ಜನವರಿ 2ರಂದು ವಿಷ್ಣುಕಾಂತ ಬಿ.ಜೆ.ನಿರ್ದೇಶನದ “ಜಗನ್ಮಾತೆ ಅಕ್ಕಮಹಾದೇವಿ” ಚಿತ್ರ ರಿಲೀಸ್.
ಹನ್ನೆರಡನೆಯ ಶತಮಾನದ ಶರಣರ ಸಾಲಲ್ಲಿ ಪ್ರಮುಖವಾಗಿ ಕಾಣುವವರಲ್ಲಿ ಒಬ್ಬರಾದ ಶಿವಶರಣೆ ಅಕ್ಕಮಹಾದೇವಿ. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿ , ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಸಿಕೊಂಡು , ಅಧ್ಯಾತ್ಮಿಕ ಸಂವಾದದಿಂದ ಶರಣ ಚಳುವಳಿಯ ಪ್ರಮುಖರ ಪ್ರಶಂಸೆಯನ್ನು ಪಡೆದು , ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಮಹಾಶರಣೆ ಅಕ್ಕಮಹಾದೇವಿ. ಇವರ ಜೀವನ , ಸಾಧನೆ ಕುರಿತಾದ “ಜಗನ್ಮಾತೆ ಅಕ್ಕಮಹಾದೇವಿ” ಸಿನಿಮಾ 2026ರ ಹೊಸ ವರ್ಷದ ಆರಂಭ ಜನವರಿ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಭರತ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ನಟ , ನಿರ್ಮಾಪಕ, ನಿರ್ದೇಶಕ ವಿಷ್ಣುಕಾಂತ ಬಿ.ಜೆ. ನಿರ್ಮಿಸಿರುವ ಭಕ್ತಿ ಪ್ರಧಾನ ಚಿತ್ರ “ಜಗನ್ಮಾತೆ ಅಕ್ಕಮಹಾದೇವಿ”. ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್, ಗಂಗಾ ಕಾವೇರಿ, ಕಲ್ಯಾಣ ಕುವರ, ಸೇರಿದಂತೆ ಹಲವಾರು ಚಿತ್ರಗಳ ಸಾರಥ್ಯ ವಹಿಸಿ ಪ್ರೇಕ್ಷಕರ ಗಮನ ಸೆಳೆದಂತಹ ಬಿ.ಜೆ. ವಿಷ್ಣುಕಾಂತ ಈ ಬಾರಿ ಜಗನ್ಮಾತೆ ಅಕ್ಕಮಹಾದೇವಿ ಚಿತ್ರವನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ. ಈ ಚಿತ್ರವನ್ನು ಬೀದರ್ ಜಿಲ್ಲೆ ಸೇರಿ ಶ್ರೀಶೈಲಂನಲ್ಲಿ ಸುಮಾರು 6 ತಿಂಗಳ ಕಾಲ ನಿರಂತರವಾಗಿ ಚಿತ್ರ ಚಿತ್ರೀಕರಣಗೊಂಡಿದ್ದು, 45 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಮೂಲತಃ ಬೀದರಿನ ಧನ್ನೂರ ಗ್ರಾಮದವರಾದ ನಟ , ನಿರ್ದೇಶಕ , ನಿರ್ಮಾಪಕ ಬಿ.ಜೆ.ವಿಷ್ಣುಕಾಂತ ತಮ್ಮ ಜಿಲ್ಲೆಯ ಸ್ಥಳೀಯ ಪ್ರತಿಭೆಗಳನ್ನ ಗುರುತಿಸಿ ಅವಕಾಶವನ್ನು ನೀಡಿರುವುದು ಮತ್ತೊಂದು ವಿಶೇಷ.

ಈ ಚಿತ್ರದಲ್ಲಿ ಅಕ್ಕಮಹಾದೇವಿ ಪಾತ್ರವನ್ನು ಯುವ ನಟಿ ಬೀದರ್‌ನ ಸ್ಥಳೀಯ ಕಲಾವಿದೆ ಸುಲಕ್ಷಾ ಕೈರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ನಿರ್ದೇಶಕ , ನಿರ್ಮಾಪಕ ಬಿ.ಜೆ. ವಿಷ್ಣುಕಾಂತ ಈ ಚಿತ್ರದಲ್ಲಿ ಕೌಶಿಕ ಮಹಾರಾಜರ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ಹೆಸರಾಂತ ನಟರಾದ ಸುಚೇಂದ್ರ ಪ್ರಸಾದ್ , ತಬಲಾ ನಾಣಿ , ವೈಜಿನಾಥ ಬಿರಾದಾರ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ , ಅಮಿತ್ ಜವಲ್ಕರ್ ಸಂಕಲನ, ಆರ್. ಪಳನಿ ಸಂಗೀತ ನೀಡಿದ್ದು ರಾಜೇಶ್ ಕೃಷ್ಣನ್ , ವಿದುಷಿ ಪಾವನಿ , ಅನಿತಾ ಸಾರಾ ಮಹೇಶ್, ಭೂಮಿಕ , ದರ್ಶನ್ ಹಾಡಿದ್ದು , ಮದನ್ ಹರಿಣಿ ನೃತ್ಯ ನಿರ್ದೇಶನ , ಉಮೇಶ್ ಸಲಗರ ಸಹ ನಿರ್ದೇಶನ ಮಾಡಿದ್ದಾರೆ.

ಈ ಭಕ್ತಿ ಪ್ರಧಾನ ಚಿತ್ರದಲ್ಲಿ ಚಿತ್ರದಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿ ರವರ ವಚನಗಳನ್ನು ಬಳಸಿಕೊಳ್ಳಲಾಗಿದೆಯಂತೆ. “ಜಗನ್ಮಾತೆ ಅಕ್ಕಮಹಾದೇವಿ” ಯ ಭಕ್ತಾದಿಗಳು ರಾಜ್ಯ ಹಾಗೂ ವಿದೇಶಗಳಲ್ಲೂ ಇರುವ ಕಾರಣ ಈ ಚಿತ್ರವನ್ನು ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಹಾಗೆಯೇ ಹೊರ ರಾಜ್ಯಗಳಾದ ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಹೊರದೇಶದ ಅಮೆರಿಕ, ಇಂಗ್ಲೆಂಡ್ ನಲ್ಲೂ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದೆಯಂತೆ ಚಿತ್ರತಂಡ.

ಮನಮುಟ್ಟುವ ಶರಣರ ಕಥೆಯಿರುವ ಈ ಚಿತ್ರವು ಹೊಸ ವರ್ಷದ ಆರಂಭದ ಸಂಭ್ರಮದಲ್ಲಿ “ಜಗನ್ಮಾತೆ ಅಕ್ಕಮಹಾದೇವಿ” ಜನವರಿ 2ರಂದು ಚಿತ್ರ ತೆರೆಯ ಮೇಲೆ ಬರಲಿದೆ.