Cini NewsSandalwoodTV Serial

*ಸಿಂಪಲ್ ಸುನಿ “ಗತವೈಭವ” ಕ್ಕೆ ಕಿಚ್ಚ ಸುದೀಪ್ ಬೆಂಬಲ..ಇದೇ 14ಕ್ಕೆ ಚಿತ್ರ ರಿಲೀಸ್*

ನಿರ್ದೇಶಕ ಸಿಂಪಲ್ ಸುನಿ ಅವರ ಸಿನಿಕರಿಯರ್ ನ ವಿಭಿನ್ನ ಚಿತ್ರ ಎನಿಸಿಕೊಂಡಿರುವ ಗತವೈಭವ ತನ್ನ ಕಂಟೆಂಟ್ ಮೂಲಕ ಈಗಾಗಲೇ ನಿರೀಕ್ಷೆ ಹೆಚ್ಚು ಮಾಡಿದೆ. ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹುಟ್ಟುಹಾಕಿರುವ ಗತವೈಭವಕ್ಕೆ ಕಿಚ್ಚ ಸುದೀಪ್ ಬೆಂಬಲ ಸಿಕ್ಕಿದೆ. ನಿನ್ನೆ ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ಗತವೈಭವ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.


ಕಿಚ್ಚ ಸುದೀಪ್ ಮಾತನಾಡಿ, “ಕನ್ನಡ ಚಿತ್ರರಂಗದ ಬೆಸ್ಟ್ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ನನಗಿನ್ನೂ ಸಿಕ್ಕಿಲ್ಲ. ಒಂದಲ್ಲಾ ಒಂದು ದಿನ ಅವರ ಜೊತ ಕೆಲಸ ಮಾಡಬಹುದು. ಪ್ರತಿಯೊಂದು ಫ್ರೇಮ್ ಅನ್ನು ಕೆತ್ತಿ ಕೆತ್ತಿ ತೆಗೆಯುತ್ತೀರಿ ತಾವು. ನಾನು ‘ಗತವೈಭವ’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಚಿತ್ರದ ಹೀರೋ ದುಷ್ಯಂತ್, ನಾಯಕಿ ಆಶಿಕಾ ರಂಗನಾಥ್ ಎಲ್ಲರೂ ಚೆನ್ನಾಗಿ ಕಾಣುತ್ತಿದ್ದೀರಿ. ”ಈ ಚಿತ್ರದ ಹೀರೋ ದುಷ್ಯಂತ್ ಅವರಿಗೆ ನಾನು ಟಿಪ್ಸ್ ಕೊಡುವುದು ಏನಿಲ್ಲ. ಅವರು ತುಂಬಾ ಚೆನ್ನಾಗಿ ಮಾತನಾಡಿದ್ದು ನೋಡಿದೆ. ಅಸಲಿಗೆ, ನಾನು ಅವರಿಂದ ಕಲಿಯಬೇಕು. ಇವರು ಹೇಗೆ 10 ನಿಮಿಷಗಳ ಕಾಲ ಅಷ್ಟೊಂದು ಅಚ್ಚುಕಟ್ಟಾಗಿ ಎಲ್ಲರನ್ನ ತಮ್ಮ ಮಾತಿನಿಂದ ಹಿಡಿದಿಟ್ಟುಕೊಂಡರು ಅಂತ ಯೋಚಿಸ್ತಿದೆ. ಆಮೇಲೆ ಗೊತ್ತಾಯ್ತು ದುಷ್ಯಂತ್ ಅವರು ರಾಜಕಾರಣಿ ಮಗ ಅಂತ” ಎಂದು ಹೇಳಿದರು.


ಸಿಂಪಲ್ ಸುನಿ ಮಾತನಾಡಿ, ಸುದೀಪ್ ಸರ್ ಟ್ರೇಲರ್ ಲಾಂಚ್ ಗೆ ಬಂದಿರುವುದು ಖುಷಿ ಕೊಟ್ಟಿದೆ. ಇದು ಬೇರೆ ರೀತಿ ಸಿನಿಮಾ. ಈ ಚಿತ್ರ ರಿಲೀಸ್ ಆದ್ಮೇಲೆ ಮೌತ್ ಪಬ್ಲಿಸಿಟಿ ತೆಗೆದುಕೊಂಡ ಚೆನ್ನಾಗಿ ಹೋಗುತ್ತದೆ ಎಂಬ ನಂಬಿಕೆ ಇದೆ. ಚಿತ್ರಕ್ಕೆ ಹಾಕಿರುವ ಎಫರ್ಟ್ ದೊಡ್ಡದಿದೆ. ಆದರೆ ಸ್ಟಾರ್ ವ್ಯಾಲ್ಯೂ ಕಮ್ಮಿ ಇತ್ತು. ಅದನ್ನು ನಮ್ಮ ಚಿತ್ರರಂಗದ ಗಣ್ಯರಾದ ಶಿವಣ್ಣ, ಸುದೀಪ್ ಸರ್ ಬೆಂಬಲ ಸಿಕ್ಕಿರುವುದು ಗತವೈಭವ ಸಿನಿಮಾಗೆ ಒಳ್ಳೆ ಓಪನಿಂಗ್ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.


ನಟಿ ಆಶಿಕಾ ರಂಗನಾಥ್ ಮಾತನಾಡಿ, ಈ ಕಾರ್ಯಕ್ರಮ ಆಗಲು ಕಾರಣ ನಮ್ಮ ಪ್ರೀತಿಯ ಸುದೀಪ್ ಸರ್. ಅವರು ಯಾವಾಗಲೂ ಹೊಸಬರ ಕಂಟೆಂಟ್ ಗೆ ಪ್ರೀತಿಯಿಂದ ಸಪೋರ್ಟ್ ಮಾಡುತ್ತಾರೆ. ಅದು ಅವರಲ್ಲಿ ಇರುವ ಸಿನಿಮಾ ಮೇಲಿನ ಪ್ರೀತಿ ಹಾಗೂ ಫ್ಯಾಷನ್ ಕಾಣಿಸುತ್ತದೆ. ಗತವೈಭವ ಚಿತ್ರದ ಟ್ರೇಲರ್ ಲಾಂಚ್ ಗೆ ಸುದೀಪ್ ಸರ್ ಮೆರುಗು ನೀಡಿದ್ದಾರೆ. ಗತವೈಭವ ಸಾಕಷ್ಟು ರೀತಿಯಲ್ಲಿ ಸ್ಪೆಷಲ್ ಚಿತ್ರ. ಅತಿ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ ಸಿನಿಮಾ. ಗತವೈಭವ ಸಿನಿಮಾವನ್ನು ನಾಲ್ಕು ಸಿನಿಮಾ ನೋಡುವ ಅನುಭವ ಆಗುತ್ತದೆ. ನಾಲ್ಕು ಕಥೆ, ನಾಲ್ಕು ಪಾತ್ರಗಳು. ಇದು ಹೊಸ ರೀತಿ ಸ್ಕ್ರೀಪ್ಟ್. ನವೆಂಬರ್ 14 ಕ್ಕೆ ಚಿತ್ರ ತೆರೆಗೆ ಬರಲಿದೆ. ನಿಮ್ಮ ಸಪೋರ್ಟ್ ಇರಲಿ ಎಂದರು.


ನಟ ದುಷ್ಯಂತ್ ಮಾತನಾಡಿ, ನಮ್ಮ ಸಿನಿಮಾ ಗತವೈಭವಗೆ ಕಿಚ್ಚ ಸರ್ ಬೆನ್ನೆಲುಬಾಗಿ ನಿಂತಿರುವುದು ಖುಷಿ ಕೊಟ್ಟಿದೆ. ಎಂಟು ವರ್ಷಗಳ ಪ್ರಯತ್ನದ ಬಳಿಕ ನಾನು ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಇದೇ ತಿಂಗಳ 14ರಂದು ನಮ್ಮ ಚಿತ್ರ ತೆರೆಗೆ ಬರ್ತಿದೆ. ತ್ರಿಭಾಷಾ ನಟಿ ಆಶಿಕಾ ಅವರ ಜೊತೆ ನಟಿಸಿರುವುದು ಸಂತಸ. ಹತ್ತು ಯಶಸ್ವಿ ಚಿತ್ರಗಳ ನಿರ್ದೇಶಕ ಸಿಂಪಲ್ ಸುನಿ ಅವರ ಕನಸಿನ ಕೂಸು ಮಕ್ಕಳ ದಿನದಂದು ನಿಮ್ಮ ಮುಂದೆ ಬರ್ತಿದೆ. ನಿಮ್ಮ ಬೆಂಬಲ ಇರಲಿ ಎಂದರು.


ನವೆಂಬರ್ 14ರಂದು ತೆರೆಗೆ ಬರಲಿರುವ ‘ಗತವೈಭವ’ ಚಿತ್ರದಲ್ಲಿ ಹೊಸ ಹೀರೋ ದುಷ್ಯಂತ್ ಜೊತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ವಿಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಮತ್ತು ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ಗತವೈಭವ, ಸಂಪೂರ್ಣ ಪ್ರೇಮಕಥೆ. ಪ್ಯಾಂಟಸಿ ಹಾಗು ಸಾನಾತನ ಧರ್ಮದ ಕಥೆಯ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದೆ.

error: Content is protected !!