ಈಶ್ವರನ ಹೂವಿನ ತೋಟದಲ್ಲಿ ಕಾಂತಾರದ ಶಕ್ತಿ : ಕಾಂತಾರ ಅಧ್ಯಾಯ 1 ಚಿತ್ರವಿಮರ್ಶೆ (ರೇಟಿಂಗ್ : 4/5)
ಚಿತ್ರ : ಕಾಂತಾರ ಅಧ್ಯಾಯ 1
ನಿರ್ದೇಶಕ : ರಿಷಬ್ ಶೆಟ್ಟಿ
ನಿರ್ಮಾಪಕ : ವಿಜಯ್ ಕಿರಗಂದೂರ್
ಸಂಗೀತ : ಬಿ. ಅಜನೀಶ್ ಲೋಕನಾಥ್
ಛಾಯಾಗ್ರಹಣ : ಅರವಿಂದ್ ಎಸ್. ಕಶ್ಯಪ್
ತಾರಾಗಣ : ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ , ಜಯರಾಮ್, ಪ್ರಮೋದ್ ಶೆಟ್ಟಿ , ರಾಕೇಶ್ ಪೂಜಾರಿ, ಬಾಲ ರಾಜವಾಡಿ ಹಾಗೂ ಮುಂತಾದವರು…
ಬನವಾಸಿಯ ಕದಂಬರ ಕಾಲಘಟ್ಟದ ಕಥಾನಕದಲ್ಲಿ ತುಳುನಾಡಿನ ದೈವದ ನೆರಳಿನಲ್ಲಿ ಕಾಡುವಾಸಿ ಜನರ ಬದುಕು, ಬವಣೆ , ಭಂಗರ ಸಾಮ್ರಾಜ್ಯದ ಆಳ್ವಿಕೆ , ಕಡಬ ದಿಕ್ಕಿನವರ ಕುತಂತ್ರ , ಪಂಜುರ್ಲಿ ದೈವದ ಶಕ್ತಿ , ಬ್ರಹ್ಮ ರಾಕ್ಷಸನ ನಿಗೂಢತೆಯ ಸುಳಿಯಲ್ಲಿ ಸಾಮಾನ್ಯರು ಹಾಗೂ ದುಷ್ಟರ ಹೊಡೆದಾಟಕ್ಕೆ ಕೇಂದ್ರ ಬಿಂದುವಾದ ಈಶ್ವರನ ಹೂದೋಟದ ಸುತ್ತ ಸಾಗುವ ಪುರಾಣ, ಸಂಸ್ಕೃತಿ ಮತ್ತು ನಂಬಿಕೆಯ ಬದುಕಿನ ದೃಶ್ಯ ವೈಭವದ ಬೆಳಕನ್ನ ತೋರುವವಂತಹ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕಾಂತಾರ ಅಧ್ಯಾಯ 1”.
ಅದ್ದೂರಿ ವೆಚ್ಚದ ಈ ಚಿತ್ರವು ಹೆಚ್ಚು ಗಮನ ಸೆಳೆಯುವುದು ದ್ವಿತೀಯ ಭಾಗ.
ದಟ್ಟ ಅರಣ್ಯದ ಕಾಂತಾರದ ಪ್ರದೇಶದಲ್ಲಿ ವಾಸ ಮಾಡುವ ಕಾಡು ಜನರಿಗೆ ಸಿಗುವ ಕಾರ್ಣಿಕ ಕಲ್ಲು , ಶಿವನ ಪ್ರತಿರೂಪವಾಗಿ ಪೂಜಿಸುವ ಈ ಜನರ ಪಾಲಿಗೆ ಸಾಕ್ಷಾತ್ ಈಶ್ವರನ ಅನುಗ್ರಹ ಸಿಕ್ಕಂತಾಗುತ್ತದೆ. ಇಡೀ ಪ್ರಾಂತ್ಯ ಸಮೃದ್ಧಿ , ನೆಮ್ಮದಿಯ ಬದುಕಿನ ತಾಣವಾಗುತ್ತದೆ. ಇನ್ನು ಭಂಗರ ಸಾಮ್ರಾಜ್ಯದ ಅರಸ ರಾಜಶೇಖರ ( ಜಯರಾಮ್) ತನ್ನ ಆಳ್ವಿಕೆಯಲ್ಲಿ ಶಿವನ ಗುಡಿಯನ್ನು ನಿರ್ಮಿಸಲು ನಿರ್ಧರಿಸುತ್ತಾನೆ.
ತನ್ನ ಉಸ್ತುವಾರಿಗಳ ಮೂಲಕ ಅಮಾಯಕರನ್ನು ಹಿಡಿದು ಶಿಕ್ಷಿಸಿ , ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಾ ಗಡಿಯ ಸಮುದ್ರದ ಬಳಿ ವಿದೇಶಿಗರು ಹಾಗೂ ಅರಬ್ ದೇಶಗಳಿಗೆ ಜನರನ್ನ ಮಾರುವುದರ ಜೊತೆಗೆ ತಮ್ಮ ಪ್ರಾಂತ್ಯದಲ್ಲಿ ಸಿಗುವ ಸಾಂಬಾರ್ ಪದಾರ್ಥದ ಕಚ್ಚಾವಸ್ತುಗಳ ವ್ಯಾಪಾರ ಮಾಡಿಸುತ್ತಾನೆ.
ಈ ಪದಾರ್ಥ ಹೆಚ್ಚು ಸಿಗುವುದು ಕಾಂತಾರ ಪ್ರದೇಶದ ಈಶ್ವರನ ಹೂವಿನ ತೋಟದಲ್ಲಿ. ರಾಜ ರಾಜಶೇಖರನಿಗೆ ಇಬ್ಬರು ಮಕ್ಕಳು, ತನ್ನ ಪುತ್ರ ಕುಲಶೇಖರ (ಗುಲ್ಶನ್ ದೇವಯ್ಯ) ನಿಗೆ ಭಂಗರ ಸಾಮ್ರಾಜ್ಯದ ಸಿಂಹಾಸನಾದೀಶ್ವರ ಮಾಡುತ್ತಾನೆ. ಮಗಳು ಕನಕವತಿ (ರುಕ್ಮಿಣಿ ವಾಸಂತ್)ಗೆ ವ್ಯಾಪಾರ , ವಹಿವಾಟಿನ ಹಣದ ಉಸ್ತುವಾರಿಕೆಯನ್ನು ವಹಿಸಿರುತ್ತಾನೆ.
ಕಾಡೆ ಜೀವನ ಎಂದು ಉಸಿರಾಗಿಸಿಕೊಂಡಿರುವವರ ಪಾಲಿಗೆ ಮಾಯಕಾರನ ಬೆಂಬಲ. ಜಪಣ್ಣನ ಮಾರ್ಗದಲ್ಲಿ ಬದುಕುವರ ಬೆನ್ನೆಲುಬಾಗಿ ನಿಲ್ಲುವ ಬೆರ್ಮೆ( ರಿಷಬ್ ಶೆಟ್ಟಿ) ತನ್ನದೇ ಗೆಳೆಯರೊಟ್ಟಿಗೆ ಕಾಡುಪ್ರಾಣಿಗಳ ಬೇಟೆ ಮಾಡುತ್ತಾ ತನ್ನ ಜನಾಂಗದೊಂದಿಗೆ ಜೀವನ ಸಾಗಿಸುತ್ತಾನೆ. ಸದಾ ಗೆಳೆಯರೊಟ್ಟಿಗೆ ಅಮಲಿನಲ್ಲಿ ತೇಲುತ್ತಾ ಮೋಜು , ಹೆಣ್ಣು ಎನ್ನುವ ಕುಲಶೇಖರ ಒಮ್ಮೆ ಈಶ್ವರನ ಹೂವಿನ ತೋಟಕ್ಕೆ ಪ್ರವೇಶ ಮಾಡಿ ವಿಚಿತ್ರ ಅನುಭವ ಪಡೆಯುತ್ತಾನೆ. ಒಮ್ಮೆ ಕಾಡುಬಿಟ್ಟು ಗಡಿ ಆಚೆಯ ರಾಜರ ಕೋಟೆಗೆ ನುಗುವ ಬೆರ್ಮೆಗೆ ಆಸರ ಸಾಮ್ರಾಜ್ಯದ ಆಳ್ವಿಕೆ , ಅಲ್ಲಿನ ವ್ಯಾಪಾರ ಹಾಗೂ ಯುವರಾಣಿ ಕನಕವತಿ ಭೇಟಿಯಾಗುವ ಸಂದರ್ಭ ಎದುರಾಗುತ್ತದೆ.
ಎಲ್ಲವನ್ನು ಗಮನಿಸುವ ಬೆರ್ಮೆಗೆ ತಮ್ಮ ಪ್ರಾಂತ್ಯದಲ್ಲಿ ಸಿಗುವ ಪದಾರ್ಥಗಳ ವ್ಯಾಪಾರವನ್ನು ತಾವೇ ಮಾರಿ ಜೀವನ ನಡೆಸಬೇಕೆಂದು ನಿರ್ಧರಿಸುತ್ತಾನೆ. ಅದಕ್ಕೆ ಮಾಡಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾನೆ. ಈಶ್ವರನ ಹೂವಿನ ತೋಟದ ಮೇಲೆ ಅರಸರ ಕಣ್ಣು ಒಂದೆಡೆಯಾದರೆ , ಕಡಬ ದಿಕ್ಕಿನವರ ತಂತ್ರ ಕುತಂತ್ರವು ಮತ್ತೊಂದೆಡೆ. ಇದನ್ನು ಎದುರಿಸಿ ಮುನ್ನಡೆಯುವ ಬೆರ್ಮೆ ಹಾದಿಗೆ ಎದುರಾಗುವ ರಣರೋಚಕ ರಕ್ತದ ಮಡುವಿನ ಘಟನೆಗಳು ಬೇರೆಯದೆ ದೃಷ್ಟಿಕೋನವನ್ನು ತೆರೆದಿಡುತ್ತದೆ. ಈಶ್ವರನ ಹೂವಿನ ತೋಟದ ಮಾಯಕಾರ ಯಾರು…
ಬೆರ್ಮೆಗೆ ಸಿಗುವ ಶಕ್ತಿ…
ರಾಜರ ಅಟ್ಟಹಾಸ… ದುಷ್ಟರ ತಂತ್ರಗಾರಿಕೆ… ಯುವರಾಣಿ ವರ್ತನೆ… ಎಲ್ಲವೂ ನಿಗೂಢವಾಗಿ ಸಾಗುವ ಈ ಅಧ್ಯಾಯದ ಬಗ್ಗೆ ತಿಳಿಯಬೇಕಾದರೆ ಒಮ್ಮೆ ಎಲ್ಲರೂ ಚಿತ್ರವನ್ನು ನೋಡಲೇಬೇಕು.
ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ ನಟ ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲಿ ಅದ್ಭುತವಾದ ಕೆಲಸವನ್ನ ಮಾಡಿದ್ದಾರೆ. ಅದರಲ್ಲೂ ಕ್ಲೈಮಾಕ್ಸ್ , ಚಾಮುಂಡಿ ದೇವಿಯ ರೂಪಕ ಸನ್ನಿವೇಶವನ್ನ ರಿಷಬ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಮೈ ಜುಮ್ ಎನ್ನಿಸುವಂತಹ ದೈವದ ಸನ್ನಿವೇಶಗಳು , ಕಾಲಘಟ್ಟಗಳ ದೃಶ್ಯ ವೈಭವ , ಪುರಾಣ, ಸಂಸ್ಕೃತಿ , ನಂಬಿಕೆಯ ನಡುವೆ ಮನಮುಟ್ಟುವ ಮೂಲ ಸೊಗಡಿನ ಸಂಭಾಷಣೆಯ ಜೊತೆ ಹಾಸ್ಯದ ಲೇಪನ ಗಮನ ಸೆಳೆಯುತ್ತದೆ. ಪೂರಕವಾದ ಸೆಟ್ಗಳು , ವಸ್ತ್ರಲಂಕಾರ , ಸಲಕರಣೆಗಳು ಅಚ್ಚುಕಟ್ಟಾಗಿ ಬಳಕೆಯಾಗಿದೆ. ಇದರ ಹೊರತಾಗಿ ಚಿತ್ರ ಗಮನ ಸೆಳೆಯುವುದು ಎರಡನೇ ಭಾಗದಲ್ಲಿ ಹೆಚ್ಚು , ಬಹುತೇಕ ಹೊಡೆದಾಟ , ಕಿರ್ಚೂವಿಕೆಯಲ್ಲಿ ಸಾಗುವ ಈ ಚಿತ್ರದ ಯುದ್ಧದ ಸಂದರ್ಭ ಬಾಹುಬಲಿ ಚಿತ್ರವನ್ನು ನೆನಪಿಸುವಂತೆ ಮಾಡುತ್ತದೆ.
ಯುವರಾಣಿ ಕನಕವತಿಯಾಗಿ ಅಭಿನಯಿಸಿರುವ ಮುದ್ದುಮುಖದ ಚೆಲುವೆ ರುಕ್ಮಿಣಿ ವಸಂತ್ ನೋಟ , ಗಾಂಭೀರ್ಯ , ಸಮಯಕ್ಕೆ ತಕ್ಕ ಹಾಗೆ ಬದಲಾವಣೆಯ ರೂಪ ಸೊಗಸಾಗಿ ನಿರ್ವಹಿಸಿದ್ದಾರೆ. ರಾಜ ಕುಲಶೇಖರನಾಗಿ ನಟಿಸಿರುವ ಗುಲ್ಶನ್ ದೇವಯ್ಯ ಬಹಳ ನೈಜ್ಯವಾಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಭಂಗರ ಸಾಮ್ರಾಜ್ಯದ ಮಹಾರಾಜ ರಾಜಶೇಖರನಾಗಿ ರಾಜನ ತಂದೆಯಾಗಿ ಜಯರಾಮ್ ಅದ್ಭುತವಾಗಿ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಹಾಸ್ಯ ಸನ್ನಿವೇಶಗಳಿಗೆ ಪೂರಕವಾಗಿ ರಾಕೇಶ್ ಪೂಜಾರಿ , ನವೀನ್ ಡಿ ಪಡಿಲ್ , ಪ್ರಕಾಶ್ ತುಮ್ಮಿ ನಾಡು , ದೀಪಕ್ ರೈ ಪಾಣಾಜೆ ಸೇರಿದಂತೆ ಅಚ್ಚುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.
ಭರ್ಜರಿ ಆಕ್ಷನ್ , ರೋಮಾಂಚನ ದೃಶ್ಯಗಳ ನಡುವೆ ಸೊರಗಿದ ಸಂಗೀತದ ಸುಧೆ
ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರ್ ಒಂದು ಅದ್ದೂರಿ ವೆಚ್ಚದ ದೈವತ್ವದ ಚಿತ್ರವನ್ನು ನಿರ್ಮಿಸಿರುವ ಧೈರ್ಯವನ್ನು ಮೆಚ್ಚಲೇಬೇಕು. ಸಾಕಷ್ಟು ಕುತೂಹಲ,ಕಾತುರ ಮೂಡಿಸಿರುವ ಈ ಚಿತ್ರವು ಪ್ರೇಕ್ಷಕರ ಗಮನ ಸೆಳೆಯುವಂತಿದೆ. ಅದರಲ್ಲೂ ಸೆಕೆಂಡ್ ಹಾಫ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರಿಸಿದ್ದಾರೆ. ಇದು ಕೇವಲ ಮನೋರಂಜನೆ ನೀಡುವುದಲ್ಲ, ಪ್ರೇಕ್ಷಕರ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ. ಈ ಚಿತ್ರದಲ್ಲಿ ರೋಮಾಂಚನಗೊಳಿಸುವ ಕ್ಷಣಗಳು ಸಾಕಷ್ಟಿವೆ.
ಆದರೆ ಅಜನೀಶ್ ಲೋಕನಾಥ್ ಸಂಗೀತದ ಸುಧೆ ಕೊಂಚ ಹಿಂದೆ ಸರಿದಂತಿದೆ. ಇದರ ನಡುವೆ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಅರವಿಂದ್ ಎಸ್.ಕಶ್ಯಪ್ ಛಾಯಾಗ್ರಹಣ, ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ , ಧ್ವನಿ ವಿನ್ಯಾಸ , ವಿಎಫ್ಎಕ್ಸ್ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ ‘ಕಾಂತಾರ ಅಧ್ಯಾಯ 1’ ಚಿತ್ರ ಕಲೆ, ಭಕ್ತಿ ಮತ್ತು ಶಕ್ತಿಯ ಮಹತ್ವವನ್ನು ಒಳಗೊಂಡ ಚಿತ್ರವಾಗಿದ್ದು, ಪ್ರತಿಯೊಬ್ಬರು ನೋಡಬೇಕಾದಂತಹ ಒಂದು ಉತ್ತಮ ಚಿತ್ರ ಇದಾಗಿದೆ.