Cini NewsSandalwood

“ಫ್ರಾಡ್ ಋಷಿ” ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ

Spread the love

ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ,‌ ಇಂದಿಗೂ ಟ್ರೆಂಡಿಂಗ್ ನಲ್ಲಿರುವ “ಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸ” ಹಾಡನ್ನು ಬರೆದಿರುವ ನಮ್ ಋಷಿ, ಈಗ ನೂತನ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಾಮಿಡಿ ಜಾನರ್ ನ ಈ ಚಿತ್ರಕ್ಕೆ “ಫ್ರಾಡ್ ಋಷಿ” ಎಂದು ಹೆಸರಿಟ್ಟಿದ್ದಾರೆ.

ಸಮಾನ್ಯವಾಗಿ ಚಿತ್ರೀಕರಣ ಪೂರ್ಣವಾದ ಮೇಲೆ‌ ಹಾಡು ಬಿಡುಗಡೆ ಮಾಡುವುದು ವಾಡಿಕೆ.‌ ಆದರೆ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ‌ ಆನಂತರ ಚಿತ್ರೀಕರಣ ಆರಂಭಿಸುತ್ತಿರುವುದು ಈ ಚಿತ್ರದ ವಿಶೇಷ. ಇತ್ತೀಚೆಗೆ “ಫ್ರಾಡ್ ಋಷಿ” ಚಿತ್ರದ ಮೊದಲ ಹಾಡನ್ನು (ಆಗದಿರುವ ಕೆಲಸ) ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ಅವರು ಬಿಡುಗಡೆ ಮಾಡಿದರು. ಆನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಲೋಕವೇ ಮೆಚ್ಚಿಕೊಂಡಿರುವ “ಒಳಿತು ಮಾಡು ಮನುಸ” ಹಾಡಿನ ಮೂಲಕ ನಾನು ಎಲ್ಲರಿಗೂ ಚಿರ ಪರಿಚಿತ. ಆದರೆ,‌ ನನ್ನ ಮಿತಿಮೀರಿದ ಕುಡಿತ ಹಲವರಿಗೆ ಬೇಸರ ತಂದಿತ್ತು. ಅದರಲ್ಲಿ ನಮ್ಮ ಅಧ್ಯಕ್ಷರಾದ ನಾರಾಯಣ ಗೌಡರು ಒಬ್ಬರು. ನಾನು ಕ.ರ.ವೇ ಗಾಗಿ ಹಾಡನ್ನು ಬರೆಯಲು ಹೋಗಿದಾಗ ಕುಡಿದು ಹೋಗಿದ್ದೆ. ಅದನ್ನು ಗಮನಿಸಿದ ಅಧ್ಯಕ್ಷರು ನನಗೆ ಹೇಳಿದ ಬುದ್ದಿ ಮಾತು ಕಳೆದ ನಾಲ್ಕು ತಿಂಗಳಿನಿಂದ ನನ್ನನ್ನು ಕುಡಿತದಿಂದ ದೂರ ಮಾಡಿದೆ.

ಈ ಸಂದರ್ಭದಲ್ಲಿ ಅವರಿಗೆ ಅನಂತ ಧನ್ಯವಾದ. ಇನ್ನೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಫ್ರಾಡ್ ಋಷಿ” ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಕಾಮಿಡಿ ಜಾನರ್ ನ ಚಿತ್ರ. ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಚಿತ್ರವೂ ಹೌದು. ಚಿತ್ರದಲ್ಲಿ ಏಳು ಹಾಡುಗಳಿದೆ. ಅದರಲ್ಲಿ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಿ, ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭಿಸುತ್ತೇವೆ. ನಾನೇ ನಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ.

ಸಾಕಷ್ಟು ಜನ ಸ್ನೇಹಿತರು ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ. ನಿರ್ದೇಶನ, ಕಥೆ,‌ ಚಿತ್ರಕಥೆ, ಗೀತರಚನೆ, ಸಂಭಾಷಣೆ ಕೂಡ ನನ್ನದೆ. ಜೊತೆಗೆ ಪ್ರಮುಖಪಾತ್ರದಲ್ಲೂ ಅಭಿನಯಿಸುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಕಥೆಯೇ ನಾಯಕ. ನಾಯಕಿಯರು ಮೂರು ಜನ ಇರುತ್ತಾರೆ. ನಾಯಕಿಯರಲ್ಲೊಬ್ಬರಾದ ಸ್ವಾತಿ ಇಂದು ಆಗಮಿಸಿದ್ದಾರೆ. ನಮ್ಮ ಚಿತ್ರದ ಮೊದಲ ಹಾಡನ್ನು ಮಂಜು ಕವಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಆದರೆ ಇದೇ ಡಿಸೆಂಬರ್ ಒಳಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ. ರಮೇಶ್ ಕೃಷ್ಣ ಸಂಗೀತ ನಿರ್ದೇಶನ, ಶಂಕರ್ ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನ ನಮ್ಮ ಚಿತ್ರಕ್ಕಿದೆ ಎಂದು ನಮ್ ಋಷಿ ತಿಳಿಸಿದರು.

ರಾಮಕೃಷ್ಣ ಪರಮಹಂಸರ ಕಥೆಯೊಂದಿಗೆ ಮಾತು ಆರಂಭಿಸಿದ ಕ.ರ.ವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಅವರು, ನಾವು ಒಬ್ಬರಿಗೆ ಏನಾದರೂ ಹೇಳಬೇಕಾದರೆ ನಾವು ಆ ವಿಷಯದಲ್ಲಿ ಸರಿ ಇರಬೇಕು. ನಾನು ಋಷಿ ಅವರಿಗೆ ಅದೇ ಹೇಳಿದೆ. ನೀವು‌ “ಒಳಿತು ಮಾಡು ಮನುಸ” ದಂತಹ ಅರ್ಥಗರ್ಭಿತ ಗೀತೆ ಬರೆದವರು. ಈ ಹಾಡಿನಿಂದ ಎಷ್ಟೋ ಜನ ಬದಲಾಗಿದ್ದಾರೆ. ಇಂತಹ ಗೀತೆ ಬರೆದಿರುವ ನೀವು ಕುಡಿತ ಬಿಟ್ಟು ಇತರರಿಗೆ ಮಾದರಿಯಾಗ ಬೇಕು ಅಂತ ಹೇಳಿದ್ದೆ. ನನ್ನ ಮಾತಿಗೆ ಗೌರವ ನೀಡಿ ನಾಲ್ಕು ತಿಂಗಳಿನಿಂದ ಅವರು ಕುಡಿತ ಬಿಟ್ಟಿದಾರಂತೆ. ಇದು ಹಾಗೆ ಮುಂದುವರೆಯಲಿ. ಈಗ ಸ್ನೇಹಿತರೊಂದಿಗೆ ಸೇರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರ ನಿರ್ಮಾಣ ಅಷ್ಟು ಸುಲಭವಲ್ಲ. ಜಾಗರೂಕತೆಯಿಂದ ನಿರ್ಮಾಣ ಮಾಡಿ. ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಗಾಯಕ ಮಂಜು ಕವಿ, ನಾಯಕಿ ಸ್ವಾತಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

Visited 1 times, 1 visit(s) today
error: Content is protected !!