Cini NewsSandalwood

ಜುಲೈ 4 ರಂದು “ಕ್ಯಾಪಿಟಲ್ ಸಿಟಿ” ಚಿತ್ರ ಬಿಡುಗಡೆ.

Spread the love

“ಇನಿಫಿನಿಟಿ ಕ್ರಿಯೇಷನ್ಸ್” ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, “ಅಪ್ಪು‌ ಪಪ್ಪು”, ” ಮಸ್ತ್ ಮಜಾ ಮಾಡಿ”, “ನಂದ” ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನದ ಹಾಗೂ “ಜಿಂದಗಿ” ಚಿತ್ರದ ನಂತರ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ “ಕ್ಯಾಪಿಟಲ್ ಸಿಟಿ” ಚಿತ್ರ‌ ಇದೇ ಜುಲೈ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ಖ್ಯಾತ ನಟ ರವಿಶಂಕರ್, ಈ ಚಿತ್ರದ ಜರ್ನಿ ಚೆನ್ನಾಗಿತ್ತು. ಚಿತ್ರದ ತುಣುಕುಗಳನ್ನು ನೋಡಿದಾಗ ನಾಯಕ ರಾಜೀವ್ ರೆಡ್ಡಿ ಅವರ ಅಭಿನಯ ಬಹಳ ಇಷ್ಟವಾಯಿತು. ನನ್ನದು ಈ ಚಿತ್ರದಲ್ಲಿ ವಿಭಿನ್ನ ಪಾತ್ರ. ಜುಲೈ 4 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಇದು ನನ್ನ ನಿರ್ದೇಶನದ 11 ನೇ ಚಿತ್ರ. ರವಿಶಂಕರ್ ಅವರು ಬಹಳ ವರ್ಷಗಳ ಪರಿಚಯ. ಆದರೆ ಅವರ ಜೊತೆಗೆ ಕೆಲಸ ಮಾಡಿರುವುದು ಇದೇ ಮೊದಲು. ಚಿತ್ರ ಅಂದುಕೊಂಡ ಹಾಗೆ ಮೂಡಿಬರಲು ನಿರ್ಮಾಪಕರು ಹಾಗೂ ಇಡೀ ತಂಡದ‌ ಸಹಕಾರವೇ ಕಾರಣ. ಇದೊಂದು ಬೆಂಗಳೂರು ಭೂಗತ ಜಗತ್ತಿನ ಸುತ್ತ ನಡೆಯುವ ಕಥೆ.

90 ರ ಕಾಲಘಟ್ಟದ ಕಥೆಯೂ ಹೌದು. ತೊಂದರೆಗೀಡಾದ ನಾಯಕ ಹೇಗೆ ತನ್ನ ಕಷ್ಟವನ್ನು ನಿಭಾಯಿಸಿಕೊಂಡು ಬರುತ್ತಾನೆ ಎನ್ನುವುದೇ ಪ್ರಮುಖ ಕಥಾಹಂದರ. ಆಕ್ಷನ್ ಚಿತ್ರ ಎನಿಸಿದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ರಾಜೀವ್ ರೆಡ್ಡಿ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಪ್ರೇರಣ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸುಮನ್, ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್ ಮುಂತಾದ ಹಿರಿಯ ನಟರು ಈ ಚಿತ್ರದಲ್ಲಿದ್ದಾರೆ. ಕರ್ನಲ್ ರಾಜೇಂದ್ರ ಅವರು ಸೇರಿದಂತೆ ಚಿತ್ರ‌ದ ಕೆಲವು ನಿರ್ಮಾಪಕರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜುಲೈ 4 ರಂದು ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಅನಂತರಾಜು ತಿಳಿಸಿದರು.

ಇದೊಂದು ರಿವೆಂಜ್ ಸ್ಟೋರಿ. ನಿಮಗೆ ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುತ್ತೀರಾ ಎಂಬುದೆ ಪ್ರಮುಖ ಕಥಾಹಂದರ.‌ ರವಿಶಂಕರ್, ಸುಮನ್ ಮುಂತಾದ ಹಿರಿಯ ಕಲಾವಿದರೊಂದಿಗೆ ಅಭಿನಯಿಸಿದ್ದು ಬಹಳ ಖುಷಿಯಾಗಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದು ನಾಯಕ ರಾಜೀವ್ ರೆಡ್ಡಿ ಹೇಳಿದರು.

ನಿರ್ಮಾಪಕರಾದ ಮಂಜುನಾಥ್, ಕೃಷ್ಣಮೂರ್ತಿ ಹಾಗೂ ಕರ್ನಲ್ ರಾಜೇಂದ್ರ ಅವರು ಮಾತನಾಡಿ‌, ಇಡೀ ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜುಲೈ 4 ರಂದು ನಮ್ಮ ಚಿತ್ರ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ.‌ ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರ ನೋಡಿ ಎಂದರು. ಸಂಗೀತ ನಿರ್ದೇಶಕ ನಾಗ್ ಹಾಗೂ ಛಾಯಾಗ್ರಾಹಕ ಪ್ರದೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು.

Visited 1 times, 1 visit(s) today
error: Content is protected !!