Cini NewsMovie Review

ಊರು, ತೇರು, ನೀರಿನ ಸುತ್ತ ಕರಟಕ ದಮನಕ(ಚಿತ್ರ ವಿಮರ್ಶೆ -ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಕರಟಕ ದಮನಕ
ನಿರ್ದೇಶಕ : ಯೋಗರಾಜ್ ಭಟ್
ನಿರ್ಮಾಪಕ : ರಾಕ್ ಲೈನ್ ವೆಂಕಟೇಶ್
ಸಂಗೀತ : ವಿ. ಹರಿಕೃಷ್ಣ ಛಾಯಾಗ್ರಹಕ : ಸಂತೋಷ ರೈ ಪಥಜೆ
ತಾರಾಗಣ : ಶಿವರಾಜ್ ಕುಮಾರ್ , ಪ್ರಭುದೇವ , ಪ್ರಿಯ ಆನಂದ್ , ನಿಶ್ವಿಕಾ ನಾಯ್ಡು , ರವಿಶಂಕರ್ , ತನಿಕೆಲ್ಲ ಭರಣಿ , ರಾಕ್ ಲೈನ್ ವೆಂಕಟೇಶ್, ರಂಗಾಯಣ ರಘು, ದೊಡ್ಡಣ್ಣ , ಮುಖ್ಯಮಂತ್ರಿ ಚಂದ್ರು ಹಾಗೂ ಮುಂತಾದವರು…

ಒಂದು ಊರು ಪ್ರತಿಯೊಬ್ಬರಿಗೂ ತಾಯಿ ಇದ್ದ ಹಾಗೆ. ಅಮ್ಮನ ಮಡಿಲಲ್ಲಿ ಮಕ್ಕಳು ಸುಭಿಕ್ಷವಾಗಿ ಬೆಳೆಯುವುದು ಬಹಳ ಮುಖ್ಯ. ಆದರೆ ಊರಿನಲ್ಲಿ ಮಳೆ, ಬೆಳೆ ಇಲ್ಲದೆ , ಹಬ್ಬ , ಜಾತ್ರೆಗಳು ಮಾಡದೆ ಬದುಕುವುದು ಕಷ್ಟ. ಇಂತಹದ್ದೇ ಜಲಕ್ಷಾಮ ವಿಚಾರದೊಳಗೆ ಸಂಬಂಧ , ಸ್ನೇಹ , ಪ್ರೀತಿ , ಸುಳ್ಳು , ಮೋಸ , ರಾಜಕೀಯದ ತಂತ್ರ, ಪುಡಾರಿಗಳ ಕಾಟ, ಕಳ್ಳ ಪೊಲೀಸ್ ಆಟದೊಂದಿಗೆ ಬೇರು, ಊರು, ತೇರು, ನೀರು ಎಷ್ಟು ಮುಖ್ಯ ಎಂಬುವುದರ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾಗಿ ಈ ವಾರ ಹೊರ ಬಂದಿರುವುದೇ” ಕರಟಕ ದಮನಕ”.

ಜನರನ್ನ ನಂಬಿಸಿ , ಯಾಮಾರಿಸುವ ಚಾಣಾಕ್ಷ ನರಿ ಬುದ್ಧಿಗಳಿರುವ ವಿರೂಪಾಕ್ಷ (ಶಿವರಾಜಕುಮಾರ್) ಹಾಗೂ ಬಾಲರಾಜು (ಪ್ರಭುದೇವ್). ಗೃಹ ಮಂತ್ರಿಗಳ ಪ್ರತಿಮೆಯ ವಿಚಾರವಾಗಿ ಮೋಸ ಮಾಡಿ ಜೈಲು ಸೇರುವ ಇವರ ಮೇಲೆ ಹಲವಾರು ಕೇಸುಗಳು, ಆದರೆ ಯಾವುದಕ್ಕೂ ತಲೆಕೆಡಿಸಿ ಕೊಳ್ಳದ ಇವರಿಬ್ಬರೂ ಒಮ್ಮೆ ಜೈಲಿನ ಕೈದಿ ಒಬ್ಬನನ್ನ ಸಾವಿನಿಂದ ಪಾರು ಮಾಡುತ್ತಾರೆ. ಇದು ಜೈಲ್ ಅಧಿಕಾರಿ (ರಾಕ್ ಲೈನ್ ವೆಂಕಟೇಶ್)ಗೂ ಸಮಾಧಾನವಾಗುತ್ತದೆ. ಮುಂದೆ ಜೈಲ್ ಅಧಿಕಾರಿ ಒಂದು ವಿಚಾರವಾಗಿ ಇಬ್ಬರು ಕಳ್ಳರಿಗೆ ಕೆಲಸ ನೀಡುತ್ತಾನೆ.

ನಂದಿ ಕೋಳೂರು ಎಂಬ ಗ್ರಾಮದ ಊರ ಮುಖ್ಯಸ್ಥ ರಾಮಣ್ಣ (ತನಿಕೆಲ್ಲ ಭರಣಿ) ಮಳೆ , ಬೆಳೆ ಇಲ್ಲದೆ ಕುಡಿಯುವ ನೀರಿಗಾಗಿಯೂ ಜನರು ಪರದಾಡುವ ಸತಿ ನೋಡಿ ಮರುಗುತ್ತಾನೆ. ಒಮ್ಮೆ ಕುರುಡುಸ್ವಾಮಿ ಹಿರಿಯ ಜೀವ ಅಜ್ಜಯ್ಯ ( ಯೋಗರಾಜ ಭಟ್) ತನ್ನ ದಿವ್ಯ ದೃಷ್ಟಿಯ ಮೂಲಕ ಊರಿನಲ್ಲಿ ಜಾತ್ರೆ ನಡೆಯುತ್ತೆ ಎಂಬ ಮಾತು ನೆಮ್ಮದಿ ಸಿಕಂತಾದರೂ , ಆ ಕ್ಷೇತ್ರದ ಮುಖಂಡನ ಶಿಷ್ಯ ಜಗ್ಗ (ರವಿಶಂಕರ್) ಟ್ಯಾಂಕರ್ ನಲ್ಲಿ ನೀರು ತುಂಬಿಕೊಂಡು ಬಂದರೂ ಜನರಿಗೆ ಕೊಡದೆ ಕಾಟ ಕೊಡುತ್ತಿರುತ್ತಾನೆ.

ಇದರ ನಡುವೆ ಆ ಊರಿಗೆ ಬರುವ ವಿರೂಪಾಕ್ಷ ಹಾಗೂ ಬಾಲರಾಜು ಊರ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಹೋಗುತ್ತಾರೆ. ಜಗ್ಗನ ಹಿಂಸೆಗೆ ಬೇಸತ್ತ ಕುಸುಮಿ (ಪ್ರಿಯಾ ಆನಂದ್) ಹಾಗೂ ಸಾರಾಯಿ ಮಾರುವ ಕೆಂಪಿ (ನಿಷ್ವಿಕಾ ನಾಯ್ಡು) ಊರಿಗೆ ಬಂದ ಇವರಿಬ್ಬರ ಸಹಾಯ , ಪ್ರೀತಿ ನೋಡಿ ಇಷ್ಟ ಪಡುತ್ತಾರೆ.

ಎರಡು ಜೋಡಿಗಳು ಒಬ್ಬರನ್ನೊಬ್ಬರು ಇಷ್ಟಪಟ್ಟುರು, ದಿಕ್ಕು ದೆಸೆ ಇಲ್ಲದವರಿಗೆ ಹೆಣ್ಣು ಮಕ್ಕಳನ್ನು ಕೊಡಲು ಒಪ್ಪದಿದ್ದಾಗ , ಊರ ಮುಖಂಡ ಅವರನ್ನು ತನ್ನ ಮಕ್ಕಳೆಂದು ದತ್ತು ಪಡೆಯುತ್ತಾನೆ. ಆದರೆ ಅದಕ್ಕೊಂದು ಶರತ್ತು , ಜಾತ್ರೆಯ ನಡೆದರೆ ಮಕ್ಕಳನ್ನು ಮದುವೆ ಮಾಡಿಕೊಡುತ್ತೇನೆ ಎಂಬ ಮಾತು. ಅದಕ್ಕೆ ಒಪ್ಪುವ ಈ ಕಿಲಾಡಿಗಳು ಊರ ಜಾತ್ರೆ ನಡೆಸಲು ಮಾಡುವ ಮಾಸ್ಟರ್ ಪ್ಲಾನ್ ಅದರಿಂದ ಆಗುವ ಗೊಂದಲ , ಎಡವಟ್ಟುಗಳನ್ನು ಮಧ್ಯೆ ಸಾಗಿ ರೋಚಕ ಕ್ಲೈಮ್ಯಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ.

ಏನೆಲ್ಲ ಪ್ಲಾನ್ ಇರಬಹುದು…
ಜೈಲ್ ಅಧಿಕಾರಿಯ ಕೊಡುವ ಕೆಲಸ ಏನು…
ಇವರಿಬ್ಬರ ಮದುವೆ ಆಗುತ್ತಾ…
ಜಾತ್ರೆ ನಡೆಯುತ್ತಾ , ನೀರು ಸಿಗುತ್ತಾ…
ಈ ಎಲ್ಲಾ ವಿಚಾರಕ್ಕಾಗಿ ಒಮ್ಮೆ “ಕರಟಕ ದಮನಕ” ನೋಡಬೇಕು.

ನಂಬಿಕೆಯೇ ಜೀವನ ,
ಊರು ಎಷ್ಟು ಮುಖ್ಯ , ಅದನ್ನು ಬಿಟ್ಟು ವಲಸೆ ಬರುವುದು ಅಗತ್ಯನ , ಅದಕ್ಕೆ ಪರಿಹಾರ ಇದೆಯಾ… ಇಲ್ವಾ… ಅನ್ನೋ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಉತ್ತರ ಕರ್ನಾಟಕದ ಸೊಗಡಿನಲ್ಲಿ ಸಂಬಂಧಗಳ ಮೌಲ್ಯ , ಪ್ರೀತಿಯ ಸೆಳೆತ , ಬದುಕು ಕಟ್ಟಿಕೊಳ್ಳುವ ದಾರಿಯ ಬಗ್ಗೆ ಮನಸ್ಸಿಗೆ ಮುಟ್ಟುವ ರೀತಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಅಜ್ಜಯ್ಯನ ಪಾತ್ರ ಮಾಡಿರುವ ಯೋಗರಾಜ್ ಭಟ್ ಗಮನ ಸೆಳೆದಿದ್ದಾರೆ.

ಸಂಭಾಷಣೆ , ಹಾಸ್ಯ ಚಟಾಕಿಗಳೊಂದಿಗೆ ಚಿತ್ರ ಬಹಳ ದೂರ ಸಾಗಿದಂತಿದೆ. ಚಿತ್ರದ ಓಟ ವೇಗ ಮಾಡಬಹುದಿತ್ತು. ಇನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅದ್ದೂರಿ ತನ ಕಾಣುತ್ತದೆ. ಇನ್ನು ಈ ಚಿತ್ರದ ಹೈಲೈಟ್ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ.

ಇನ್ನು ಇಡೀ ಚಿತ್ರದ ಕೇಂದ್ರ ಬಿಂದುಗಳು ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಸಂಪೂರ್ಣ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಒಬ್ಬರಿಗಿಂತ ಒಬ್ಬರು ಸೈ ಎನ್ನುವ ಹಾಗೆ ಆಕ್ಟಿಂಗ್ , ಡ್ಯಾನ್ಸ್ , ಪಂಚಿಂಗ್ ಡೈಲಾಗ್ , ಆಕ್ಷನ್ ಅದ್ಬುತವಾಗಿ ನಟಿಸಿದ್ದಾರೆ. ಅದಕ್ಕೆ ನಾವು ಸಿದ್ದ ಎನ್ನುವ ಹಾಗೆ ನಾಯಕಿಯರಾದ ಪ್ರಿಯ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಕೂಡ ಭರ್ಜರಿಯಾಗಿ ಅಭಿನಯಿಸಿದ್ದಾರೆ. ಊರ ಮುಖಂಡನ ಪಾತ್ರದಲ್ಲಿ ಬರಹಗಾರ , ತೆಲುಗಿನ ಖ್ಯಾತ ನಟ ತಾನಿಕೆಲ್ಲ ಭರಣಿ ಗಮನ ಸೆಳೆಯುತ್ತಾರೆ.

ಅದೇ ರೀತಿ ವಿಭಿನ್ನ ಪಾತ್ರದಲ್ಲಿ ರವಿಶಂಕರ್ , ಜೈಲು ಅಧಿಕಾರಿಯಾಗಿ ರಾಕ್ ಲೈನ್ ವೆಂಕಟೇಶ್ , ದೊಡ್ಡಣ್ಣ , ರಂಗಾಯಣ ರಘು , ಗೋವಿಂದೇಗೌಡ, ನಯನ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಮನೋರಂಜನೆಯ ಜೊತೆ ಸಂದೇಶವಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು.

error: Content is protected !!