ಡ್ಯೂಪ್ಲಿಕೇಟ್ ವರ್ಜಿನಲ್ ಸುಳಿಯಲ್ಲಿ ತಾಯಿತದ ಶಕ್ತಿ “ಜೆರಾಕ್ಸ್ “
ವೆಬ್ ಸೀರಿಯಸ್ : ಜೆರಾಕ್ಸ್
ನಿರ್ಮಾಣ : ಡಾಲಿ ಪಿಚ್ಚರ್ಸ್
ನಿರ್ದೇಶಕ : ಶ್ರೀನಿಧಿ ಬೆಂಗಳೂರು
ತಾರಾಗಣ : ನಾಗಭೂಷಣ್ , ಪಾಯಲ್ ಚಂಗಪ್ಪ , ಮಂಜು ಪಾವಗಡ , ಓಂ ಪ್ರಕಾಶ್ ರಾವ್, ಶ್ರೀವತ್ಸ , ಯಶವಂತ್ ಶೆಟ್ಟಿ , ತುಕಾಲಿ ಸಂತು, ವಿಜಯ್ ಪ್ರಸಾದ್, ಜಗಪ್ಪ , ಸಿದ್ದು ಮಂಡ್ಯ , ಸುಧಾಕರ್ ಗೌಡ ಹಾಗೂ ಮುಂತಾದವರು…
ಸಾಮಾನ್ಯವಾಗಿ ವೀಕ್ಷಕರನ್ನ ಸೆಳೆಯುವುದು ಅಷ್ಟು ಸುಲಭದ ಮಾತಲ್ಲ , ಪ್ರತಿ ಹಂತದಲ್ಲೂ ಸನ್ನಿವೇಶಗಳಿಗೆ ತಕ್ಕಂತಹ ಕುತೂಹಲಕಾರಿ ಅಂಶಗಳನ್ನು ಒಳಗೊಂಡರೆ ಗಮನ ಸೆಳೆಯುತ್ತಾ ಹೋಗುತ್ತದೆ. ಅಂತದೇ ಪ್ರಯತ್ನವಾಗಿ ತನ್ನ ವೆಬ್ ಸೀರೀಸ್ ಮೂಲಕ ಮನೋರಂಜನಾತ್ಮಕ ಅಂಶಗಳೊಂದಿಗೆ ಬದುಕು , ನಂಬಿಕೆ , ಪ್ರೀತಿ , ಸ್ನೇಹ , ದ್ವೇಷ, ರಾಜಕೀಯ ಪಿತೂರಿ , ಪೊಲೀಸ್ ಇನ್ವೆಸ್ಟಿಗೇಷನ್ , ಸೋಶಿಯಲ್ ಮೀಡಿಯಾ ಆರ್ಭಟ ನಡುವೆ ಊಹಿಸಲು ಅಸಾಧ್ಯವಾದಂತಹ ಒಂದಷ್ಟು ವಿಚಿತ್ರ ಘಟನೆಗಳ ಸುತ್ತ ತಾಯಿತದ ಶಕ್ತಿಯ ಸುಳಿಯಲ್ಲಿ ಜೆರಾಕ್ಸ್ ಕಾಫಿಗಳಿಗೆ ಜೀವ ಬಂದರೆ ಏನಾಗುತ್ತೆ ಎಂಬ ಎಳೆಯೊಂದಿಗೆ ಹಾಸ್ಯ ಭರಿತ ಥ್ರಿಲ್ಲರ್, ಫ್ಯಾಂಟಸಿ ಅಂಶಗಳ ಜೊತೆಗೆ zee5 ನಲ್ಲಿ ಮೂಡಿ ಬರುತ್ತಿರುವಂತಹ ವೆಬ್ ಸರಣಿಯೇ “ಜೆರಾಕ್ಸ್”.
ರಾಯದುರ್ಗ ಎಂಬ ಊರಿನಲ್ಲಿ ರಾಮಣ್ಣ (ವಿಜಯ ಪ್ರಸಾದ್) ಹಾಗೂ ದೀಪು (ಸಂತು ತುಕಾಲಿ)ಯ ರಾಜಕೀಯ ಗುದ್ದಾಟ , ಮಾತಿನ ಚಕಮಕಿ , ಎಲೆಕ್ಷನ್ ಸಮರಕ್ಕೆ ತಯಾರಿ ಜೋರಾಗೇ ನಡೆಯುತ್ತಿದ್ದು, ಎರಡು ಬಣ್ಣಗಳ ನಡುವೆ ಬೆಂಬಲಿಗರ ಒಳಸಂಚು ಕೂಡ ಅತಿರೇಕವಾಗಿ ಇರುತ್ತದೆ.
ಇದಕ್ಕೆ ಪೂರಕವಾಗಿ ತನ್ನ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋಗಳನ್ನು ವೈರಲ್ ಮಾಡುವ ವೈರಲ್ ವೆಂಕಿ (ಜಗ್ಗಪ್ಪ). ಇದರ ನಡುವೆ ಬಾಲ್ಯದಲ್ಲೇ ಒಂದಷ್ಟು ಸಮಸ್ಯೆಗಳನ್ನು ಎದುರಿಸಿ ದೇವರ ಮರೆಹೋಗಿ ತಾಯತವನ್ನು ಕಟ್ಟಿಸಿಕೊಂಡು , ತಂದೆ ತಾಯಿಯನ್ನು ಕಳೆದುಕೊಂಡು ದೊಡ್ಡಪ್ಪ (ಓಂ ಪ್ರಕಾಶ್ ರಾವ್) ನ ಆಸರೆಯಲ್ಲಿ ಬೆಳೆಯುವ ಹುಡುಗ ಪ್ರಕಾಶ (ನಾಗಭೂಷಣ್) ಜೆರಾಕ್ಸ್ ಅಂಗಡಿಯನ್ನ ಇಟ್ಕೊಂಡು ಜೀವನ ಸಾಗಿಸುತ್ತಾನೆ. ಇನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸೂಜಿ (ಪಾಯಲ್ ಚಂಗಪ್ಪ)ಳನ್ನ ಪ್ರೀತಿಸುತ್ತಾನೆ. ಆದರೆ ಆಕೆಗೆ ಹಣ , ಆಸ್ತಿ ಇರುವ ರೇವಂತನ ಮೇಲೆ ಆಸೆ. ಇನ್ನು ಪ್ರಕಾಶನಿಗೆ ಗೆಳೆಯn (ಶ್ರೀವತ್ಸ) ಸಾತ್ ಇರುತ್ತದೆ.
ಇದರ ನಡುವೆ ಸೂಜಿಯ ಆಸೆ ಪೂರೈಸಿ ಆಕೆಯನ್ನು ಮದುವೆಯಾಗಲು ನಿರ್ಧರಿಸುವ ಪ್ರಕಾಶನ ಬದುಕಿನಲ್ಲಿ ಒಂದು ವಿಚಿತ್ರ ಘಟನೆ ತನ್ನ ಅಂಗಡಿಯಲ್ಲಿರುವ ಜೆರಾಕ್ಸ್ ಮಿಷಿನ್ ಮೂಲಕ ಎದುರಾಗುತ್ತದೆ. ವ್ಯಕ್ತಿ , ವಸ್ತು , ಯಾವುದೇ ಆಗಲಿ ಜೆರಾಕ್ಸ್ ಕಾಫಿಗಳ ಮೂಲಕ ಅದು ಮರು ಜೀವ ಪಡೆದು ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡಿ ಭಯವನ್ನು ಮೂಡಿಸುತ್ತದೆ. ಬದುಕಿದ್ದವರ, ಸತ್ತವರ ಅಯೋಮಯ ಸಂದರ್ಭ ಸನ್ನಿವೇಶಗಳು ಯಾವುದು ನಿಜ…ಯಾವುದು ಸುಳ್ಳು… ಎಂಬ ಗೊಂದಲದ ನಡುವೆಯೇ ರಾಜಕೀಯ ನಾಯಕರ ಒಳಸಂಚು , ಗಲಾಟೆ , ಬ್ಲಾಕ್ಮೈಲ್ , ಸಾವು , ನಿಜಾಂಶ ಹುಡುಕುವ ಹಾದಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪರದಾಟ ಹಾಗೂ ಪ್ರೀತಿ ಪಡೆಯುವ ಹಾದಿಯಲ್ಲಿ ಆಗುವ ಎಡವಟ್ಟುಗಳ ಸುತ್ತ ಸರಿ ತಪ್ಪುಗಳನ್ನ ತಿದ್ದಿಕೊಳ್ಳುವ ಹೊತ್ತಿಗೆ ಬೇರೆಯದೇ ದಿಕ್ಕನ್ನ ತೋರಿಸುತ್ತಾ ಸಾಗುವ ಕಥನಕವಾಗಿ ಯಾವುದೇ ಲಾಜಿಕ್ಕನ್ನು ಹುಡುಕದೆ ಮನೋರಂಜನ ಅಂಶಗಳ ಮೂಲಕ ಪ್ರೇಕ್ಷಕರನ್ನ ಪ್ರತಿ ಕಂತಿನಲ್ಲಿ ಕುತೂಹಲ ಮೂಡಿಸುತ್ತಾ ಸಾಗುವ ಈ ಜೆರಾಕ್ಸ್ ವೆಬ್ ಸೀರೀಸ್ ಖಂಡಿತ ಎಲ್ಲರನ್ನ ಆಕರ್ಷಣೆ ಮಾಡುವ ಶಕ್ತಿಯನ್ನು ಹೊಂದಿದೆ ಎನ್ನುವಂತಿದೆ.
Zee5ನಿಂದ ಒಳ್ಳೊಳ್ಳೆ ಪ್ರತಿಭೆಗಳಿಗೆ ಫ್ಲಾಟ್ ಫಾರ್ಮ್ ಸಿಗ್ತಿದೆ. ಆ ನಿಟ್ಟಿನಲ್ಲಿ ನಟ ಧನಂಜಯ್ ತಮ್ಮ ಡಾಲಿ ಪ್ರೊಡಕ್ಷನ್ ಮೂಲಕ ಪ್ರಥಮ ಬಾರಿಗೆ ನಿರ್ಮಾಣ ಮಾಡಿರುವಂತಹ ಈ ಜೆರಾಕ್ಸ್ ವೆಬ್ ಸೀರೀಸ್ ಅನ್ನು ‘ಬ್ಲಿಂಕ್’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ‘ಜೆರಾಕ್ಸ್ʼ ಸರಣಿಯನ್ನು ನಾಗಭೂಷಣ್, ಪಾಯಲ್ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಮಂಜು ಪಾವಗಡ, ಓಂ ಪ್ರಕಾಶ್ ರಾವ್, ಶ್ರೀವತ್ಸ, ಯಶ್ವಂತ್ ಶೆಟ್ಟಿ, ವಿಜಯ್ ಪ್ರಸಾದ್, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಾಸ್ಯ ಭರಿತ ವೆಬ್ ಸೀರೀಸ್ ‘ಜೆರಾಕ್ಸ್’. ಡಾರ್ಕ್ ಕಾಮಿಡಿ, ಥ್ರಿಲ್ಲರ್, ಫ್ಯಾಂಟಸಿ ಅಂಶಗಳನ್ನ ಒಳಗೊಂಡಿದೆ. zee5ನಲ್ಲಿ ಇದೇ ಏಪ್ರಿಲ್ 24ರಿಂದ ಈ ವೆಬ್ ಸರಣಿಯು ಪ್ರೇಕ್ಷಕರನ್ನ ಸೆಳೆಯುತ್ತಿದೆ.
