ತಾಯಿ – ಮಗನ ಬಾಂಧವ್ಯ ಸಾರುವ “ನಿದ್ರಾದೇವಿ ಬಾ” ಎಂಬ ಟೈಟಲ್ ಸಾಂಗ್ ಬಿಡುಗಡೆ.
ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ – ರಿಷಿಕಾ ನಾಯಕ – ನಾಯಕಿಯಾಗಿ ನಟಿಸಿರುವ “ನಿದ್ರಾದೇವಿ next door” ಚಿತ್ರಕ್ಕಾಗಿ ಪವನ್ ಭಟ್ ಅವರು ಬರೆದಿರುವ “ನಿದ್ರಾದೇವಿ ಬಾ” ಎಂಬ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು.
ನಕುಲ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ಶ್ರೀಲಕ್ಷ್ಮೀ ಬೆಳ್ಮಣು ಹಾಡಿದ್ದಾರೆ. ತಾಯಿ – ಮಗನ ಬಾಂಧವ್ಯದ ಈ ಹಾಡಿನಲ್ಲಿ ಹಿರಿಯ ನಟಿ ಸುಧಾರಾಣಿ ಹಾಗೂ ಮಾಸ್ಟರ್ ಸುಜಯ್ ಅಭಿನಯಿಸಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇದು ನಮ್ಮ ಸಂಸ್ಥೆಯ ನಿರ್ಮಾಣದ ಮೂರನೇ ಸಿನಿಮಾ. ನಿರ್ದೇಶಕರು ಈ ಚಿತ್ರದ ಕಥೆ ಹೇಳಿದಾಗ ತಾಯಿ ಪಾತ್ರದಲ್ಲಿ ಸುಧಾರಾಣಿ ಅವರು ಅಭಿನಯಿಸುತ್ತಾರೆ ಎಂದು ಹೇಳಿದಾಗ ಬಹಳ ಖುಷಿಯಾಯಿತು. ವಿಶೇಷವೆಂದರೆ ಸುಧಾರಾಣಿ ಅವರ ಜೊತೆಗೆ ನನ್ನ ಮಗ ಮಾಸ್ಟರ್ ಸುಜಯ್ ಕೂಡ ಅಭಿನಯಿಸಿದ್ದಾನೆ. ಸೆಪ್ಟೆಂಬರ್ 12ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ತಿಳಿಸಿದರು.
ಸಾಮಾನ್ಯವಾಗಿ ತಂದೆಗೆ ಮಗಳ ಮೇಲೆ, ತಾಯಿಗೆ ಮಗನ ಮೇಲೆ ಪ್ರೀತಿ ಜಾಸ್ತಿ ಎಂಬುವುದು ವಾಡಿಕೆ. ಇಂದು ನಮ್ಮ ಚಿತ್ರದ ತಾಯಿ – ಮಗನ ಬಾಂಧವ್ಯ ಸಾರುವ “ನಿದ್ರಾದೇವಿ ಬಾ” ಎಂಬ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಶ್ರೀದೇವಿ ಬೆಳ್ಮಣು ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಸುಧಾರಾಣಿ ಹಾಗೂ ಮಾಸ್ಟರ್ ಸುಜಯ್ ಅಭಿನಯಿಸಿದ್ದಾರೆ. ಡಾ||ವಿಷ್ಣುವರ್ಧನ್ ಅಭಿನಯದ ಜನಪ್ರಿಯ “ಜೋ ಜೋ ಲಾಲಿ” ಎಂಬ ಹಾಡಿನಲ್ಲಿ “ನಿದ್ರಾದೇವಿ ಬಾ” ಎಂಬ ಪದವಿದೆ. ಆ ಪದವೇ ಈ ಹಾಡಿಗೆ ಸ್ಪೂರ್ತಿ. ಇನ್ನೂ ನಮ್ಮ ಚಿತ್ರ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಸುರಾಗ್.
ನಿರ್ದೇಶಕ ಸುರಾಗ್ ಅವರು ಈ ಚಿತ್ರದ ಕಥೆ ಹೇಳಿದಾಗ ಪಾತ್ರ ಇಷ್ಟವಾಯಿತು. ಕೆಲವರು ಕಥೆ ಹೇಳಬೇಕಾದರೆ ಆ ಪಾತ್ರ ಒಂದು ರೀತಿ, ಆಮೇಲೆ ಬೇರೆ ರೀತಿಯೇ ಇರುತ್ತದೆ. ಆದರೆ ಸುರಾಗ್ ಅವರು ಕಥೆ ಹೇಳಿದ ಹಾಗೆಯೇ ಪಾತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ತಾಯಿ – ಮಗನ ಬಾಂಧವ್ಯದ ಹಾಡು ತುಂಬಾ ಚೆನ್ನಾಗಿದೆ. ಒಂದೊಳ್ಳೆ ಕಂಟೆಂಟ್ ವುಳ್ಳ ಚಿತ್ರವನ್ನು ಜನ ನೋಡೇ ನೋಡುತ್ತಾರೆ ಎಂಬುದಕ್ಕೆ “ಸು ಫ್ರಮ್ ಸೋ” ಚಿತ್ರವೇ ಸಾಕ್ಷಿ. ಅದೇ ರೀತಿ ಉತ್ತಮ ಕಂಟೆಂಟ್ ವುಳ್ಳ “ನಿದ್ರಾದೇವಿ next door” ಚಿತ್ರ ಸಹ ಭರ್ಜರಿ ಯಶಸ್ಸು ಕಾಣಲಿ ಎಂದು ನಟಿ ಸುಧಾರಣಿ ಹಾರೈಸಿದರು.
ನಮ್ಮ ಇಡೀ ಕುಟುಂಬದವರು ಸುಧಾರಾಣಿ ಅವರ ಅಭಿಮಾನಿಗಳು. ಅವರ ಜೊತೆಗೆ ನಾನು ಈ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಖುಷಿಯಾಗಿದೆ. ಇನ್ನೂ ಇಂದು ಬಿಡುಗಡೆಯಾಗಿರುವ “ನಿದ್ರಾದೇವಿ ಬಾ” ಹಾಡು ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯಲ್ಲಿ ಚೆನ್ನಾಗಿ ಮೂಡಿಬಂದಿದೆ ಎಂದರು.
ನಾನು ಈ ಹಿಂದೆ “ಜ್ಯೂಲಿ” ಚಿತ್ರದಲ್ಲಿ ಸುಧಾರಾಣಿ ಅವರೊಂದಿಗೆ ಅಭಿನಯಿಸಿದ್ದೆ. ಇದು ನಾನು ಅವರ ಜೊತೆಗೆ ಅಭಿನಯಿಸುತ್ತಿರುವ ಎರಡನೇ ಚಿತ್ರ. ಅವರ ಜೊತೆಗೆ ನಟಿಸಿದ್ದು ಖುಷಿಯಾಗಿದೆ. ಇಂದು ಬಿಡುಗಡೆಯಾಗುರುವ ಹಾಡು ಚೆನ್ನಾಗಿದೆ ಎಂದರು ನಾಯಕಿ ರಿಶಿಕಾ. “ಮಣ್ಣಿನ ದೋಣಿ” ಚಿತ್ರದ ಸಮಾರಂಭವೊಂದರಲ್ಲಿ ಅಂಬರೀಶ್ ಹಾಗೂ ಸುಧಾರಾಣಿ ಅವರನ್ನು ನೋಡಿದ್ದನ್ನು ನೆನಪಿಸಿಕೊಂಡು ಮಾತನಾಡಿದ ಪ್ರವೀಣ್ ಶೆಟ್ಟಿ(ಕರವೇ), ಅವರು ತಮ್ಮ ಮಗ ಚಿತ್ರದ ನಾಯಕ ಪ್ರವೀರ್ ಶೆಟ್ಟಿ, ಈ ಚಿತ್ರಕ್ಕಾಗಿ ಪಟ್ಟಿರುವ ಶ್ರಮದ ಬಗ್ಗೆ ಹೇಳಿದರು. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.