“ಸೆಪ್ಟೆಂಬರ್ 10” ಲಿರಿಕಲ್ ಹಾಡಿಗೆ ಕರವೇ ನಾರಾಯಣಗೌಡ್ರು ಚಾಲನೆ
ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಂದೇಶ ಹೊತ್ತು ಓಂ ಸಾಯಿಪ್ರಕಾಶ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತಯಾರಾದ ಚಿತ್ರ ಸೆಪ್ಟೆಂಬರ್- 10. ಈ ಚಿತ್ರಕ್ಕಾಗಿ ಡಾ.ವಿ. ನಾಗೇಂದ್ರ ಪ್ರಸಾದ್ ಅವರು ಬರೆದು ಸಂಗೀತ ಸಂಯೋಜಿಸಿರುವ ಮೋಟೊವೇಶನಲ್ ಹಾಡಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಚಾಲನೆ ನೀಡಿದರು. ನಟಿ ಪ್ರಿಯಾಹಾಸನ್, ಬಚ್ಚನ್, ಅತಿಥಿಯಾಗಿ ಪಾಲ್ಗೊಂಡಿದ್ದರು. ಅದಕ್ಕೂ ಮೊದಲು ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ‘ಸೆಪ್ಟೆಂಬರ್ 10’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಲ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬುದು ಚಿತ್ರದ ಸಂದೇಶ. ಸಾಯಿ ಪ್ರಕಾಶ್ ಅವರ ನಿರ್ದೇಶನದ 105ನೇ ಚಿತ್ರವಿದು. ವೇದಿಕೆಯಲ್ಲಿ ಕರವೇ ನಾರಾಯಣಗೌಡ್ರು ಮಾತನಾಡುತ್ತ ಸಾಯಿಪ್ರಕಾಶ್ ಅವರು ನನ್ನಬಳಿ ಬಂದಾಗ ಎಲ್ಲ ವಿಚಾರ ಹಂಚಿಕೊಂಡರು.ಅವರು 105 ಸಿನಿಮಾ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಂಪತ್ತು ಉಳಿಯುವುದಿಲ್ಲ. ನಿಮ್ಮಜತೆ ನಾನಿರ್ತೀನಿ ನಮ್ಮ ಕಾರ್ಯಕರ್ತರು ಜತೆಗಿರ್ತಾರೆ.
ಸಿನಿಮಾ ರಿಲೀಸ್ ಗೆ ಸಹಾಯ ಮಾಡ್ತೀನಿ ಎಂದೆ. ಇಂಥ ಸಂದೇಶ ಎಲ್ಲ ಕ್ಷೇತ್ರಗಳಲ್ಲೂ ಬೇಕಾಗಿದೆ. ನೂರಾರು ರೈತರು ಸತ್ತಾಗ ಯಾರೂ ಸಹ ನಾನು ನೋಡ್ಕೋತೀನಿ ಅಂತ ಮುಂದೆ ಬರಲಿಲ್ಲ. ನನಗೆ ಬಂದಿದ್ದ ಬೆಳ್ಳಿಯ ಉಡುಗೊರೆಗಳನ್ನು ಹರಾಜು ಹಾಕಿ ಬಂದ 90 ಲಕ್ಷ ಹಣದಲ್ಲಿ 90 ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಟ್ಟಿದ್ದೀನಿ. ವಿದ್ಯಾರ್ಥಿಗಳಿಗೆ ಯಾರೂ ಬಲವಂತ ಮಾಡಬಾರದು.
ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಾನು 9ನೇ ಕ್ಲಾಸ್ ಗೆ ಹೋಗಲಿಲ್ಲ, ಆದರೂ ಒಳ್ಳೆ ಸ್ಥಾನದಲ್ಲಿದ್ದೇನೆ. ಸಾಯೋದೇನೂ ಸುಲಭವಲ್ಲ, ಅದೇ ಧೈರ್ಯವನ್ನು ಓದೋಕೆ ಮಾಡಿ ಅಂಯ ಸಂದೇಶ ಹೇಳಿದ್ದಾರೆ. ಓ ಮೆಸೇಜ್ ಎಲ್ಲರಿಗೂ ತಲುಪಬೇಕು. 31 ಜಿಲ್ಲೆಯ ಕರವೇ ಕಾರ್ಯಕರ್ತರು ಈ ಸಿನಿಮಾ ನೋಡ್ತಾರೆ. ಅವರ ಮಾತೃಭಾಷೆ ಬೇರೆಯಾದರೂ ಕನ್ನಡದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ.
ಇದುವರೆಗೆ 105 ಸಿನಿಮಾ ಯಾರೂ ಮಾಡಿಲ್ಲ. ರಕ್ಷಣಾ ವೇದಿಕೆ ಎಂದರೆ ಬರೀ ಬೀದೀಲಿ ನಿಂತು ಹೋರಾಡುವುದಲ್ಲ. ಕನ್ನಡ ಭಾಷೆ ಉಳಿಸುವ ಎಲ್ಲ ಪ್ರಕಾರಗಳಲ್ಲೂ ಹೋರಾಟ ನಡೆಸಬೇಕು ಎನ್ನುತ್ತಾ, ಓಂ ಸಾಯಿ ಪ್ರಕಾಶ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ವಿಚಾರವಾಗಿಯೂ ಕೂಡ ನಾವು ಧ್ವನಿ ಎತ್ತುತ್ತೇವೆ. ಒಂದೊಳ್ಳೆ ಚಿತ್ರ ಬರುತ್ತಿದೆ ಎಲ್ಲರೂ ನೋಡಿ , ನಾನು ಕೂಡ ಅವರ ಜೊತೆ ಒಂದು ಚಿತ್ರ ನಿರ್ಮಾಣ ಮಾಡಲು ಸಿದ್ಧನಿದ್ದೇನೆ ಎಂದರು.
ನಟಿ ಪ್ರಿಯಾಹಾಸನ್ ಮಾತನಾಡುತ್ತ ಈ ಸಿನಿಮಾದಲ್ಲಿ ನಿರ್ದೇಶಕರು ಒಳ್ಳೆ ವಿಷಯಗಳನ್ನು ಇಟ್ಟುಕೊಂಡು, 7 ಕುಟುಂಬಗಳ ಕಥೆ ಹೇಳಿದ್ದಾರೆ. ನಮ್ಮ ಮನೆಯ ಸುತ್ತ ಮುತ್ತ ನಡೆವ ಕಥೆಯೇ ಇದರಲ್ಲಿದೆ. ವ್ಯವಸ್ಥೆ ಸರಿ ಹೋದರೆ ಮಾತ್ರವೇ ನಿರ್ಮಾಪಕರು ಉಳಿಯಲು ಸಾಧ್ಯ. ಇವತ್ತು ಸಿನಿಮಾ ಮಾಡಲು 2 ಗುಂಡಿಗೆ ಬೇಕು ಎಂದರು.
ಸಾಯಿಪ್ರಕಾಶ್ ಮಾತನಾಡಿ ಇವತ್ತು ಸಿನಿಮಾ ರಿಲೀಸ್ ಮಾಡೋದು ತುಂಬಾ ಕಷ್ಟ. ನಾರಾಯಣಗೌಡ್ರು ನಮ್ಮಜತೆ ನಿಂತು ಧೈರ್ಯ ತುಂಬಿದ್ದಾರೆ. ಸಿನಿಮಾ ರಿಲೀಸಿಗೆ ಏನು ಸಿದ್ದತೆ ಬೇಕೋ ಅದನ್ನು ನಾನು ಮಾಡಿಕೊಡುತ್ತೇನೆ ಎಂದಿದ್ದಾರೆ. ಅಲ್ಲದೆ ಒಂದು ಸಿನಿಮಾ ಮಾಡೋಣ ಅಂತ ಕಥೆಯನ್ನೂ ಕೇಳಿದ್ದಾರೆ 105ರಲ್ಲಿ 96 ಕನ್ನಡ ಸಿನಿಮಾ ಮಾಡಿದ್ದೇನೆ. 70% ಸಕ್ಸಸ್ ಕೊಟ್ಟಿದ್ದೇನೆ. ಕಷ್ಟದ ಸಮಯದಲ್ಲಿ ಯಾರೂ ಬಂದಿಲ್ಲ. ನನಗೂ ಗೊತ್ತು. ಇದು ನನಗೆ ಹತ್ತಿರವಾದ ಸಿನಿಮಾ ಅಂತ. ಸಿನಿಮಾನೋಡಿ ಮನೆಗೆ ಹೋದವರೂ ಯೋಚಿಸುತ್ತಾರೆ ಎಂದು ಹೇಳಿದರು.
ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಾಣದ ಈ ಚಿತ್ರಕ್ಕೆ ಡಾ.ಎಸ್. ರಾಜು ಅವರೂ ಸಹ ಬಿಡುಗಡೆಗೆ ಸಹಕರಿಸುತ್ತಿದ್ದಾರೆ. ಹಿರಿಯನಟ ಶಶಿಕುಮಾರ್, ರಮೇಶ್ ಭಟ್, ಶ್ರೀರಕ್ಷಾ, ಶಿವಕುಮಾರ್ , ಬಚ್ಚನ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೆಜಿ.ಕೃಷ್ಣ ಚಿತ್ರದ ಛಾಯಾಗ್ರಾಹಕರು. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ.