Cini NewsMovie ReviewSandalwood

ಭಾವನಾತ್ಮಕ ಸಂಬಂಧಗಳ ಮೌಲ್ಯದ ಮಿಡಿತ “S\O ಮುತ್ತಣ್ಣ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : S\O ಮುತ್ತಣ್ಣ
ನಿರ್ದೇಶಕ : ಶ್ರೀಕಾಂತ್ ಹುಣಸೂರು
ನಿರ್ಮಾಣ : ಪುರಾತನ ಫಿಲಂಸ್
ಸಂಗೀತ : ಸಚಿನ್ ಬಸ್ರೂರ್
ಛಾಯಾಗ್ರಹಣ : ಸ್ಕೇಟಿಂಗ್ ಕೃಷ್ಣ
ತಾರಾಗಣ : ಪ್ರಣಂ ದೇವರಾಜ್, ಖುಷಿ ರವಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ಸುಧಾ ಬೆಳವಾಡಿ ಹಾಗೂ ಮುಂತಾದವರು…

ಜೀವನದಲ್ಲಿ ಪ್ರತಿಯೊಂದು ಸಂಬಂಧಕ್ಕೂ ಒಂದೊಂದು ಅರ್ಥ , ಮಹತ್ವವಿರುತ್ತದೆ. ಅದನ್ನು ಅರ್ಥೈಸಿಕೊಂಡು ಹೇಗೆ ಬದುಕಬೇಕು ಎಂಬುದನ್ನು ತಿಳಿದುಕೊಂಡು ಸಾಗುವುದು ಬಹಳನೇ ಮುಖ್ಯ. ಸಂಬಂಧಗಳ ಮೌಲ್ಯ , ಭಾವನಾತ್ಮಕ ಸೆಳೆತ,
ನಂಬಿಕೆ , ಪ್ರೀತಿ , ವಿಶ್ವಾಸ , ತಂದೆ, ತಾಯಿ ಹಾಗೂ ಮಕ್ಕಳ ಒಡನಾಟ ಹೇಗಿರಬೇಕು ಎಂಬುದರ ಜೊತೆ ರಕ್ತ ಸಂಬಂಧ ಹಾಗೂ ಬೀದಿ ಸಂಬಂಧದ ಸೆಳೆತ ಏನು ಎಂಬುದನ್ನು ಸೂಕ್ಷ್ಮವಾಗಿ ಹೇಳಿರುವಂತಹ ಚಿತ್ರ “S/O ಮುತ್ತಣ್ಣ”.

ರಿಟೈರ್ಡ್ ಮಿಲ್ಟ್ರಿ ಮೇಜರ್ ಮುತ್ತಣ್ಣ (ರಂಗಾಯಣ ರಘು) ತನ್ನ ಪ್ರೀತಿಯ ಪತ್ನಿ ರತ್ನಮ್ಮ (ಸುಧಾ ಬೆಳವಾಡಿ) ಸೇರಿ ಕಟ್ಟಿಸಿದಂತ ಮನೆಯಲ್ಲಿ ವಾಸ. ವಯಸ್ಸಾದಂತಹ ಮುತ್ತಣ್ಣನ ಆರೋಗ್ಯದಲ್ಲಿ ಸಣ್ಣ ಏರಿಳಿತಗಳು ಸಾಮಾನ್ಯ, ಅವರನ್ನ ಜಾಗೃತಿಯಿಂದ ಮಗನಾಗಿ ನೋಡಿಕೊಳ್ಳುವ ಶಿವು (ಪ್ರಣಂ ದೇವರಾಜ್). ಈ ಅಪ್ಪ ಮಗನ ಸಂಬಂಧ ಗೆಳೆಯರನ್ನು ಮೀರಿದಂತದ್ದು, ಮಾತು , ಊಟ , ಎಣ್ಣೆ ಎಲ್ಲವೂ ಕೊಂಚ ಜೋರೇ.

ಗಂಡಸರ ಸದ್ದು ಹೆಚ್ಚಿರುವ ಮನೆಗೆ ಮುತ್ತಣ್ಣನ ಆರೋಗ್ಯದ ರೆಗುಲರ್ ಚಕಪ್ ಗೆ ಅಚಾನಕ್ಕಾಗಿ ಡಾಕ್ಟರ್ ಸಾಕ್ಷಿ (ರವಿ ಖುಷಿ) ಪ್ರವೇಶ. ಬಾಗಿಲು ತೆಗೆಯುವ ಶಿವುಗೆ ತನ್ನ ಕನಸಿನ ಕನ್ಯೆ ಪ್ರತ್ಯಕ್ಷವಾದ ಸಂದರ್ಭ , ಮೊದಲನೆಯ ನೋಟಕ್ಕೆ ಆಕೆಯನ್ನ ಮನಸಾರೆ ಇಷ್ಟಪಡಲು ನಿರ್ಧರಿಸುತ್ತಾನೆ. ತಂದೆ ಸತ್ಯಮೂರ್ತಿ (ಸುಚೇಂದ್ರ ಪ್ರಸಾದ್) ಮಡಿಲಲ್ಲಿ ಬೆಳೆಯುವ ಸಾಕ್ಷಿಗೆ ನನ್ನ ಅಪ್ಪನೇ ಬದುಕು , ಜೀವ.

ಇದರ ನಡುವೆ ಮುತ್ತಣ್ಣನ ಮನೆಗೆ ದಿನಸಿ ಸಾಮಾನು ನೀಡುವ ಶೆಟ್ಟಿ (ಗಿರಿ ಶಿವಣ್ಣ) ಯ ಆಸೆ , ಒದ್ದಾಟಕ್ಕೆ ಮಿಲ್ಟ್ರಿ ಮ್ಯಾನ್ ಮುತ್ತಣ್ಣ ನೀಡುವ ಸಲಹೆ ಅದ್ಭುತ. ಇನ್ನು ಶಿವು ಪ್ರೀತಿಯನ್ನು ಗಮನಿಸುವ ಮುತ್ತಣ್ಣ ಹೇಗಾದರೂ ಸಾಕ್ಷಿ ಒಪ್ಪುವಂತೆ ಮಾಡಬೇಕೆಂಬ ಆಸೆ. ಆದರೆ ಸಮಯ , ಸಂದರ್ಭ ಒಂದು ಆಟವನ್ನು ಆಡುತ್ತದೆ. ನಂತರ ಮುತ್ತಣ್ಣನ ಮೂಲಕ ಶಿವು ಒಬ್ಬ ಅನಾಥ ಎಂಬ ವಿಚಾರ ತಿಳಿಯುತ್ತದೆ.

ತನಗೆ ಮಕ್ಕಳಿದ್ದರೂ ಅನಾಥ ಎಂಬ ವೇದನೆಯೂ ಹೇಳುತ್ತಾನೆ. ಸತ್ಯಮೂರ್ತಿಗೆ ತನ್ನ ಮಗಳ ಭವಿಷ್ಯ ಚೆನ್ನಾಗಿರಬೇಕೆಂಬ ಆಸೆಯಿಂದ ಶಿವುಗೆ ಕೆಲಸ , ಬದುಕು ಕಟ್ಟಿಕೊಳ್ಳಲು ಸಲಹೆ ನೀಡುತ್ತಾನೆ. ಇದನ್ನು ಒಪ್ಪದಾ ಶಿವು ಸಾಕ್ಷಿಯಿಂದ ದೂರ ಉಳಿಯಲು ನಿರ್ಧರಿಸುತ್ತಾನೆ. ಆಸ್ತಿಗಾಗಿ ಮಕ್ಕಳ ಕೋರ್ಟ್ ವಿಚಾರ ಒಂದೆಡೆಯಾದರೆ , ಶಿವು ಬದುಕಿನ ಗೊಂದಲ ಇನ್ನೊಂದೆಡೆ , ಮುಂದೇನು ಎನ್ನುತ್ತಲೇ ಕಾಶಿಯ ಕಡೆ ಮುಖ ಮಾಡುವ ಮುತ್ತಣ್ಣ. ಮುಂದೆ ಎದುರಾಗುವ ಹಲವು ತಿರುವುಗಳು ಮನಸ್ಸನ್ನ ಭಾರ ಮಾಡುತ್ತಾ ಕರೆದೊಯ್ಯುತ್ತದೆ. ಅದು ಏನು.. ಯಾಕೆ.. ಎಂಬುದನ್ನ ಚಿತ್ರಮಂದಿರಕ್ಕೆ ಬಂದು ನೋಡಬೇಕು.

ನಿರ್ದೇಶಕ ಶ್ರೀಕಾಂತ್ ಹುಣಸೂರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾದ ಚಿತ್ರವಾಗಿದೆ. ಸಂಬಂಧಗಳ ಮೌಲ್ಯ , ತಂದೆ ತಾಯಿ ಕಟ್ಟಿದ ಮನೆಯಲ್ಲಿ ಮಕ್ಕಳು ಇರಬಹುದು , ಆದರೆ ಮಕ್ಕಳು ಕಟ್ಟಿದ ಮನೆಯಲ್ಲಿ ತಂದೆ ತಾಯಿ ಇರಬಾರದೆ ಎಂಬ ಸೂಕ್ಷ್ಮತೆಯ ಜೊತೆಗೆ ನಮ್ಮ ನಮ್ಮ ಜವಾಬ್ದಾರಿ , ಕರ್ತವ್ಯ ಏನು ಎಂಬುದನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ. ಚಿತ್ರದ ಮೊದಲ ಭಾಗ ಸರಾಗವಾಗಿದ್ದರರೂ , ದ್ವಿತೀಯ ಭಾಗ ಮನಮುಟ್ಟುವಂತಿದೆ. ಕೆಲವು ಸನ್ನಿವೇಶಗಳ ಕಂಟಿನ್ಯೂಟಿ ಬಗ್ಗೆ ಜಾಗೃತಿ ವಹಿಸಬೇಕಿತ್ತು.

ಒಂದು ಉತ್ತಮ ಪ್ರಯತ್ನವಾಗಿ ಹೊರಬಂದಿರುವ ಈ ಚಿತ್ರದ ಸಂಭಾಷಣೆ ಅದ್ಭುತವಾಗಿ ಮೂಡಿದೆ. ತಮ್ಮ ಪುರಾತನ ಫಿಲಂ ಸಂಸ್ಥೆಯಿಂದ ಪ್ರಥಮ ಪ್ರಯತ್ನದಲ್ಲೇ ಒಂದು ಸಾಮಾಜಿಕ ಕಳಕಳಿ ಇರುವ ಉತ್ತಮ ಚಿತ್ರ ನೀಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಇನ್ನೂ ಈ ಚಿತ್ರದ ಹೈಲೈಟ್ಗಳಲ್ಲಿ ಸಚಿನ್ ಬಸ್ರೂರು ಸಂಗೀತ ಮಧುರವಾಗಿದೆ.

ಹಾಗೆಯೇ ಸ್ಕೇಟಿಂಗ್ ಕೃಷ್ಣ ಕ್ಯಾಮರಾ ಕೈಚಳಕ ಉತ್ತಮವಾಗಿದೆ. ಇನ್ನು ನಾಯಕನಾಗಿ ಪ್ರಣಂ ದೇವರಾಜ್ ಬಹಳ ನೈಜ್ಯವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂದರ್ಭದಲ್ಲಿ ತಕ್ಕ ಪಂಚಿಂಗ್ ಡೈಲಾಗ್ ಜೊತೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಮೂಲಕ ಮಿಂಚಿದ್ದಾರೆ. ಇನ್ನಷ್ಟು ಭಾವನೆಗಳಿಗೆ ಜೀವ ತುಂಬಬಹುದಿತ್ತು. ನಟಿ ಖುಷಿ ರವಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ನಿರ್ವಹಿಸಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇಡೀ ಚಿತ್ರವನ್ನು ಹಿರಿಯ ನಟ ರಂಗಾಯಣ ರಘು ಆವರಿಸಿಕೊಂಡಿದ್ದು , ಅದ್ಭುತ ವಿಚಾರಧಾರೆಯೊಂದಿಗೆ ಎಲ್ಲರ ಮನಸ್ಸಿನ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿದ್ದಾರೆ. ತೆಲುಗು ಮಾತನಾಡುತ್ತಾ ಗಿರಿ ಶಿವಣ್ಣ ಶೆಟ್ರು ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿ ಆಗಾಗ ಬಂದು ನಗೆಯ ಟಾನಿಕ್ ಕೊಟ್ಟು ಹೋಗಿದ್ದಾರೆ.

ಒಬ್ಬ ಹೆಣ್ಣು ಮಗಳ ತಂದೆಯ ಜವಾಬ್ದಾರಿ , ಆಲೋಚನೆ , ಹೇಗಿರಬೇಕು ಎಂಬುದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಹಿರಿಯ ನಟ ಸುಚೇಂದ್ರ ಪ್ರಸಾದ್. ಬೆರಳೆಣಿಕೆಯ ಪಾತ್ರಗಳಾದರೂ ಎಲ್ಲವೂ ಸಂದರ್ಭಕ್ಕೆ ಅನುಗುಣವಾಗಿ ಎಷ್ಟು ಬೇಕು ಅಷ್ಟನ್ನ ನಿಭಾಯಿಸುವುದು ಇಡೀ ಚಿತ್ರದ ಹೈಲೈಟ್ ಆಗಿದ್ದು , ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದೆ.

error: Content is protected !!