ಚಂದ್ರಶೇಖರ್ ಬಂಡಿಯಪ್ಪ “ಚೌಕಿದಾರ್” ಸಿನಿಮಾಗೆ ಶಿವಣ್ಣ ಬೆಂಬಲ…ಇದೇ 30ಕ್ಕೆ ಚಿತ್ರ ಬಿಡುಗಡೆ
ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಚೌಕಿದಾರ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 30ರಂದು ತೆರೆಗೆ ಎಂಟ್ರಿ ಕೊಡುತ್ತಿರುವ ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ನಿನ್ನೆ ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ಚೌಕಿದಾರ್ ಪ್ರೀ ರಿಲೀಸ್ ಇವೆಂಟ್ ನಡೆಯಿತು. ಈ ಕಾರ್ಯಕ್ರಮಕ್ಕೆ ಶಿವಣ್ಣ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಹ್ಯಾಟ್ರಿಕ್ ಹೀರೋ ಶಿವಣ್ಣ ಮಾತನಾಡಿ, ಒಳ್ಳೆ ವ್ಯಕ್ತಿಗೆ ಒಳ್ಳೆಯದು ಆಗಬೇಕು ಎಂಬುವುದು ನಮ್ಮ ಭಾವನೆ. ಈ ಸಿನಿಮಾ ನೀಟ್ ಆಗಿ ಹೋಗಲಿ. ನಿಮ್ಮಂತ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು. ಇನ್ನೂ ಹೆಚ್ಚಿನ ಸಿನಿಮಾ ಮಾಡಿ ನಮ್ಮದೇ ಸಿನಿಮಾ ಮಾಡಿ. ಚಂದ್ರಶೇಖರ್ ಬಂಡಿಯಪ್ಪ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ಅದು ಯಾಕೋ ಟೇಕಾಫ್ ಆಗಲಿಲ್ಲ. ತುಂಬಾ ಒಳ್ಳೆ ಡೈರೆಕ್ಟರ್. ಎಮೋಷನ್ ತುಂಬಾ ಚೆನ್ನಾಗಿ ತೋರಿಸ್ತಾರೆ. ಸಾಯಿ ಕುಮಾರ್ ನಾನು ಮುದ್ದಿನ ಕಣ್ಮಣಿಯಿಂದ ಸ್ನೇಹಿತರು. ಬ್ರದರ್ಸ್ ಅಂದರೆ ತಪ್ಪಾಗಲ್ಲ. ಈ ಚಿತ್ರದಲ್ಲಿ ಪೃಥ್ವಿ ಗೆಟಪ್ ಚೆನ್ನಾಗಿದೆ. ಧನ್ಯಾ ಚಿಕ್ಕ ಮಗುವಿನಿಂದ ನೋಡಿಕೊಂಡು ಬಂದಿದ್ದೇವೆ. ಈಗ ಅವಳು ವಿಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಸಚಿನ್ ಸಂಗೀತ ಚೆನ್ನಾಗಿ ಮಾಡಿದ್ದಾರೆ. ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿದೆ ಎಂದರು.
ಹಿರಿಯ ನಟ ಸಾಯಿ ಕುಮಾರ್ ಮಾತನಾಡಿ, ಶಿವಣ್ಣ ಬಂದು ನಮ್ಮ ಸಿನಿಮಾಗೆ ಹಾರೈಕೆ ಮಾಡಿರುವುದು ಖುಷಿ. ಶಿವಣ್ಣ ನಾನು ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಅವರ ಎನರ್ಜಿಗೆ ಹ್ಯಾಟ್ಸಪ್ ಹೇಳಬೇಕು. ಚೌಕಿದಾರ್ ಒಂದೊಳ್ಳೆ ತಂಡ. ಧನ್ಯಾ ಅದ್ಭುತ ನಟಿ. ಚಂದ್ರಶೇಖರ್ ಒಳ್ಳೆ ಕಥೆ ಮಾಡಿದ್ದಾರೆ. ಒಂದೊಳ್ಳೆ ತಾರಾಬಳಗ, ಟೆಕ್ನಿಷಿನ್ ಚಿತ್ರದಲ್ಲಿದೆ. ಇದೇ 30ರಂದು ಸಿನಿಮಾ ತೆರೆಗೆ ಬರ್ತಿದೆ. ನಿಮ್ಮ ಬೆಂಬಲ ಇರಲಿ ಎಂದರು.
ಪೃಥ್ವಿ ಅಂಬಾರ್ ಈ ಚಿತ್ರದ ನಾಯಕರಾಗಿದ್ದಾರೆ. ನಾಯಕಿಯಾಗಿ ಧನ್ಯಾ ಸಾಥ್ ಕೊಟ್ಟಿದ್ದಾರೆ. ಸಾಯಿ ಕುಮಾರ್ ಇಲ್ಲಿ ವಿಶೇಷ ಪಾತ್ರದಲಿಯೇ ಅಭಿನಯಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಚೌಕಿದಾರ್ ಚಿತ್ರದಲ್ಲಿ ತಂದೆ ಮತ್ತು ಮಗನ ಬಾಂಧವ್ಯದ ಕಥೆಯನ್ನು ಹೇಳಿದ್ದಾರೆ. ಫ್ಯಾಮಿಲಿ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ. ವಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
