ಕಾಂತಾರ-1 ಸಿನಿಮಾ ಮೂಲಕ ಚಿತ್ರರಂಗಕ್ಕೆ ಸಿಕ್ಕರು ಭರವಸೆ ನಟಿ ಐರಾ ಕೃಷ್ಣ
ಕಾಂತಾರಾ ಚಾಪ್ಟರ್-1 ಸಿನಿಮಾದಲ್ಲಿ ಯುವರಾಣಿಯಾಗಿ ಮಿಂಚಿದ ಐರಾ ಕೃಷ್ಣ ಯಾರು? ಚಿತ್ರರಂಗಕ್ಕೆ ಬಂದಿದ್ದೇಗೆ?
ರಿಷಬ್ ಶೆಟ್ಟಿ ಅವರ ನಟನೆ, ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಂತಾರ: ಚಾಪ್ಟರ್ 1’ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಕಮಾಯಿ ಮಾಡುತ್ತಿರುವ ಈ ಚಿತ್ರದಲ್ಲಿ ಯುವರಾಣಿಯಾಗಿ ಭಟ್ಕಳದ ಬಾಲೆ ಐರಾ ಕೃಷ್ಣ ಮಿಂಚಿದ್ದಾರೆ. ರಾಜ ಕುಲಶೇಖರನ ಪತ್ನಿಯಾಗಿ ಜೀವ ತುಂಬಿದ್ದ ಐರಾ ಕಾಂತಾರದ ಸೈಲೆಂಟ್ ಸುಂದರಿ. ತಮಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ. ಕಾಂತಾರ 1 ಗೆಲುವಿನ ಬಳಿಕ ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಅಂದಹಾಗೇ ಐರಾ ಕೃಷ್ಣ ಮೂಲತಃ ಮೂಡಭಟ್ಕಳದ ನಿವಾಸಿ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಟಾಪ್ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಇವರೊಂದಿಗೆ ಸ್ಪರ್ಧಿಸಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ಲಿಸ್ಟ್ ನಲ್ಲಿ ತೇರ್ಗಡೆ ಹೊಂದಿದ ನಂತರ ಅನೇಕ ಕಿರುಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿರು. ಹೀಗೆ ಶುರುವಾದ ಐರಾ ಜರ್ನಿ ಕಾಂತಾರ ಸಕ್ಸಸ್ ಮೂಲಕ ಡಬಲ್ ಆಗಿದೆ.
ಕಾಂತಾರಾ 1 ಅವಕಾಶ ಸಿಕ್ಕಿದ್ದೇಗೆ?
ಹೊಂಬಾಳೆ ಫಿಲಂ ಸಂಸ್ಥೆ ನಡೆಸಿದ ಸ್ಕ್ರೀನ್ ಟೆಸ್ಟ್ ನಲ್ಲಿ ಉತ್ತೀರ್ಣಗೊಡು ಕಾಂತಾರ-1 ಚಿತ್ರದಲ್ಲಿ ಅವಕಾಶ ಪಡೆದು ಮಿಂಚಿರುವುದು ವಿಶೇಷವಾಗಿದೆ. ಕಾಂತಾರ ಯಶಸ್ಸಿನ ನಂತರ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಅವಕಾಶ ಹರಿದು ಬರುತ್ತಿರುವುದಕ್ಕೆ ಐರಾ ಸಂತಸಗೊಂಡಿದ್ದಾರೆ.
ತಮಿಳು ಚಿತ್ರರಂಗಳಲ್ಲಿ ಐರಾ ರಂಗು
ಐರಾ ಈಗಾಗಲೇ ಹಲವು ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಕಲಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಕನ್ನಡದ ನನ್ನ ಪ್ರಕಾರ, ಕನ್ನಡದ ಧರಣಿ ಮಂಡಳ ಮಧ್ಯಗೊಳಗೆ, ನೋಡಿದವರು ಏನೆಂತಾರೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ಸ್ಟುಡಿಯೋ ಗ್ರೀನ್ ರೆಬಲ್ ಹಾಗೂ ನಿರಮ್ ಮಾರುಮ್ ಉಳಗಿಲ್ ದಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದಾರೆ. ಪೋರ್ ವಿಂಡೋಸ್ ಎಂಬ ಮತ್ತೊಂದು ತಮಿಳು ಚಿತ್ರ ಬಿಡುಗಡೆಗೆ ಐರಾ ಕೃಷ್ಣ ಎದುರು ನೋಡುತ್ತಿದ್ದಾರೆ.
ಜಾಹೀರಾತುಗಳಲ್ಲಿ ಐರಾ ಮಿಂಚು
ಟ್ಯಾಲಿ, ಎವಿಟಿ ಚಹಾ, ಅಮುಲ್ ಇಂಡಿಯಾ, ಹಿಮಾಲಯ, ಪೀಟರ್ ಇಂಗ್ಲೆಂಡ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಜಾಹೀರಾತುಗಳಲ್ಲಿಯೂ ಐರಾ ಕೃಷ್ಣ ನಟಿಸಿದ್ದಾರೆ.
