Cini NewsSandalwood

ಇದೇ ವಾರ “ಪಿಯೋಟು” ಚಿತ್ರ ಬಿಡುಗಡೆ

Spread the love

ಸ್ಯಾಂಡಲ್ ವುಡ್ ಗೆ ಮತ್ತೊಂದು ಯುವ ಪಡೆಗಳ ಬಳಗ ಸೇರಿಕೊಂಡು “ಪಿಯೋಟು” ಎಂಬ ಚಿತ್ರವನ್ನು ಸಿದ್ಧಪಡಿಸುವ ಮೂಲಕ ಇದೇ ಡಿಸೆಂಬರ್ 12ರಂದು ತೆರೆಯ ಮೇಲೆ ಬರುತ್ತಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಸಲುವಾಗಿ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡಿ ನಂತರ ಮಾಧ್ಯಮದ ಮುಂದೆ ಹಾಜರಾಗಿದ್ದು , ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್‌ ಕಾರ್ತೀಕ್ ರಾಜನ್ ಹೇಳಿದ್ದಾರೆ. ಲಿಖಿತ್ ಹಾಗೂ ಅಶ್ವಿನಿ ಚಾರ್ವ ಚಿತ್ರದ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗ್ರೇಸ್ ಫಿಲಂ ಕಂಪನಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ .

ಇನ್ನು ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಾರ್ತೀಕ್ ರಾಜನ್, ನಾವು ಈ ಚಿತ್ರದ ಮೂಲಕ ಕುಡಿತವನ್ನು ಪ್ರಚೋದಿಸುತ್ತಿಲ್ಲ. ಕುಡಿತದ ಚಟದಿಂದಾಗಿ ಏನೇನೆಲ್ಲ ಆಗುತ್ತದೆ ಎಂಬುದನ್ನು ಹೇಳುತ್ತಿದ್ದೇವೆ. ಹಾಗಾಗಿ ಈ ಚಿತ್ರಕ್ಕೆ ಪಿಯೋಟು ಎಂಬ ಟೈಟಲ್ ಸೂಕ್ತ ಎಂದು ಇಡಲಾಗಿದೆ. ಚಿತ್ರದ ನಾಯಕ ಏಕೆ ಕುಡಿತಕ್ಕೆ ಮೊರೆ ಹೋಗುತ್ತಾನೆ. ಅದಕ್ಕೆ ಕಾರಣವೇನು ಅನ್ನೋದನ್ನು ಈ ಸಿನಿಮಾದಲ್ಲಿ ಇದೆ. ಕುಡಿತದ ಚಟ ಹತ್ತಿಸಿಕೊಂಡವರಿಗೆ ಕುಡಿತ ಬಿಟ್ಟರೆ ಜೀವ ಇಲ್ಲ ಅನ್ನೋಥರ ಆಗಿರುತ್ತೆ , ಅದರ ಹಿಂದೆ ಇರುವ ನೋವು , ಸತ್ಯದ ಜೊತೆ ಒಂದು ಸಂದೇಶವನ್ನು ಕೂಡ ಹೇಳಿದ್ದೇವೆ. ಇದು ನಮ್ಮ ಮೊದಲ ಪ್ರಯತ್ನ ನಿಮ್ಮೆಲ್ಲರ ಬೆಂಬಲ ನಮ್ಮ ತಂಡಕ್ಕೆ ಇರಲಿ ಎಂದು ಕೇಳಿಕೊಂಡರು.

ನಂತರ ಚಿತ್ರದ ನಾಯಕಿ ಅಶ್ವಿನಿ ಮಾತನಾಡುತ್ತ ನಾನು ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗಾಗಲೇ ನಾನು ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದು, ಇತ್ತೀಚಿಗೆ ನನ್ನ ಅಭಿನಯದ ಆಪರೇಶನ್ ಲಂಡನ್ ಕೆಫೆ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ, ಅಲ್ಲದೆ ಈ ತಂಡದ ಜತೆ ಕೆಲಸ ಮಾಡಲು ಖುಷಿಯಾಗುತ್ತದೆ. ಎಲ್ಲರೂ ನನಗೆ ತುಂಬಾ ಸಪೋರ್ಟ್ ಮಾಡಿದರು. ಈ ಚಿತ್ರದಲ್ಲಿ ರೀಟಾ ಎಂಬ ಪಾತ್ರ ಮಾಡಿದ್ದೇನೆ. ನಾವಿಲ್ಲಿ ಕುಡಿತವನ್ನು ಪ್ರಚೋದನೆ ಮಾಡುತ್ತಿಲ್ಲ, ಅದರಿಂದ ಏನೇನೆಲ್ಲ ಆಗುತ್ತದೆ ಎಂದು ಹೇಳಿದ್ದೇವೆ , ಎಲ್ಲರೂ ಬಂದು ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.

ನಾಯಕ ನಟ ಲಿಖಿತ್ ಮಾತನಾಡುತ್ತ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಫೈಟರ್ ಅಲ್ಲದೆ ಕಿರುಚಿತ್ರ ನಿರ್ದೇಶನ ಕೂಡ ಮಾಡಿದ್ದೇನೆ, ಈ ಚಿತ್ರಕ್ಕಾಗಿ ರಿಯಲ್ ರಿಹ್ಯಾಬಿಟೇಶನ್ ಸೆಂಟರ್‌ಗೆ ಹೋಗಿ ಅಲ್ಲಿ ಚಿತ್ರೀಕರಿಸಿಕೊಂಡು ಬಂದಿದ್ದೇವೆ. ಅವರು ಯಾವ ರೀತಿ ಬದುಕುತ್ತಿದ್ದರೋ ಅದೇ ರೀತಿ ನಟಿಸಿದ್ದೇನೆ. ಒಬ್ಬ ನಟನಾಗಿ ನನ್ನನ್ನು ಪ್ರೂವ್ ಮಾಡಿಕೊಳ್ಳಲು ಒಳ್ಳೇ ಅವಕಾಶ ಸಿಕ್ಕಿದೆ. ಈ ಟೈಟಲ್ ಯಾಕೆ ಇಟ್ಟಿದ್ದೇವೆ ಹಾಗೂ ಇದರ ಹಿಂದಿರುವ ಸೂಕ್ಷ್ಮತೆ ಏನು ಎಂಬುದನ್ನು ನೀವು ಚಿತ್ರಮಂದಿರದಲ್ಲಿ ನೋಡಬೇಕು , ಈ ಚಿತ್ರ ನೋಡಿದವರು ಸ್ವಲ್ಪಮಟ್ಟಿಗೆ ಆದರೂ ಕುಡಿತದಿಂದ ದೂರ ಉಳಿಯುತ್ತಾರೆ ಎಂಬ ವಿಶ್ವಾಸ ನಮಗಿದೆ. ನಮ್ಮಂತ ಯುವ ಪ್ರತಿಗಳನ್ನ ಹರಸಿ ಬೆಳೆಸಿ ಎಂದು ಕೇಳಿಕೊಂಡು.

ಈ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮನೋಜ್ ಕುಮಾರ್ ಮಾತನಾಡುತ್ತ ಚಿತ್ರದ ಬಿಡುಗಡೆಯ ಸಿದ್ದತೆಗಳನ್ನು ವಿವರಿಸಿದರು, ಇದೇ ಸಂದರ್ಭದಲ್ಲಿ ಈ ಚಿತ್ರದ ಜಾಲಿ ಜಾಲಿ ಹಾಡಿನ ಇನ್‌ಸ್ಟಾಗ್ರಾಂ ಹುಕ್ ಸ್ಟೆಪ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ, ಗೆದ್ದ ಐದು ಜನ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಈ ಪಿಯೋಟು ಚಿತ್ರವನ್ನು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ಲಹರಿವೇಲು ಪಡೆದಿದ್ದು ತಂಡಕ್ಕೆ ಸಾತ್ ನೀಡಲು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನು ಮತ್ತೊಬ್ಬ ಅತಿಥಿಯಾಗಿ ಜಾಕ್ ಜಾಲಿ ಜಾಲಿ ಬಂದಿದ್ದು , ಈ ಚಿತ್ರದ ಒಂದು ಹಾಡಿಗೆ ಧ್ವನಿಯನ್ನು ನೀಡುವುದರ ಜೊತೆಗೆ ಇಡೀ ಚಿತ್ರತಂಡದ ಜೊತೆಗೆ ಸಾತ್ ಕೊಟ್ಟಿದ್ದಾರೆ.

ಬಿ .ಆರ್ .ಹೇಮಂತ್ ಕುಮಾರ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶಂಕು ಛಾಯಾಗ್ರಹಣ ಮಾಡಿದ್ದು , ವಿಬಿಆರ್ ವಿಕ್ರಂ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಒಂದು ಚಿತ್ರದಲ್ಲಿ ಗಣೇಶ್ ಡಿ.ಎಸ್. , ಮಂಜುಳಾ ರೆಡ್ಡಿ , ಜಯಂತ್ ಸೇರಿದಂತೆ ಹಲವಾರು ಪ್ರತಿಭೆಗಳು ಅಭಿನಯಿಸಿದ್ದಾರೆ.

Visited 1 times, 1 visit(s) today
error: Content is protected !!