ಸರಣಿ ಕೊಲೆಗಾರನ ನೋವಿನ ಕಥೆ ವ್ಯಥೆ “ರಾಧೇಯ” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ರಾಧೇಯ
ನಿರ್ದೇಶಕ , ನಿರ್ಮಾಪಕ : ವೇದ ಗುರು
ಸಂಗೀತ : ಸ್ಯಾಂಡಿ
ಛಾಯಾಗ್ರಹಣ : ರಮ್ಮಿ
ತಾರಾಗಣ : ಕೃಷ್ಣ ಅಜೇಯ್ ರಾವ್ , ಸೋನಾಲ್ ಮಂತೆರೋ , ಧನ್ಯ ಬಾಲಕೃಷ್ಣ ಅರವಿಂದ್ ರಾವ್ , ಗಿರೀಶ್ ಶಿವಣ್ಣ ಹಾಗೂ ಮುಂತಾದವರು…
ಮಹಾಭಾರತದಲ್ಲಿ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಕರ್ಣನ ಸಾಕು ತಾಯಿ ರಾಧಾ ಆಗಿದ್ದರಿಂದ, ಕರ್ಣನಿಗೆ ರಾಧೇಯ ಎಂದೂ ಕರೆಯುತ್ತಾರೆ. ಅಂತದ್ದೇ ಕರ್ಣನಲ್ಲಿದ್ದ ತ್ಯಾಗದ ಗುಣದ ಕಥಾನಕದ ಹಿಂದೆ ಸಮಾಜದ ದುಷ್ಟರು , ಹಣದ ಸ್ಕ್ಯಾಮ್ , ನೀಚರ ಸಂಹಾರಕ್ಕೆ ನಿಲ್ಲುವಂತಹ ಯುವಕನ ಹಿಂದಿರುವ ನೋವಿನ ಸತ್ಯ , ಪ್ರೀತಿಯ ಪಾಶ , ಸರಣಿ ಕೊಲೆಗಾರನ ಮನದಂಡನೆಯ ಸುತ್ತ ಸಾಗುವ ಕುತೂಹಲಕಾರಿ ಕಥೆಯಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಾಧೇಯ”.
ಹೆಣ್ಣು ಮಕ್ಕಳ ಅತ್ಯಾಚಾರಿಗಳು , ವ್ಯಭಿಚಾರ ಮಾಡುವ ಹೆಂಗಸು , ಸುಳ್ಳಿನ ಪರ ನಿಲ್ಲುವ ಮಹಿಳೆಯ ಹೀಗೆ ದುಷ್ಟ ನಡಿವಳಕೆಯಲ್ಲಿ ಸಾಗಿದವರನ್ನು ಎಡೆಬಿಡದೆ ಹುಡುಕಿ ಕೊಳ್ಳುವ ವ್ಯಕ್ತಿ ಗುಮ್ಮ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗುತ್ತದೆ. ಈ ಗುಮ್ಮ ಯಾರಿಂದ ಹುಡುಕಲು ಮುಂದಾಗುವ ಎಸಿಪಿ (ಅರವಿಂದ್ ರಾವ್) ಗೆ ಕರೆ ಮಾಡಿ ಶರಣಾಗುವ ಗುಮ್ಮ (ಅಜಯ್ ರಾವ್) ಕೋರ್ಟ್ ಅಂಗಳದಲ್ಲಿ ಜಡ್ಜ್ ಮುಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.
ಮರಣದಂಡನೆಗೆ ಒಳಗಾಗುವ ಈ ಗುಮ್ಮನ ಕೊನೆ ಆಸೆಯಂತೆ ತನ್ನ ಬಗ್ಗೆ ಪುಸ್ತಕ ಬರೆಯಲು ಬರಹಗಾರ್ತಿ ಅನುಪಮ ರಂಜನ್ (ಧನ್ಯ ಬಾಲಕೃಷ್ಣ) ರನ್ನ ಜೈಲಿಗೆ ಕರಿಸುವಂತೆ ತನ್ನ ಪರ ಬಂದಿದ್ದ ಲಾಯರ್ ಗಿರಿಯಪ್ಪ (ಗಿರಿ ಶಿವಣ್ಣ) ಮೂಲಕ ಕೋರುತ್ತಾರೆ.

ಹಿರಿಯ ಅಧಿಕಾರಿ ಎಸಿಪಿ ಕಂಟ್ರೋಲ್ ಒಳಗೆ ಬರಹಗಾರ್ತಿಯನ್ನು ಕರೆಸುತ್ತಾರೆ. 42 ಕೊಲೆ ಮಾಡಿರುವ ಸೈಕೋ ತನ್ನ ಬಾಲ್ಯದಲ್ಲಿ ಕುಡುಕ ತಂದೆ , ಮುದ್ದಾದ ಪುಟಾಣಿ ತಂಗಿ ನೋಡಿಕೊಳ್ಳುವುದ ಜೊತೆಗೆ ಮಲತಾಯಿಯ ವ್ಯಭಿಚಾರ ವನ್ನು ಕಂಡು ಬೇಸತ್ತು ಕೊಲೆ ಮಾಡಿ ಜೈಲು ಸೇರುತ್ತಾನೆ.
ಮುಂದೆ ಹೊರಬಂದ ನಂತರ ತನ್ನ ಬದುಕಿನ ಬಾಳ ಸಂಗಾತಿಯಾಗಿ ಅಮೃತ (ಸೋನಾಲ್ ಮಂತೆರೋ) ಪ್ರವೇಶ ಮಾಡುತ್ತಾಳೆ. ಟಿವಿ ರಿಪೋರ್ಟರ್ ಅಮೃತ ಒಂದು ದೊಡ್ಡ ಸ್ಕ್ಯಾಮ್ ಸೀಕ್ರೆಟ್ ನ ಪೆನ್ ಡ್ರೈ ವ್ ತನ್ನ ಬಳಿ ಇಟ್ಟುಕೊಂಡಿರುತ್ತಾಳೆ. ಗರ್ಭಿಣಿಯಾಗಿದ್ದ ಅಮೃತ ಕೂಡ ಕೊಲೆ ಆಗುತ್ತಾಳೆ. ಹೀಗೆ ಒಂದೊಂದೇ ವಿಚಾರ ಹೇಳುತ್ತಾ ತಾನು ಕೊಲೆ ಮಾಡಿರುವ ರಹಸ್ಯದ ಜೊತೆಗೆ ತನ್ನ ಬದುಕಿನ ಕಥೆ- ವ್ಯಥೆಯನ್ನ ಹೇಳುತ್ತಾ ಹೋಗುತ್ತಾನೆ. ಆದರೆ ಇದೆಲ್ಲದರ ಹಿಂದೆ ಹಲವು ರಹಸ್ಯ ಅಡಗಿರುತ್ತದೆ. ನಿಜವಾದ ಕೊಲೆಗಾರ ಯಾರು…
ಪೆನ್ ಡ್ರೈವ್ ರಹಸ್ಯ ಏನು…
ಸರಣಿ ಕೊಲೆಗಳಿಗೆ ಕಾರಣ…
ಕ್ಲೈಮಾಕ್ಸ್ ಹೇಳುವ ಸತ್ಯ…? ಎಂಬುದಕ್ಕೆ ಎಲ್ಲರೂ ಈ ಚಿತ್ರವನ್ನು ನೋಡಲೇಬೇಕು.
ಇಡೀ ಚಿತ್ರದ ಕೇಂದ್ರ ಬಿಂದುವಾಗಿ ನಟ ಅಜಯ್ ರಾವ್ ಆವರಿಸಿಕೊಂಡಿದ್ದು , ಈ ಹಿಂದೆ ಮಾಡಿರದಂತಹ ಸೈಕೋ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಲವರ್ ಬಾಯ್ ಇಮೇಜ್ ನಿಂದ ಹೊರಬಂದು ಎರಡು ಶೇಡಿನ ಸ್ಪ್ಲಿಟ್ ಪರ್ಸನಾಲಿಟಿ ಪಾತ್ರಕ್ಕೆ ಕೈ ಹಾಕಿದ್ದು , ಇನ್ನಷ್ಟು ಬದಲಾವಣೆ , ಏರಿಳಿತ ಬೇಕಿತ್ತು ಅನಿಸುತ್ತದೆ. ನಾಯಕಿಯಾಗಿ ಸೋನಾಲ್ ಮಂತೆರೋ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.
ಅದೇ ರೀತಿ ಬರಹಗಾರ್ತಿಯಾಗಿ ನಾಯಕನ ತಂಗಿಯ ಪಾತ್ರದಲ್ಲಿ ಧನ್ಯ ಬಾಲಕೃಷ್ಣ ಗಮನ ಸೆಳೆದಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅರವಿಂದ್ ರಾವ್ ಖಡಕ್ ಗತ್ತಿನಲ್ಲಿ ಮಿಂಚಿದ್ದಾರೆ. ಇನ್ನು ಲಾಯರ್ ಪಾತ್ರದಲ್ಲಿ ಗಿರೀಶ್ ಶಿವಣ್ಣ ಅದ್ಭುತವಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಇನ್ನು ನಿರ್ದೇಶಕ ವೇದ ಗುರು ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ವಿಭಿನ್ನವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸೆಡ್ಡು ಹೊಡೆದು ನಿಲ್ಲುವ ಪಾತ್ರವನ್ನ ಕಟ್ಟಿ ಕೊಟ್ಟಿರುವ ರೀತಿ , ಕುತೂಹಲಕಾರಿಯಾಗಿ ಇನ್ವೆಸ್ಟಿಗೇಷನ್ , ಫ್ಲಾಶ್ ಬ್ಯಾಕ್ ಬಗ್ಗೆ ಹೇಳಿರುವ ವಿಚಾರ ಗಮನ ಸೆಳೆಯುತ್ತದೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು. ನಿರ್ಮಾಣದ ಜೊತೆ ನಿರ್ದೇಶನದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ.
ಇನ್ನು ಚಿತ್ರದ ಸಂಗೀತ , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕ ವರ್ಗ ಅಚ್ಚುಕಟ್ಟಾಗಿ ಕೆಲಸವನ್ನ ಮಾಡಿದೆ. ಇದೊಂದು ಲವ್ , ಸಸ್ಪೆನ್ಸ್ , ಸೆಂಟಿಮೆಂಟ್ ಜೊತೆಗೆ ಸಮಾಜಕ್ಕೆ ಒಂದು ಸಂದೇಶವನ್ನು ನೀಡಿರುವಂತಹ ಚಿತ್ರ ಇದಾಗಿದ್ದು , ತಾಳ್ಮೆಯಿಂದ ನೋಡುವವರ ಜೊತೆ ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಚಿತ್ರ ಇದಾಗಿದೆ.
