ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ವಿಧಿವಶ.
ಕನ್ನಡ ಸಿನಿಮಾ ಪತ್ರಿಕೋದ್ಯಮದ ಹಿರಿಯ ಕೊಂಡಿ ಒಂದು ಕಳಚಿದಂತಾಗಿದೆ. ಬಹಳ ಸರಳ , ಸ್ನೇಹಜೀವಿ , ಆತ್ಮೀಯತೆಯಿಂದ ಎಲ್ಲರನ್ನು ಮಾತನಾಡಿಸುತ್ತಿದ್ದಂತಹ ಹಿರಿಯ ಜೀವ , ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಚಾಪನ್ನ ಮೂಡಿಸಿದಂತಹ ಸಿನಿಮಾ ಪತ್ರಕರ್ತ ಕೆ. ಜೆ .ಕುಮಾರ್ ರವರು ನಿಧನರಾಗಿದ್ದಾರೆ. ಸುಮಾರು 74 ವರ್ಷದ ಈ ಹಿರಿಯ ಪತ್ರಕರ್ತ ನೆನ್ನೆ ಸಂಜೆ ಮೈಸೂರಿನಲ್ಲಿ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ಮಾಜಿ ನಗರ ಪಾಲಿಕೆ ಸದಸ್ಯೆ ಶ್ರೀಮತಿ ಪ್ರಮೀಳಾ ಪ್ರಕಾಶ್ ಸೇರಿದಂತೆ ಪತ್ರಕರ್ತರು , ಸಿನಿಮಾ ಬಳಗದವರು ಹಾಗೂ ಕುಟುಂಬ ವರ್ಗದ ಅಪಾರ ಬಂಧುಗಳನ್ನ ಅಗಲಿದ್ದಾರೆ. ಇಂದು ಸಂಜೆ 4:00 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಇನ್ನು ಪತ್ರಕರ್ತ ಕೆ. ಜೆ. ಕುಮಾರ್ ರವರ ನಿಧನದ ವಿಷಯ ತಿಳಿಯುತ್ತಿದ್ದಂತೆ ಹಿರಿಯ ನಟಿ ಭಾರತಿ ವಿಷ್ಣು ವರ್ಧನ್ , ನಟ ಅದಿ ಲೋಕೇಶ್ , ಸಿನಿಮಾ ಪತ್ರಕರ್ತರು ಹಾಗೂ ಹಲವರು ಬಂದು ಅಂತಿಮ ದರ್ಶನವನ್ನು ಮಾಡಿದರು.
ಮೂಲತಃ ಕೆ. ಜೆ. ಕುಮಾರ್ ಉಡುಪಿ ಜಿಲ್ಲೆ ಕೊರಂದರ ಪಾಳ್ಯ ಪಾಳ್ಯದವರು. ರಘು ರಾಮ್ ಶೆಟ್ಟಿ ಮತ್ತು ಶಾರದಾ ಅವರ ಜ್ಯೋಷ್ಠ ಪುತ್ರರಾಗಿ 1952ರ ನವಂಬರ್ 6 ರಂದು ಜನಿಸಿದವರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. 1969ರಲ್ಲಿ ಸೋದರ ಮಾವ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸ್ವತಂತ್ರ ಹೋರಾಟಗಾರ ಎ. ರಾಮಣ್ಣ ಸಂಪಾದಕತ್ವದ “ವಿಜಯ” ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಬದುಕು ಆ ರಂಭಿಸಿದರು. ನಂತರ ವಿಜಯ ದಿನ ಪತ್ರಿಕೆ ಪ್ರಕಾಶಕ ಮುದ್ರಕರಾಗಿದ್ದರು. ನಂತರ ಅವರು ಸಿನಿಮಾ ಪತ್ರಕರ್ತರಾಗಿ ಸುಧಾ ವಾರ ಪತ್ರಿಕೆ, ವಿಜಯ ಚಿತ್ರ ಸಿನಿಮಾ ಮಾಸ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ನಂತರ, 1978ರಿಂದ ರೂಪಾತಾರ ಸಿನಿಮಾ ಮಾಸ ಪತ್ರಿಕೆಗೆ ಮೂರೂ ದಶಕಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. 1993ರಲ್ಲಿ ಉದಯವಾಣಿ ದಿನ ಪತ್ರಿಕೆ ಬೆಂಗಳೂರು ಆವೃತ್ತಿ ಆರಂಭವಾದಾಗ ಮೈಸೂರಿನ ಪ್ರತಿನಿಧಿಯಾಗಿ ಸುಮಾರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು. ಕಳೆದ ಒಂದೂವರೆ ದಶಕಗಳಿಂದ ಹೊಸ ದಿಗಂತ ದಿನ ಪತ್ರಿಕೆ ಸಿನಿಮಾ ವಿಭಾಗ ನೋಡಿ ಕೊಳ್ಳುತ್ತಿದ್ದರು.
ಪತ್ರಿಕಾ ಕ್ಷೇತ್ರವಲ್ಲದೆ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ಅವರು ಮೈಸೂರಿನ ಸರಸ್ವತಿ ಪುರಂನಲ್ಲಿ ಕುಠಿರ ಮನೆ ಎಂಬ ಹೋಟೆಲ್ ಸ್ಥಾಪಿಸಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಪತ್ರಕರ್ತರಾಗಿ ಹೆಸರಾಗಿದ್ದ ಕೆ. ಜೆ. ಕುಮಾರ್, ಕನ್ನಡ ಚಿತ್ರ ರಂಗದ ದಿಗ್ಗಜರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರಜನಿ ಕಾಂತ್,ಶಶಿಕುಮಾರ್, ನಿರ್ಮಾಪಕರಾದ ದ್ವಾರಕೀಶ್, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಇವರ ಅಗಲಿಕೆಯ ಚಿತ್ರೋದ್ಯಮಕ್ಕೆ ಹಾಗೂ ಹಾಗೂ ಪತ್ರಕರ್ತರಿಗೆ ದೊಡ್ಡ ನಷ್ಟವಾಗಿದೆ. ಇನ್ನು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಕೀಯದ ಮುಖಂಡರು, ಸಿನಿಮಾ ರಂಗದವರು ಹಾಗೂ ಪತ್ರಕರ್ತರು ಸೇರಿದಂತೆ ಎಲ್ಲರೂ ಸಂತಾಪವನ್ನು ಸೂಚಿಸಿದ್ದಾರೆ.