Cini NewsMovie Review

ಆತ್ಮದ ಸುಳಿಯಲ್ಲಿ ಸ್ನೇಹ , ಪ್ರೀತಿ, ಗೆಳೆತನ… : ಮ್ಯಾಟ್ನಿ ಚಿತ್ರವಿಮರ್ಶೆ (ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಮ್ಯಾಟ್ನಿ
ನಿರ್ದೇಶಕ : ಮನೋಹರ್ ಕಾಂಪಲ್ಲಿ
ನಿರ್ಮಾಪಕಿ : ಪಾರ್ವತಿ ಗೌಡ
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಾಹಕ : ಸುಧಾಕರ್ ಮತ್ತು ಕೀರ್ತನ್ ಪೂಜಾರಿ
ತಾರಾಗಣ : ಸತೀಶ್ ನೀನಾಸಂ , ರಚಿತಾ ರಾಮ್
ಅದಿತಿ ಪ್ರಭುದೇವಾ, ಶಿವರಾಜ್ ಕೆ.ಆರ್. ಪೇಟೆ, ನಾಗಭೂಷಣ್, ಪೂರ್ಣ ಮೈಸೂರು, ದಿಗಂತ್ ದಿವಾಕರ್, ತುಳಸಿ ಶಿವಮಣಿ, ತಬಲ ನಾಣಿ ಹಾಗೂ ಮುಂತಾದವರು…

ಸಾಮಾನ್ಯವಾಗಿ ಬಾಲ್ಯದ ಗೆಳೆಯರ ಒಡನಾಟ ಸ್ನೇಹ , ಪ್ರೀತಿ, ವಿಶ್ವಾಸ ಬದುಕಿನಲ್ಲಿ ಒಂದು ಉತ್ತಮ ಬಾಂಧವ್ಯವನ್ನು ಹೊಂದಿರುತ್ತದೆ. ಯಾರು.. ಎಲ್ಲಿ… ಹೇಗೆ… ಬೆಳೆದರೂ ಸಮಯ ಒಮ್ಮೊಮ್ಮೆ ಭೇಟಿಯಾಗುವ ಸಂದರ್ಭವನ್ನು ಒದಗಿಸುತ್ತದೆ.

ಅಂತಹದೇ ಗೆಳೆಯರು ಮತ್ತೊಬ್ಬ ಶ್ರೀಮಂತ ಗೆಳೆಯ ನನ್ನ ಭೇಟಿ ಅವನ ಬಂಗಲೆಯನ್ನ ಮಾರಾಟ ಮಾಡಲು ಮುಂದಾದಾಗ ಆತ್ಮದ ಸಂಚಲನ ತಿಳಿದು ಪರದಾಡುವ ಸ್ಥಿತಿಯ ಸುತ್ತ ಬೆಸೆದಿರುವ ಕಥೆಯಲ್ಲಿ ಮಮಕಾರ , ಪ್ರೀತಿ , ನಂಬಿಕೆ, ಸ್ನೇಹ , ಮೋಸದ ಜಾಲ ಏನೆಲ್ಲಾ ಮಾಡಿಸುತ್ತೆ ಎಂಬ ಕಥಾನಕವನ್ನು ಮ್ಯಾಟಿ ಚಿತ್ರದ ಮೂಲಕ ಈ ವಾರ ತೆರೆಯ ಮೇಲೆ ತಂದಿದ್ದಾರೆ.

ತಾಯಿಯನ್ನು ಕಳೆದುಕೊಂಡ ಒಬ್ಬನೇ ಮಗ ಅರುಣ್ (ಸತೀಶ್ ನೀನಾಸಂ) ಭವ್ಯ ಬಂಗಲೆಯಲ್ಲಿ ವಾಸ ಮಾಡುತ್ತಿರುತ್ತಾನೆ. ಮತ್ತೊಂದೆಡೆ ತಾಯಿ ಒಬ್ಬಳು ತನ್ನ ಮಗಳು ಚಿತ್ರ (ಅದಿತಿ ಪ್ರಭುದೇವ್) ಮಿಸ್ಸಿಂಗ್ ಆಗಿದ್ದಾಳೆ ಎಂದು ಕಂಪ್ಲೇಂಟ್ ನೀಡಿ ಹುಡುಕುತ್ತಿರುತ್ತಾಳೆ. ಒಬ್ಬಂಟಿ ಗೆಳೆಯನ ಬದುಕು ತಿಳಿಯುವ ಗೆಳೆಯರು ಆನಂದ , ಜಯದೇವ್ , ನವೀನ, ಫ್ಲ್ಯಾಶ್ (ಶಿವರಾಜ್ ಕೆ.ಆರ್. ಪೇಟೆ , ನಾಗಭೂಷಣ್ , ಪೂರ್ಣ ಮೈಸೂರ್, ದಿಗಂತ್ ದಿವಾಕರ್) ಅವನ ಮನೆಯನ್ನು ಮಾರಿಸಿ ತಮ್ಮೊಟ್ಟಿಗೆ ಕರೆದೊಯ್ಯುವ ಪ್ಲಾನ್ ಮಾಡುತ್ತಾ ಮನೆಗೆ ಬರುತ್ತಾರೆ.

ಪ್ರತಿಯೊಬ್ಬರದ್ದು ಒಂದೊಂದು ರೀತಿಯ ಬದುಕು. ಗೆಳೆಯರೆಲ್ಲ ಒಟ್ಟುಗೂಡಿ ಪಾರ್ಟಿ ಮಾಡ್ತಾರೆ. ಆದರೆ ಮನೆಯಲ್ಲಿ ಆತ್ಮದ ಸಂಚಾರ , ಗೆಜ್ಜೆ ಸದ್ದು ಗೆಳೆಯರನ್ನ ಗಾಬರಿ ಮಾಡುತ್ತದೆ. ಇದು ಅರುಣ್ ತಾಯಿಯ ಆತ್ಮ ಎಂದು ಹೇಳುವ ಸ್ನೇಹಿತರಿಗೆ ನನ್ನ ತಾಯಿಯ ಬಗ್ಗೆ ಮಾತನಾಡಬೇಡಿ ನೀವು ನನಗೆ ದೆವ್ವವನ್ನ ತೋರಿಸಿ ನಾನು ಮನೆಯ ಮಾರಿ ನಿಮ್ಮಟ್ಟಿಗೆ ಬರುತ್ತೇನೆ ಎಂದು ಸವಾಲ್ ಹಾಕುತ್ತಾನೆ.

ಮನೆಯಲ್ಲಿ ಏನಾಗುತ್ತಿದೆ ಎನ್ನುವಷ್ಟರಲ್ಲಿ ಚಿತ್ರ ಕಾಣಿಸುತ್ತಾಳೆ. ದೆವ್ವ ಕಂಡಳು ಅನ್ನುವಷ್ಟರಲ್ಲಿ ಮತ್ತೊಂದು ಫ್ಲ್ಯಾಶ್ ಬ್ಯಾಕ್ ಪ್ರೇಮ್ ಕಹಾನಿ ತೆರೆಯುತ್ತದೆ. ಅರುಣ್ ಆಗಾಗ ಭೇಟಿ ನೀಡುವ ಅನಾಥಾಶ್ರಮದಲ್ಲಿ ಬೆಳೆದಂತ ಅಕ್ಷರ (ರಚಿತಾ ರಾಮ್) ಭೇಟಿಯಾಗುತ್ತಾಳೆ. ಪರಿಚಯ ಸ್ನೇಹ, ಪ್ರೀತಿಗೆ ತಿರುಗುತ್ತದೆ. ಆದರೆ ಅಕ್ಷರ ಕನಸು ಬಹಳ ಎತ್ತರಕ್ಕಿದ್ದು , ವಿದೇಶಕ್ಕೆ ಹೋಗುವ ಸಮಯ ಬರುತ್ತದೆ.

ಇದರ ನಡುವೆ ಒಂದಷ್ಟು ಎಡವಟ್ಟುಗಳು ಎದುರಾಗಿ ಅರುಣ್ ಕಂಡ ಕನಸೆಲ್ಲ ಬೇರೆಯದೆ ರೂಪ ಪಡೆಯುತ್ತಾ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಅರುಣ್ ಆಸೆ ಏನು…
ಮನೆಯಲ್ಲಿ ದೆವ್ವ ಇದೆಯೇ…
ಆತ್ಮ ಆದವರು ಯಾರು…
ಚಿತ್ರ , ಅಕ್ಷರ ಹಾಗೂ ಗೆಳೆಯರ ಸ್ಥಿತಿ ಏನು…
ಮನೆ ಮಾರಾಟ ಆಯ್ತಾ…
ಇದೆಲ್ಲದಕ್ಕೂ ಉತ್ತರ ಮ್ಯಾಟ್ನಿ ಚಿತ್ರ ನೋಡಬೇಕು.

ಇನ್ನು ಈ ಚಿತ್ರದ ನಿರ್ದೇಶಕ ಮನೋಹರ್ ಕಾಂಪಲ್ಲಿ ಆಯ್ಕೆ ಮಾಡಿಕೊಂಡಿರುವ ಕಥೆಯಲ್ಲಿ ಹೊಸತನ ಇಲ್ಲದಿದ್ದರೂ ಚಿತ್ರಕಥೆಯ ಶೈಲಿ ಗಮನ ಸೆಳೆಯುವಂತಿದೆ. ಹಾರರ್ , ಥ್ರಿಲ್ಲರ್ ಮೂಲಕ ನಂಬಿಕೆ , ಸ್ನೇಹ , ಪ್ರೀತಿಯು ಹಣ ಆಸ್ತಿಗಿಂತ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತಾ, ಜೀವ ಹೋದರು ಆಸೆ ಹೋಗುವುದಿಲ್ಲ ಎನ್ನುವ ಆತ್ಮದ ಕಥೆ ವ್ಯಥೆಯನ್ನು ತೆರೆಯ ಮೇಲೆ ಹೇಳಿದ್ದಾರೆ.

ಇದ್ದಲ್ಲೇ ಗಿರಿಕಿ ಹೊಡೆಯುವ ಕಥೆ , ಇನ್ನಷ್ಟು ವೇಗ ಮಾಡಬಹುದಿತ್ತು. ಮಹಿಳಾ ನಿರ್ಮಾಪಕಿ ಪಾರ್ವತಿ ಗೌಡ ಈ ಹಾರರ್ ಚಿತ್ರಕ್ಕೆ ಖರ್ಚು ಮಾಡಿರುವುದು ತೆರೆಯ ಮೇಲೆ ಕಾಣುತ್ತದೆ. ಇವರ ಧೈರ್ಯವನ್ನ ಮೆಚ್ಚಲೇಬೇಕು. ಇನ್ನು ಪೂರ್ಣಚಂದ್ರ ತೇಜಸ್ವಿ ಸಂಗೀತ ಗುನುಗುವಂತಿದ್ದರು ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಛಾಯಾಗ್ರಾಹಕರಾದ ಸುಧಾಕರ್ ಹಾಗೂ ಕೀರ್ತನ್ ಪೂಜಾರಿ ಕೈಚಳಕ ಅದ್ಭುತವಾಗಿದೆ.

ನಾಯಕನಾಗಿ ಅಭಿನಯಿಸಿರುವ ಸತೀಶ್ ನೀನಾಸಂ ಎಂದಿನಂತೆ ತಮ್ಮ ಪಾತ್ರವನ್ನು ನಿರ್ವಹಿಸಿದ್ದು , ಪಾತ್ರ ಪೋಷಣೆಯಲ್ಲಿ ಇನ್ನಷ್ಟು ಗಮನಹರಿಸಬೇಕಿತ್ತು ಅನಿಸುತ್ತದೆ. ನಾಯಕಿಯರಾಗಿ ಅಭಿನಯಿಸಿರುವ ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಗೆಳೆಯರಾಗಿ ಅಭಿನಯಿಸಿರುವ ನಾಗಭೂಷಣ್ , ಶಿವರಾಜ್ .ಕೆ. ಆರ್. ಪೇಟೆ , ಪೂರ್ಣ ಮೈಸೂರು , ದಿಗಂತ್ ದಿವಾಕರ್ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇನ್ಸ್ಪೆಕ್ಟರ್ ಪಾತ್ರಧಾರಿಯಲ್ಲಿ ಮಿಮಿಕ್ರಿ ಗೋಪಿ , ಪೊಲೀಸ್ ಪೇದೆಯಾಗಿ ತಬಲ ನಾಣಿ , ಮಗಳನ್ನು ಕಳೆದುಕೊಂಡ ತಾಯಿಯ ಪಾತ್ರದಲ್ಲಿ ತುಳಸಿ ಶಿವಮಣಿ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಸಸ್ಪೆನ್ಸ್ , ಹಾರರ್ ಸಿನಿಪ್ರಿಯರಿಗೆ ಈ ಚಿತ್ರ ಹೆಚ್ಚು ಇಷ್ಟವಾಗಲಿದ್ದು, ಒಮ್ಮೆ ನೋಡುವಂತಿದೆ.

error: Content is protected !!