Cini NewsSandalwood

“ವಿಷ್ಣುಪ್ರಿಯ” ಚಿತ್ರದ ರೊಮ್ಯಾಂಟಿಕ್ ಹಾಡು ಈಗ ಟ್ರೆಂಡಿಂಗಿನತ್ತ…

ತೊಂಬತ್ತರ ದಶಕದ ಸಮ್ಮೋಹಕ ಪ್ರೇಮ ಕಥಾನಕ ಹೊಂದಿರುವ ಚಿತ್ರ `ವಿಷ್ಣುಪ್ರಿಯ’. ಈ ಹಿಂದೆ ಪಡ್ಡೆಹುಲಿಯಾಗಿ ಭರವಸೆ ಮೂಡಿಸಿದ್ದ ಶ್ರೇಯಸ್ ಮಂಜು ವಿಷ್ಣುಪ್ರಿಯನಾಗಿ, ವಿಶಿಷ್ಟವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈ ಚಿತ್ರದ ಚೆಂದದ ಹಾಡೊಂದು ವಾರಗಳ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ದಿನದಿಂದ ದಿನಕ್ಕೆ ಆ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಕೇಳಿದಾಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಛಾತಿ ಹೊಂದಿರುವ ಆ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ, ಮೆಚ್ಚುಗೆ ಗಳಿಸುತ್ತಾ ಮುಂದುವರೆಯುತ್ತಿದೆ.

ಚಿಗುರು ಚಿಗುರು ಸಮಯ ಹಿತವಾದ ಒಂದು ಮೌನ, ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ… ಎಂಬ ಈ ಹಾಡು ಸಂಗೀತ, ಸಾಹಿತ್ಯ ಹಾಗೂ ದೃಷ್ಯ ಸೇರಿದಂತೆ ಎಲ್ಲ ಕೋನಗಳಲ್ಲಿಯೂ ಸಮ್ಮೋಹಕವಾಗಿದೆ. ಇದಕ್ಕೆ ಸಾಹಿತ್ಯ ಒದಗಿಸಿರುವವರು ಡಾ. ವಿ ನಾಗೇಂದ್ರ ಪ್ರಸಾದ್. ಬಹುಶಃ ಈ ಮೂಲಕ ವರ್ಷಾರಂಭದಲ್ಲಿಯೇ ನವಿರು ಭಾವವೊಂದನ್ನು ನಾಗೇಂದ್ರ ಪ್ರಸಾದ್ ಕೇಳುಗರ ಬೊಗಸೆ ತುಂಬಿಸಿದ್ದಾರೆ. ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಈ ಹಾಡು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲಿಯೂ ಕಮಾಲ್ ಮಾಡಿದ್ದಾರೆ.


ಮತ್ತೆ ಮತ್ತೆ ಕೇಳಿಸಿಕೊಳ್ಳುವ ಗುಣ ಹೊಂದಿರುವ ಈ ಪ್ರೇಮ ಗೀತೆಯ ಪ್ರಭೆಯಲ್ಲಿ ವಿಷ್ಣುಪ್ರಿಯನ ಕ್ರೇಜ್ ಮತ್ತಷ್ಟು ಮಿರುಗುತ್ತಿದೆ. ಈ ವರ್ಷದ ಮೆಲೋಡಿಯಸ್ ಹಾಡೆಂದು ಗುರುತಿಸಿಕೊಳ್ಳುವ ಎಲ್ಲ ಗುಣಗಳೂ ಈ ಚಿಗುರು ಚಿಗುರು ಹಾಡಿಗಿದೆ. ಅಂದಹಾಗೆ, ಇದು ವಿ.ಕೆ ಪ್ರಕಾಶ್ ನಿರ್ದೇಶನದ ಚಿತ್ರ. ತೊಂಬತ್ತರ ದಶಕದಲ್ಲಿ ಘಟಿಸುವ ಈ ಕಥನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸಿದ್ದರೆ, ಒರು ಅಡಾರ್ ಲವ್ ಖ್ಯಾತಿಯ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಪ್ರೇಮಕಥೆ ಅದೆಷ್ಟು ತಾಜಾತನದಿಂದ ನಳನಳಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯೊಂದು ಈ ಹಾಡಿನ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ.

ಗಂಡುಗಲಿ ಕೆ.ಮಂಜು ನಿರ್ಮಾಣದ ವಿಷ್ಣುಪ್ರಿಯ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೇಮಕಥೆ ಮಾತ್ರವಲ್ಲ; ತೊಂಬತ್ತರ ದಶಕದಲ್ಲಿ ನಡೆದಿದ್ದ ನೈಜ ಕಥನವೂ ಹೌದು. ಈ ಹಿಂದೆ ಮೊದಲ ಚಿತ್ರ ಪಡ್ಡೆಹುಲಿಯಲ್ಲಿ ಮೈದುಂಬಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದವರು ಶ್ರೇಯಸ್ ಮಂಜು. ಅವರ ಪಾತ್ರದ ಚಹರೆಗಳು ಈ ಹಾಡಿನ ಮೂಲಕ ಜಾಹೀರಾಗಿದೆ. ಈ ಹಾಡು ಕೇಳಿದವರು, ನೋಡಿದವರೆಲ್ಲ ವಿಷ್ಣುಪ್ರಿಯನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

error: Content is protected !!