ಫ್ಯಾಮಿಲಿ ಎಂಟರ್ಟೈನರ್ ಕಥಾನಕ “ಜಂಬೂ ಸರ್ಕಸ್” (ಚಿತ್ರವಿಮರ್ಶೆ- ರೇಟಿಂಗ್ :3.5 /5)
ರೇಟಿಂಗ್ :3.5 /5
ಚಿತ್ರ : ಜಂಬೂ ಸರ್ಕಸ್
ನಿರ್ದೇಶನ: ಎಂ.ಡಿ. ಶ್ರೀಧರ್,
ನಿರ್ಮಾಪಕ: ಹೆಚ್.ಸಿ. ಸುರೇಶ್
ಸಂಗೀತ : ವಾಸುಕಿ ವೈಭವ್
ಛಾಯಾಗ್ರಹಣ: ಕೃಷ್ಣಕುಮಾರ್
ತಾರಾಗಣ : ಪ್ರವೀಣ್ ತೇಜ್ , ಅಂಜಲಿ ಅನೀಶ್ , ಅಚ್ಚುತ್ ಕುಮಾರ್ , ರವಿಶಂಕರ್ ಗೌಡ, ಲಕ್ಷ್ಮಿ ಸಿದ್ದಯ್ಯ , ಸ್ವಾತಿ, ಆಶಾಲತಾ , ಅವಿನಾಶ್ , ನಯನಾ, ಜಗ್ಗಪ್ಪ ಹಾಗೂ ಮುಂತಾದವರು…
ಸಾಮಾನ್ಯವಾಗಿ ಕುಟುಂಬಗಳ ನಡುವೆ ಸ್ನೇಹ , ಪ್ರೀತಿ , ತರಲೆ, ವೈಮನಸು , ಜಗಳ ಇದ್ದದ್ದೆ. ಇನ್ನು ಆತ್ಮೀಯ ಗೆಳೆಯರು ಒಂದೆಡೆ ಇದ್ದರೆ, ಅವರ ಕುಚುಕು ಮಾತುಗಳು, ಆಶ್ವಾಸನೆ, ಒದ್ದಾಟ ಪರಿಯೇ ವಿಚಿತ್ರ. ಇಂತದ್ದೆ ಇಬ್ಬರು ಗೆಳೆಯರ ಕುಟುಂಬದ ಮದ್ಯೆ ನಡೆಯುವ ಘರ್ಷಣೆ, ಸಂಬಂಧಗಳ ಮಹತ್ವ , ದ್ವೇಷ , ಪ್ರೀತಿಯ ಸುತ್ತ ಎದುರಾಗುವ ಏರಿಳಿತದ ಜೊತೆಗೆ ಮನೋರಂಜನೆಯ ರಸದೌತಣ ನೀಡಲು ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜಂಬೂ ಸವಾರಿ”.ಇಬ್ಬರು ಆತ್ಮೀಯ ಸ್ನೇಹಿತರು , ಒಬ್ಬ ಮುರಳಿ (ಅಚ್ಯುತ್ ಕುಮಾರ್) ಮತ್ತೊಬ್ಬ ಶಂಕರ (ರವಿಶಂಕರ್ ಗೌಡ). ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ ಎನ್ನುವಂತಹ ಗೆಳೆಯರು. ಇವರಿಬ್ಬರೂ ಮದುವೆಯಾಗುವುದು ಒಂದೇ ದಿನ, ಅಷ್ಟೇ ಯಾಕೆ ಇವರಿಬ್ಬರಿಗೂ ಮಕ್ಕಳಾಗುವುದು ಕೂಡ ಒಂದೇ ದಿನ , ಅದೂ ಒಂದೇ ಆಸ್ಪತ್ರೆಯಲ್ಲಿ, ಆದರೆ ದಿನಕಳೆದಂತೆ ಇವರ ಪತ್ನಿಯರಲ್ಲಿ ಮುನಿಸು , ವೈಶಮ್ಯ ಬೆಳೆದು ಒಬ್ಬರನ್ನೊಬ್ಬರು ಕಂಡರೆ ಆಗದಂತಾಗುತ್ತಾರೆ.
ಇಬ್ಬರ ಮಧ್ಯೆ ಇನ್ನೂ ಹುಳಿ ಹಿಂಡಲು ಮನೆ ಕೆಲಸದಾಕೆ(ನಯನಾ) ಸದಾ ಮುಂದಿರುತ್ತಾಳೆ. ಅದೇ ಕಾರಣದಿಂದ ಇವರಿಬ್ಬರ ಮಕ್ಕಳೂ ಹಾವು ಮುಂಗುಸಿಗಳಂತೆ ಬೆಳೆಯುತ್ತಾರೆ. ಎರಡೂ ಮನೆಗಳಲ್ಲಿ ಹೆಂಗಸರದ್ದೇ ಕಾರುಬಾರು, ಮಾಡ್ರನ್ ಸಂಸ್ಕೃತಿಗೆ ಜೋತುಬಿದ್ದ ಅನಿತಾ(ಲಕ್ಷ್ಮಿ ಸಿದ್ದಯ್ಯ), ಶಂಕರ(ರವಿಶಂಕರ್ ಗೌಡ) ದಂಪತಿಯ ಮಗಳು ಅಂಕಿತಾ(ಅಂಜಲಿ ಅನೀಶ್), ಹಾಗೂ ಸಂಪ್ರದಾಯಕ್ಕೆ ಬೆಲೆಕೊಡುವ ಕುಸುಮಾ(ಸ್ವಾತಿ) ಮುರಳಿ( ಅಚ್ಚುತ್ ಕುಮಾರ್) ದಂಪತಿಯ ಮಗ ಆಕಾಶ್(ಪ್ರವೀಣ್ ತೇಜ್) ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರೂ ಒಬ್ಬರ ಮುಖ ಕಂಡರೆ ಒಬ್ಬರಿಗಾಗದು, ನಂತರ ಆಕಾಶ ಹಾಗೂ ಅಂಕಿತ ನಡುವಿನ ಜಗಳ ಲವ್ವಾಗಿ ಟರ್ನ್ ಆಗುತ್ತದೆ.
ಎರಡೂ ಕುಟುಂಬಗಳನ್ನು ಉಪಾಯದಿಂದ ಒಪ್ಪಿಸುವ ಈ ಜೋಡಿ ಕೊನೆಗೆ ಮದುವೆಯೂ ಆಗುತ್ತಾರೆ. ಆದರೆ ಅಲ್ಲಿಂದ ಕಥೆ ಬೇರೆ ರೂಪವನ್ನು ಪಡೆಯುತ್ತದೆ. ನಾಯಕ ನಾಯಕಿಯ ಬರ್ತ್ಡೇ ಸಮಾರಂಭದಲ್ಲಿ ಮತ್ತೆ ಎರಡೂ ಫ್ಯಾಮಿಲಿ ನಡುವೆ ಜಗಳವಾಗಿ, ಈ ದಂಪತಿಗಳಿಬ್ಬರೂ ಬೇರ ಬೇರೆಯಾಗುತ್ತಾರೆ, ಅದು ಡೈವರ್ಸ್ವರೆಗೂ ಹೋಗುತ್ತದೆ. ಮುಂದೆ ಎದುರಾಗುವ ಒಂದಷ್ಟು ರೋಚಕ ಘಟನೆಗಳು , ಇಬ್ಬರು ಸ್ನೇಹಿತರ ಬದುಕಿನಲ್ಲಿ ಎದುರಾದ ಸತ್ಯ ಬೆಳಕಿಗೆ ಬರುತ್ತದೆ. ಅದು ಏನು.. ಹೇಗೆ… ಈ ಜೋಡಿಗಳ ಡೈವರ್ಸ್ ಏನಾಗುತ್ತೆ… ಕ್ಲೈಮಾಕ್ಸ್ ಹೇಳಿದ ಸತ್ಯ ಏನು.. ಎಂಬ ಉತ್ತರಕ್ಕಾಗಿ ನೀವು ಒಮ್ಮೆ ಈ ಜಂಬೂ ಸರ್ಕಸ್ ಚಿತ್ರವನ್ನು ನೋಡಲೇಬೇಕು.
ಒಂದು ಕೌಟುಂಬಿಕ ಚಿತ್ರವನ್ನ ಮನೋರಂಜನೆಯ ಹಾದಿಯಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಸೊಗಸಾಗಿ ಮೂಡಿ ಬಂದಿದೆ. ಎರಡು ಕುಟುಂಬಗಳ ಕೌಟಂಬಿಕ ಚೌಕಟ್ಟಿನಲ್ಲಿ ಸ್ನೇಹ, ಪ್ರೀತಿ , ಮಮಕಾರ, ಅಹಂಕಾರ , ದರ್ಪ , ಹಾಸ್ಯದ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಎಲ್ಲರ ಗಮನ ಸೆಳೆದಿರುವ ರೀತಿ ವಿಶೇಷವಾಗಿದೆ. ಚಿತ್ರದ ಕಥೆ ಹೊಸತನ ಅಲ್ಲದಿದ್ದರೂ ಚಿತ್ರಕಥೆಯ ಶೈಲಿ ವಿಭಿನ್ನವಾಗಿದೆ.
ನಿರ್ದೇಶಕ ಎಂ.ಡಿ ಶ್ರೀಧರ್ ಲವಲವಿಕೆಯ ನಿರೂಪಣೆ, ನವಿರಾದ ಪ್ರೇಮಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳವಲ್ಲಿ ಗೆದ್ದಿದ್ದಾರೆ. ಒಂದು ಉತ್ತಮ ಮನೋರಂಜನೆಯ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಸುರೇಶ್ ಧೈರ್ಯವನ್ನ ಮೆಚ್ಚಿಲೇಬೇಕು. ಚಿತ್ರದ ಸಂಗೀತ ಸೊಗಸಾಗಿ ಮೂಡಿ ಬಂದಿದ್ದು , ಅಷ್ಟೇ ಉತ್ತಮವಾಗಿ ಕ್ಯಾಮೆರಾ ಕೈಚಳಕವು ಮೂಡಿಬಂದಿದೆ. ಇನ್ನು ನಾಯಕ ಪ್ರವೀಣ್ ತೇಜ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ. ನಾಯಕಿ ಅಂಜಲಿ ಅನೀಶ್ ಕೂಡ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶ್ರಮಪಟ್ಟಿದ್ದಾರೆ.
ಇನ್ನು ಇಡೀ ಚಿತ್ರದ ಹೈಲೈಟ್ಗಳಲ್ಲಿ ತಾಯಿಯ ಪಾತ್ರಧಾರಿಗಳಾದ ಸ್ವಾತಿ ಮತ್ತು ಲಕ್ಷ್ಮಿ ಸಿದ್ದಯ್ಯ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ತಂದೆಯ ಪಾತ್ರಗಳನ್ನ ನಿರ್ವಹಿಸಿರುವ ಅಚ್ಚುತ್ ಕುಮಾರ್, ರವಿಶಂಕರ್‌ಗೌಡ ಕೂಡ ಬಹಳ ಸೊಗಸಾಗಿ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಇನ್ನು ಹಿರಿಯ ಕಲಾವಿದರಾದ ಅವಿನಾಶ್, ಆಶಾಲತಾ ಪಾತ್ರಗಳು ಜೀವ ತುಂಬಿದ್ದು , ಹಾಸ್ಯ ಕಲಾವಿದೆ ನಯನ ಕೂಡ ಸೊಗಸಾಗಿ ಮಾತಿನ ವರಸೆಯಲ್ಲಿ ಮಿಂಚಿದ್ದಾರೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಇಡೀ ಕುಟುಂಬ ಕುಳಿತು ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.