Cini NewsSandalwoodTV Serial

ವಿಜಯ್ ರಾಘವೇಂದ್ರ ನಟನೆಯ “ರಿಪ್ಪನ್ ಸ್ವಾಮಿ” ಟ್ರೇಲರ್ ರಿಲೀಸ್.

ವಿಜಯ್ ರಾಘವೇಂದ್ರ ಅಭಿನಯದ, ಕಿಶೋರ್ ಮೂಡಬಿದ್ರೆ ನಿರ್ದೇಶನದ ರಿಪ್ಪನ್ ಸ್ವಾಮಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಲವ್ವರ್ ಬಾಯ್, ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಂಡ ವಿಜಯ್ ರಾಘವೇಂದ್ರ ಅವರು ಇಲ್ಲಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ. ಕೈಗೆ ಕೂಡುಗೋಲು ಸಿಕ್ಕಿದ್ರೆ ಅಲ್ಲಿ ನೆತ್ತರು ಅರಿಯುತ್ತೆ. ಸ್ವಾಮಿ ಹರಿಸುವ ನೆತ್ತರು ಯಾರದ್ದು..? ಕಾಡಿನ ಜನರ ಜೀವನ ಹೇಗಿರುತ್ತೆ..? ಇದೆಲ್ಲಾ ಟ್ರೇಲರ್ ನಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾದಲ್ಲಿ ಉತ್ತರ ಸಿಗಲಿದೆ. ಆಗಸ್ಟ್ 29ಕ್ಕೆ ಸಿನಿಮಾ ತೆರೆಗೆ ಬರಲಿದೆ. ಟ್ರೇಲರ್ ಲಾಂಚ್ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು, ಎಲ್ಲರು ತಮ್ಮ ತಮ್ಮ ಅನುಭವ ಹಂಚಿಕೊಂಡರು.

ವಿಜಯ್ ರಾಘವೇಂದ್ರ ಮಾತನಾಡಿ, ಇವತ್ತು ತೃಪ್ತಿ ಆಗುವಂತ ದಿನ. ನಮ್ಮ ಇಡೀ ಚಿತ್ರತಂಡಕ್ಕೆ ಇದು ಖುಷಿಯ ದಿನ. ರಿಪ್ಪನ್ ಸ್ವಾಮಿ ಆಗೋದಕ್ಕೂ ಮುನ್ನ ನಿರ್ದೇಶಕ ಕಿಶೋರ್ ಮೂಡಬಿದ್ರೆ ಅವರು ಸಾಕಷ್ಟು ಸುತ್ತಿದ್ದಾರೆ. ನಾನು ಹೇಳಿದ್ದೆ ದಯವಿಟ್ಟು ನನಗೆ ಕಾಯುವುದಕ್ಕೆ ಹೋಗಬೇಡಿ ಅಂತ. ಯಾರಿಗಾದ್ರೂ ಈ ಕಥೆ ಕೊಟ್ಟು ಮಾಡ್ಸಿ ಅಂದಿದ್ದೆ. ಯಾರಿಗೋ ಮಾಡೋದಾಗಿದ್ರೆ ನಾನ್ಯಾಕೆ ಎರಡು ವರ್ಷ ಕಾಯ್ಬೇಕಿತ್ತು. ನೀವೇ ಈ ಕಥೆಗೆ ಬೇಕಿರುವುದು ಅಂತ ಹೇಳಿದ್ರು. ಅಷ್ಟು ಹುಚ್ಚುತನದಿಂದ ಈ ಸಿನಿಮಾವನ್ನು ಮಾಡಿರುವುದು. ಯಾಕೀ ಪಾತ್ರ ಅಂತ ಕೇಳಿದಾಗ ಮಾಲ್ಗುಡಿ ಡೇಸ್ ಸಂದರ್ಭದಲ್ಲಿ ಹಾಗೇ ತಮಾಷೆಗೆ ಮಾತನಾಡಿದ್ದು ಇದು. ಒಳ್ಳೆಯವನಾಗಿ ಆಗಿ ಸಾಕಾಗಿದೆ. ಸ್ವಲ್ಪ ಬೇರೆ ಥರದ ಪಾತ್ರ ಮಾಡ್ಬೇಕು ಅಂತ ಅವರಿಗೆ ಹೇಳಿದ್ದೆ. ಯಾವುದೇ ಪಾತ್ರ ಮಾಡಿದ್ರು ಚೆನ್ನಾಗಿ ಮಾಡಿದ್ದೀಯಾ ಅಂತ ಅನ್ನಿಸಿಕೊಳ್ಳಬೇಕು ಎಂಬುದೇ ನನ್ನ ಆಸೆ. ಇದರಲ್ಲೂ ಅದು ಆಗಿದೆ ಎಂದಿದ್ದಾರೆ.

ನಟಿ ಅಶ್ವಿನಿ ಚಂದ್ರಶೇಖರ್ ಮಾತನಾಡಿ, ಈ ಸಿನಿಮಾದಲ್ಲಿ ನನ್ನದು ಮಾತ್ರವಲ್ಲ ಎಲ್ಲರ ಪಾತ್ರ ಕೂಡ ಮುಖ್ಯವಾಗಿದೆ. ಮಂಗಳ ಎಂಬ ಕ್ಯಾರೆಕ್ಟರ್ ನನಗೆ ಕೊಟ್ಟಿದ್ದಾರೆ. ಇವತ್ತಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಆಗುವಂತ ಭಾವನೆಗಳನ್ನ ಇಲ್ಲಿ ತೋರಿಸಿದ್ದಾರೆ. ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿದೆ, ಸಮಾಜದಲ್ಲಿ ಹೇಗೆಲ್ಲಾ ಎದುರಿಸಬಹುದು ಎಂಬೆಲ್ಲಾ ವಿಚಾರದ ಮೇಲೆ ಫೋಕಸ್ ಮಾಡಲಾಗಿದೆ. ಇದೊಂದು ಕಂಟೆಂಟ್, ಫ್ಯಾಮಿಲಿ ಓರಿಯೆಂಟೆಡ್ ಮೂವಿ. ನಾನು ಎಲ್ಲಾ ಹೆಣ್ಣು ಮಕ್ಕಳನ್ನ ಬಿಂಬಿಸ್ತಾ ಇರುವಂತ ಪಾತ್ರ ಕೊಟ್ಟಿದ್ದಾರೆ. ತೆರೆಮೇಲೆ ಚೆನ್ನಾಗಿ ಮೂಡಿ ಬಂದಿದೆ. ಕೋ ಪ್ರೊಡ್ಯೂಸರ್ ಸುನೀಲ್ ಮಾತನಾಡಿ, ನಮ್ಮ ಬಹಳ ಮುಖ್ಯ ಉದ್ದೇಶ ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ ಕೊಡಬೇಕು ಅಂತ. ಅದೇ ಸಮಯಕ್ಕೆ ಕಿಶೋರ್ ಸರ್ ಕಥೆ ಹೇಳಿದ್ರು. ಹೀಗಾಗಿ ರಿಪ್ಪನ್ ಸ್ವಾಮಿ ಸಿನಿಮಾ ಮಾಡಿದೆವು ಎಂದಿದ್ದಾರೆ

ಚಿನ್ನೇಗೌಡ್ರು ಮಾತನಾಡಿ, ನಾನು ಕೂಡ ರಿಪ್ಪನ್ ಸ್ವಾಮಿ ಟ್ರೇಲರ್ ನೋಡಿದಾಗ ಅನ್ನಿಸ್ತಾ ಇತ್ತು, ನಾನ್ ಅವತ್ತು ಇವನನ್ನ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಸಿನಿಮಾದಲ್ಲಿ ಮಾಡಿದ ವಿಜಯ್ ರಾಘವೇಂದ್ರ ಇವನೇನಾ ಅನ್ನಿಸ್ತು. ಒಬ್ಬ ಕಲಾವಿದನಿಗೆ ಇರಬೇಕಾದ ಗುಣಗಳನ್ನ ಒಪ್ಪಿಕೊಂಡು ಬೆಳೆದಿದ್ದಾನೆ. ಈಗ ಹೇಳ್ತೀನಿ ನನ್ನ ಮಗ ವಿಜಯ್ ರಾಘವೇಂದ್ರ ಕಲಾವಿದನಾಗಿ ಬೆಳೆದಿದ್ದಾನೆ. ನನ್ನ ಭಾವ ರಾಜ್ಕುಮಾರ್ ಅವರು ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ಮಾಡಿದ್ದಾರೆ. ಅದರಲ್ಲಿ ಕೋರ್ಟ್ ಸೀನ್ ಬರುತ್ತೆ. ಹೊಟೇಲ್ ಗೆ ಹೋದಾಗ ಹಣ ಇರಲ್ಲ. ರುಬ್ಬೋಕೆ ಬಿಡ್ತಾರೆ. ರುಬ್ಬೋಕೆ ಕೂತಿದ್ದ ವ್ಯಕ್ತಿಯ ಬಟ್ಟೆಯನ್ನು ನೋಡಿದಾಗ ವಾಂತಿ ಬರುತ್ತೆ. ಆದರೆ ಆತನನ್ನು ಕರೆದು ತನ್ನ ಬಟ್ಟೆಯನ್ನ ಕೊಟ್ಟಿದ್ದರು. ಕಲಾವಿದರಿಗೆ ಪಾತ್ರಧಾರಿ ಎಂಬುದು ಇರಬೇಕು. ಆ ಪಾತ್ರಕ್ಕೆ ಆಗ ಮಾತ್ರ ನ್ಯಾಯ ಕೊಡುವುದಕ್ಕೆ ಸಾಧ್ಯ. ಅದಕ್ಕೆ ನಾನು ಕಿಶೋರ್ ಗೆ ಧನ್ಯವಾದ ಹೇಳಬೇಕು. ನನ್ನ ಮಗ ಅಂತ ಇದನ್ನ ಹೇಳ್ತಾ ಇಲ್ಲ. ಚೆನ್ನಾಗಿ ಮಾಡಿದ್ದಾನೆ ಎಂದಿದ್ದಾರೆ.

ನಿರ್ದೇಶಕ ಕಿಶೋರ್ ಮೂಡಬಿದ್ರೆ ಮಾತನಾಡಿ, ಮಾಲ್ಗುಡಿ ಡೇಸ್ ಸಿನಿಮಾದ ಸಮಯದಲ್ಲಿ ಇದರ ಬಗ್ಗೆ ಚರ್ಚೆಯಾಯ್ತು. ಹೀಗಾಗಿ ಒಂದು ಕಥೆಯಿತ್ತು. ಅದನ್ನ ಡೆವಲಪ್ ಮಾಡಿಕೊಂಡು ಮಾಡಿದೆವು. ಸಿನಿಮಾ ಮಾತನಾಡಬೇಕು ಮೊದಲು. ಆಮೇಲೆ ನಾವೂ ಮಾತನಾಡಿದರೆ ಚೆಂದ. ನಮ್ಮಲ್ಲಿ ಸಾಕಷ್ಟು ಜನ ನಿರ್ಮಾಪಕರಿದ್ದಾರೆ. ಅವರೆಲ್ಲರ ಸಹಾಯದಿಂದ ಇಂದು ರಿಪ್ಪನ್ ಸ್ವಾಮಿ ಆಗಿದೆ ಎಂದಿದ್ದಾರೆ. ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿದ್ದಾರೆ. ಪಂಚಾನನ ಫಿಲಂಸ್ ನ ಮೊದಲನೇ ಸಿನಿಮಾ ಇದಾಗಿದೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡಿದ್ದಾರೆ. ರಂಗನಾಥ್ ಸಿ ಎಂ ರವರು ಕ್ಯಾಮರಾ ಹಿಡಿದಿದ್ದಾರೆ. ಶಶಾಂಕ್ ನಾರಯಣ್ ಸಂಕಲನ ಮಾಡಿದ್ದಾರೆ.

error: Content is protected !!