Cini NewsMovie Review

ರೋಚಕ ಜರ್ನಿಯ “ಕ್ಲಾಂತ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಕ್ಲಾಂತ
ನಿರ್ದೇಶಕ : ವೈಭವ ಪ್ರಶಾಂತ್
ನಿರ್ಮಾಪಕ : ಉದಯ್‌ ಅಮ್ಮಣ್ಣಾಯ ಕೆ.
ಸಂಗೀತ : ಎಸ್‌. ಪಿ . ಚಂದ್ರಕಾಂತ್‌
ಛಾಯಾಗ್ರಹಕ : ಮೋಹನ್‌ ಲೋಕನಾಥನ್‌
ತಾರಾಗಣ : ವಿಘ್ನೇಶ್‌, ಸಂಗೀತಾ ಭಟ್‌, ಶೋಭರಾಜ್‌, ವೀಣಾ ಸುಂದರ್‌, ಸಂಗೀತಾ, ದೀಪಿಕಾ, ಯುವ , ಪ್ರವೀಣ್‌ ಜೈನ್‌, ಸ್ವಪ್ನಾ ಶೆಟ್ಟಿಗಾರ್‌ ಹಾಗೂ ಮುಂತಾದವರು…

ಜೀವನವೇ ಒಂದು ಪಯಣ ಸಾಗುವ ಹಾದಿಯಲ್ಲಿ ಹಲವು ಅವಗಡಗಳು ಏರುಪೇರುಗಳು ಎದುರಾಗುತ್ತಾ ಹೋಗುತ್ತದೆ. ಅದೆಲ್ಲವನ್ನ ದಾಟುವವರೇ ಬದುಕಿನಲ್ಲಿ ಒಂದು ಗುರಿಯನ್ನು ತಲುಪಲು ಸಾಧ್ಯ. ಅಂತದ್ದೇ ಒಂದು ಜರ್ನಿಯ ಕಥೆಯಲ್ಲಿ ತಂದೆ ತಾಯಿಯ ಪ್ರೀತಿ , ಸ್ನೇಹ , ನಂಬಿಕೆ , ದುಷ್ಟರ ಅಟ್ಟಹಾಸ , ದೈವದ ಶಕ್ತಿ ಹೀಗೆ ಹಲವು ಅಂಶಗಳನ್ನು ಒಳಗೊಂಡು ಈ ವಾರ ತೆರೆಯ ಮೇಲೆ ಬಂದಂತಹ ಚಿತ್ರ “ಕ್ಲಾಂತ”.

ವಾಹಿನಿ ಒಂದರಲ್ಲಿ ಕೆಲಸ ಮಾಡುವ ವರದಿಗಾರ್ತಿಯು ಮುಖ್ಯಸ್ಥರ ಒತ್ತಡಕ್ಕಾಗಿ ಒಂದು ಕ್ರೈಂ ಸ್ಟೋರಿಯನ್ನು ಹುಡುಕುವ ಹಾದಿಯಲ್ಲಿ ಕಂಗಾಲಾಗಿ ದೇವರ ಮೊರೆ ಹೋಗಿದ ನಂತರ ಲೈಬ್ರರಿಯಲ್ಲಿ ಕುತೂಹಲದ ಸ್ಟೋರಿ ಸಿಗುತ್ತದೆ ಎಂದು ಹುಡುಕಾಟದಲ್ಲಿರುವಾಗ ವಯಸ್ಸಾದ ವ್ಯಕ್ತಿಯೊಬ್ಬರು ಈಕೆಯನ್ನು ಗಮನಿಸಿ ಕಾರಣವೇನು ಎಂದು ವಿಚಾರಿಸಿ , ನಂತರ ನನ್ನ ಬಳಿ ಒಂದು ರಿಯಲ್ ಸ್ಟೋರಿ ಇರುವ ಪುಸ್ತಕವಿದೆ ಎಂದು ಹೇಳುತ್ತಾರೆ, ಆಗ ವರದಿಗಾರ್ತಿ ಆ ಪುಸ್ತಕವನ್ನು ಓದಲು ಪ್ರಾರಂಭಿಸುತ್ತಾಳೆ, ಅಲ್ಲಿಂದ ಮುಖ್ಯ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ಅಮ್ಮನ ಪ್ರೀತಿಯ ಮಗ ಕರಣ್ (ವಿಘ್ನೇಶ್) ಸದಾ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದು , ತನ್ನ ಗೆಳತಿಗೂ ಸಮಯ ಕೊಡಕ್ಕಾಗದಷ್ಟುರುವ ವ್ಯಕ್ತಿ. ಇನ್ನು ತಂದೆ ತಾಯಿಯ ಮುದ್ದಿನ ಮಗಳು ಇಂಚರ (ಸಂಗೀತಾ ಭಟ್) ಕೂಡ ತನ್ನದೇ ಕೆಲಸ ಮಾಡುತ್ತಾ ಮನೆಯವರು ಹುಡುಕುವ ಹುಡುಗನಿಗಾಗಿ ಕಾಯುತ್ತೇನೆ ಎನ್ನುತ್ತಲೆ ತಂದೆ ತಾಯಿಗೆ ಸುಳ್ಳು ಹೇಳಿ ತನ್ನ ಪ್ರೇಮಿ ಕರಣ್ ಜೊತೆಗೆ ಜಾಲಿ ರೈಡ್ ಹೊರಡುತ್ತಾಳೆ.

ಕರಣ್ ತನ್ನ ಪ್ರೇಯಸಿ ಇಂಚರಳನ್ನು ಒಂದು ಸುಂದರ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಆ ಜಾಗವನ್ನು ಹುಡುಕಿಕೊಂಡು ಜೀಪನಲ್ಲಿ ಅರಣ್ಯಕ್ಕೆ ಬರುತ್ತಾರೆ. ಆದರೆ ಆ ದಟ್ಟ ಕಾಡಿನಲ್ಲಿ ದಾರಿತಪ್ಪಿ ಹೋಗಬೇಕಾದ ಸ್ಥಳ ಬಿಟ್ಟು ಬೇರೊಂದು ಜಾಗವನ್ನು ತಲುಪಿದಾಗ ಅಲ್ಲೇ ಓಡಾಡಿಕೊಂಡಿದ್ದ ಪುಂಡರ ಗುಂಪೊಂದು ಈ ಪ್ರೇಮಿಗಳಿಗೆ ಎದುರಾಗುತ್ತದೆ, ಡ್ರೋಣ್ ಕ್ಯಾಮೆರಾ ಮೂಲಕ ಕಾಡಿಗೆ ಯಾರೇ ಬಂದರೂ ಅವರನ್ನು ಕಂಡು ಹಿಡಿದು ವಿಚಾರಿಸುವುದು ಅಲ್ಲದೆ ತಾವು ನಡೆಸುತ್ತಿರುವ ಮರಗಳ ಕಳ್ಳಸಾಗಣೆಕೆ ವ್ಯವಹಾರವನ್ನು ಬಯಲಿಗೆಳೆಯಲು ಬರುವ ಅರಣ್ಯಾಕಾರಿಗಳಿಗೆ ಚಿತ್ರಹಿಂಸೆ ನೀಡಿ, ಅವರನ್ನು ನಿರ್ದಾಕ್ಷಿಣ್ಯ ವಾಗಿ ಕೊಂದು ಹಾಕುತ್ತಾರೆ.

ಆ ಗುಂಪಿನಲ್ಲಿರುವ ಅಣ್ಣ ತಮ್ಮ ಇಬ್ಬರೂ ಆ ಕಾಡಲ್ಲೇ ವಾಸಿಸುವ ಶ್ರೀಮಂತನ ಮಕ್ಕಳು, ಅವರಲ್ಲಿ ಚಿಕ್ಕವನು ಇಂಚರಳ ದೇಹಸಿರಿಗೆ ಮನಸೋತಿರುತ್ತಾನೆ. ಒಮ್ಮೆ ಆ ಗುಂಪು ಅಧಿಕಾರಿ ಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಹಿಂಸಿಸುತ್ತಿರುವಾಗ, ತನ್ನ ಮೊಬೈಲ್‌ನಲ್ಲಿ ಪ್ರಕೃತಿ ಸೊಬಗನ್ನು ಸೆರೆಹಿಡಿಯಲೆಂದು ಅಲ್ಲಿಗೆ ಬಂದ ಇಂಚರ ಇವರ ಕೃತ್ಯವನ್ನು ಕಂಡ ಆಕೆ ಅಲ್ಲಿಂದ ಓಡಿಹೋಗಲು ಪ್ರಯತ್ನಿಸುತ್ತಾಳೆ, ಅದೇ ಸಮಯಕ್ಕೆ ಅಲ್ಲಿಗೆ ಬರುವ ಕರಣ್ ಆ ಪುಂಡರನ್ನು ಸೆದೆ ಬಡಿಯುತ್ತಾನೆ.

ಹೀಗೇ ಒಮ್ಮೆ ನಡೆಯುತ್ತಿದ್ದ ಹೊಡೆದಾಟದ ಸಂದರ್ಭದಲ್ಲಿ ಶ್ರೀಮಂತನ ಚಿಕ್ಕ ಮಗ ಇಂಚರಳನ್ನು ಬಲಾತ್ಕರಿಸಲು ಪ್ರಯತ್ನಿಸುತ್ತಾನೆ. ಆಗ ಇಂಚರ ಆತನನ್ನು ತಳ್ಳಿದಾಗ ನೆಲದಲ್ಲಿದ್ದ ರಾಡ್‌ಗೆ ಸಿಕ್ಕು ಆತ ಅಲ್ಲೇ ಸತ್ತು ಹೋಗುತ್ತಾನೆ. ತಮ್ಮನನ್ನು ಕಳೆದುಕೊಂಡ ಅಣ್ಣ ಆ ಇಬ್ಬರು ಪ್ರೇಮಿಗಳನ್ನು ಮುಗಿಸಲು ನಿರ್ಧಾರ ಮಾಡುತ್ತಾನೆ. ಅಷ್ಟರಲ್ಲಿ ಅವರು ಕಾಡಿನೊಳಗೆ ತಪ್ಪಿಸಿಕೊಳ್ಳುತ್ತಾರೆ. ಮುಂದೆ ಹಲವು ರೋಚಕ ಘಟನೆಗಳು ಎದುರಾಗುತ್ತಾ ಹೋಗುತ್ತದೆ.
ದುಷ್ಟರ ಕೈಗೆ ಸಿಕ್ತಾರಾ…
ಕಾಡಿನಿಂದ ಹೋಗುತ್ತಾರಾ ಇಲ್ವಾ..
ಮನೆಯವರು ಹುಡುಕುತ್ತಾರಾ.
ದೈವಕಶಕ್ತಿ ಇದೆಯಾ…
ಕ್ಲೈಮಾಕ್ಸ್ ಉತ್ತರ ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಕ್ಲಾಂತ ಚಿತ್ರ ನೋಡಬೇಕು.

ಈ ಚಿತ್ರದ ನಿರ್ದೇಶಕ ವೈಭವ್ ಪ್ರಶಾಂತ್ ಒಂದು ಆಕರ್ಷಕ ಕಥಾವಸ್ತುವಿನ ಜೊತೆಗೆ ಮಕ್ಕಳು ಸುಳ್ಳು ಹೇಳಿ ಹೊರ ಹೋದರೆ ಏನೆಲ್ಲ ಅವಾಂತರಗಳನ್ನು ಎದುರಿಸಬೇಕಾಗುತ್ತದೆ ಎಂಬುವುದನ್ನು ಬಹಳ ಸೂಕ್ಷ್ಮವಾಗಿ ಹೇಳುವುದರ ಜೊತೆಗೆ ದೈವಶಕ್ತಿಯ ಪವಾಡ ಹೇಗೆ ದಾರಿ ತೋರಿಸುತ್ತದೆ ಎಂಬುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇನ್ನಷ್ಟು ಕುತೂಹಲಕಾರಿ ಅಂಶದ ಜೊತೆಗೆ ದೈವದ ಶಕ್ತಿ ಇದ್ದಿದ್ದರೆ ಹೆಚ್ಚು ಗಮನ ಸೆಳೆಯುತ್ತಿತ್ತು.ಆದರೆ ಈ ಪ್ರಯತ್ನ ಉತ್ತಮವಾಗಿದೆ. ಈ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯ ಮೆಚ್ಚುವಂಥದ್ದು , ಚಿತ್ರ ಛಾಯಾಗ್ರಹಣ ಉತ್ತಮವಾಗಿದ್ದು , ಸಂಗೀತದ ಕೆಲಸದ ಜೊತೆಗೆ ಹಿನ್ನೆಲೆ ಸಂಗೀತ ಹೆಚ್ಚು ಅಬ್ಬರಿಸಿದೆ.ತಾಂತ್ರಿಕವಾಗಿ ತಂಡದ ಶ್ರಮ ಎದ್ದು ಕಾಣುತ್ತದೆ.

ಈ ಚಿತ್ರದ ನಾಯಕ ವಿಘ್ನೇಶ್ ಪ್ರಥಮ ಚಿತ್ರವಾದರೂ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಹೆಚ್ಚಾಗಿ ಆಕ್ಷನ್ ದೃಶ್ಯಗಳಲ್ಲಿ ವಿಜೃಂಭಿಸಿದ್ದು, ಮತ್ತೊಬ್ಬ ಯುವ ಪ್ರತಿಭೆ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಬಹಳ ಗ್ಯಾಪ್ ನಂತರ ಬಂದ ನಟಿ ಸಂಗೀತಾ ಭಟ್ ಕೂಡ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ.

ಇಡೀ ಚಿತ್ರವನ್ನ ಆವರಿಸಿಕೊಂಡಿದ್ದು , ಆಕ್ಷನ್ ದೃಶ್ಯಕ್ಕೂ ಸೈ ಎನ್ನುವಂತೆ ಅಭಿನಯಿಸಿದ್ದಾರೆ. ಇನ್ನು ವಿಲನ್ ಪಾತ್ರವನ್ನು ನಿರ್ವಹಿಸಿರುವ ಯುವ ಕೂಡ ಗಮನ ಸೆಳೆಯುತ್ತಾರೆ. ಇನ್ನು ಉಳಿದಂತೆ ವೀಣಾ ಸುಂದರ್ , ಶೋಭ್ ರಾಜ್, ಸಂಗೀತಾ, ಪ್ರವೀಣ್ ಜೈನ್ , ಸ್ವಪ್ನ ಶೆಟ್ಟಿಗಾರ್ ಎಲ್ಲರೂ ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ ಕೊರಗಜ್ಜ ದೇವರ ಪವಾಡವನ್ನು ಈ ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದ್ದು ಆಕ್ಷನ್ , ಸಸ್ಪೆನ್ಸ್ ಪ್ರಿಯರಿಗೆ ಬಹಳ ಬೇಗ ಇಷ್ಟವಾಗುವ ಚಿತ್ರ ಇದಾಗಿದೆ , ಎಲ್ಲರೂ ಒಮ್ಮೆ ನೋಡುವಂತಿದೆ

error: Content is protected !!