ರೋಚಕ ತಿರುವಿನಲ್ಲಿ ಪ್ರೇಮಿಗಳ ಬದುಕು “ಏಳುಮಲೆ” (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಏಳುಮಲೆ
ನಿರ್ದೇಶಕ : ಪುನೀತ್ ರಂಗಸ್ವಾಮಿ
ನಿರ್ಮಾಪಕರು : ತರುಣ್ ಸುಧೀರ್, ಅಟ್ಲಾಂಟಾ ನಾಗೇಂದ್ರ
ಸಂಗೀತ : ಡಿ.ಇಮ್ಮಾನ್
ಛಾಯಾಗ್ರಹಣ : ಅದ್ವೈತ ಗುರುಮೂರ್ತಿ
ತಾರಾಗಣ : ರಾಣಾ , ಪ್ರಿಯಾಂಕಾ ಆಚಾರ್ , ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ , ಜಗಪ್ಪ ಹಾಗೂ ಮುಂತಾದವರು…
ಪ್ರೀತಿಗೆ ಯಾವುದೇ ಜಾತಿ , ಆಸ್ತಿ , ಬಡವ , ಶ್ರೀಮಂತ ಅನ್ನೋ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನಬಹುದು , ಇಲ್ಲಿ ಕರ್ನಾಟಕ – ತಮಿಳುನಾಡು ಗಡಿಭಾಗದ ಪ್ರೇಮಿಗಳ ಪ್ರೀತಿಯ ತಲ್ಲಣ , ಒದ್ದಾಟ , ನೋವು , ಸಂಕಟ , ಕುಟುಂಬದ ಕಡಿವಾಣದ ನಡುವೆ ಕಾಡುಗಳ್ಳನನ್ನ ಸದೆಬಡಿಯಲು ಎಸ್. ಟಿ. ಎಫ್ ತಂಡಗಳ ರಣತಂತ್ರದ ಹಾದಿಯಲ್ಲಿ ಎದುರಾಗುವ ಮತ್ತಷ್ಟು ರೋಚಕ ವಿಚಾರಗಳ ಸುಳಿಯನ್ನು ಬಹಳ ನೈಜಕ್ಕೆ ಹತ್ತಿರ ಎನ್ನುವಂತೆ ಈ ವಾರ ತೆರೆಯ ಮೇಲೆ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಏಳುಮಲೈ”. ಮೈಸೂರಿನಲ್ಲಿ ಟ್ರಾವೆಲ್ಸ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುವ ಹರೀಶ(ರಾಣಾ) ತಮಿಳುನಾಡು ಮೂಲದ ಶ್ರೀಮಂತ ಕುಟುಂಬದ ಹುಡುಗಿ ರೇವತಿ (ಪ್ರಿಯಾಂಕ ಆಚಾರ್) ಮೈಸೂರಿನ ಕಾಲೇಜಿನಲ್ಲಿ ಭೇಟಿಯಾಗಿ ಇಬ್ಬರ ಆಲೋಚನೆ , ಸ್ನೇಹ , ಗಾಡವಾದ ಪ್ರೀತಿಗೆ ಕಾರಣವಾಗುತ್ತದೆ. ರೇವತಿಯ ಪ್ರೀತಿಯ ವಿಚಾರ ತಿಳಿಯುವ ತಂದೆ ಹಾಗೂ ಅಣ್ಣ ತಮ್ಮ ಕುಟುಂಬದ ಶ್ರೀಮಂತನಿಗೆ ಮದುವೆ ಮಾಡಲು ಮುಂದಾಗುತ್ತಾರೆ.
ಇನ್ನು ಪ್ಯಾಸೆಂಜರ್ ಜೊತೆ ಟ್ರಿಪ್ ನಲ್ಲಿ ಇರುವ ಹರೀಶ್ ಗೆ ಈ ಮದುವೆ ವಿಚಾರ ತಿಳಿದು ಗಾಬರಿಯಾಗುತ್ತಾನೆ. ಪ್ರೇಮಿಗಳಿಬ್ಬರು ಊರು ಬಿಟ್ಟು ಹೋಗಲು ನಿರ್ಧರಿಸುತ್ತಾರೆ. ಮನೆಯಿಂದ ಹೊರಬರುವ ರೇವತಿಗೆ ಮೈಸೂರಿನ ಬಸ್ ಮಿಸ್ ಆಗಿ ಹರೀಶ ಹೇಳಿದಂತೆ ಮಲೈ ಮಹದೇಶ್ವರ ಬೆಟ್ಟಕ್ಕೆ ಬಸ್ ಹತ್ತುತ್ತಾಳೆ.
ತನ್ನ ಪ್ರೇಮಿಯನ್ನು ಭೇಟಿ ಮಾಡುವ ಆತುರದಲ್ಲಿ ಹಂದಿಗೆ ಡಿಕ್ಕಿ ಹೊಡೆದು ಗಾಡಿಗೆ ರಕ್ತದ ಕಲೆಯು ಅಂಟಿಕೊಳ್ಳುತ್ತದೆ. ಇದರ ನಡುವೆ ದಟ್ಟ ಅರಣ್ಯದಲ್ಲಿ ವಾಸ ಮಾಡುವ ಕಾಡುಗಳ ವೀರಪ್ಪನ್, ಶ್ರೀಲಂಕಾಗೆ ಹೋಗಲು ಪ್ಲಾನ್ ಮಾಡುತ್ತಿರುತ್ತಾನೆ. ಆತನಿಗೆ ಮಿಷನ್ ಗನ್ ಸಪ್ಲೈ ಮಾಡುವ ತಂಡ ಬಸ್ಸಿನಲ್ಲಿ ಸೇರುತ್ತಾರೆ.
ಈ ಗಡಿನಾಡು ನರಹಂತಕರನ್ನ ಸದೆಬಡಿಯಲು ಎಸ್ ಟಿ ಎಫ್ ಅಧಿಕಾರಿ ವಿಜಯಕುಮಾರ್ (ಜಗಪತಿ ಬಾಬು) ಹಾಗೂ ಕಮಾಂಡೋ ಚೀಫ್ ಕಣ್ಣನ್ (ಸರ್ದಾರ್ ಸತ್ಯ) ತಂಡ ರಣತಂತ್ರವನ್ನು ಹೂಡುತ್ತಿರುತ್ತದೆ. ಜೊತೆಗೆ ಸಿಬಿಐ ಅಧಿಕಾರಿಗಳು ಕೂಡ ಚಲನವಲನದ ಬಗ್ಗೆ ನಿಗಾ ಇಟ್ಟಿರುತ್ತಾರೆ. ನಾಕಾತಬಂದಿಯ ಮೂಲಕ ವಾಹನಗಳ ತಪಾಸಣೆ ಕೂಡ ಆರಂಭಗೊಳ್ಳುತ್ತದೆ.
ಬೆಟ್ಟಕ್ಕೆ ಬರುವ ಮಾರ್ಗ ಮಧ್ಯ ಹರೀಶನ ಗಾಡಿಯ ರಕ್ತದ ಕಲೆ ಹಿಟ್ ಅಂಡ್ ರನ್ ಕೇಸ್ ಇರಬಹುದೆಂದು ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯುವ ಪೇದೆ ಮಂಟೇ (ಜಗ್ಗಪ್ಪ). ಇದರ ನಡುವೆ ಲೋಕಲ್ ಪೊಲೀಸ್ ಸ್ಟೇಷನ್ನಲ್ಲಿ ಪತ್ರಕರ್ತನ ಹೆಸರಿನಲ್ಲಿ ದೃಷ್ಟರಿಗೆ ಸಹಾಯ ಮಾಡುವವನೆಂದು ತಿಳಿದು ಲಾಠಿ ರುಚಿ ನೀಡುವಾಗಲೇ ಸಾಯುತ್ತಾನೆ. ಪೊಲೀಸ್ ಪೇದೆ ರೈಟರ್ (ನಾಗಭರಣ) ಕೊಲೆ ಆರೋಪ ಬರುವುದೆಂಬ ವಿಚಾರ ಹೇಳುತ್ತಿದ್ದಂತೆ ಎಲ್ಲರೂ ಕಂಗಾಲಾಗುತ್ತಾರೆ.
ಇನ್ನು ಪೊಲೀಸರು ಮಾಡುವ ಪ್ಲಾನ ನಲ್ಲಿ ಹರೀಶ ವಿಧಿಯಿಲ್ಲದೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಅತ್ತ ಬೆಟ್ಟದಲ್ಲಿ ಹರೀಶನಿಗಾಗಿ ಕಾಯುವ ರೇವತಿ ದಿಕ್ಕು ಕಾಣದಂತೆ ಪರದಾಡುತ್ತಾಳೆ. ಇತ್ತ ತಮಿಳುನಾಡಿನಿಂದ ತಂಗಿಗಾಗಿ ಅಣ್ಣ ಹುಡುಕಲು ಆರಂಭಸುತ್ತಾನೆ. ವಿಧಿಯ ಆಟ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಕೊನೆಯ ಹಂತಕ್ಕೆ ತಲುಪುತ್ತದೆ. ಪ್ರೇಮಿಗಳು ಒಂದಾಗುತ್ತಾರ.. ಇಲ್ಲವಾ.. ಎಸ್ ಟಿ ಎಫ್ ಕಾರ್ಯಚರಣೆ ಏನಾಗುತ್ತೆ…
ಪೊಲೀಸರು ಎದುರಿಸುವ ಸಮಸ್ಯೆ ಏನು… ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋದನ್ನ ನೋಡೋದಕ್ಕೆ ನೀವು ಚಿತ್ರಮಂದಿರಕ್ಕೆ ಬರಬೇಕು.
ಒಂದು ವಿಭಿನ್ನ ಕುತೂಹಲ ಭರಿತ , ರೋಚಕ ಕಥಾನಕ ಚಿತ್ರವನ್ನು ನಿರ್ಮಿಸುವ ಧೈರ್ಯ ಮಾಡಿರುವ ನಿರ್ಮಾಪಕ ತರುಣ್ ಸುಧೀರ್ ಹಾಗೂ ಅಟ್ಲಾಂಟಾ ನಾಗೇಂದ್ರ ಅವರ ಆಲೋಚನೆ ಮೆಚ್ಚಲೆ ಬೇಕು. ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ತರುಣ್ ಕಾರ್ಯ ವೈಖರಿ ಸೊಗಸಾಗಿದೆ.
ಒಂದು ರೀತಿ ತರುಣ್ ನಿರ್ಮಾಣದ ಚಿತ್ರಗಳು ಹಂದಿಯನ್ನು ಗುದ್ದಿ ಗೆದ್ದ ಚಿತ್ರ ಎನ್ನಬಹುದು. ನಿರ್ದೇಶಕ ಪುನೀತ್ ರಂಗಸ್ವಾಮಿ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದ್ದು , ಚಿತ್ರಕಥೆ ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲಿಯೂ ಅತಿರೇಖ ಅನಿಸದೆ , ನೈಜಕ್ಕೆ ಪೂರಕವಾದಂತ ಸಂಭಾಷಣೆ ಮೂಲಕ ಗಮನ ಸೆಳೆಯುತ್ತದೆ. ಚಿತ್ರದ ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಹೆಚ್ಚು ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ. ಹಾಡುಗಳು ಕೂಡ ಸಂದರ್ಭಕ್ಕೆ ಅನುಗುಣವಾಗಿ ಸಾಗಿದೆ.
ಛಾಯಾಗ್ರಹಣ , ಸಂಗೀತ , ಸಂಕಲನ ಸೇರಿದಂತೆ ತಾಂತ್ರಿಕದ ಕೆಲಸ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ರಾಣ ತನ್ನ ಪಾತ್ರದಲ್ಲಿ ಜೀವಿಸಿದ್ದು , ಒಬ್ಬ ಪ್ರೇಮಿಯಾಗಿ ಪರದಾಡುವ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದೇ ರೀತಿ ಮುದ್ದಿನ ಮನೆ ಮಗಳಾಗಿ ಪ್ರಿಯಾಂಕ ಕೂಡ ಪಾತ್ರಕ್ಕೆ ನ್ಯಾಯವನ್ನು ಒದಗಿಸಿ ಗಮನ ಸೆಳೆದಿದ್ದಾರೆ. ಹಿರಿಯ ನಟ ಜಗಪತಿ ಬಾಬು ಖಡಕ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಪೊಲೀಸ್ ಪೇದೆ ಪಾತ್ರದಲ್ಲಿ ನಾಗಾಭರಣ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿದ್ದಾರೆ. ಯುವ ಪ್ರತಿಭೆ ಜಗ್ಗಪ್ಪ ಕೂಡ ಪೋಲಿಸ್ ಪಾತ್ರದಲ್ಲಿ ಮಾತಿನ ಚಾಣಾಕ್ಷತನದಲ್ಲಿ ಓಟಕ್ಕೆ ತಿರುವು ನೀಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಿಶೋರ್ ಕುಮಾರ್ , ಎಸ್ ಟಿ ಎಫ್ ತಂಡದ ರೂವಾರಿಯಾಗಿ ಸರ್ದಾರ್ ಸತ್ಯ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾಥ್ ನೀಡಿದೆ.
ಒಟ್ಟಾರೆ ಪ್ರೇಕ್ಷಕರ ನಾಡಿಮಿಡಿತವನ್ನು ಹಿಡಿದಿಟ್ಟುಕೊಳ್ಳುವ ಆಕ್ಷನ್, ಎಮೋಷನ್, ಲವ್ ಸ್ಟೋರಿ , ಜೊತೆಗೆ ಥ್ರಿಲ್ಲಿಂಗ್ ಕಥೆ ಒಳಗೊಂಡಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.