Cini NewsSandalwood

ಮೈಸೂರಿನಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಮೊದಲ ಹಾಡು ರೀಲಿಸ್.

Spread the love

ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಾಗಿ ನಿಶಾನ್ ರಾಯ್ ಅವರು ಬರೆದು ಚಂದನ್ ಶೆಟ್ಟಿ ಹಾಡಿರುವ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್” ಎಂಬ ಸುಂದರ ಗೀತೆ ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.

ಸಾವಿರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಇದು ಚಿತ್ರದ ಮೊದಲ ಹಾಡು ಕೂಡ. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಶ್ರೀನಿವಾಸರಾಜು ಅವರು ಫೋನ್ ಮಾಡಿ ಕಥೆ ಹೇಳಬೇಕೆಂದಾಗ ನನಗೆ ಆಶ್ಚರ್ಯವಾಯಿತು. ಅವರು “ದಂಡುಪಾಳ್ಯ” ದಂತಹ ಥ್ರಿಲ್ಲರ್ ಚಿತ್ರ ಮಾಡಿರುವ ನಿರ್ದೇಶಕರು. ನಾನು ನೋಡಿದರೆ ಪ್ರೇಮಕಥೆಗಳ ನಾಯಕ. ನನಗೆ ಇವರು ಯಾವ ತರಹ ಕಥೆ ಮಾಡಿರಬಹುದು ಅಂದುಕೊಂಡು ಕಥೆ ಕೇಳಿದೆ. ಅವರು ಕಥೆ ಶುರು ಮಾಡಿದ ಕೂಡಲೆ ನೀವು ಮದುವೆ ಗಂಡಿನ ತರಹ ಬರುತ್ತೀರಾ.

ಎಂಟು ಜನ ನಾಯಕಿಯರು ಮದುವೆ ಹೆಣ್ಣಿನ ತರಹ ಸಿದ್ದವಾಗಿರುತ್ತಾರೆ ಎಂದರು. ಆಗ ಇದು ನನ್ನ ಜಾನರ್ ನ ಚಿತ್ರ ಅಂದು ಕೊಂಡೆ. ಆದರೆ ಚಿತ್ರದಲ್ಲಿ ಬರೀ ಇಷ್ಟೇ ಇಲ್ಲ. ಒಳ್ಳೆಯ ಟ್ವಿಸ್ಟ್ ಇಟ್ಟಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.

ಇದು ಗಣೇಶ್ ಅವರಿಗಾಗಿಯೇ ಮಾಡಿರುವ ಕಥೆ. ಫ್ಯಾಮಿಲಿ ಎಂಟರ್ ಟೈನರ್. ಎಲ್ಲಾ ಜನರೇಶನ್ ಅವರಿಗೂ ಹಿಡಿಸುವ ಕಥೆಯೂ ಹೌದು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಆ ಪೈಕಿ ಮೊದಲ ಹಾಡು ಈಗ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರು ಸೇರಿದಂತೆ 64 ಜನ ಕಲಾವಿದರು ಅಭಿನಯಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಚೊಚ್ಚಲ ಹಾಡಿಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜು ತಿಳಿಸಿದರು.

ಇದೊಂದು ಪರಿಶುದ್ಧ ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರ. ಹಾಡುಗಳು ಚೆನ್ನಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ.ಗಾಯಕ ಚಂದನ್ ಶೆಟ್ಟಿ, ಹಾಡಿನಲ್ಲಿ ಅಭಿನಯಿಸಿರುವ ವಿನುತ, ಚಂದನ, ಸುಶ್ಮಿತ ಹಾಗೂ ಚಂದನ ಗೌಡ ಮುಂತಾದವರು ಈ ಹಾಡಿನ ಬಗ್ಗೆ ಮಾತನಾಡಿದರು.

ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.

Visited 1 times, 1 visit(s) today
error: Content is protected !!