‘ಜಸ್ಟ್ ಮ್ಯಾರಿಡ್’ ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ ( ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಜಸ್ಟ್ ಮ್ಯಾರಿಡ್
ನಿರ್ದೇಶಕಿ : ಸಿ.ಆರ್.ಬಾಬಿ
ನಿರ್ಮಾಪಕ , ಸಂಗೀತ : ಬಿ. ಅಜನೀಶ್ ಲೋಕನಾಥ್
ಛಾಯಾಗ್ರಹಣ : ಪಾರ್ತಿಭನ್
ತಾರಾಗಣ : ಶೈನ್ ಶೆಟ್ಟಿ , ಅಂಕಿತ ಅಮರ್, ದೇವರಾಜ್, ಶ್ರುತಿ ಕೃಷ್ಣ , ಅಚ್ಯುತ್ ಕುಮಾರ್ , ಶ್ರೀಮಾನ್ , ಅನೂಪ್ ಭಂಡಾರಿ , ರವಿಶಂಕರ್ ಗೌಡ , ಶೃತಿ ಹರಿಹರನ್, ಸಂಗೀತ ಅನಿಲ್ ಹಾಗೂ ಮುಂತಾದವರು…
ಸುಂದರ ಸಂಸಾರ , ಕೂಡು ಕುಟುಂಬಗಳ ಜೀವನ ನೂರಾರು ವರ್ಷಗಳ ಹಿಂದೆ ಅನ್ಯೋನ್ಯ , ಸುಖ , ಶಾಂತಿ , ನೆಮ್ಮದಿಯಿಂದ ಸಂಭ್ರಮಿಸಿದ ದಿನಗಳು , ಆಚಾರ – ವಿಚಾರ , ಪದ್ಧತಿಗಳು ಗತವೈಭವದಂತೆ ಮೆರೆದಿದ್ದನ್ನು ಹಿರಿಯರಿಂದ ಕೆಲವರು ಕೇಳಿದ್ದೇವೆ , ಅಂತದ್ದೇ ಸುಮಾರು 250 ವರ್ಷಗಳ ವಂಶವೃಕ್ಷ ಕುಟುಂಬದ ಹಾದಿಯಲ್ಲಿ ಸಾಗಿ ಬರುವ ಕಥಾನಕದಲ್ಲಿ ಹಿರಿಯರು , ಕಿರಿಯರು , ಮಕ್ಕಳು , ಮೊಮ್ಮಕ್ಕಳ ಪ್ರೀತಿ , ವಾತ್ಸಲ್ಯ , ಗೌರವಗಳ ನಡುವೆ ಮೊಮ್ಮಗನ ಮದುವೆಯ ಸಂದರ್ಭದಲ್ಲಿ ಎದುರು ಆಗುವ ಒಂದಷ್ಟು ಘಟನೆಗಳ ಸುತ್ತ , ಕೌಟುಂಬಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜಸ್ಟ್ ಮ್ಯಾರಿಡ್”.
ಮನೆಯ ಹಿರಿಯ ಜೀವ ರಿಟೈರ್ಡ್ ಚೀಫ್ ಜಸ್ಟಿಸ್ ಪೂರ್ಣಚಂದ್ರ (ದೇವರಾಜ್) ಬಹಳ ಶಿಸ್ತು , ಮುದ್ದಿನಿಂದ ಮೂರು ಮಕ್ಕಳನ್ನು ಬೆಳೆಸಿದ್ದು , ಒಬ್ಬ ರಾಜಕೀಯ ಕ್ಷೇತ್ರದಲ್ಲಿ ಸಾಗಿ ಹೋಂ ಮಿನಿಸ್ಟರ್ ( ಶ್ರೀಮಾನ್) , ಮತ್ತೊಬ್ಬ ಡಾಕ್ಟರ್ (ಅನುಪ ಭಂಡಾರಿ) ಇನ್ನೊಬ್ಬ ಸಿಂಗರ್ (ರವಿಶಂಕರ್ ಗೌಡ) ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡುತ್ತಾ , ಹೆಂಡತಿ , ಮಕ್ಕಳ ಜೊತೆ ಸುಖವಾಗಿ ಇದ್ದರೂ ಒಬ್ಬೊಬ್ಬರದು ಒಂದೊಂದು ರೀತಿಯ ವಿಚಿತ್ರ ಎಡವಟ್ಟಿನ ಬದುಕು. ಇದರ ನಡುವೆ ಮನೆಯ ಮುದ್ದಿನ ಮೊಮ್ಮಗ ಸೂರ್ಯ (ಶೈನ್ ಶೆಟ್ಟಿ) ಸದಾ ಜೋಶ್ ಜಾಲಿ ಮೋಡ್ನಲ್ಲಿ ಆ್ಯಡ್ ಫಿಲಂ ಮೇಕರ್ ಆಗಿ ಕೆಲಸ ಮಾಡುತ್ತಾ ತನ್ನ ಕುಟುಂಬದ ಕಡೆಗೂ ಗಮನಹರಿಸುವ ಬುದ್ಧಿವಂತನಾಗಿರುತ್ತಾನೆ.
ಜ್ಯೋತಿಷಿಗಳ ಪ್ರಕಾರ ಸೂರ್ಯನಿಗೆ 25 ವರ್ಷ ತುಂಬ ಮುನ್ನ ಮದುವೆ ಆಗಬೇಕೆಂಬ ವಿಚಾರ ತಿಳಿದು ಹುಡುಗಿಯನ್ನು ಹುಡುಕುವ ಕುಟುಂಬ. ಅವರಿಗೆ ತಕ್ಕಂತೆ ಸಿಗುವ ಬೀಗರ ಕುಟುಂಬದ ಹುಡುಗಿ (ಸಹನಾ) ಅಂಕಿತಾ ಅಮರ್. ಆದರೆ ಸಹನಾಗೆ ಸದ್ಯಕ್ಕೆ ಮದುವೆ ಇಷ್ಟವಿಲ್ಲದಿದ್ದರೂ ಒಳ್ಳೆ ಕೆಲಸಕ್ಕಾಗಿ ಆಸ್ಟ್ರೇಲಿಯಾ ಹೋಗುವ ಕನಸು. ಇನ್ನು ಸೂರ್ಯ ಹಾಗೂ ಕುಟುಂಬದ ಹಿನ್ನೆಲೆ ತಿಳಿದಿರುವ ಸಹನಾ ಕೆಲವು ಕಂಡೀಶನ್ ಮೂಲಕ ಸೂರ್ಯನನ್ನ ಮದುವೆಯಾಗಲು ಒಪ್ಪುತ್ತಾಳೆ.
ಮೊಮ್ಮಕ್ಕಳ ಮದುವೆಯನ್ನ ಸಂಭ್ರಮಿಸಿದ ಹಿರಿಯ ಜೀವ , ಆದರೂ ಈ ಜೋಡಿಗಳ ನಡುವೆ ತರ್ಲೆ , ತುಂಟಾಟ , ಗೊಂದಲವಿದ್ದರೂ ಮನೆಯಲ್ಲಿರುವ ಮಕ್ಕಳ ಹಾದಿಯಲ್ಲಿ ಎಡವಟ್ಟು , ಸ್ತ್ರೀ ಮೋಹ , ಪಾಶಕ್ಕೆ ತುತ್ತಾಗಿ ಪರದಾಡುತ್ತಾರೆ. ಇದರ ನಡುವೆ ಸೂರ್ಯ ಮುದ್ದಾದ ಮಗುವನ್ನ ಮನೆಗೆ ತರುತ್ತಾನೆ. ಇಡೀ ಮನೆಯವರಿಗೆ ಮಗು ಯಾರದು ಎಂಬ ಗೊಂದಲ ಸೃಷ್ಟಿ ಆಗುತ್ತದೆ.
ಇದನ್ನು ಹೊರತು ಮತ್ತೊಂದು ಫ್ಲಾಶ್ ಬ್ಯಾಕ್ ಬದುಕಿನ ತಲ್ಲಣವನ್ನ ಹೇಳುತ್ತದೆ. ಹಾಗೆಯೇ ಸರ್ಕಾರದ ವತಿಯಿಂದ ಸಿಎಂ ಹಾಗೂ ಸಚಿವ ಸಂಪುಟ ಇನ್ನೂರು ಐವತ್ತು ವರ್ಷಗಳ ಕೂಡು ಕುಟುಂಬದ ವಂಶಕ್ಕೆ ಸನ್ಮಾನದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ ಇದಕ್ಕೂ ಒಂದು ಕಾರಣ ಇರುತ್ತದೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗಿ ಕ್ಲೈಮಾಕ್ಸ್ ನಲ್ಲಿ ಹೇಳುವ ಮನ ಮುಟ್ಟುವ ವಿಚಾರವೇ ಚಿತ್ರದ ಹೈಲೈಟ್ ಎನ್ನುವಂತಿದೆ. ಅದು ಏನು ಎಂಬುದನ್ನು ನೀವು ಚಿತ್ರಮಂದಿರಕ್ಕೆ ಬಂದು ನೋಡಿ.
ಪ್ರಥಮ ಬಾರಿಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿರುವ ನಿರ್ದೇಶಕಿ ಸಿ. ಆರ್. ಬಾಬಿ ರವರ ಶ್ರಮ ತೆರೆಯ ಮೇಲೆ ಕಾಣುತ್ತದೆ. ಕೂಡು ಕುಟುಂಬದ ವಿಚಾರ , ಸಂಬಂಧಗಳ ಮೌಲ್ಯ , ಪ್ರೀತಿ , ತುಂಟಾಟ , ರಾಜಕೀಯ , ಮಾನವೀಯತೆಯ ನಡುವೆ ಮನೋರಂಜನಾತ್ಮಕ ಅಂಶಗಳನ್ನು ಬೆಸೆದುಕೊಂಡಿರುವ ರೀತಿ ಸೊಗಸಾಗಿದೆ.
ದ್ವಿತೀಯ ಭಾಗ ಹೆಚ್ಚು ಸೆಳೆಯುತ್ತದೆ. ಚಿತ್ರಕಥೆಯಲ್ಲಿ ಇನ್ನಷ್ಟು ಏರಿಳಿತ ಮಾಡಬಹುದಿತ್ತು , ಸೂಕ್ತ ಸಂಭಾಷಣೆ ಕಥೆಗೆ ಪೂರಕವಾಗಿದೆ. ನಿರ್ಮಾಪಕ ಬಿ. ಅಜನೀಶ್ ಲೋಕನಾಥ್ ಅದ್ದೂರಿತನ ತೆರೆಯ ಮೇಲೆ ಕಾಣುತ್ತದೆ. ಸಂಗೀತದ ಸೆಳೆತ ಇನ್ನಷ್ಟು ಬೇಕಿತ್ತು ಅನಿಸುತ್ತದೆ. ಛಾಯಾಗ್ರಾಹಕರ ಕೈಚಳ ಉತ್ತಮವಾಗಿದ್ದು , ಸಂಕಲನವು ಗಮನ ಸೆಳೆಯುತ್ತದೆ. ನಾಯಕನಾಗಿ ಶೈನ್ ಶೆಟ್ಟಿ ಬಹಳ ಲವ ಲವಿಕೆಯಿಂದ ಅಭಿನಯಿಸಿದ್ದು , ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿ ಅಂಕಿತಾ ಅಮರ್ ಸಿಕ್ಕ ಪ್ರತಿ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ. ವಿಶೇಷ ಪಾತ್ರದಲ್ಲಿ ಬರುವ ಶ್ರುತಿ ಹರಿಹರನ್ ಚಿತ್ರದ ತಿರುವಿಗೆ ಕಾರಣರಾಗಿದ್ದಾರೆ.
ಇನ್ನು ಇಡೀ ಚಿತ್ರದ ಹೈಲೈಟ್ ಹಿರಿಯ ನಟ ದೇವರಾಜ್ ರವರ ಪಾತ್ರ. ಅದರಲ್ಲೂ ಕ್ಲೈಮ್ಯಾಕ್ಸ್ ಸನ್ನಿವೇಶ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಸಿಎಂ ಪಾತ್ರದಲ್ಲಿ ಹಿರಿಯ ನಟ ಅಶೋಕ್ ಸೇರಿದಂತೆ ಅಚ್ಚುತ್ ಕುಮಾರ್ , ತಮಿಳಿನ ನಟ ಶ್ರೀಮಾನ್ , ರವಿಶಂಕರ್ ಗೌಡ , ಅನೂಪ್ ಭಂಡಾರಿ , ಶ್ರುತಿ ಕೃಷ್ಣ , ಸಾಕ್ಷಿ ಅಗರವಾಲ್ , ವಾಣಿ ಹರಿಕೃಷ್ಣ , ಮಾಳವಿಕಾ ಅವಿನಾಶ್ , ಸಂಗೀತ ಅನಿಲ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು , ಇಡೀ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದೆ.