Cini NewsMovie ReviewSandalwood

ಜೀವ ಹಾಗೂ ಜೀವನದ ಮೌಲ್ಯ X&Y (ಚಿತ್ರವಿಮರ್ಶೆ -ರೇಟಿಂಗ್ : 4/ 5 )

Spread the love

ರೇಟಿಂಗ್ : 4/ 5
ಚಿತ್ರ : “X&Y”
ನಿರ್ದೇಶಕ : ಡಿ . ಸತ್ಯಪ್ರಕಾಶ್
ನಿರ್ಮಾಣ : ಸತ್ಯ ಪಿಕ್ಚರ್ಸ್
ಸಂಗೀತ : ಕೌಶಿಕ್ ಹರ್ಷ
ಛಾಯಾಗ್ರಹಣ : ಲವಿತ್
ಸಂಕಲನ : ಬಿ.ಎಸ್. ಕೆಂಪರಾಜು
ತಾರಾಗಣ : ಡಿ.ಸತ್ಯಪ್ರಕಾಶ್ , ಬೃಂದಾ ಆಚಾರ್ಯ, ಅಯಾನ , ಅಥರ್ವ ಪ್ರಕಾಶ್, ದೊಡ್ಡಣ್ಣ , ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್ ಹಾಗೂ ಮುಂತಾದವರು…

ಈ ಭೂಮಿ ಮೇಲೆ ಹುಟ್ಟು ಹಾಗೂ ಸಾವು ಯಾವಾಗ , ಹೇಗೆ ಆಗುತ್ತೆ ಎಂದು ಯಾರು ನಿರ್ಧರಿಸಲು ಸಾಧ್ಯವಿಲ್ಲ. ಅದೇನಿದ್ದರೂ ದೈವ ಕೃಪೆ ಎಂಬ ನಂಬಿಕೆ ಒಂದೆಡೆಯಾದರೆ , ಮತ್ತೊಂದೆಡೆ ಬೇರೆ ಕಾರಣ ಇದ್ದದ್ದೆ. ಅದರಲ್ಲೂ ವೈಜ್ಞಾನಿಕವಾಗಿ ಕ್ರೋಮೋಸೋಮ್ ಒಂದು ಜೀವಿಗಳ ಭಾಗ ಗಂಡು-ಹೆಣ್ಣು ಸೇರಿದಾಗ ಗರ್ಭಕೋಶದಲ್ಲಿ xy ಸೇರಿದಾಗ ಗಂಡು ಮಗು xx ಸೇರಿದಾಗ ಹೆಣ್ಣು ಮಗುವಿನ ಜನನ ವಾಗುತ್ತದೆ ಎಂಬ ವಿಚಾರ ತಿಳಿದೇ ಇದೆ. ಇದರ ಸುತ್ತ ಭೂಮಿಗೆ ಬರುವ ಜೀವ ಒಂದು ತನ್ನ ತಂದೆ ತಾಯಿ ಯಾರೆಂದು ತಿಳಿಯುವ ಆತುರದಲ್ಲಿ ಎದುರಿಸುವ ಬದುಕಿನ ಸತ್ಯದ ದರ್ಶನ ‘ಹೂ ಆಗಬೇಕಾ… ಮುಳ್ಳಾಗಬೇಕಾ…’ ಎಂಬ ವಿಚಾರವನ್ನು ಮನೋರಂಜನಾತ್ಮಕವಾಗಿ ಹೇಳುವ ಪ್ರಯತ್ನದ ಹಾದಿಯಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ X &Y.

 

ಬದುಕೇ ಜಟಕಾ ಬಂಡಿ… ವಿಧಿ ಅದರ ಸಾಹೇಬ… ಎನ್ನುವಂತೆ ತುರ್ತು ಪರಿಸ್ಥಿತಿಯಲ್ಲಿ ಇದ್ದವರಿಗೆ ಸಹಾಯ ಮಾಡುವ ಆಟೋ ಆಂಬುಲೆನ್ಸ್ ನ ಚಾಲಕ ಕ್ರೀಡೆ (ಸತ್ಯಪ್ರಕಾಶ್). ತನ್ನ ಅಕ್ಕ (ಹರಿಣಿ) ಭಾವ (ಸುಂದರ್ ವೀಣಾ) ಗೆ ಕ್ರೀಡೆ ಗೆ ಹುಡುಗಿ ಹುಡುಕುವುದೇ ಹರಸಾಹಸ. ಭಾವನ ಜೊತೆ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುವ ಕ್ರೀಡೆ ಗೆ ಪ್ರತಿಯೊಂದು ರೋಗಿಗೂ ತನ್ನ ಕೈಲಾದ ಸಹಾಯ ಮಾಡುವ ಹಾದಿಯಲ್ಲಿ ಆಶಾ ಎಂಬ ಹುಡುಗಿಯ ಕೊನೆ ದಿನಗಳ ಬದುಕಿಗೂ ಧೈರ್ಯ ತುಂಬುತ್ತಾನೆ. ಇದರ ನಡುವೆ ಮಾವನ ಒತ್ತಾಯಕ್ಕೆ ತನ್ನ ಮಗಳನ್ನು ಮದುವೆ ಆಗಲು ಮುಂದಾಗುವ ಕ್ರೀಡೆ ಗೆ ತನ್ನ ಅತ್ತೆ ಮಗಳು ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ತಲೆ ನೋವಾಗುತ್ತದೆ. ಇದರ ನಡುವೆ ಮನೆಯ ಹಿರಿಯ ಜೀವ ತಾತ (ದೊಡ್ಡಣ್ಣ) ತಾಯಿ (ವೀಣಾ ಸುಂದರ್) ಒತ್ತಾಯಕ್ಕೆ ಮಣಿದು ಮದುವೆಗೆ ಮುಂದಾಗುವ ಕೃಪಾ (ಬೃಂದಾ ಆಚಾರ್ಯ) ಬದುಕಲ್ಲಿ ಹೊಸ ದಿಕ್ಕು ತೆರೆಯುತ್ತದೆ. ಇದೇ ಸಮಯಕ್ಕೆ ಕ್ರೀಡೆ ಹಾಗೂ ಕೃಪಾ ಭೇಟಿಯಾಗುವ ಸಂದರ್ಭ ಎದುರಾಗಿ ಮತ್ತೊಂದು ಪಯಣ ಶುರುವಾಗುತ್ತದೆ. ಇದೆಲ್ಲದಕ್ಕೂ ಒಬ್ಬ ಬುದ್ಧಿಮಾಂದ್ಯ ವ್ಯಕ್ತಿ (ಅಥರ್ವ ಪ್ರಕಾಶ್) ವ್ಯಕ್ತಿ ಕಾರಣ, ಅಪ್ಪ ಅಮ್ಮ ಎನ್ನುತ್ತಾ ಕ್ರೀಡೆ ಹಾಗೂ ಕೃಪ ಸುತ್ತಾ ಸಾಗುತ್ತಾನೆ. ಅವನ ಹಿನ್ನೆಲೆ ಏನು… ಯಾಕೆ ಇವರಿಬ್ಬರನ್ನ ಅಪ್ಪ-ಅಮ್ಮ ಅನ್ನುತ್ತಾನೆ…
ಬದುಕಿನಲ್ಲಿ ಹೂವಾಗಬೇಕಾ… ಮುಳ್ಳಾಗಬೇಕಾ…XY ಅಂದರೇನು? ಎಲ್ಲದಕ್ಕೂ ಉತ್ತರ ಈ ಚಿತ್ರ ನೀಡುತ್ತದೆ.

ನಿರ್ದೇಶಕ ಡಿ. ಸತ್ಯಪ್ರಕಾಶ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅದ್ಬುತವಾಗಿದೆ. ಪ್ರಸ್ತುತ ಕಾಲಘಟ್ಟಕ್ಕೆ ಎಲ್ಲರಿಗೂ ಇಷ್ಟವಾಗುವಂಥ ಅಂಶವನ್ನ ಮನೋರಂಜನಾತ್ಮಕವಾಗಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೀವ ಹಾಗೂ ಜೀವನದ ಮೌಲ್ಯ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬ ಸೂಕ್ಷ್ಮತೆಯನ್ನು ಮನಮುಟ್ಟುವಂತೆ ಹೇಳಿದ್ದಾರೆ. ಚಿತ್ರಕಥೆಯಲ್ಲಿ ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಈ ಚಿತ್ರದ ಮೂಲಕ ಪ್ರಮುಖ ಪಾತ್ರಧಾರಿ ಯಾಗಿ ಉತ್ತಮ ನಟನೆಯನ್ನು ನೀಡಿ ಗಮನ ಸೆಳೆದಿದ್ದಾರೆ. ಈ ಹಿಂದೆ ಕಾಶೀನಾಥ್ ಚಿತ್ರದಲ್ಲಿ ನೋಡಿದಂತಹ ಅನುಭವ ಈ ಚಿತ್ರದ ಮೂಲಕ ಕಂಡಂತಿದೆ. ಇಂತಹ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸ ಮೆಚ್ಚುವಂತಿದೆ. ಛಾಯಾಗ್ರಾಹಕರ ಕೈಚಳಕ , ಸಂಗೀತದ ಮೋಡಿ, ಗ್ರಾಫಿಕ್ ಕೆಲಸ , ಸಂಕಲನದ ಕತ್ತರಿ , ಆಟೋ ಡಿಸೈನ್ ಹಾಗೂ ಕಲೆಯ ಕೆಲಸ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಬಹಳ ಸೊಗಸಾಗಿ ಮೂಡಿ ಬಂದಿದೆ.

ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿರುವ ಡಿ. ಸತ್ಯ ಪ್ರಕಾಶ್ ನೈಜಕ್ಕೆ ಪೂರಕವಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಬುದ್ಧಿಮಾಂದ್ಯನಾಗಿ ಅಥರ್ವ ಪ್ರಕಾಶ್ ಅದ್ಭುತವಾಗಿ ಪಾತ್ರದಲ್ಲಿ ಜೀವಿಸಿದ್ದಾರೆ. ಬಹಳ ಮುದ್ದಾಗಿ ಕಾಣಿಸುವ ಬೃಂದಾ ಆಚಾರ್ಯ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದು , ಇವರನ್ನು ನೋಡಿದಾಗ ಹಾಗೂ ಮಾತಿನ ಧ್ವನಿ ಹಿರಿಯ ನಟಿ ಜಯಮಾಲ ನೆನಪಿಸುತ್ತದೆ.
ಇನ್ನು ಉಳಿದಂತೆ ಅಭಿನಯಿಸಿರುವ ಆಯಾನ , ಸುಂದರ್ ವೀಣಾ , ಹರಿಣಿ ಶ್ರೀಕಾಂತ್ , ದೊಡ್ಡಣ್ಣ , ವೀಣಾ ಸುಂದರ್ , ಧರ್ಮ ಕಡೂರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟರೆ ಎಲ್ಲರೂ ನೋಡುವಂತಹ ಚಿತ್ರ ಇದಾಗಿದ್ದು , ಚಿತ್ರದ ಆರಂಭ ಹಾಗೂ ಕೊನೆಯ ಸನ್ನಿವೇಶಗಳನ್ನು ತಪ್ಪದೇ ನೋಡಿ.

Visited 3 times, 1 visit(s) today
error: Content is protected !!