ಹೃದಯಗಳ ಬಡಿತದ ಪ್ರೀತಿಯ ಸೆಳೆತ…”ದಿಲ್ ಮಾರ್” ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ದಿಲ್ ಮಾರ್
ನಿರ್ದೇಶಕ : ಎಂ.ಚಂದ್ರಮೌಳಿ
ನಿರ್ಮಾಪಕ : ನಾಗರಾಜ್ , ಮಹೇಶ್
ಸಂಗೀತ : ರಾಧನ್
ಛಾಯಾಗ್ರಹಣ : ತಾನ್ವಿಕ್
ತಾರಾಗಣ : ರಾಮ್ ಗೌಡ , ಅದಿತಿ ಪ್ರಭುದೇವ , ಡಿಂಪಲ್ ಹಯಾತಿ , ಸಾಯಿ ಕುಮಾರ್ , ಶರತ್ ಲೋಹಿತಾಶ್ವ ಹಾಗೂ ಮುಂತಾದವರು…
ಪ್ರೀತಿಗೆ ಸಾವಿಲ್ಲ… ಪ್ರೀತಿ ಅಜರಾಮರ ಅನ್ನೋ ಮಾತು ಕೇಳಿದ್ದೇವೆ. ಪ್ರೀತ್ಸೋ ಹೃದಯಗಳ ಮನಸ್ಥಿತಿಯೇ ವಿಭಿನ್ನ.ಈ ಪ್ರೀತಿ ಹೇಗೆ , ಯಾವಾಗ ಹುಟ್ಟಿಕೊಳ್ಳುತ್ತೆ ಎಂಬುದನ್ನು ಹೇಳೋದೇ ಅಸಾಧ್ಯ. ಆದರೆ ಒಬ್ಬ ಸೈಕೋ ಮನಸ್ಥಿತಿಯ ವ್ಯಕ್ತಿ ಬದುಕಿನಲ್ಲಿ ಪ್ರೀತಿ ಅರಳಿದರೆ ಏನಲ್ಲ ಎದುರಾಗಬಹುದು , ಪ್ರೀತಿಯ ವಿಚಾರವಾಗಿ ಏನೆಲ್ಲಾ ನಡೆಯುತ್ತದೆ, ಹೀಗೂ ಇರಲು ಸಾಧ್ಯನಾ ಎಂಬ ಅಗಾಧವಾದ ಹೃದಯಗಳ ಬಡಿತದ ಪ್ರೀತಿಯ ಸೆಳೆತವನ್ನು ಕಟ್ಟಿಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದಿಲ್‌ಮಾರ್”.
ತಾನು ಪ್ರೀತಿಸುವ ಹುಡುಗಿಯ ಮನೆಯ ಮುಂದೆ ಬಂದು ನನ್ನನ್ನೇ ಪ್ರೀತಿಸು ಎಂದು ಕೂಗುವ ಸೈಕೋ ಶುಕ್ಲ (ರಾಮ್ ಗೌಡ)ನಿಗೆ ಹುಡುಗಿ ಅಣ್ಣನಿಂದ ಹಿಗ್ಗಾಮುಗ್ಗ ಹೊಡಿತ. ಆದರೆ ಇವನ್ಯಾರು ಎಂದೆ ತಿಳಿಯದ ಅಕ್ಷತಾ (ಅದಿತಿ ಪ್ರಭುದೇವ್) ಹೊಡೆತ ತಿಂದ ಶುಕ್ಲ ನಾನು ನೋಡಿ, ನಾನು ಈಗಾಗಲೇ ಪ್ರೀತಿಸುತ್ತಿರುವವರ ಜೊತೆ ಮದುವೆಯಾಗುತ್ತಿದ್ದೇನೆ ಇಲ್ಲಿಂದ ಹೊರಟು ಹೋಗು ಎಂದು ಹೇಳುತ್ತಾಳೆ. ಇದ್ಯಾವುದಕ್ಕೂ ಜಗ್ಗದ ಶುಕ್ಲ ಅದೇ ಊರಿನಲ್ಲಿ ಬೇರೆಯವರ ಸಹಕಾರದ ಮೂಲಕ ಅವಳ ಪ್ರೀತಿಯನ್ನು ಪಡೆಯಲು ಪರದಾಡುತ್ತಾನೆ.
ಇನ್ನು ಫ್ಲಾಶ್ ಬ್ಯಾಕ್ ನಲ್ಲಿ ಮಂಗಳೂರಿನ ರೌಡಿ ಭಾರ್ಗವ (ಸಾಯಿ ಕುಮಾರ್) ತನ್ನ ತಮ್ಮನನ್ನು ಹೊಡೆದ ಶುಕ್ಲನಿಗಾಗಿ ಹುಡುಕಾಟ ನಡೆಸುತ್ತಾ ಇರುತ್ತಾನೆ. ಇನ್ನು ಅಕ್ಷತಾ ಮದುವೆ ವಿಚಾರವಾಗಿ ಮನೆಯಲ್ಲಿ ಸಂಭ್ರಮದ ವಾತಾವರಣವಿದ್ದರೂ ಶುಕ್ಲನ ನಡುವಳಿಕೆ ಎಲ್ಲರಿಗೂ ಕೋಪ ಬಂದರೆ , ಅಕ್ಷತಾ ಹೃದಯ ಮಾತ್ರ ಶುಕ್ಲನ ಬಗ್ಗೆ ಮಿಡಿಯುತ್ತಿರುತ್ತದೆ.
ಇನ್ನು ಮದುವೆಗೆ ಬಂದ ಗೆಳೆಯನ ಮೂಲಕ ಶುಕ್ಲನ ಜೀವನದಲ್ಲಿ ನಡೆದ ಹಿಂದಿನ ಘಟನೆ ತೆರೆದುಕೊಳ್ಳುತ್ತದೆ, ಆತ ಒಬ್ಬ ಸೈಕೊ, ಅವನದು ವಿಚಿತ್ರ ಸ್ವಭಾವ, ಬುದ್ದಿ ಮಾತನ್ನು ಕೇಳಬಾರದು, ಆದರೆ ಮನಸ್ಸಿನ ಮಾತನ್ನು ಕೇಳಬೇಕೆಂಬಂತೆ ವರ್ತಿಸುವ ಸಮಯದಲ್ಲಿ ಆಶ್ಚರ್ಯವೆಂಬಂತೆ ಮಾಯ (ಡಿಂಪಲ್ ಹಯಾತಿ) ರೌಡಿಗಳ ಜೊತೆ ಕುಡಿತದ ಅಮಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ. ಈಕೆಯನ್ನ ಕಾಪಾಡುವ ಶುಕ್ಲನನ್ನು ನೋಡಿ ಐ ಲವ್ ಯು ಎನ್ನುತ್ತಾಳೆ. ಇದನ್ನು ನಿರಾಕರಿಸುವ ಶುಕ್ಲನ ಹಿಂದೆ ಬೀಳುತ್ತಾಳೆ. ಈಕೆಗೆ ಒಬ್ಬ ನಟಿಯಾಗಬೇಕೆಂದು ಹೋದಾಗ ಅನಾಥೆಯಾದ ಅವಳಿಗೆ ಆಸರೆಯಾಗುವಂತೆ ಬಂದ ವಿಲನ್ ಸಾಯಿಕುಮಾರ್ ಆಕೆಯ ಅಸಹಾಯಕತೆಯನ್ನು ಉಪಯೊಗಿಸಿಕೊಂಡು ಅವಳನ್ನು ವೇಶ್ಯಾಗೃಹಕ್ಕೆ ಕರೆತರುತ್ತಾನೆ, ಅಲ್ಲಿ ಪೋಲಿಸರ ರೈಡ್ ಆದಾಗ ಮಾಯಾ ಅಲ್ಲಿಂದ ತಪ್ಪಿಸಿಕೊಂಡು ಬರುಲು ಶುಕ್ಲ ಸಹಾಯ ಮಾಡುತ್ತಾನೆ. ನಂತರ ಶುಕ್ಲ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ಕೊಡುವ ಗೌರವ, ಪ್ರಾಮಾಣಿಕತೆಗೆ ಮನಸೊತು ಆತನಲ್ಲಿ ಪ್ರೀತಿಯ ಕೋರಿಕೆ ಇಡುತ್ತಾಳೆ. ಮಾಯಾ ಪ್ರೀತಿಯನ್ನು ಶುಕ್ಲ ನಿರಾಕರಿಸಿದ ಕಾರಣ ಅದೇ ಕೊರಗಿನಲ್ಲಿರುವಾಗ ಶುಕ್ಲನ ಕಣ್ಣಮುಂದೆ ಅಪಘಾತಕ್ಕೊಳಗಾಗಿ ಮರಣ ಹೊಂದುತ್ತಾಳೆ. ಈ ವಿಚಾರ ತಿಳಿಯುವ ಅಕ್ಷತಾ ಕುಟುಂಬ ನಮ್ಮ ಮಗಳ ಮದುವೆಗೆ ಅಡ್ಡಿ ಆಗಲು ಕಾರಣ ಏನೆಂಬ ಪ್ರಶ್ನೆ ಕಾಡುತ್ತಿರುತ್ತದೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಬೇರೆಯದೇ ತಿರುವನ್ನ ಹೇಳುತ್ತದೆ. ಶುಕ್ಲಾ ಆಕ್ಷತೆಗೆ ಏನು ಸಂಬಂಧ…
ಮಾಯ ಸಾವಿಗೆ ಕಾರಣ ಯಾರು… ಸೈಕೋ ಶುಕ್ಲನ ಹಿನ್ನೆಲೆ ಏನು… ಬುದ್ಧಿ ಮಾತು ಕೇಳಬೇಕಾ… ಮನಸಿನಂತೆ ನಡೆದುಕೊಳ್ಳಬೇಕಾ… ಎಂಬ ಒಂದಷ್ಟು ವಿಚಾರದೊಂದಿಗೆ ಪ್ರೀತಿಯ ಸೆಳೆತವನ್ನು ತಿಳಿಯುವುದಕ್ಕೆ ದಿಲ್ ಮಾರ್ ಚಿತ್ರ ನೋಡಬೇಕು.

ಇದೊಂದು ವಿಭಿನ್ನ ರೀತಿಯ ಪ್ರೇಮಕಥೆಯನ್ನ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ಮೆಚ್ಚಲೇಬೇಕು. ದಿಲ್ ಅಂದ್ರೆ ಹೃದಯ, ಮಾರ್ ಅಂದರೆ ಸಾಹಸ, ಎರಡರ ಬೆಸಿಗೆಯ ನಡುವೆ ಒಬ್ಬ ಸೈಕೋ ಮನಸ್ಥಿತಿಯ ವ್ಯಕ್ತಿ. ಆತನ ಜೀವನದಲ್ಲಿ ಎಂಟ್ರಿಯಾಗುವ ಯುವತಿಯರಿಬ್ಬರ ಪ್ರೀತಿ, ಪ್ರೇಮದ ಕಥೆಯನ್ನು ಎಳೆಯಾಗಿಟ್ಟುಕೊಂಡು ಸಸ್ಪೆನ್ಸ್ , ಥ್ರಿಲ್ಲರ್ , ಆಕ್ಷನ್ ಮೂಲಕ ಪ್ರೀತಿಯ ಬಡಿತವನ್ನು ತೆರೆದಿಟ್ಟಿದ್ದಾರೆ.
ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು , ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಮೊದಲ ಪ್ರಯತ್ನದಲ್ಲೇ ಒಂದು ಉತ್ತಮ ಚಿತ್ರ ನೀಡಿದ್ದಾರೆ. ನಿರ್ಮಾಪಕರ ಖರ್ಚು , ವೆಚ್ಚವು ತೆರೆ ಮೇಲೆ ಕಾಣುವಂತಿದೆ. ಛಾಯಾಗ್ರಹಣ , ಸಂಗೀತ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಗಮನ ಸೆಳೆಯುತ್ತದೆ. ಇನ್ನು ಪಾತ್ರವರ್ಗದಲ್ಲಿ ನಾಯಕನಾಗಿ ಪ್ರವೇಶ ಮಾಡಿರುವ ರಾಮ್ ಗೌಡ ವಿಭಿನ್ನ ಶೇಡ್ ಗಳಲ್ಲಿ ಶುಕ್ಲನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಆಕ್ಷನ್ ಸನ್ನಿವೇಶಕ್ಕೆ ಸೈ ಎನ್ನುವಂತೆ ಮಿಂಚಿದ್ದಾರೆ. ಮತ್ತೊಬ್ಬ ಉತ್ತಮ ಪ್ರತಿಭೆ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಇನ್ನು ಅಕ್ಷತಾ ಪಾತ್ರದಲ್ಲಿ ಅದಿತಿ ಪ್ರಭುದೇವ ಉತ್ತಮ ಅಭಿನಯ ನೀಡಿದ್ದಾರೆ, ಅದೇ ರೀತಿ ಮತ್ತೋರ್ವ ನಟಿ ದಿಂಪಲ್ ಹಯಾತಿ ಕೂಡ ಸಿಕ್ಕ ಅವಕಾಶವನ್ನು ಅದ್ಭುತವಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಹಿರಿಯನಟ ಸಾಯಿಕುಮಾರ್ ವಿಲನ್ ಪಾತ್ರವನ್ನು ಖಡಕ್ಕಾಗಿ ನಿರ್ವಹಿಸಿದ್ದಾರೆ. ಇನ್ನು ಎಂದಿನಂತೆ ಶರತ್ ಲೋಹಿತಾಶ್ವ , ಗೋವಿಂದೇಗೌಡ, ದಿವ್ಯ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಜೀವ ತುಂಬಿದ್ದಾರೆ. ಈ ದಿಲ್ ಮಾರ್ ಚಿತ್ರ ಪ್ರೇಕ್ಷಕರನ್ನು ಸೆಳೆಯುವಂಥ ಎಲ್ಲ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿದ್ದು , ಪ್ರೀತಿಸುವ ಹೃದಯಗಳಿಗೆ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.