ಹುಬ್ಬಳ್ಳಿ ಯಲ್ಲಿ “ಎಲ್ಟು ಮುತ್ತಾ” ಚಿತ್ರದ ಆಡಿಯೋ ಲೋಕಾರ್ಪಣೆ
ಬೆಂಗಳೂರಿಂದ ಮಾಧ್ಯಮ ಮಿತ್ರರನ್ನು ಅವಳಿ ನಗರ ಹುಬ್ಬಳ್ಳಿ ಹಾಗೂ ಧಾರವಾಡಕ್ಕೆ ಬರಮಾಡಿಕೊಂಡಿತ್ತು “ಎಲ್ಟು ಮುತ್ತಾ” ಚಿತ್ರತಂಡ. ವಿಶೇಷವಾಗಿ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹುಬ್ಬಳ್ಳಿಯ ರಾಯಲ್ ರಿಟ್ಜ್ ರೆಸಾರ್ಟ್ ನಲ್ಲಿ ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಿಕೊಂಡಿತ್ತು. ಒಳಾಂಗಣ ಆಡಿಟೋರಿಯಂ ನಲ್ಲಿ ವರ್ಣ ರಂಜಿತವಾಗಿ ವೇದಿಕೆಯನ್ನು ಸಿದ್ಧಪಡಿಸಿದ್ದು , ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲೆಯ ಶ್ರೀಗಳಾದ ಉಪ್ಪಿನ ಬೆಟ್ಟಿಗೇರಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿಗಳು, ವಕೀಲರು ಪಾಂಡುರಂಗ , ಎಸ್ಪಿ ಅನಿಲ್ ಕುಮಾರ್ , ನಿರ್ಮಾಪಕ ಉಮೇಶ್ ಬಣಕಾರ್, ಬಸವರಾಜ್, ಡಾ. ಎಚ್. ಕೆ .ಕಟ್ಟಿ , ವಿತರಕ ಶ್ರೀಧರ್ , ನಟ ಕಾಕ್ರೋಚ್ ಸುದೀ ಸೇರಿದಂತೆ ಇಡೀ ಚಿತ್ರತಂಡ ವೇದಿಕೆ ಮೇಲೆ ಹಾಜರಿದ್ದರು. HIGH5 ಸ್ಟುಡಿಯೋಸ್ ಹಾಗೂ ACE22 ಪ್ರೊಡಕ್ಷನ್ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಈ “ಎಲ್ಟು ಮುತ್ತಾ” ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೂ ಮುನ್ನ ನಮ್ಮ ಕನ್ನಡಿಗರ ಹೆಮ್ಮೆ , ಇಡೀ ಗಾಯನ ಕ್ಷೇತ್ರದ ಖ್ಯಾತ ಗಾಯಕಿ , ವಿದುಷಿ ಸಂಗೀತ ಕಟ್ಟಿ ರವರು 50 ವರ್ಷಗಳ ನಿರಂತರ ಗಾಯನ ಸುಧೆಯಲ್ಲಿ ಸಾಗುತ್ತಾ ಬಂದಿದ್ದು , ಸಂಗೀತ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ. ಈ ವಿಶೇಷ ಸಂದರ್ಭದಲ್ಲಿ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಗಾಯನ ಕ್ಷೇತ್ರಕ್ಕೆ ಪ್ರವೇಶ ಮಾಡಿರುವುದರ ಜೊತೆಗೆ ಇಲ್ಲಿಯವರೆಗೂ ನಡೆದು ಬಂದ ಹಾದಿಯ ವಿಡಿಯೋ ಚಿತ್ರಣವನ್ನು ಪ್ರದರ್ಶಿಸಿ , ತದನಂತರ ಗಾಯಕಿ ಸಂಗೀತ ಕಟ್ಟಿ ರವರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅವರ ತಂದೆ ಡಾ. ಹೆಚ್. ಏ. ಕಟ್ಟಿ ಹಾಗೂ ಉಪ್ಪಿನ ಬೆಟ್ಟಿಗೇರಿ ಶ್ರೀಗಳಾದ ಕುಮಾರ ವಿರೂಪಾಕ್ಷ ಸ್ವಾಮಿಗಳಿಗೆ ವಿಶೇಷವಾಗಿ ಸನ್ಮಾನ ಮಾಡಿತು ಚಿತ್ರ ತಂಡ.
ನಂತರ ವೇದಿಕೆ ಮೇಲಿದ್ದ ಉಪ್ಪಿನ ಬೆಟ್ಟಿಗೇರಿ ಶ್ರೀಗಳಾದ ಕುಮಾರ ವಿರೂಪಾಕ್ಷ ಸ್ವಾಮಿ ಮಾತನಾಡುತ್ತಾ ನಮ್ಮ ಈ ಭಾಗದ ಜನರಿಗೆ ಇಂಥ ಒಂದು ಕಾರ್ಯಕ್ರಮ ಸಿಗುವುದೇ ಬಹಳ ಅಪರೂಪ, ಈ “ಎಲ್ಟು ಮುತ್ತಾ” ಚಿತ್ರತಂಡ ಇವತ್ತು ಏನು ಸಂಗೀತ ಸರಸ್ವತಿಯೇ ಆಗಿರುವಂತಹ ಸಂಗೀತ ಕಟ್ಟಿ ರವರಿಗೆ ಸತ್ಕಾರ ಮಾಡಿ ಚಾಲನೆ ಕೊಟ್ಟಿದ್ದೀರಲ್ಲ ಇದು ನಿಮ್ಮ ತಂಡಕ್ಕೆ ದೊಡ್ಡ ಯಶಸ್ಸನ್ನ ಕೊಡುತ್ತದೆ ಎನ್ನುತ್ತಾ ಸಂಗೀತ ಕಟ್ಟಿ ರವರ ಸಾಧನೆ ಬಗ್ಗೆ ಮಾತನಾಡಿದರು. ನಮ್ಮ ಉತ್ತರ ಕರ್ನಾಟಕದ ಭಾಗದವರು ಬಹಳಷ್ಟು ಶ್ರಮವಹಿಸಿ ಮುಂದೆ ಈ ಕ್ಷೇತ್ರದಲ್ಲಿ ಬರುತ್ತಿದ್ದಾರೆ. ಸಂಗೀತ ಕ್ಷೇತ್ರದಂತೆ , ಸಿನಿಮಾ ಕ್ಷೇತ್ರವು ಬಹಳಷ್ಟು ಕೊಡುಗೆಯನ್ನ ಕೊಟ್ಟಿದೆ. ನಾನು ಚಿಕ್ಕವನಿದ್ದಾಗ ಡಾ. ರಾಜಕುಮಾರ್ ರವರ ಬೇಡರ ಕಣ್ಣಪ್ಪ , ಬಂಗಾರದ ಮನುಷ್ಯ , ಒಡಹುಟ್ಟಿದವರು, ಜೀವನ ಚೈತ್ರ ಒಳ್ಳೆ ಚಿತ್ರಗಳನ್ನು ನಾನು ನೋಡಿದ್ದೇನೆ. ಯಾವಾಗಲೂ ಸಮಾಜಕ್ಕೆ ಸಂದೇಶ ಕೊಡುವಂತ ಚಿತ್ರವನ್ನ ಮಾಡಬೇಕು, ಈ ಎಲ್ಟು ಮುತ್ತಾ ಚಿತ್ರದ ಬಗ್ಗೆ ತಿಳಿದುಕೊಂಡಾಗ ಸಾವಿನ ಮನೆಯಲ್ಲಿ ಡೊಳ್ಳು ಬಾರಿಸುವವರ ಕಥೆಯನ್ನು ಒಳಗೊಂಡಿದೆ ಎಂದು ತಿಳಿಯಿತು , ಸಮಾಜದಿಂದ ಹಿಂದುಳಿದ ವರ್ಗದವರ ಬಗ್ಗೆ ಹೇಳಿರುವ ಈ ಚಿತ್ರ ಮುಖ್ಯ ವಾಹಿನಿಗೆ ಬರುವಂತಾಗಬೇಕು, ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲತ್ತುಗಳು ಸಿಗಬೇಕು, ಈ ಒಂದು ತಂಡ ಒಂದು ಉತ್ತಮ ಚಿತ್ರ ಮಾಡಿದೆ ಅನಿಸುತ್ತೆ. ಹೇಗೆ ಕಾಂತಾರ ಚಿತ್ರ ದೈವ ಕೃಪೆಯಿಂದ ದೊಡ್ಡ ಮಟ್ಟದ ಯಶಸ್ಸನ್ನ ಖಂಡಿತೋ ಅದೇ ರೀತಿ ಈ ಎಲ್ಟು ಮುತ್ತಾ ಚಿತ್ರವೂ ಕೂಡ ಯಶಸ್ಸನ್ನ ಕಾಣಲಿ ಎಂದು ಶುಭ ಹಾರೈಸಿದರು.
ನಂತರ ಗಾಯಕಿ , ವಿದುಷಿ ಸಂಗೀತ ಕಟ್ಟಿ ಮಾತನಾಡುತ್ತಾ ನಮ್ಮೂರಿನಲ್ಲಿ ನನ್ನ ತಂದೆ , ಗುರು , ಹಿರಿಯರು , ಸ್ನೇಹಿತರು ಹಾಗೂ ನನ್ನ ಶಿಷ್ಯನ ಸಂಗೀತ ನಿರ್ದೇಶನದ ಕಾರ್ಯಕ್ರಮದಲ್ಲಿ ಈ ಸನ್ಮಾನ ದೊರಕಿರುವುದು ನನ್ನ ಪುಣ್ಯ ಎಂದರು. ಇಡೀ ಟೀಮ್ ಬಹಳ ಶ್ರಮಪಟ್ಟು ಮಾಡಿರುವ ಚಿತ್ರವಿದು, ನನ್ನ ಶಿಷ್ಯಂದರಳಿ ಮೂರು ಜನ ಸಂಗೀತ ಕ್ಷೇತ್ರಕ್ಕೆ ಬಂದಿದ್ದಾರೆ. ಅದರಲ್ಲಿ ನನ್ನ ಶಿಷ್ಯ ಪ್ರಸನ್ನ ಕೇಶವ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಗುರುವಿನ ಮೇಲೆ ಅವನಿಗಿರುವ ಭಕ್ತಿ , ಹಿಡಿದ ಕಾರ್ಯಕ್ರಮವನ್ನು ಬಿಡದೆ ಮಾಡುವ ಹುಚ್ಚ , ಸ್ಟುಡಿಯೋದಲ್ಲೇ ಬಹುತೇಕ ಆಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾನೆ. ಇವತ್ತು ಹಾಡುಗಳು ಇಷ್ಟು ದೊಡ್ಡ ಮಟ್ಟಕ್ಕೆ ಬಂದಿದೆ ಎಂದರೆ ಅವನ ಶ್ರಮವೇ ಸಾಕ್ಷಿ. ಈ ಚಿತ್ರದ ಎಲ್ಟು ಹೆಸರನ್ನ L2 ಇಂಗ್ಲಿಷ್ನಲ್ಲಿ ಎಲ್ ಎಲ್ ಲಾಂಗಿಟ್ಯೂಡ್ ಹಾಗೂ ಲಾಟಿಟ್ಯೂಡ್ ಎನ್ನುವ ಹಾಗೆ ಚಿತ್ರ ದೇಶದ ಉದ್ದಗಲಕ್ಕೂ ಅಲ್ಲದೆ ಇಡೀ ಜಗತ್ತಿಗೆ ಈ ಚಿತ್ರ ಇಷ್ಟವಾಗಿ ದೊಡ್ಡಮಟ್ಟದ ಯಶಸ್ಸನ್ನ ಕಾಣಲಿ ಎಂದು ಶುಭ ಹಾರೈಸುತ್ತೇನೆ. ಹಾಗೆ ಇಂದು ಮಾಧ್ಯಮ ಮಿತ್ರರು ಬಂದಿರುವುದು ನನಗೆ ಬಹಳ ಸಂತೋಷವಾಗಿದೆ. ನನ್ನ ಆರಂಭದ ದಿನಗಳಲ್ಲಿ ಪತ್ರಿಕಾ ಪ್ರಚಾರಕರ್ತರಾದ ಡಿ.ವಿ. ಸುಧೀಂದ್ರ ಅವರು ನನಗೆ ತುಂಬ ಸಹಕಾರ ನೀಡಿದ್ದರು, ಅವರ ಪರಂಪರೆಯನ್ನು ವೆಂಕಟೇಶ್ ಕುಟುಂಬದವರು ನಡೆಸಿಕೊಂಡು ಬರುತ್ತಿರುವುದು ಬಹಳ ಖುಷಿ ಇದೆ. ಇವತ್ತು ಈ ಕಾರ್ಯಕ್ರಮ ನನಗೆ ಬಹಳ ಸಂತೋಷವಾಗಿದೆ ಎಂದು ಧನ್ಯವಾದಗಳು ತಿಳಿಸಿದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಂತಹ ಹಲವಾರು ಗಣ್ಯರು ಚಿತ್ರ ಹಾಗೂ ತಂಡದವರ ಕುರಿತು ಮೆಚ್ಚುಗೆಯ ಮಾತುಗಳನ್ನ ಹೇಳಿ ಶುಭವನ್ನು ಕೋರಿದರು. ಇನ್ನು ವೇದಿಕೆ ಮೇಲೆ ಚಿತ್ರದ ಒಂದೊಂದೇ ಹಾಡನ್ನ ಪ್ರದರ್ಶಿಸುವುದರ ಜೊತೆಗೆ ನೃತ್ಯಗಾರರು ಕೂಡ ಹಾಡುಗಳಿಗೆ ಹೆಜ್ಜೆಯನ್ನು ಹಾಕಿದ್ದರು. ಅದರಲ್ಲೂ ಚಿತ್ರದ ಒಂದು ಸಿಗ್ನೇಚರ್ ಸ್ಟೆಪ್ ಹಾಡು ಕೂಡ ಎಲ್ಲರ ಗಮನವನ್ನು ಸೆಳೆಯಿತು.
ನಂತರ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಮಾಹಿತಿಯನ್ನು ಹಂಚಿಕೊಂಡರು. ಈ ಚಿತ್ರದ ನಿರ್ದೇಶಕ ರಾ ಸೂರ್ಯ ಮಾತನಾಡುತ್ತಾ ನಾವು ಹುಬ್ಬಳ್ಳಿಯಲ್ಲಿ ನಮ್ಮ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಒಂದೊಂದು ಹಾಡು ಕೂಡ ಕಥೆಗೆ ಪೂರಕವಾಗಿ ಸಾಗಿದೆ. ಈ “ಎಲ್ಟು ಮುತ್ತಾ” ಚಿತ್ರವು ಸಾವಿನ ಮನೆಯಲ್ಲಿ ಡೋಲು ಹೊಡೆಯುವವರ ಕಥೆಯನ್ನು ಒಳಗೊಂಡಿದೆ. ಆ ಜನಾಂಗದ ಬದುಕು , ಬಾವಣೆಯ ಸುತ್ತ ಸಾಗುವ ಈ ಕಥೆಯಲ್ಲಿ ಎಲ್ಟು ಹಾಗೂ ಮುತ್ತಾ ಎಂಬ ಎರಡು ಪಾತ್ರಗಳು ಪ್ರಧಾನವಾಗಿ ಸಾಗಲಿದೆ. ಇದು ಕೊಡಗು ಭಾಗದಲ್ಲಿ ನಡೆಯುವ ಕಥೆಯಾಗಿದ್ದು , ಬಹುತೇಕ ಕೊಡಗಿನಲ್ಲೇ ಚಿತ್ರೀಕರಣ ಆಗಿದೆ. ಸಂಭಾಷಣೆ ಕೂಡ ಮಡಿಕೇರಿ , ಕನ್ನಡ ಭಾಷೆಯಲ್ಲೇ ಇರುತ್ತದೆ. ನವೀಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆಯೂ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ. ತನ್ನ ಕುಣಿತದಿಂದ ಎಲ್ಲರ ಗಮನ ಸೆಳೆಯುವ ನವೀಲು , ಕೆರಳಿದರೆ ಕಾಳಿಂಗ ಸರ್ಪವನ್ನು ಕೊಲ್ಲುತ್ತದೆ. ಇಂಥದೇ ಅಂಶಗಳು ನಮ್ಮ ಚಿತ್ರದಲ್ಲಿ ಹೇಳುತ್ತದೆ. ನಾನು ನಿರ್ದೇಶನದ ಜೊತೆಗೆ ಎಲ್ಟು ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಮ್ಮ ಚಿತ್ರವನ್ನು ಎಲ್ಲರಿಗೂ ತಲುಪುವಂತೆ ಮಾಡಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡುತ್ತಾ ಈ ಹಾಡುಗಳ ಬಿಡುಗಡೆಯ ಕಾರ್ಯಕ್ರಮಗಳಿಗೆ ಬಂದಿರುವಂತಹ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸುತ್ತೇನೆ. ನಾವು ಗೆಳೆಯರೆಲ್ಲ ಕೂಡಿ HIGH5 ಸ್ಟುಡಿಯೋಸ್ ಮೂಲಕ ಈ ಒಂದು ಚಿತ್ರವನ್ನ ನಿರ್ಮಿಸಿದ್ದೇವೆ. ನಾನು ಐಟಿ ಉದ್ಯೋಗಿ ಹಾಗೆಯೇ ವೈಲ್ಡ್ ಫೊಟೊಗ್ರಾಫಿ ನನ್ನ ಹವ್ಯಾಸಿ. ಸಿನಿಮಾ ಮಾಡಬೇಕೆಂಬ ಕನಸು ಈಗ ನನಸಾಗಿದೆ. ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ನಾವು ಈ ಸಿನಿಮಾ ಮಾಡಿದ್ದೇವೆ. ಎಲ್ಲಾ ಆರ್ಟಿಸ್ಟ್ , ಟೆಕ್ನಿಕಲ್ ಟೀಮ್ ಪ್ರತಿಯೊಬ್ಬರು ನಮಗೆ ಉತ್ತಮ ಸಾಥ್ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಾವು ಈ ಹಾಡುಗಳನ್ನು ರಿಲೀಸ್ ಮಾಡಿದ್ದು , ಇದರ ಸಂಪೂರ್ಣ ಜವಾಬ್ದಾರಿ ಸಂಗೀತ ನಿರ್ದೇಶಕ ಪ್ರಸನ್ನ ಕೇಶವ. ಕೆ ವಹಿಸಿಕೊಂಡಿದ್ದಾರೆ. ಇದು ಅವರ ದಿನ , ಹತ್ತು ವರ್ಷಗಳ ನಿರಂತರ ಶ್ರಮದ ಪ್ರಯತ್ನವಾಗಿ ಬೆಳೆದು , ಈ ನಮ್ಮ “ಎಲ್ಟು ಮುತ್ತಾ” ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಮ್ಮ ಚಿತ್ರದ ಮೇಲೆ ನಮಗೆ ಬಹಳ ಭರವಸೆ ಇದೆ. ಇಲ್ಲಿಂದ ನಾವು ಪ್ರಚಾರದ ಕಾರ್ಯವನ್ನ ಆರಂಭಿಸಿದ್ದೇವೆ. ಬೆಂಗಳೂರಿನಲ್ಲಿ ಟ್ರೈಲರ್ ರಿಲೀಸ್ ಮಾಡುವಾಗ ಬಿಡುಗಡೆ ದಿನಾಂಕವನ್ನು ತಿಳಿಸುತ್ತೇವೆ , ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. Ace 22 ಪ್ರೊಡಕ್ಷನ್ ನ ಪವೀಂದ್ರ ಮುತ್ತಪ್ಪ ಮಾತನಾಡುತ್ತಾ ನಾವೊಂದು ಉತ್ತಮ ಚಿತ್ರವನ್ನು ಸಿದ್ಧಪಡಿಸಿದ್ದೇವೆ. ಈ ಚಿತ್ರಕ್ಕೆ ಇಡೀ ತಂಡ ಬಹಳಷ್ಟು ಶ್ರಮಪಟ್ಟಿದೆ. ಇಲ್ಲಿಂದ ಹಂತ ಹಂತವಾಗಿ ಪ್ರಚಾರದ ಕಾರ್ಯ ಸಾಗಿದ್ದು , ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತಿದ್ದೇವೆ. ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಕೇಳಿಕೊಂಡರು.
ಈ ಚಿತ್ರದ ನಟ ಶೌರ್ಯ ಪ್ರತಾಪ್ ಮಾತನಾಡುತ್ತಾ ನನಗೆ ಬೆಳ್ಳಿ ಪರದೆಯ ಮೇಲೆ ನಾಯಕನಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತು, ಅದು ಈಗ ನೆರವೇರಿದೆ. ಈ ಚಿತ್ರದಲ್ಲಿ ನಾನು ಮುತ್ತಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಬಹಳ ವಿಭಿನ್ನವಾಗಿ ಚಿತ್ರ ಬಂದಿದೆ. ನಟನಾಗಷ್ಟೇ ಅಲ್ಲದೆ ಸಹ ನಿರ್ದೇಶಕ , ಬರಹಗಾರನಗೂ ಕೆಲಸ ಮಾಡಿದ್ದೇನೆ. ನಮ್ಮ ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿ ಬಂದಿದ್ದು , ಕಥೆಯ ಜೊತೆಗೆ ಸಾಗುತ್ತದೆ ಎಂದರು. ಇನ್ನು ಈ ಚಿತ್ರದ ನಾಯಕಿ ಪ್ರಿಯಾಂಕ ಮಲಾಲಿ ಮಾತನಾಡುತ್ತಾ ನಿರ್ದೇಶಕರು ಕಥೆ ಹೇಳಿದಾಗ ಇದೊಂದು ವಿಭಿನ್ನವಾದ ಚಿತ್ರವಾಗುತ್ತೆ ಅನ್ನೋ ಭರವಸೆ ಇತ್ತು ಹಾಗಾಗಿ ಒಪ್ಪಿಕೊಂಡೆ. ಚಿತ್ರೀಕರಣದ ಸಮಯದಲ್ಲಿ ಬಹಳಷ್ಟು ಒಳ್ಳೆಯ ಅನುಭವಗಳು ಆಗಿದೆ. ಇಡೀ ತಂಡ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಚಿತ್ರ ಖಂಡಿತ ಎಲ್ಲರಿಗೂ ಇಷ್ಟ ಆಗುತ್ತೆ ನೋಡಿ ಎಂದರು. ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕಾಕ್ರೋಚ್ ಸುದೀ ಮಾತನಾಡುತ್ತಾ ಈ ಚಿತ್ರದಲ್ಲಿ ನಾನು ಅಲೆಕ್ಸ್ ಚಟ್ವಾ ಎಂಬ ಪಾತ್ರ ಮಾಡಿದ್ದೇನೆ. ಚಿತ್ರತಂಡ ಪ್ರತಿಯೊಂದರಲ್ಲೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಕೆಲಸ ಮಾಡಿದ ಖುಷಿ ಇದೆ. ಚಿತ್ರ ಕೂಡ ಉತ್ತಮವಾಗಿ ಬಂದಿದ್ದು ಎಲ್ಲರೂ ನೋಡಿ ಎಂದು ಕೇಳಿಕೊಂಡರು.
ಈ ಚಿತ್ರದ ಸಂಗೀತ ನಿರ್ದೇಶಕ ಪ್ರಸನ್ನ ಕೇಶವ. ಕೆ ಮಾತನಾಡುತ್ತಾ ಈ ನಮ್ಮ “ಎಲ್ಟು ಮುತ್ತಾ” ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಂತ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿಯಲ್ಲಿ ನನ್ನ ಚಿತ್ರದ ಹಾಡುಗಳನ್ನು ನನ್ನ ಗುರುಗಳಾದ ಸಂಗೀತ ಕಟ್ಟಿ ಸಮ್ಮುಖದಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿಯಾಗಿದೆ. ಅವರಿಗೆ ನಮ್ಮ ತಂಡದಿಂದ ಸನ್ಮಾನ ಮಾಡಿದ ಸೌಭಾಗ್ಯ ಮರೆಯಲಾಗದ ಕ್ಷಣ ನನಗೆ. ಇಂದು ನಾನು ಸಂಗೀತ ನಿರ್ದೇಶನಕ್ಕಾಗಿ ನಿಲ್ಲುವುದಕ್ಕೆ ಕಾರಣ ನನ್ನ ಗುರುಗಳಾದ ಸಂಗೀತ ಕಟ್ಟಿ ಹಾಗೂ ರವಿ ಬಸ್ರೂರ್ ಅವರು. ನನ್ನ ಹತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿ ನನ್ನ ಮೊದಲ ಚಿತ್ರದ ಹಾಡುಗಳು ಹೊರ ಬಂದಿದೆ. ಹಿನ್ನೆಲೆ ಸಂಗೀತವು ಕೂಡ ಬೇರೆಯದೇ ರೂಪವನ್ನ ಪಡೆಯುತ್ತದೆ. ಹಾಗೆ ವಿಶೇಷವಾಗಿ ಕೊಡವ ಭಾಷೆಯ ಶೈಲಿಯ ಹಾಡಿನಲ್ಲಿ ಸಿಗ್ನೇಚರ್ ಸ್ಟೆಪ್ ಕೂಡ ಇದೆ. ನಾನೇ ನಾಲಕ್ಕು ಹಾಡುಗಳನ್ನು ಹಾಡಿದು , ಒಂದು ಡಯೆಟ್ ಸಾಂಗ್ ನಲ್ಲಿ ಜೊತೆಗೆ ನನ್ನ ಮಗಳು ಕೂಡ ಹಾಡಿದ್ದಾಳೆ. ಪ್ರತಿಯೊಂದು ಹಾಡು ನಿಮಗೆ ಇಷ್ಟವಾಗಲಿದೆ. ನಮ್ಮನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡರು. ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕ , ನಟ , ರುಹಾನ್ ಆರ್ಯ ಹಾಗೂ ಧನು ದೇವಯ್ಯ ಕೂಡ ಸಾತ್ ನೀಡಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ವಿತರಕ ಶ್ರೀಧರ್ ಬಿಡುಗಡೆ ಮಾಡುತ್ತಿದ್ದು , ಸದ್ಯದಲ್ಲೇ ಚಿತ್ರವನ್ನು ತೆರಿಗೆ ತರಲಿದೆಯಂತೆ.