*ಇದೇ ಜನವರಿ 27ರಿಂದ “ಗೌರಿ ಕಲ್ಯಾಣ” ಹಾಗೂ “ಪವಿತ್ರ ಬಂಧನ”ಎರಡು ವಿಭಿನ್ನ ಧಾರಾವಾಹಿಗಳ ಪ್ರಸಾರ*
ಕಲರ್ಸ್ ಕನ್ನಡದಲ್ಲಿ ಭಾವನೆಗಳ ಸಂಘರ್ಷದ “ಗೌರಿ ಕಲ್ಯಾಣ” ಧಾರಾವಾಹಿ ಪ್ರತಿ ರಾತ್ರಿ 8ಕ್ಕೆ ಹಾಗೂ ನಾರಿಶಕ್ತಿಯ ಮತ್ತೊಂದು ಮಗ್ಗಲು ಪ್ರದರ್ಶಿಸುವ “ಪವಿತ್ರ ಬಂಧನ” ಪ್ರತಿ ದಿನ 10ಕ್ಕೆ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರಸಾರವಾಗಲಿದೆ. ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸುವ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿ, ಇದೀಗ ಎರಡು ಮನಮಿಡಿಯೋ ಹೊಸ ಕಥೆಗಳನ್ನು ನಿಮ್ಮ ಮಡಿಲಿಗೆ ಹಾಕಲು ಸಜ್ಜಾಗಿದೆ. “ಗೌರಿ ಕಲ್ಯಾಣ”ದಲ್ಲಿ ತನ್ನ ಮೂರು ಹೆಣ್ಣುಮಕ್ಕಳನ್ನ ಒಳ್ಳೆ ಶ್ರೀಮಂತ ಮನೆತನಕ್ಕೆ ಸೇರಿಸಬೇಕು ಅಂತ ತನಗೆ ತಾನೆ ಮಾತು ಕೊಟ್ಕೊಂಡಿರೋ ಅಮ್ಮ, “ಪವಿತ್ರ ಬಂಧನ”ದಲ್ಲಿ ತಮ್ಮನ ಖುಷಿಗೋಸ್ಕರ ಏನ್ ಬೇಕಾದ್ರು ಮಾಡ್ತೀನಿ ಅಂತ ಮಾತು ಕೊಟ್ಟಿರೋ ಅಣ್ಣ. ಈ ಎರಡು ಭಿನ್ನ ಕಥೆಗಳು ಇದೇ ಜನವರಿ 27ರ ಮಂಗಳವಾರದಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿವೆ.
*ಗೌರಿ ಕಲ್ಯಾಣ*

ಮಧ್ಯಮ ವರ್ಗದ, ಸಂಪ್ರದಾಯಸ್ಥ ಮನೆತನದ ಸಭ್ಯ ಗೃಹಿಣಿ ಕಾಂತಲಕ್ಷ್ಮಿಗೆ ಮೂವರು ಸುಂದರ ಹೆಣ್ಣುಮಕ್ಕಳು. ಮೋನಿಕಾ, ಗೌರಿ ಮತ್ತು ಚಿನ್ಮಯಿ. ತನ್ನ ಮೂರೂ ಮಕ್ಕಳನ್ನು ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಕಳಿಸಬೇಕು ಅನ್ನೋ ಮಹದಾಸೆ ಆಕೆಯದ್ದು. ಬಡತನದಲ್ಲಿ ತಾನು ಅನುಭವಿಸಿದ ಕಷ್ಟ ತನ್ನ ಮಕ್ಕಳು ಅನುಭವಿಸಬಾರದು ಎಂದದು ಹಂಬಲಿಸೋ ಆ ತಾಯಿಗೆ, ತನ್ನ ಮಕ್ಕಳ ಸುಂದರ ಭವಿಷ್ಯದ್ದೇ ಕನಸು. ದೀನಬಂಧು ಮನತನದ ಶ್ರೀಮಂತಿಕೆಗೆ ಮರುಳಾಗಿ ತಾಯಿ ತನ್ನ ದೊಡ್ಡಮಗಳನ್ನು ಆ ಮನೆಗೆ ಸೊಸೆಯಾಗಿಸಲು ಹಂಬಲಿಸ್ತಾಳೆ. ಅದಕ್ಕಾಗಿ ಪರಿಪರಿಯಾದ ಪ್ರಯತ್ನ ಮಾಡ್ತಾಳೆ. ಆಕೆಯ ಆ ಪ್ರಯತ್ನ, ಆಕೆ ತನ್ನ ಗುರಿ ಸಾಧನೆಗೆ ಹಿಡಿದ ದಾರಿ ಆಕೆಯ ಮಕ್ಕಳಿಗೆ ಹೂವಿನ ಹಾಸಿಗೆ ಹಾಸುತ್ತೋ? ಅಥವಾ ಮುಳ್ಳಿನ ದಾರಿಯಾಗುತ್ತೋ? ಕಾದುನೋಡಬೇಕು. ಮುಂದಿನ ದಿನಗಳಲ್ಲಿ ಇವರು ಎದುರಿಸುವ ಭಾವನಾತ್ಮಕ ಸವಾಲುಗಳು ಎಂಥವು? ಮದುವೆಯ ನಂತರ ಘಟಿಸೋ ತಿರುವುಗಳೇನು? ಅನ್ನೋದೆ “ಗೌರಿಕಲ್ಯಾಣ” ಧಾರಾವಾಹಿಯ ಜೀವಾಳ.


ಗೌರಿ ಕಲ್ಯಾಣ ಧಾರಾವಾಹಯಲ್ಲಿ ಗೌರಿಯಾಗಿ ಶಿಲ್ಪಾ ಕಾಮತ್, ವಿವೇಕ್ ಚಕ್ರವರ್ತಿಯಾಗಿ ಶರತ್ ಕುಮಾರ್, ಕಾಂತಲಕ್ಷ್ಮೀ ಪಾತ್ರದಲ್ಲಿ ದೀಪಿಕಾ ಶರಣ್ ಶೆಟ್ಟಿ, ಶಾಂತವೀರಣ್ಣ ಪಾತ್ರದಲ್ಲಿ ಅಶೋಕ್ ಜಂಬೆ, ಮೋನಿಕಾ ಪಾತ್ರದಲ್ಲಿ ಸಹನಾ, ಚಿನ್ಮಯಿ ಪಾತ್ರದಲ್ಲಿ ನಿಹಾರಿಕಾ ಶೆಟ್ಟಿ, ಚಕ್ರವರ್ತಿ ಪಾತ್ರದಲ್ಲಿ ಗುರುದತ್, ಸರಿತಾ ಪಾತ್ರದಲ್ಲಿ ಶೀಲಾ, ಚಂಚಲ ಪಾತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ. ರಾಮ್ಜಿ ಈ ಸೀರಿಯಲ್ ನಿರ್ಮಾಣ ಮಾಡುತ್ತಿದ್ದು, ಭರತ್ ಕುಮಾರ್ ಎನ್ ಮೈಸೂರು ನಿರ್ದೇಶನ ಇರಲಿದೆ. ಪ್ರೋಮೋ ಮೂಲಕ ಗಮನ ಸೆಳೆದ “ಗೌರಿ ಕಲ್ಯಾಣ” ನೋಡುಗರಿಗೆ ಹೊಸತನದ ಅನುಭವ ನೀಡಲಿದೆಯಂತೆ.
*“ಪವಿತ್ರ ಬಂಧನ”*

ಹೆಣ್ಣು, ಒಂದು ಮನೆ ಜವಾಬ್ದಾರಿ ಹೊತ್ತರೆ, ಆಕೆ ಎಂಥ ತ್ಯಾಗಕ್ಕೂ ಸಿದ್ಧ. “ಪವಿತ್ರ ಬಂಧನ”ದಲ್ಲಿಯೂ ಒಂದು ತ್ಯಾಗದ ಕಥೆಯಿದೆ. ಅನಿವಾರ್ಯತೆಗೆ ಕಟ್ಟುಬಿದ್ದು, ವಿಧಿ ನಡೆಸಿದ ಹಾದಿಯಲ್ಲಿ ಸಾಗುವ ಆಕೆಯ (ಪವಿತ್ರಾ) ಗಟ್ಟಿತನದ ಎಳೆಯಿದೆ. ಇದು ಕೇವಲ ಒಬ್ಬ ಹೆಣ್ಣಿನ ಹೋರಾಟವಲ್ಲ, ಬದಲಿಗೆ ಸವಾಲುಗಳ ನಡುವೆ ಧೃತಿಗೆಡದೆ ತನ್ನವರ ಸುಖಕ್ಕಾಗಿ ಹೇಗೆ ದೃಢವಾಗಿ ನಿಲ್ಲಬೇಕು ಅನ್ನೋ ಗಟ್ಟಿಗಿತ್ತಿ ಮಹಿಳೆಯರ ಜೀವನ ಪಾಠ.
ಹೀಗಿರುವಾಗ ಪವಿತ್ರಾ ಮತ್ತು ‘ಅಮ್ಮಾಸ್ ಕಾಫಿ’ ಸಂಸ್ಥೆಯ ಎಂಡಿ ರಾಧಿಕಾ ಅವರ ನಡುವೆ ದೇವಸ್ಥಾನದಲ್ಲಿ ಸಂಘರ್ಷವಾಗುತ್ತದೆ. ಕಾಕತಾಳೀಯ ಎಂಬಂತೆ ಅದೇ ಅಮ್ಮಾಸ್ ಕಂಪನಿಗೆ ಕೆಲಸಕ್ಕೆ ಸೇರುತ್ತಾಳೆ. ಆದರೆ ಅವಳಿಗೆ ಅರಿಯದ ಸತ್ಯವೆಂದರೆ, ತಾನು ದ್ವೇಷಿಸುವ ಸಿಇಒ ದೇವ್ ಮತ್ತು ತಾನು ಇಷ್ಟಪಡುವ ತಿಲಕ್ ಇಬ್ಬರೂ ರಾಧಿಕಾಳ ಪುತ್ರರು ಎಂಬುದು!

ತಿಲಕ್ ತನ್ನ ಅಸಲಿ ಗುರುತನ್ನು ಮರೆಮಾಚಿ ಪವಿತ್ರಾಳ ಮನಸ್ಸಿಗೆ ಹತ್ತಿರವಾಗ್ತಾನೆ. ಆದರೆ, ವಿಧಿಯ ಆಟವೇ ಬೇರೆ. ಅಚ್ಚರಿಯ ತಿರುವಿನಲ್ಲಿ ತಿಲಕ್ನ ಅಣ್ಣ ದೇವ್ ಜೊತೆ ಪವಿತ್ರಾಳ ಅನಿರೀಕ್ಷಿತ ವಿವಾಹ ನಡೆದೇ ಬಿಡುತ್ತದೆ! ಪವಿತ್ರಾ- ದೇವ್ ಮದುವೆ ಘಟಿಸಿದ್ದು ಹೇಗೆ? ಭಿನ್ನ ಮನಸ್ಸುಗಳ ಮದುವೆಗೆ ಕಾರಣವಾಗಿದ್ದಾದರೂ ಏನು? ಈ ಬಲವಂತದ ಮದುವೆ ಗಟ್ಟಿಯಾಗಿ ನಿಲ್ಲುತ್ತಾ? ಸಂಸಾರದ ಬಂಡಿ ಹಳ್ಳಿತಪ್ಪದೇ ಸಾಗುತ್ತಾ? ಅನ್ನೋದೇ “ಪವಿತ್ರ ಬಂಧನ” ಧಾರಾವಾಹಿ ಕಥೆ. ಉತ್ತಮ್ ಮಧು ಅವರ ನಿರ್ದೇಶನದಲ್ಲಿ ಈ ಸೀರಿಯಲ್ ಮೂಡಿಬರುತ್ತಿದೆ. ಮಹೇಶ್ ಜೊತೆಗೆ ಉತ್ತಮ್ ಮಧು ಜಂಟಿಯಾಗಿ ಈ ಸೀರಿಯಲ್ ನಿರ್ಮಾಣ ಮಾಡುತ್ತಿದ್ದಾರೆ. ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಇದೆ. ಪವಿತ್ರಾ ಪಾತ್ರದಲ್ಲಿ ಅಮೂಲ್ಯ ಭಾರದ್ವಾಜ್, ದೇವ್ ಆಗಿ ಸೂರಜ್ ಮತ್ತು ತಿಲಕ್ ಪಾತ್ರದಲ್ಲಿ ಯಶಸ್ ನಟಿಸುತ್ತಿದ್ದಾರೆ. ಉಳಿದಂತೆ ರಾಧಿಕಾ ಪಾತ್ರದಲ್ಲಿ ಅನುಷಾ ರಾವ್, ನಮ್ರತಾ ಆಗಿ ರುಹಾನಿ ಶೆಟ್ಟಿ ಕಾಣಿಸಿಕೊಂಡರೆ, ಹಿರಿಯ ನಟರಾದ ವಿಜಯ್ ಕಾಶಿ ಅವರು ಗೋವರ್ಧನ್ ಪಾತ್ರಕ್ಕೆ ಹಾಗೂ ಅಂಬರೀಶ್ ಸಾರಂಗಿ ಅವರು ರಂಗ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇನ್ನು ‘ಗೌರಿ ಕಲ್ಯಾಣ’ ಮತ್ತು ‘ಪವಿತ್ರ ಬಂಧನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಮತ್ತು ವರ್ಗ ವ್ಯತ್ಯಾಸಗಳ ನಡುವಿನ ಕಂದಕದ ಬಗ್ಗೆ ಬೆಳಕು ಚೆಲ್ಲಲಿವೆ. ಭಾವನೆಗಳ ಸಂಘರ್ಷದ ಜತೆಗೆ, ನಾರಿಶಕ್ತಿಯ ಮತ್ತೊಂದು ಮಗ್ಗಲನ್ನೂ ಇಲ್ಲಿ ನೋಡಬಹುದು. ಈ ಎರಡು ಧಾರಾವಾಹಿಗಳು ಕಲರ್ಸ್ ಕನ್ನಡದಲ್ಲಿ ಜನವರಿ 27ರಿಂದ ಪ್ರಸಾರ ಆರಂಭಿಸಲಿವೆ.