ಲ್ಡ್ ದುನಿಯಾ ಪಕ್ಕಕ್ಕಿಟ್ಟು ರಾಜಕೀಯಕ್ಕೆ ಎಂಟ್ರಿ ಆಗಲು ಪ್ಲಾನ್ ಮಾಡುತ್ತಾನೆ. ಇದಕ್ಕೆ ನೇರ ಸಿಎಂ ಹಾಗೂ ಹಿಂಬಾಲಕರಿಗೆ ಒತ್ತಡ ಹಾಕುತ್ತಾನೆ. ಇದರ ನಡುವೆ ಅಣ್ಣಯ್ಯಪ್ಪ ಹಾಗೂ ಡಾರ್ಕ್ ದೇವನ ನಡುವೆ ಎಲೆಕ್ಷನ್ ಸಮರ ಎದುರಾಗುತ್ತದೆ. ಮುಂದೆ ಒಂದಷ್ಟು ಘಟನೆಗಳು ರೋಚಕ ರಕ್ತ ಸಿಕ್ತ ಹಾದಿಯನ್ನು ಹಿಡಿಯುತ್ತಾ ಸಾಗಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ… ಅದು ಏನು… ಮುಂದೆ ತೋರುವ ದಾರಿ ಯಾವುದು… ಎಂಬುದಕ್ಕೆ ನೀವು ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಜೋಗಿ ಪ್ರೇಮ್ ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ಹೊಸತನ ಅಲ್ಲದಿದ್ದರೂ ದಶಕಗಳ ಹಿಂದಿನ ಡಾನ್ ಗಳ ಕಥಾವಸ್ತು ಚಿತ್ರಗಳನ್ನು ಕಟ್ಟಿಕೊಳ್ಳುವುದರಲ್ಲಿ ಪ್ರೇಮ್ ಚಾಣಾಕ್ಷ. ಅದೇ ರೀತಿ ಸಂಗೀತ , ಛಾಯಾಗ್ರಹಣ ದೃಶ್ಯಗಳನ್ನ ಕಟ್ಟಿಕೊಡುವ ವೈಭವದಲ್ಲೂ ಕೂಡ ಎತ್ತಿದ ಕೈ. ಸ್ಟಾರ್ ಕಲಾವಿದರುಗಳ ಸಮಾಗಮವಿರುವ ಈ ಚಿತ್ರದ ಚಿತ್ರಕಥೆ ಶೈಲಿ ಇನ್ನಷ್ಟು ಉತ್ತಮ ಮಾಡಬಹುದಿತ್ತು.

ನಿರ್ದೇಶಕ ಪ್ರೇಮ್ ತಮ್ಮ ಚಿತ್ರಗಳಲ್ಲಿ ವಿಗ್ಗು ಪ್ರಮುಖ ಪಾತ್ರ ಕೊಟ್ಟಂತಿದೆ. ಇನ್ನು ಚಿತ್ರಕ್ಕೆ ನಿರ್ಮಾಪಕರು ಹಾಕಿರುವ ಹಣ ತೆರೆಯ ಮೇಲೆ ಕಾಣುತ್ತದೆ. ಅದ್ದೂರಿ ಸೆಟ್ಗಳು , ವಸ್ತ್ರಗಳು, ಉಪಕರಣಗಳು ರಾರಾಜಿಸುತ್ತದೆ. ಛಾಯಾಗ್ರಾಹಕರ ಕೈಚಳಕ ಹಾಗೂ ಸಂಗೀತದ ಮೋಡಿ ಉತ್ತಮವಾಗಿ ಮೂಡಿ ಬಂದಿದೆ. ನಾಯಕನಾಗಿ ಧ್ರುವ ಸರ್ಜಾ ತಮ್ಮ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಚಿತ್ರವನ್ನು ಆವರಿಸಿಕೊಂಡಿದ್ದು , ಕಾಳಿದಾಸನ ಪಾತ್ರಕ್ಕೆ ನ್ಯಾಯ ನೀಡಿದ್ದು , ತನ್ನ ಹಾವ ಭಾವಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿರುವ ರೀತಿ ಅದ್ಭುತವಾಗಿದೆ.

ಆಕ್ಷನ್ ಸನ್ನಿವೇಶವನ್ನು ಮೈ ಜುಮ್ ಎನ್ನುಸುವಂತೆ ನಿರ್ವಹಿಸಿದ್ದಾರೆ. ನಟಿ ರೀಶ್ಮಾ ನಾಣಯ್ಯ ತಮ್ಮ ನೈಜ ಪಾತ್ರವನ್ನು ಬಿಟ್ಟು , ಅತಿರೇಕವಾದ ಮಾತಿನ ವರಸೆಯಲ್ಲಿ ಆರ್ಭಟಿಸಿದಂತಿದೆ. ಮುಂಬೈ ನಟ ಸಂಜಯ್ ದತ್ ಖಡಕ್ ಲುಕ್ , ಖದರ್ ಮಾತು ಗಮನ ಸೆಳೆಯುತ್ತದೆ. ಇನ್ನು ನಟರಾದ ರವಿಚಂದ್ರನ್ , ರಮೇಶ್ ಅರವಿಂದ್ , ರವಿಶಂಕರ್ , ನಟಿ ಶಿ ಲ್ಪ ಶೆಟ್ಟಿ ಹಾಗೂ ಕಾಲ ಭೈರವನ ಪಾತ್ರದಲ್ಲಿ ಅಭಿನಯಿಸಿರುವ ಕಿಚ್ಚ ಸುದೀಪ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು , ಇನ್ನೂ ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಬಹುದಿತ್ತು. ಆದರೆ ದ್ವಿತೀಯ ಭಾಗಕ್ಕೆ ನಾಂದಿ ಹಾಡಲು ಒಂದಷ್ಟು ಪಾತ್ರಗಳು ಸದ್ದು ಮಾಡಿದಂತಿದೆ. ಈಗ “ಕೆ.ಡಿ” ಹವಾ ವೈರಲ್ ಆಗಿದ್ದು , ಜನರನ್ನ ಸೆಳೆಯಬೇಕಾಗಿದೆ.

 

Visited 1 times, 1 visit(s) today
error: Content is protected !!