Cini NewsSandalwood

ವಿದ್ಯಾ ವಿಜಯ್ ಅಭಿನಯದ ‘ಬೇಬೋ’ ಚಿತ್ರಕ್ಕೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಾಲನೆ

Spread the love

ಈ ಹಿಂದೆ ‘ಯುದ್ಧ ಮತ್ತು ಸ್ವಾತಂತ್ರ್ಯ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ, ಈಗ ಒಂದು ಸಣ್ಣ ಗ್ಯಾಪ್‍ನ ನಂತರ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿದ್ಯಾ ಸದ್ಯ ‘ಬೇಬೋ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮುಹೂರ್ತ ಇತ್ತೀಚಿಗೆ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‍, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಟ ಕೌಶಿಕ್, ಅನಂತು ಮುಂತಾದ ಗಣ್ಯರು ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

‘ಬೇಬೋ’ ಚಿತ್ರಕ್ಕೆ ‘ಆದ್ರೆ ಇವ್ಳು ಕರೀನಾ ಅಲ್ಲ’ ಎಂಬ ಅಡಿಬರಹವಿದ್ದು, ಈ ಚಿತ್ರವನ್ನು ಜಯ ಹರಿಪ್ರಸಾದ್‍ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವನ್ನು ವಿ.ಕೆ. ಕಂಬೈನ್ಸ್ ಬ್ಯಾನರ್ ಅಡಿ ವಿದ್ಯಾ ಅವರ ಸಂಬಂಧಿಕರಾದ ಸಂತೋಷ್ ವಿಜಯ್‍ ಮತ್ತು ಸುಪ್ರೀತ್‍ ವಿಜಯ್‍ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿ. ಮನೋಹರ್ ಅವರ ಸಂಗೀತ ಸಂಯೋಜನೆ ಮತ್ತು ಸುರೇಶ್ ಚಿಕ್ಕಣ್ಣ ಅವರ ಛಾಯಾಗ್ರಹಣವಿದೆ.

ಈ ಚಿತ್ರದ ಕುರಿತು ಮಾತನಾಡುವ ನಾಯಕಿ ವಿದ್ಯಾ, ‘ಸಾಮಾನ್ಯವಾಗಿ ಮನುಷ್ಯ ದಪ್ಪಗಿದ್ದರೆ, ಆತನನ್ನು ಸಮಾಜ ದೂರ ಇಟ್ಟುಬಿಡುತ್ತದೆ. ಅವರಿಂದ ಏನೂ ಕೆಲಸವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಈ ಚಿತ್ರದಲ್ಲಿ ನಾನು ಕ್ಲಾಸಿಕಲ್‍ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ.

ಮನಸ್ಸು ಮಾಡಿದರೆ ಹೆಚ್ಚು ತೂಕವಿರುವವರು ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳುವ ಚಿತ್ರವಿದು. ಈ ಚಿತ್ರದಲ್ಲಿ ನನ್ನ ತಾಯಿಯಾಗಿ ರೇಖಾ ದಾಸ್‍ ಅಭಿನಯಿಸಿದರೆ, ರಾಧಾ ರಾಮಚಂದ್ರ ಆಧುನಿಕ ಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೂಲಕ ಅನಿಲ್‍ ಮತ್ತು ಸೂರ್ಯವರ್ಧನ್‍ ಎಂಬ ಇಬ್ಬರು ಹೊಸ ನಾಯಕರನ್ನು ಪರಿಚಯಿಸುತ್ತಿದ್ದೇವೆ’ ಎಂದರು.

ಇಲ್ಲಿ ಚಿತ್ರದ ನಾಯಕಿ, ಪುನೀತ್‍ ರಾಜಕುಮಾರ್ ಮತ್ತು ಬಾಲಿವುಡ್‍ ನಟಿ ಕರೀನಾ ಕಪೂರ್ ಅವರ ದೊಡ್ಡ ಅಭಿಮಾನಿಯಂತೆ. ‘ಕರೀನಾ ಕಪೂರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ “ಬೇಬೋ” ಎಂದು ಕರೆಯುತ್ತಾರೆ.ಇಲ್ಲಿ ನಾಯಕಿಯ ಹೆಸರು ಮಹಾಲಕ್ಷ್ಮೀ. ಆಕೆಗೆ ಕರೀನಾ ಕಪೂರ್ ಎಂದರೆ ಬಹಳ ಇಷ್ಟ. ಅವರಂತೆ ಜೀವನದಲ್ಲಿ ಆಗಬೇಕು ಎಂದು ಕನಸು ಕಾಣುತ್ತಿರುತ್ತಾಳೆ.

ಹಾಗಾಗಿ, ಆಕೆಯ ಗೆಳತಿಯರು ಆಕೆಯನ್ನು “ಬೇಬೋ” ಎಂದು ಕರೆಯುತ್ತಿರುತ್ತಾರೆ. ಅದೇ ಕಾರಣಕ್ಕೆ ಚಿತ್ರಕ್ಕೆ ಈ ಹೆಸರಿಟ್ಟಿದ್ದೇವೆ’ ಎಂದರು.ನಿರ್ದೇಶಕ ಜಯಹರಿ ಪ್ರಸಾದ್‍ ಮಾತನಾಡಿ, ‘ಇದೊಂದು ನೃತ್ಯದ ಕುರಿತಾದ ಚಿತ್ರ. ದಪ್ಪ ಇರುವ ವ್ಯಕ್ತಿಯೊಬ್ಬರು ನೃತ್ಯದಲ್ಲಿ ದೊಡ್ಡ ಸಾಧನೆ ಮಾಡುವ ಕಥೆ ಇರುವ ಚಿತ್ರ. ಈ ಚಿತ್ರದ ಮೂಲಕ ನಾವು ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರೇಖಾ ದಾಸ್‍ ಮಾತನಾಡಿ, ‘ನಾನು ಮತ್ತು ವಿದ್ಯಾ ಈ ಹಿಂದೆ ‘ನಾಗಾಭರಣ’ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಈಗ ಈ ಚಿತ್ರದಲ್ಲಿ ಅವರ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ನನಗೊಂದು ಅದ್ಭುತವಾದ ಪಾತ್ರವಿದೆ. ಹಲವು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ಇಲ್ಲಿ ತನ್ನ ಮಗಳು ಯಾರಿಗೂ ಕಡಿಮೆ ಇಲ್ಲ ಎಂದು ಪ್ರೀತಿಸುವ ತಾಯಿಯ ಪಾತ್ರ ಸಿಕ್ಕಿದೆ’ ಎಂದರು.

‘ಬೇಬೋ’ ಚಿತ್ರಕ್ಕೆ ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಚಿಕ್ಕಮಗಳೂರಿನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ. ಕ್ಲೈಮ್ಯಾಕ್ಸ್ ನಲ್ಲಿ ಬರುವ ನೃತ್ಯ ಸ್ಪರ್ಧೆಯಲ್ಲಿ ಶಶಿಕುಮಾರ್, ಮಾಲಾಶ್ರೀ, ವಿನೋದ್‍ ರಾಜ್‍ ಮುಂತಾದವರು ಅತಿಥಿಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿದ್ಯಾ ತಿಳಿಸಿದ್ದಾರೆ.

Visited 1 times, 1 visit(s) today
error: Content is protected !!