`ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೈಲರ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ನಟ ಶ್ರೀಮುರುಳಿ.
ಬೆಳ್ಳಿ ಪರದೆಗೆ ವಿಭಿನ್ನ ಕಥಾನಕವನ್ನು ಒಳಗೊಂಡಿರುವಂತಹ “ಬಿಳಿಚುಕ್ಕಿ ಹಳ್ಳಿಹಕ್ಕಿ” ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ, ನಿರ್ದೇಶನ ಮಾಡಿ ನಟಿಸಿರುವ, ರೋರಿಂಗ್ ಸ್ಟಾರ್ ಶ್ರೀಮುರುಳಿ ಅರ್ಪಿಸುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ಅಕ್ಟೋಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಟ್ರೈಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆಗೊಳಿಸಿದ್ದಾರೆ. ಒಂದಿಡೀ ಸಿನಿಮಾದ ಅಂತಃ ಸತ್ವವನ್ನು ಆಳವಾಗಿ ಗ್ರಹಿಸಿಕೊಂಡು ಚಿತ್ರತಂಡದ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲೇ ಮೊದಲೆಂಬಂಥಾ ಕಥಾ ಹಂದರ ಹೊಂದಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರಕ್ಕೆ ಶುಭ ಕೋರಿದ್ದಾರೆ.
ಅತ್ಯಂತ ಹುರುಪಿನಿಂದ ಟ್ರೈಲರ್ ಬಿಡುಗಡೆ ಮಾಡಿ ಮಾತಾಡಿದ ರೋರಿಂಗ್ ಸ್ಟಾರ್ ಶ್ರೀ ಮುರುಳಿ, ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ತೊನ್ನು ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರೋ ಚಿತ್ರವಿದು. ಸ್ವತಃ ಆ ಸಮಸ್ಯೆ ಹೊಂದಿರುವ ವ್ಯಕ್ತಿಯೇ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ನಟಿಸಿರುವ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಟಿಲಿಗೋ ಕೇಂದ್ರಿತವಾದ ಈ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡು ಹೆಮ್ಮೆಯಿಂದ ಅರ್ಪಿಸಲು ಮುಂದಾಗಿರೋದಾಗಿಯೂ ಶ್ರೀಮುರುಳಿ ಹೇಳಿದ್ದಾರೆ. ಕಥೆಯ ನೆಪದಲ್ಲಿ ನೆನಪೊಂದನ್ನು ಹಂಚಿಕೊಂಡ ರೋರಿಂಗ್ ಸ್ಟಾರ್ ಶಾಲಾ ದಿನಗಳಲ್ಲಿ ವಿಟಿಲಿಗೋ ಸಮಸ್ಯೆಯಿಂದ ಬಾಧಿತನಾಗಿದ್ದ ಗೆಳೆಯನ ಬಗ್ಗೆ ಹೇಳುತ್ತಲೇ, ವಿಟಿಲಿಗೋವನ್ನು ಸಮಸ್ಯೆ ಅಂದುಕೊಳ್ಳಬಾರದೆಂಬ ಸಂದೇಶವನ್ನೂ ರವಾನಿಸಿದರು. ಇದೇ ಹೊತ್ತಿನಲ್ಲಿ ಈ ಚಿತ್ರದ ವಿತರಣೆಗೂ ಸಹಾಯ ಮಾಡುವ ಭರವಸೆ ನೀಡಿದರು.
ಚಿತ್ರತಂಡದೊಂದಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಮಹೇಶ್ ಗೌಡ ಅವರು ಸಿನಿಮಾ ಬಗ್ಗೆ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡರು. ವಿಟಿಲಿಗೋ ಸಮಸ್ಯೆಯ ಸುತ್ತ ಹೆಣೆದಿರುವ ಕಥೆ ಅಂದಾಕ್ಷಣ ಮನೋರಂಜನೆ ಇರುವುದಿಲ್ಲ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾ. ಎಂಥಾ ಗಹನವಾದ ಕಥೆಯನ್ನಾದರೂ ಗಂಭೀರವಾಗಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ತಲುಪೋದು ಕಷ್ಟ. ಹಾಗಿರೋದರಿಂದಲೇ ದುಗುಡವನ್ನೂ ಕೂಡಾ ತೆಳು ಹಾಸ್ಯದ ಮೂಲಕ ದಾಟಿಸುತ್ತಲೇ ಸಾಮಾಜಿಕ ಸಂದೇಶ ನೀಡಲಾಗಿದೆ ಎಂದಿರುವ ಮಹೇಶ್ ಗೌಡ, ಕುಟುಂಬ ಸಮೇತ ಕೂತು ನೋಡುವಂಥಾ ಈ ಪ್ರಯತ್ನ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವ ಭರವಸೆ ವ್ಯಕ್ತಪಡಿಸಿದರು.
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ನಾರಾಯಣ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರ ಬೆನ್ನಲ್ಲಿಯೇ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರದ ಕುರಿತು ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು , ಪ್ರೇಕ್ಷಕರು ಯಾವ ರೀತಿ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.