ಮನಮುಟ್ಟುವ ಸಂಬಂಧದ ಮಹತ್ವದ ಕಥಾನಕ “ಚೌಕಿದಾರ್” (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಚೌಕಿದಾರ್
ನಿರ್ದೇಶಕ : ಚಂದ್ರಶೇಖರ್ ಬಂಡಿಯಪ್ಪ
ನಿರ್ಮಾಪಕ : ಕಲ್ಲಹಳ್ಳಿ ಚಂದ್ರಶೇಖರ್
ಸಂಗೀತ : ಸಚಿನ್ ಬಸ್ರೂರ್
ಛಾಯಾಗ್ರಹಣ : ಸಿದ್ದು
ತಾರಾಗಣ : ಪೃಥ್ವಿ ಅಂಬಾರ್, ಧನ್ಯಾ ರಾಮ್ ಕುಮಾರ್ , ಸಾಯಿ ಕುಮಾರ್, ಶ್ವೇತಾ ವಿನೋದಿನಿ , ಸುಧಾರಾಣಿ , ಧರ್ಮ , ಗಿಲ್ಲಿ ನಟ, ಮುನಿ ಹಾಗೂ ಮುಂತಾದವರು…
ಜೀವನವೇ ಒಂದು ಪಾಠ. ಪ್ರತಿಯೊಂದು ಮನೆಯಲ್ಲೂ ಒಬ್ಬ ಚೌಕಿದಾರ್ ಇದ್ದೇ ಇರುತ್ತಾನೆ. ಮನೆಯ ಸದಸ್ಯರ ಜವಾಬ್ದಾರಿ ಹಾಗೂ ಎಲ್ಲಾ ಹಾಗೂ ಹೋಗುಗಳ ಕಾಯುವ ವ್ಯಕ್ತಿಯಾಗಿ ಇರುವುದು ಸರ್ವೇ ಸಾಮಾನ್ಯ. ಅಂತದ್ದೇ ಒಂದು ತಂದೆ ಮಗನ ಬಾಂಧವ್ಯ , ಸಂಬಂಧಗಳ ಸೆಳೆತ , ಪ್ರಾಮಾಣಿಕತೆ, ಸ್ನೇಹ , ಪ್ರೀತಿ , ನೋವು , ನಲಿವಿನ ಸುತ್ತ ಅಚ್ಚುಕಟ್ಟಾದ ಕೌಟುಂಬಿಕ ಕಥಾನಕವಾಗಿ ಇವರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಚೌಕಿದಾರ್”. ರೇಷ್ಮೆ ಇಲಾಖೆಯ ಸರಕಾರಿ ಉದ್ಯೋಗಿ ಪ್ರಕಾಶ್ ಗೌಡ (ಸಾಯಿ ಕುಮಾರ್)ಗೆ ತನ್ನ ಮಗ ಸಿದ್ದು ( ಪೃಥ್ವಿ ಅಂಬಾರ್) ಎಂದರೆ ಪಂಚಪ್ರಾಣ. ತನ್ನ ಪತ್ನಿ ಸುಧಾ (ಶ್ವೇತಾ ವಿನೋದಿನಿ) ಬಗ್ಗೆ ಗಮನ ಕಮ್ಮಿಯಾದರೂ , ಮಗನ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುವ ಅಪ್ಪ ಪ್ರಕಾಶ್. ತನ್ನ ಅಪಾರ್ಟ್ಮೆಂಟ್ ನಲ್ಲಿರುವ ಇಂಜಿನಿಯರ್ ವ್ಯಕ್ತಿಗೆ ಸವಾಲ್ ಹಾಕಿ ಹೇಗಾದರೂ ತನ್ನ ಮಗನನ್ನ ಇಂಜಿನಿಯರ್ ಮಾಡುವ ಮಹದಾಸೆ , ಇದರ ನಡುವೆ ಸಿದ್ದುವಿನ ಕ್ರಿಕೆಟ್ , ತರಲೆ , ಗಲಾಟೆ , ತುಂಟಾಟದ ನಡುವೆ ಮುದ್ದಾದ ಹುಡುಗಿ ಗಣಿತ ಫ್ರಾನ್ಸಿಸ್ ಳ ನೋಟಕ್ಕೆ ಮನಸೋತು ಪ್ರೀತಿಸಲು ಮುಂದಾಗುತ್ತಾನೆ. ಅದರಂತೆ ಸಿದ್ದುವನ್ನು ಪ್ರೀತಿಸುವ ಹುಡುಗಿ , ಅಚಾನಕ್ಕಾಗಿ ಬೇರೆ ಹುಡುಗನನ್ನು ಮದುವೆಯಾಗಿ ದೂರವಾಗುತ್ತಾಳೆ. ಗಾಡವಾದ ಪ್ರೀತಿ ತಾಳ್ಮೆ ಕಳೆದುಕೊಂಡು ಸಿಗರೇಟ್ , ಕುಡಿತಕ್ಕೆ ದಾಸನಾಗುತ್ತಾನೆ.
ಮಗನನ್ನ ಸುಧಾರಿಸಲು ತಂದೆ ತಾಯಿ ಇನ್ನಿಲ್ಲದ ಹರಸಾಹಸ ಮಾಡುತ್ತಾರೆ. ಕುಟುಂಬದಲ್ಲಿ ಒಂದೊಂದೇ ಸಮಸ್ಯೆ ಎದುರಾಗುತ್ತದೆ. ಇದರ ನಡುವೆ ಪ್ರಕಾಶನ ಆತ್ಮೀಯ ಗೆಳತಿ ಇನ್ಸ್ಪೆಕ್ಟರ್ ಉಮಾ (ಸುಧಾರಾಣಿ) ಮೂಲಕ ಮಗನಿಗೆ ಮದುವೆ ಮಾಡಿಸುವ ಸಲಹೆ ಸಿಗುತ್ತದೆ.
ಅದರಂತೆ ತನ್ನೂರಿನ ಗೆಳೆಯ ಶಂಕ್ರಪ್ಪ( ಮುನಿ) ಮಗಳು ಚೈತ್ರ (ಧನ್ಯ ರಾಮ್ ಕುಮಾರ್) ಳನ್ನ ತನ್ನ ಮನೆಯ ಸೊಸೆ ಮಾಡಿಕೊಳ್ಳುತ್ತಾನೆ. ಆದರೆ ಪರಿಸ್ಥಿತಿ ಯಾವುದೇ ಬದಲಾವಣೆ ಕಾಣದೆ ಒಂದು ರೋಚಕ ಘಟ್ಟ ಬೇರೆಯದೇ ದಿಕ್ಕನ್ನ ತೋರುತ್ತದೆ. ಸಿದ್ದು ಬದಲಾಗುತ್ತಾನಾ…
ಅಪ್ಪನ ಆಸೆ ಈಡೇರುತಾ…
ಸಂಸಾರ ಏನಾಗುತ್ತೆ…
ಕ್ಲೈಮ್ಯಾಕ್ಸ್ ಸಂದೇಶ ಏನು…
ಎಲ್ಲದಕ್ಕೂ ಒಮ್ಮೆ ನೀವು ಈ ಚೌಕಿದಾರ್ ಚಿತ್ರವನ್ನು ನೋಡಬೇಕು.
ಇವತ್ತಿನ ಮಕ್ಕಳ ಮನಸ್ಥಿತಿ , ಆಲೋಚನೆ , ಬದುಕಿನ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ , ಪ್ರೀತಿ , ಮೋಹ , ಚಟಕ್ಕೆ ಬಿದ್ದು ಏನೆಲ್ಲ ಸಮಸ್ಯೆಯನ್ನು ಎದುರಿಸುತ್ತಾರೆ ಎಂಬುದನ್ನು ಬಹಳ ಸೊಸಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಆದರೆ ಚಿತ್ರಕಥೆ ಇನ್ನಷ್ಟು ವೇಗ ಮಾಡಬೇಕಿತ್ತು , ಕೆಲವು ಸನ್ನಿವೇಶಗಳು ಅನವಶ್ಯಕ ಅನಿಸುತ್ತದೆ. ಎಲ್ಲಾ ವರ್ಗದವರ ಗಮನ ಸೆಳೆಯುವಂತಹ ಚಿತ್ರಕ್ಕೆ ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು. ಹಾಡುಗಳು ಸೊಗಸಾಗಿದ್ದು ಹಿನ್ನೆಲೆ ಸಂಗೀತ ಉತ್ತಮವಾಗಿದೆ.

ಅದೇ ರೀತಿ ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಿದೆ. ನಟ ಪೃಥ್ವಿ ಅಂಬರ್ ನೈಜ್ಯಕ್ಕೆ ಪೂರಕವಾಗಿ ಪಾತ್ರದಲ್ಲಿ ಜೀವಿಸಿ ತಮ್ಮ ಪ್ರತಿಭೆಯನ್ನ ಹೊರಹಾಕಿದ್ದಾರೆ. ಅದೇ ರೀತಿ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಮುದ್ದಾದ ಹುಡುಗಿ ಕೂಡ ಗಮನ ಸೆಳೆದಿದ್ದು , ನಟಿ ಧನ್ಯ ರಾಮ್ ಕುಮಾರ್ ಬಡ ಕುಟುಂಬದ ಮಗಳಾಗಿ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ. ಇನ್ನು ಇಡೀ ಚಿತ್ರದ ಹೈಲೈಟ್ ಎಂದರೆ ತಂದೆಯ ಪಾತ್ರಧಾರಿ ಸಾಯಿ ಕುಮಾರ್ ಅಭಿನಯ.
ಅಪ್ಪನ ಜವಾಬ್ದಾರಿ ಜೊತೆಗೆ ಮಗನ ಮೇಲಿನ ಪ್ರೀತಿ , ಕರ್ತವ್ಯ ನಿಷ್ಠೆಗೆ ಜೀವ ತುಂಬಿ ಅಭಿನಯಿಸಿದ್ದಾರೆ. ಇನ್ನು ತಾಯಿಯ ಪಾತ್ರಧಾರಿ ಶ್ವೇತಾ ವಿನೋದನಿ ಪಾತ್ರದಲ್ಲಿ ಜೀವಿಸಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿ ಸುಧಾರಾಣಿ ಸೇರಿದಂತೆ ಪಿಲಾಚಾರಿ ಫೈನಾನ್ಸ್ ನೀಡುವ ಶೇಖರ ಪಾತ್ರದಲ್ಲಿ ಧರ್ಮ , ನಾಯಕಿಯ ತಂದೆಯಾಗಿ ಮುನಿ , ಲೋನ್ ಕಟ್ಟದ ವ್ಯಕ್ತಿಯಾಗಿ ಗಿಲ್ಲಿ ನಟನ ಹಾಸ್ಯ ಸನ್ನಿವೇಶ ಸೇರಿದಂತೆ ಉಳಿದ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಬೆಂಬಲ ಕೊಟ್ಟಿದೆ. ಒಟ್ಟಾರೆ ಇಡೀ ಕುಟುಂಬ ಕುಳಿತು ನೋಡುವಂತ ಚಿತ್ರ ಇದಾಗಿದೆ.
