ಗ್ರಾಮ ಪಂಚಾಯಿತಿಯ ಭಕ್ಷಕ.. ‘ದಸ್ಕತ್’ (ಚಿತ್ರವಿಮರ್ಶೆ – ರೇಟಿಂಗ್ : 4.5 / 5)
ರೇಟಿಂಗ್ : 4.5 / 5
ಚಿತ್ರ : ದಸ್ಕತ್
ನಿರ್ದೇಶಕ : ಅನೀಶ್ ಪೂಜಾರಿ ವೇಣೂರು
ನಿರ್ಮಾಪಕ : ರಾಘವೇಂದ್ರ ಕುಡ್ವ
ಸಂಗೀತ : ಸಮರ್ಥನ್. ಎಸ್
ಛಾಯಾಗ್ರಹಣ : ಸಂತೋಷ್ ಆಚಾರ್ಯ
ತಾರಾಗಣ : ದೀಕ್ಷಿತ್. ಕೆ, ಮೋಹನ್ ಶೇಣಿ, ಭವ್ಯ ಪೂಜಾರಿ, ನೀರಜ್, ಮಿಥುನ್, ಯುವ ಶೆಟ್ಟಿ , ದೀಪಕ್ ರೈ ಪಾಣಾಜೆ , ಹಾಗೂ ಮುಂತಾದವರು….
ಸತ್ಯದ ಕನ್ನಡಿಯನ್ನು ಹೊರ ಜಗತ್ತಿಗೆ ತೆರೆದಿಟ್ಟಂತಿದೆ ಈ ಚಿತ್ರ.
ಸಾಮಾನ್ಯವಾಗಿ ಅಧಿಕಾರ , ಹಣ ಇದ್ದವನ ಬಳಿ ದರ್ಪ, ಅಹಂಕಾರ ಇದ್ದೇ ಇರುತ್ತೆ. ಆದರೆ ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ಮೃಗದಂತೆ ವರ್ತಿಸುವ ವ್ಯಕ್ತಿಯ ಮುಂದೆ ಜನಸಾಮಾನ್ಯರ ಬದುಕು ಕಷ್ಟವೇ ಸರಿ. ಅಂತದ್ದೇ ಒಂದು ಕಥಾನಕದೊಂದಿಗೆ ಹಳ್ಳಿಯ ಗ್ರಾಮ ಪಂಚಾಯಿತಿಯ ಅಧಿಕಾರಿಯ ನಡುವೆ ಜನರ ಬದುಕು ಬವಣೆಯ ಸುತ್ತ ಬೆಸೆದಿರುವ ನೋವಿನ ತಳಮಳ ಹೇಗೆಲ್ಲಾ ಸಾಗುತ್ತದೆ ಎಂಬುವುದನ್ನು ಪರದೆಯ ಮೇಲೆ ತಂದಿರುವಂತಹ ಚಿತ್ರವೇ “ದಸ್ಕತ್”.
ದಟ್ಟ ಅರಣ್ಯದ ನಡುವಿರುವ ಕೇಪುಲಪಲ್ಕೆ ಎಂಬ ಊರು. ಆ ಗ್ರಾಮದ ಜನರ ಬದುಕು ಸುಖಕ್ಕಿಂತ ಸಮಸ್ಯೆ , ಒದ್ದಾಟವೇ ಹೆಚ್ಚು. ಸರ್ಕಾರ ನೀಡುವ ಸೌಲತ್ತಿಗಾಗಿ ಕಾಯುವ ಇವರ ಬದುಕಿಗೆ ಗ್ರಾಮ ಪಂಚಾಯತಿ ಆಧಾರ. ಆದರೆ ಗುಣಪಾಲ ( ಯುವ ಶೆಟ್ಟಿ) ಗ್ರಾಮ ಪಂಚಾಯತಿಯ ಅಧಿಕಾರಿ ಸದಾ ದರ್ಪದ ನಡೆ, ತನ್ನ ವೈರಿಯನ್ನ ಕೊಲ್ಲುವಷ್ಟು ದ್ವೇಷ, ಕಚೇರಿಯಲ್ಲಿ ಯಾವುದೇ ಕೆಲಸಕ್ಕೆ ಸಹಿ , ಮೊಹರು , ರೇಷನ್ ಕಾರ್ಡ್ ಗೆ ಹಣ ಕೊಟ್ಟವರಿಗೆ ಮಾತ್ರ ಅನುಕೂಲದ ದಾರಿ.
ಗ್ರಾಮದ ಜನರನ್ನ ಎದುರಿಸುತ್ತ ತಾನು ತನ್ನ ಮಗಳು ಬಾಗಿ (ಭವ್ಯ ಪೂಜಾರಿ) ಯೊಂದಿಗೆ ವಾಸ. ಮನೆ ಬಾಗಿಲಿಗೆ ಯಾರನ್ನೂ ಸೇರಿಸಿದವನ ಮನೆ ಕಾಯಲು ನಾಯಿ ಸಾಕುತ್ತಾನೆ. ಬಾಲ್ಯದಿಂದಲೂ ಶೇಖರ , ಕೇಶವ , ಬಾಡು , ದೀಪು ಸೇರಿದಂತೆ ಎಲ್ಲಾ ವಯಸ್ಸಿನ ಗೆಳೆಯರ ಗುಂಪು ಬೆಳೆದ ತಮ್ಮ ತಮ್ಮ ಕಾಯಕದ ಜೊತೆಗೆ ಜೀವನ ಸಾಗುತ್ತಾರೆ.
ಕಷ್ಟ ಸುಖದ ನಡುವೆಯೂ ಸಹ ಆಚಾರ , ಪದ್ಧತಿ , ಸಂಪ್ರದಾಯದ ಕಡೆ ಎಲ್ಲರ ಗಮನ. ಭೂತ ಕೋಲದ ಆಚರಣೆ ಬದುಕು ಶೇಖರ ( ದೀಕ್ಷಿತ್ ) ಹಾಗೂ ಅವನ ಕುಟುಂಬದು. ಬಡತನದ ಜೀವನದಲ್ಲಿ ನೆಮ್ಮದಿ ಹುಡುಕಾಟ. ಇದರ ನಡುವೆ ಶೇಖರ ಹಾಗೂ ಗುಣಪಾಲ್ ನಡುವೆ ವೈಮನಸ್ಯ , ದ್ವೇಷ. ಶೇಖರನ ತಂದೆ ರೇಷನ್ ಕಾರ್ಡ್ ಪಡೆಯಲು ಅಧಿಕಾರಿಯನ್ನ ಭೇಟಿ ಮಾಡಿದಾಗ ಅವಮಾನ.
ಒಂದಲ್ಲ ಒಂದು ವಿಚಾರಕ್ಕೆ ಶೇಖರ ಹಾಗೂ ಅಧಿಕಾರಿಯ ನಡುವೆ ಗುದ್ದಾಟ , ಮಾತಿನ ಚಿಕ್ಕಮಕಿ ನಡೆಯುತ್ತಲೇ ಇರುತ್ತೆ. ಏನು ಆಗದಿದ್ದರೂ ತಾನೇ ಬಗೆಹರಿಸುವೆ ಎನ್ನುವಂತಹ ಅಧ್ಯಕ್ಷ ಗೋಪಾಲಣ್ಣ(ದೀಪಕ್ ರೈ ಪಾಣಾಜೆ), ಇನ್ನು ಈ ಹುಡುಗರ ತಂಡದಲ್ಲಿ ಬಾಡ ಅಧಿಕಾರಿಯ ಮಗಳು ಭಾಗಿ ಯನ್ನು ಪ್ರೀತಿಸುತ್ತಾನೆ.
ಗ್ರಾಮದ ಜನರಿಗೆ ಒಂದು ಸಹಿ ಹಾಗೂ ಮೊಹರಗಾಗಿ ನರಭಕ್ಷಕನಂತೆ ಹಣಕ್ಕಾಗಿ ಒತ್ತಡ ಕೊಡುವ ಈ ಅಧಿಕಾರಿಯ ನಡುವಳಿಕೆ , ದರ್ಪವನ್ನು ನೋಡಿ ಕೋಪ ಬಂದರು ಏನು ಮಾಡಲಾಗದಂತ ಸ್ಥಿತಿ. ಇದರ ನಡುವೆ ಒಂದಷ್ಟು ಘಟನೆಗಳು ದುರಂತದ ಹಂತಕ್ಕೆ ಹೋಗಿ ನಿಲ್ಲುತ್ತದೆ. ಅಧಿಕಾರದ ದರ್ಪ ಏನಾಗುತ್ತೆ… ಜನಸಾಮಾನ್ಯರ ಕಷ್ಟ ನಿಲ್ಲುತ್ತಾ… ದಾಸ್ಕತ್ ಹೇಳುವ ಸತ್ಯ ಏನು… ಇದಕ್ಕಾಗಿ ಎಲ್ಲರೂ ಒಮ್ಮೆ ಚಿತ್ರ ನೋಡಬೇಕು.
ಈ ಚಿತ್ರದ ಕಥೆ ನೈಜಕ್ಕೆ ಹತ್ತಿರವೆನಿಸಿದೆ. ಸಮಾಜದಲ್ಲಿ ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಅಟ್ಟಹಾಸ , ದರ್ಪ , ಹಣದ ವ್ಯಾಮೋಹ ಜನಸಾಮಾನ್ಯರಿಗೆ ಹೇಗೆಲ್ಲಾ ತೊಂದರೆಗಳನ್ನು ನೀಡುತ್ತಾ ಬಂದಿದೆ ಎಂಬುವುದನ್ನು ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಇನ್ನು ಕುಗ್ರಾಮದಲ್ಲಿ ಜನರ ಪಾಡು ಕೇಳುವಂತಿಲ್ಲ, ಸತ್ಯದ ಕನ್ನಡಿಯನ್ನು ಹೊರ ಜಗತ್ತಿಗೆ ತೆರೆದಿಟ್ಟಂತಿರುವ ಈ ಚಿತ್ರದಲ್ಲಿ ಗೆಳೆತನ , ವಾತ್ಸಲ್ಯ , ಪ್ರೀತಿ , ದ್ವೇಷದ ಜೊತೆ ವಾಸ್ತವತೆ ಬಗ್ಗೆ ಬೆಳಕು ಚೆಲ್ಲಿರುವ ರೀತಿ ಗಮನ ಸೆಳೆಯುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ಕಚೇರಿಯ ಕಾರ್ಯ ವೈಖರಿ , ವ್ಯವಸ್ಥೆ ಬದಲಾದಂತಿದೆ. ಆದರೂ ಈ ತಂಡದ ಪ್ರಯತ್ನ ಮೆಚ್ಚುವಂಥದ್ದು. ತುಳು ಭಾಷೆಯಲ್ಲಿ ನಿರ್ಮಾಣವಾಗಿ ಬಿಡುಗಡೆ ನಂತರ ಕನ್ನಡ ಜನತೆ ಈ ಸಿನಿಮಾ ನೋಡಬೇಕೆಂಬ ಉದ್ದೇಶದಿಂದ ಕನ್ನಡದಲ್ಲಿ ಡಬ್ ಮಾಡಿಸಿ ಪ್ರೇಕ್ಷಕರ ಮುಂದೆ ತಂದಂತಹ ನಿರ್ಮಾಪಕ ಜಗದೀಶ್. ಎನ್. ಅರೇಬನ್ನಿಮಂಗಲ. ಈ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕ ವರ್ಗ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಿದೆ.
ಇನ್ನು ಪ್ರಮುಖ ಪಾತ್ರಧಾರಿಗಳಾದ ದೀಕ್ಷಿತ್. ಕೆ. ಅಂಡಿನ್ಜೆ , ಮೋಹನ್ ಶೇಣಿ , ನೀರಜ್ ಕುಂಜರ್ಪ, ಮಿಥುನ್ ರಾಜ್ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ವಿಶೇಷವಾಗಿ ಗುಣಪಾಲ ಪಾತ್ರ ಮಾಡಿರುವ ಯುವ ಶೆಟ್ಟಿ ಕನ್ನಡಕ್ಕೆ ಮತ್ತೊಬ್ಬ ಉತ್ತಮ ಪ್ರತಿಭೆ ಸಿಕ್ಕಂತಾಗಿದೆ. ತನ್ನ ಪಾತ್ರದ ಮೂಲಕ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಭಾಗಿ ಪಾತ್ರದಲ್ಲಿ ಯುವ ನಟಿ ಭವ್ಯ ಪೂಜಾರಿ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ದೀಪಕ್ ರೈ ಪಾಣಾಜೆ , ನವೀನ್ ಬಾಂಡೇಲ್, ಚಂದ್ರಹಾಸ್ ಉಳ್ಳಾಲ್, ಯೋಗೀಶ್ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಒಂದು ಸಹಿ (ದಸ್ಕತ್) ಹಿಂದಿರುವ ಕರಾಳ ಸತ್ಯದ ಬಗ್ಗೆ ಜಾಗೃತಿ ಮೂಡಿಸಿರುವ ಈ ಚಿತ್ರ ಎಲ್ಲರೂ ಒಮ್ಮೆ ನೋಡಬೇಕು.