ನಿದ್ರಾಹೀನನ ಮನಸ್ಥಿತಿಯ ಕಥೆ-ವ್ಯಥೆ ” ನಿದ್ರಾದೇವಿ NextDoor” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ನಿದ್ರಾದೇವಿ NextDoor
ನಿರ್ದೇಶಕ : ಸುರಾಗ್
ನಿರ್ಮಾಪಕ : ಜಯರಾಮ ದೇವಸಮುದ್ರ
ಸಂಗೀತ : ನಕುಲ್ ಅಭಯಂಕರ್
ಛಾಯಾಗ್ರಹಣ : ಅಜಯ್ ಕುಲಕರ್ಣಿ
ತಾರಾಗಣ : ಪ್ರವೀರ್ , ರಿಷಿಕಾ , ಶೈನ್ ಶೆಟ್ಟಿ , ಶ್ರುತಿ ಹರಿಹರನ್, ಕೆ.ಎಸ್. ಶ್ರೀಧರ್, ಸುಧಾರಾಣಿ , ಶ್ರೀವತ್ಸ , ಅನೂಪ್, ಐಶ್ವರ್ಯಾ ಗೌಡ, ಮಾಸ್ಟರ್ ಸುಜಯ್ ರಾಮ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ನಮ್ಮ ಮನಸ್ಸು , ಮನಸ್ಥಿತಿ , ನಮ್ಮ ಸುತ್ತ ನಡೆಯುವಂತಹ ಘಟನೆಗಳು , ಗ್ರಹಿಸುವಂತಹ ವಿಚಾರ ಎಲ್ಲವೂ ನಮ್ಮ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಒಂದು ವೇಳೆ ನಾವೇ ಸಮಸ್ಯೆ , ನಮ್ಮಿಂದಲೇ ಎಲ್ಲಾ ತೊಂದರೆಗಳಿಗೂ ಕಾರಣ ಎಂದು ಮನಸ್ಸಿನಲ್ಲಿ ಉಳಿದರೆ ಅವನ ಬದುಕು , ಆಲೋಚನೆ , ಸ್ಥಿತಿಗತಿ ಏನು ಎಂಬ ಸೂಕ್ಷ್ಮತೆಯನ್ನ ವಿಭಿನ್ನ ರೀತಿಯಲ್ಲಿ ತೆರೆಯ ಮೇಲೆ ತರುವ ಪ್ರಯತ್ನವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನಿದ್ರಾದೇವಿ Next Door”. ಕ್ರಿಕೆಟ್ ಕೋಚರ್ ಧ್ರುವ (ಪ್ರವೀರ್ ಶೆಟ್ಟಿ ).
ಬಾಲ್ಯದಿಂದಲೇ ದೀರ್ಘಕಾಲ ನಿದ್ರಾಹೀನತೆ , ಗೊಂದಲ ಸೃಷ್ಟಿಯಿಂದ ನರಳುವಂತಹ ಮನಸ್ಥಿತಿಯನ್ನು ಹೊಂದಿರುವಂತಹ ಯುವಕ. ತನ್ನ ತಾಯಿ (ಸುಧಾರಾಣಿ) ಮಡಿಲಲ್ಲಿ ಜೋಗುಳ ಕೇಳಿ ಮಲಗುವಂತಹ ಧ್ರುವ , ನಿದ್ರೆಗಾಗಿ ಪರದಾಡುತ್ತಾನೆ. ದಿನ ಕಳೆದಂತೆ ಬೆಳೆಯುವ ಧ್ರುವ , ತಾಯಿ ಮರಣದ ನಂತರವೂ ಅವನ ಮನಸ್ಥಿತಿ, ಆಲೋಚನೆ ಭ್ರಮೆಯ ಸುಳಿಯಲ್ಲಿ ಬಾಲ್ಯದ ಗೆಳತಿ , ಅಮ್ಮ ತನ್ನನ್ನು ನೆಮ್ಮದಿಯಾಗಿ ನಿದ್ರೆ ಮಾಡಲು ತನ್ನ ಬಳಿ ಬರುವಂತೆ ಕರೆಯುವ ರೀತಿ ಅವನ ಮನಸ್ಸನ್ನ ಗೊಂದಲದ ಗೂಡಾಗಿ ಮಾಡಿರುತ್ತದೆ.
ಗೆಳೆಯನೊಟ್ಟಿಗೆ ಕುಡಿಯುತ್ತಾ ನೆಮ್ಮದಿ ಹುಡುಕಲು , ಹತಾಶೆಯನ್ನ ಹೊರಹಾಕಲು ಒಂದು ನಿಗೂಢ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ನಡೆಯುವ ಹೊಡೆದಾಟ ಅವನ ಮನಸ್ಸನ್ನು ಕಾಡುತ್ತದೆ. ಇದ್ಯಾವುದೂ ಬೇಡ ಎನ್ನುತ್ತಾ ಸುಯಿಸೈಡ್ ಮಾಡಿಕೊಳ್ಳಲು ನಿರ್ಧರಿಸುವ ಧ್ರುವನಿಗೆ ಸಿಗುವ ರಿಧಿಮಾ(ರಿಷಿಕಾ ನಾಯಕ್) ಳನ್ನ ನೋಡುತ್ತಲೇ ತನ್ನನ್ನು ರಕ್ಷಿಸುವ ದೇವತೆಯಂತೆ ಕಾಣುತ್ತಾಳೆ.
ಇವರಿಬ್ಬರ ಸ್ನೇಹ , ಪರಿಚಯ , ಪ್ರೀತಿಯ ಕಡೆ ವಾಲುತ್ತದೆ. ಸೂಸೈಡ್ ಪ್ರೇವೆಂಶನ್ ಕೇರ್ ನ ಸೈಕ್ಯಾಟ್ರಿಸ್ಟ್ ಶ್ರುತಿ (ಶ್ರುತಿ ಹರಿಹರನ್) ನೀಡುವ ಸಲಹೆಯನ್ನ ನಿರಾಕರಿಸುವ ಧ್ರುವ , ಅದೇ ಸಂಸ್ಥೆಯ ಕೌನ್ಸಿಲಿಂಗ್ ನಲ್ಲಿರುವ ರಿಧಿಮಾ ಮಾತಿಗೆ ಕರಗುತ್ತಾನೆ. ತನ್ನ ಹಿಂದಿನ ಹಾಗೂ ಪ್ರಸ್ತುತ ಬದುಕಿನ ಏರಿಳಿತದ ಬಗ್ಗೆ ತಿಳಿದುಕೊಳ್ಳುವ ಆಲೋಚನೆ ಮಾಡುವ ಧ್ರುವ.
ಇದರ ನಡುವೆ ವಿಕ್ರಂ (ಶೈನ್ ಶೆಟ್ಟಿ) ಆತನ ಬಾಸ್ ವೈಭವ್ (ಕೆ. ಎಸ್. ಶ್ರೀಧರ್) ಮಾರ್ಗದರ್ಶನದಂತೆ ತಂಡವು ತಮ್ಮ ಬಳಿಗೆ ನೆಮ್ಮದಿ ಹುಡುಕುತ್ತಾ , ಹತಾಶೆ ಹೊರಹಾಕಲು ಬರುವವರಿಗೆ ಒಂದು ಮಾರ್ಗವನ್ನು ತೋರುತ್ತಿರುತ್ತಾರೆ. ಈ ತಂಡಕ್ಕೆ ರಿಧಿಮಾ ತಮ್ಮ ಶಾಮ್ (ಅನೂಪ್) ಆಪ್ ಮೂಲಕ ಮಧುರವಾದ ಸಂಗೀತ , ತಾಯಿಯ ಜೋಗುಳದಂತಹ ಧ್ವನಿ ಓದಿಸುವ ಕಾಯಕದಲ್ಲಿ ಇರುತ್ತಾನೆ.
ಒಮ್ಮೆ ಕೌನ್ಸಲಿಂಗ್ ನಲ್ಲಿ ಧ್ರುವ ತನ್ನ ಬಾಲ್ಯದ ಗೆಳೆಯ ಹೇಳಿದಂತಹ “ನೀನು ಯಾರನ್ನ ಇಷ್ಟಪಡುತ್ತೀಯೋ ಅವರು ಸಾಯುತ್ತಾರೆ” ಎಂಬ ಮಾತು ಸದಾ ಕಾಡುತ್ತಾ ಅವನ ಈ ಸ್ಥಿತಿಗೆ ಕಾರಣವಾಗಿರುವ ವಿಚಾರ ತಿಳಿಯುತ್ತದೆ. ಇದರ ಹಿಂದೆಯೂ ಒಂದು ನಿಗೂಢ ಘಟನೆ ಇರುತ್ತದೆ. ಮುಂದೆ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಈ ನಿದ್ರಾಹೀನತೆಗೆ ಕಾರಣ ಏನು.. ಯಾಕೆ… ಹೇಗೆ… ಎಂಬುವ ವಿಚಾರವನ್ನು ತಿಳಿಯಬೇಕಾದರೆ ಒಮ್ಮೆ ಚಿತ್ರವನ್ನು ನೋಡಲೇಬೇಕು.
ಒಂದು ವಿಭಿನ್ನ ಕಥಾನಕವನ್ನು ಪ್ರೇಕ್ಷಕರ ಮುಂದೆ ಹೇಳಲು ಹೊರಟಿದ್ದಾರೆ ನಿರ್ದೇಶಕ. ದೀರ್ಘಕಾಲ ನಿದ್ರಾಹೀನತೆ , ಹತಾಶೆ , ಗೊಂದಲದ ನಡುವೆ ಬದುಕು ಏನು ಎಂಬುದನ್ನು ಸೂಕ್ಷ್ಮವಾಗಿ ಹೇಳಲು ಹೊರಟು , ನೆಮ್ಮದಿ ಹುಡುಕುವ ಹಾದಿಯಲ್ಲಿ ನಿದ್ರಾ ದೇವಿಯನ್ನ ಕರೆತಂದಿರುವ ರೀತಿ ವಿಶೇಷವಾಗಿದೆ. ಆದರೆ ಈ ವಿಚಾರವನ್ನು ಜನಸಾಮಾನ್ಯರು ಎಷ್ಟರಮಟ್ಟಿಗೆ ನೋಡಿ ಅರ್ಥೈಸಿಕೊಳ್ಳುತ್ತಾರೆ ಎಂಬುದೇ ಪ್ರಶ್ನೆ. ಚಿತ್ರಕಥೆ ಇದ್ದಲ್ಲೇ ಗಿರಿಕಿ ಹೊಡೆದಂತಿದೆ.
ಆದರೆ ಪ್ರಯತ್ನ ಉತ್ತಮವಾಗಿದೆ. ಇಂತಹ ಕಥೆಗೆ ಹಣ ಹಾಕಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಸಂಗೀತ ಗಮನ ಸೆಳೆದಿದ್ದು , ನಿದ್ರಾ ದೇವಿಯ ಹಾಡು ಗುನುಗುವಂತಿದೆ. ಛಾಯಾಗ್ರಾಹಕರ ಲೈಟಿಂಗ್ ಪ್ಯಾಟರ್ನ್ ಅದ್ಭುತವಾಗಿ ಮೂಡಿದೆ. ಸಂಕಲನ ಸೇರಿದಂತೆ ತಾಂತ್ರಿಕವಾಗಿ ಅಚ್ಚುಕಟ್ಟಾಗಿದೆ. ಇನ್ನು ನಾಯಕನಾಗಿರುವ ಪ್ರವೀರ್ ಶೆಟ್ಟಿ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಬಹಳಷ್ಟು ಶ್ರಮಪಟ್ಟಿದ್ದಾರೆ.
ಫೈಟ್ ಹಾಗೂ ಡಾನ್ಸ್ ಗೆ ಸೈ ಎಂದಿರುವ ಯುವ ಪ್ರತಿಭೆ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇನ್ನು ಮುದ್ದಾಗಿ ಕಾಣುವ ನಟಿ ಪ್ರವೀರ್ , ರಿಷಿಕಾ ನಾಯಕ್ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟೇ ಮಾತು , ನಗುವನ್ನು ಹೊರ ಹಾಕಿದ್ದಾರೆ. ಅದೇ ರೀತಿ ತಮ್ಮ ನಟನಾ ಸಾಮರ್ಥ್ಯವನ್ನು ಶೈನ್ ಶೆಟ್ಟಿ ಕೂಡ ಅದ್ಬುತವಾಗಿ ತೋರಿಸಿದ್ದಾರೆ. ಉಳಿದಂತೆ ಶ್ರುತಿ ಹರಿಹರನ್, ಸುಧಾರಾಣಿ ಅನೂಪ್ ಧವನ್ , ಶ್ರೀವತ್ಸ , ಕೆ.ಎಸ್. ಶ್ರೀಧರ್ , ಮಾಸ್ಟರ್ ಸುಜಯ್ ರಾಮ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರಕ್ಕೆ ಪೂರಕವಾಗಿ ಸಾಗಿದೆ. ಬಹಳ ತಾಳ್ಮೆಯಿಂದ ನೋಡುವಂತ ಸಿನಿಪ್ರಿಯರಿಗೆ ಇಷ್ಟವಾಗುವ ಈ ಒಂದು ಚಿತ್ರವನ್ನು ಎಲ್ಲರೂ ನೋಡಬಹುದು.