Cini NewsSandalwood

”ಅಪ್ಪು ಫ್ಯಾನ್ ಡಮ್ ಆ್ಯಪ್” ಲಾಂಚ್ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್.

ಖ್ಯಾತನಟ ದಿ.ಡಾ.ಪುನೀತ್ ರಾಜ್‍ಕುಮಾರ್ ಅವರು ನಮ್ಮನೆಲ್ಲ ಅಗಲಿ ಇದೇ ಅಕ್ಟೋಬರ್ 29ಕ್ಕೆ ನಾಲ್ಕು ವರ್ಷ ಕಳೆಯುತ್ತಿದೆ. ಈ ಸಂದರ್ಭದಲ್ಲಿ ಪುನೀತ್ ಅವರನ್ನು ಎಐ(ಕೃತಕ ಬುದ್ಧಿಮತ್ತೆ) ಮೂಲಕ ಅಭಿಮಾನಿಗಳಿಗೆ ತೋರಿಸುವ ಸ್ಟಾರ್ ಫ್ಯಾನ್​ಡಮ್ ಆ್ಯಪ್ (ಕನ್ನಡದ ಅಪ್ಪು ಪಿಆರ್​ಕೆ ಮೊಬೈಲ್ ಆ್ಯಪ್) ಅನ್ನು ಶನಿವಾರ ಖಾಸಗಿ ಹೋಟೆಲ್​ನಲ್ಲಿ ಡಿಸಿಎಂ ಡಿ.ಕೆ‌.ಶಿವಕುಮಾರ್ ಅನಾವರಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ‌ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಸ್ಟಾರ್ ಫ್ಯಾನ್​ಡಮ್ ಆ್ಯಪ್ ಸಂಸ್ಥೆಯ ಅಧ್ಯಕ್ಷ ಡಾ.ಸಮರ್ಥ ರಾಘವ ನಾಗಭೂಷಣಂ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, “ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣಕ್ಕೆ ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನಪಟ್ಟೆ, ಚಾಕಲೇಟ್ ಕೊಟ್ಟೆ. ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನೂ ಸಹ ಆಹ್ವಾನಿಸಿದೆ. ಅವರೂ ಸಹ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು. ರಾಜಕಾರಣಕ್ಕೆ ಬರಲಿಲ್ಲ” ಎಂದು ಹೇಳಿದರು. “ಅಶ್ವಿನಿ ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ, ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ, ಆದರೆ ಮುಖ್ಯವಾಹಿನಿಯಲ್ಲಿರಿ ಎಂದಿದ್ದೆ. ಇಷ್ಟು ದಿನ ಇದನ್ನು ಬಹಿರಂಗಗೊಳಿಸಿರಲಿಲ್ಲ. ಇಂದು ಬಹಿರಂಗಗೊಳಿಸಿದ್ದೇನೆ” ಎಂದರು.

“ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ” ಎಂದು ತಿಳಿಸಿದರು. “ಎಐ‌ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್​ನಲ್ಲಿ ಬಾಲ್ಯಕಾಲದ ಪುನೀತ್‌‌ ಸೇರಿದಂತೆ ಇತ್ತೀಚಿನ ದಿನದವರೆಗಿನ ಪುನೀತ್​ವರೆಗೆ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು, ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ” ಎಂದು ಹೇಳಿದರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು. ಡಾ.ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ಇದು ನನ್ನ ಜೀವನದಲ್ಲಿ ವಿಶೇಷ ದಿನ. ಫ್ಯಾನ್ ಡಮ್ ಆ್ಯಪ್ ಮಾಡಬೇಕು ಎಂದು ಯೋಚನೆ ಬಂದಾಗ ಮೊದಲು ಹಾಗೂ ಕೊನೆಯ ಹೆಸರು ಅಂದರೆ ಅದು ಕರ್ನಾಟಕ ರತ್ನ ಡಾ.‌ಪುನೀತ್ ರಾಜ್ ಕುಮಾರ್ . ಕನ್ನಡದ ಪ್ರತಿ ಹೃದಯವನ್ನು ಇಟ್ಟಿದ್ದಾರೆ. ಮುಟ್ಟಿದ್ದಾರೆ. ಇವರ ವ್ಯಕ್ತಿತ್ವವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಅನ್ನೋದನ್ನು ನೀವು ಆ್ಯಪ್ ನಲ್ಲಿ ನೋಡಬಹುದು ಎಂದರು.

error: Content is protected !!