ಗ್ರಾಮೀಣ ಪರಿಸರದ ನಡುವೆ ಆಟ , ಪಾಠ , ಕಳ್ಳಾಟ “ಪಾಠಶಾಲಾ” (ಚಿತ್ರವಿಮರ್ಶೆ-ರೇಟಿಂಗ್ : 3 /5)
ರೇಟಿಂಗ್ : 3 /5
ಚಿತ್ರ : ಪಾಠಶಾಲಾ
ನಿರ್ದೇಶಕ : ಹೆದ್ದೂರ್ ಮಂಜುನಾಥ್ ಶೆಟ್ಟಿ
ನಿರ್ಮಾಣ : MS ಸ್ಕ್ವಯರ್ ಮೂವೀಸ್
ಸಂಗೀತ : ವಿಕಾಸ್ ವಸಿಷ್ಠ
ಛಾಯಾಗ್ರಹಣ : ಜೀವನ್
ತಾರಾಗಣ : ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ , ಕಿರಣ್ ನಾಯಕ್, ನಟನಾ ಪ್ರಶಾಂತ್, ಕಂಬದ ರಂಗಯ್ಯ , ಪ್ರತಿಭಾವಂತ ಮಕ್ಕಳು ಹಾಗೂ ಮುಂತಾದವರು…
ಮಲೆನಾಡಿನ ಸುಂದರ ಪರಿಸರದ ಸೊಬಗಿನ ನಡುವೆ ಅಲ್ಲಿನ ಜನರ ಬದುಕು , ಭಾವನೆ , ಆಚಾರ ವಿಚಾರ , ಪದ್ಧತಿ , ದೈವ ನಂಬಿಕೆಯ , ಮಕ್ಕಳ ಭವಿಷ್ಯ , ಕುಟುಂಬಗಳ ಪರಿಸ್ಥಿತಿ , ಶಾಲೆಯ ವ್ಯವಸ್ಥೆ , ಶಿಕಾರಿಯಕಾಟ , ಅರಣ್ಯದ ಗಂಧದ ಮರಗಳ ನಾಶದ ನಡುವೆ ಸಾಗುವ ಮಕ್ಕಳ ಆಟ , ಪಾಠ ಜೊತೆ ಒಳಸಂಚಿನ ಕಳ್ಳಾಟದ ಸುತ್ತ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಪಾಠಶಾಲಾ”.
ತಮ್ಮ ಮಕ್ಕಳ ಭವಿಷ್ಯ ಬೆಳಗಲಿ ಎಂದು ಊರಿನಲ್ಲಿರುವ ಸರ್ಕಾರಿ ಶಾಲೆಗೆ ಸೇರಿಸುವ ತಂದೆ ತಾಯಿಂದಿರು ಹಣವಿಲ್ಲದಿದ್ದರೂ ತಾವು ಬೆಳೆದ ಹಣ್ಣು , ತರಕಾರಿ , ಊಟ , ಉಪಚಾರ ಹಾಗೂ ಇನ್ನಿತರ ಸಾಮಗ್ರಿಗಳನ್ನು ಶಾಲೆಯ ಹೆಡ್ ಮಾಸ್ಟರ್ (ಸುಧಾಕರ್ ಬನ್ನಂಜೆ) ಗೆ ನೀಡುತ್ತಾರೆ. ಒಂದರಿಂದ ಏಳನೇ ತರಗತಿವರೆಗೂ ಪಾಠ ಮಾಡುವ ಈ ಶಾಲೆಯ ವಿದ್ಯಾರ್ಥಿಗಳ ಆಟ , ಪಾಠ , ತುಂಟಾಟ , ತರಲೆ ನಿರಂತರ.
ಇದರ ನಡುವೆ ವ್ಯವಸಾಯ ಮಾಡುವ ಸಂಜೀವ ತನ್ನ ಮೊದಲ ಮಗ ಅರುಣ ನನ್ನ ಸರ್ಕಾರಿ ಶಾಲೆಗೆ ಸೇರಿಸಿ , ಎರಡನೇ ಮಗ ಕಿರಣ ನನ್ನ ಇಂಗ್ಲಿಷ್ ಶಾಲೆಗೆ ಸೇರಿಸಲು ನಿರ್ಧರಿಸುತ್ತಾನೆ. ಇದರ ನಡುವೆ ಊರಿನ ಒಂದೊಂದು ಕುಟುಂಬದ ಬದುಕು ಕೂಡ ಒಂದೊಂದು ರೀತಿಯ ಸಮಸ್ಯೆ ಇದ್ದರೂ ಪ್ರೀತಿ , ಮೋಹಕ್ಕೆ ಏನು ಕಮ್ಮಿ ಇಲ್ಲ. ಇನ್ನು ಹಬ್ಬ ಹರಿದಿನ ಅಂದರೆ ಎಲ್ಲರೂ ಒಂದಾಗಿ ಸೇರಿ ಆಚರಿಸುವುದು ಸಂಪ್ರದಾಯ.
ಓದಲು ಹೋಗುವ ವಿದ್ಯಾರ್ಥಿಗಳ ಒಡನಾಟದಲ್ಲಿ ಅರುಣನಿಗೆ ಸ್ವಾತಿಯ ಮೇಲೆ ಪ್ರೀತಿ, ಅದೇ ರೀತಿ ಗ್ಯಾರೇಜ್ ಅಂಗಡಿಯ ನವೀನನ ಕಂಡರೆ ಸಹನಾಗು ಪ್ರೀತಿ. ಇದರ ನಡುವೆ ಕಾಡಿನಲ್ಲಿ ಸಂಜೀವನ ಶಿಕಾರಿ ಬೇಟೆ. ಹೊಸ ಫಾರೆಸ್ಟ್ ಆಫೀಸರ್ ಡಿಸೋಜ ಕಣ್ಣಿಗೆ ಬೀಳುವ ಸಂಜೀವ , ಇನ್ನೇನು ಹಿಡಿದು ಜೈಲಿ ಸೇರಿಸುವ ಹಂತದಲ್ಲಿ ಊರಿನ ಪ್ರಮುಖ ವ್ಯಕ್ತಿ ನರಸಿಂಹ ಹಾಗೂ ಗ್ರಾಮದ ಜನರ ಸಹಾಯ.
ಇನ್ನು ಶಾಲೆಯ ರತಿ ಟೀಚರ್ ಮೇಲೆ ಫಾರೆಸ್ಟ್ ಆಫೀಸರ್ ಡಿಸೋಜ ಕಣ್ಣು. ಗಂಧದ ಮರ ಕಳ್ಳತನ , ಜಿಂಕೆ ಬೇಟಿ ಬಗ್ಗೆ ನಿಗಾ ಇಡುವ ಅರಣ್ಯ ಇಲಾಖೆಗೆ ಅನುಮಾನ ಮೂಡಿ ಬಲೇ ಬಿಸಿ ಸಂಜೀವ ಹಾಗೂ ಆತನ ಗ್ಯಾಂಗ್ ಹಿಡಿಯುತ್ತಿದ್ದಂತೆ ಕಾಡಿನೊಳಗೆ ತಪ್ಪಿಸಿಕೊಳ್ಳುತ್ತಾರೆ. ಇನ್ನು ತಮ್ಮ ತಂದೆಯಂದಿರ ಮೇಲೆ ಇರುವ ಆರೋಪದ ಬಗ್ಗೆ ಮಕ್ಕಳು ಕೂಡ ಆಲೋಚಿಸಿ ನಿಜವಾದ ಅಪರಾಧಿಯನ್ನು ಹಿಡಿಯಲು ನಿರ್ಧಾರ ಮಾಡುತ್ತಾರೆ.
ಇನ್ನು ಅನಾಮದೇಯ ವ್ಯಕ್ತಿ (ಬಾಲಾಜಿ ಮನೋಹರ್) ಮೌನ ಸಾಬ್ ಪೆಟ್ಟಿ ಅಂಗಡಿಗೆ ಬಂದು ಪಂಜುರ್ಲಿ ದೈವದ ದೇವಸ್ಥಾನಕ್ಕೆ ದಾರಿ ಕೇಳುತ್ತಾನೆ. ಇದರ ನಡುವೆ ಈ ಅರಣ್ಯದಲ್ಲಿ ನಡೆಯುತ್ತಿರುವ ಎಲ್ಲಾ ದುಷ್ಟ ಕೆಲಸಕ್ಕೆ ಇರುವ ಕಾಣದ ಮುಖಗಳ ಕೈವಾಡ ಸುಳಿ ತಿಳಿಯುತ್ತಾ ಹೋಗುತ್ತದೆ. ಪಂಜುರ್ಲಿ ಫಾಲ್ಸ್ ಬಳಿ ಸಂಜೀವ ಹಾಗೂ ಆತನ ಗ್ಯಾಂಗ್ ಅರೆಸ್ಟ್ ಆಗುತ್ತಾರೆ. ಮುಂದೆ ಮಕ್ಕಳ ಪ್ಲಾನ್ ಹಾಗೂ ಫಾರೆಸ್ಟ್ ಆಫೀಸರ್ ಮೂಲಕ ಒಂದಷ್ಟು ಸತ್ಯಗಳು ಹೊರ ಬರುತ್ತಾ ಹೋಗುತ್ತದೆ ಅದು ಏನು… ಹೇಗೆ… ಎಂಬ ಸತ್ಯ ತಿಳಿಯಬೇಕಾದರೆ ಪಾಠಶಾಲಾ ಚಿತ್ರ ನೋಡಬೇಕು.
ಇದು ಪ್ರತಿಯೊಬ್ಬರಿಗೂ ಪಾಠ ಎನ್ನುವಂತೆ ಶಾಲಾ ಮಕ್ಕಳಿಗೂ ಹಾಗೂ ಕಾಡಿನ ನಡುವೆ ಇರುವ ಊರಿನಲ್ಲಿ ಜನರಿಗೂ ತಿಳಿ ಹೇಳುವ ಹಾದಿಯಲ್ಲಿ ವಿದ್ಯೆ ಎಷ್ಟು ಮುಖ್ಯವೋ ಹಾಗೆಯೇ ನಮ್ಮ ಸುತ್ತ ಇರುವ ಪರಿಸರ , ಮರಗಳು , ಪ್ರಾಣಿಗಳ ಸಂರಕ್ಷಣೆಯು ಅಷ್ಟೇ ಮುಖ್ಯ ಎಂದು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕರು.
ಸುಂದರ ಪರಿಸರದ ನಡುವೆ ಇರುವ ಜನರ ಆಚಾರ, ವಿಚಾರ , ಪದ್ಧತಿ , ನಡೆ ನುಡಿಯನ್ನು ಬಹಳ ನೇರ ನೇರವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಬಹಳಷ್ಟು ಕಡಿತ ಮಾಡಬೇಕಿತ್ತು ಅನಿಸುತ್ತದೆ. ಗೆಳೆಯರೆಲ್ಲ ಸೇರಿಕೊಂಡು ಉತ್ತಮ ಚಿತ್ರ ನೀಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಸಂಗೀತ ಸೊಗಸಾಗಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಮಕ್ಕಳು ಬಹಳ ಸೊಗಸಾಗಿ ನೈಜಕ್ಕೆ ಪೂರಕವಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿನ್ನು ಉಳಿದಂತೆ ಅಭಿನಯಿಸಿರುವ ಹಿರಿಯ ಹಾಗೂ ಅನುಭವಿ ಕಲಾವಿದರು ಕೂಡ ಚಿತ್ರದ ಕಥೆಗೆ ಪೂರಕವಾಗಿ ಸಾಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಒಂದು ಸಂದೇಶವನ್ನು ನೀಡಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.