ರವಿ ಬೆಳಗೆರೆ ಅವರ ಕೃತಿ “ಭೀಮಾ ತೀರದ ಹಂತಕರು” ಈಗ ಸಿನಿಮಾ.
ತೊಂಭತ್ತರ ದಶಕದಲ್ಲಿ ಭೀಮಾತೀರದ ವಿಜಯಪುರ ಜಿಲ್ಲೆಯ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಘನಘೋರ ರಕ್ತಚರಿತ್ರೆಯನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ ನಿರ್ದೇಶಕ ನರೇಂದ್ರಬಾಬು. ಕಬಡ್ಡಿ ಬಾಬು ಎಂದೇ ಹೆಸರಾದ ಇವರು ಸಂತೆಯಲ್ಲಿ ನಿಂತ ಕಬೀರ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮುಂತಾದ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಭೀಮಾತೀರದ ಹಂತಕರು ಪತ್ರಕರ್ತ ರವಿ ಬೆಳಗೆರೆ ಅವರ ಮಹಾನ್ ಕೃತಿ. ಇದೇ ಪುಸ್ತಕವನ್ನಾಧರಿಸಿ ಬಾಬು ಈ ಚಿತ್ರವನ್ನು ಕಟ್ಟಿಕೊಡಲು ಹೊರಟಿದ್ದಾರೆ. ‘ಭೀಮಾತೀರದ ಹಂತಕರು’ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಭಾವನಾ ಬೆಳಗೆರೆ ಅವರು ಈ ಚಿತ್ರದಲ್ಲಿ ತಮ್ಮ ತಂದೆಯ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ. ಶ್ರೀ ಗವಿ ರಂಗನಾಥಸ್ವಾಮಿ ಪಿಕ್ಚರ್ಸ್ ಹಾಗೂ ಆಂಜನೇಯ ಪ್ರೊಡಕ್ಷನ್ಸ್ ಮೂಲಕ ಶ್ರೀಮತಿ ಶೃತಿ ಅನಿಲ್ ಕುಮಾರ್ ಹಾಗೂ ಶ್ರೀಮತಿ ಸುಮ ಅವರುಗಳು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನರೇಂದ್ರಬಾಬು ಮಾತನಾಡುತ್ತ ಕ್ರಿಸ್ತ ಪೂರ್ವದಿಂದ ಈವರೆಗೂ ಭೀಮೆಯ ತಟದಲ್ಲಿ ಯುದ್ದ ನಡೆಯುತ್ತಲೇ ಇದೆ. ಒಂದು ಸಣ್ಣ ಬದುವಿಗೋಸ್ಕರ ಚಂದಪ್ಪ ಹರಿಜನ ಹಾಗೂ ಕೇಶಪ್ಪ ತಾವರಖೇಡ ಕುಟುಂಬಗಳ ನಡುವೆ ಶುರುವಾಗುವ ಗಲಾಟೆ, ದೊಡ್ಡಮಟ್ಟದಲ್ಲಿ ಮುಂದುವರೆದುಕೊಂಡು ಹೋಗಿ ಘೋರ ಕೊಲೆಗಳೇ ನಡೆದು ಹೋಗುತ್ತವೆ. ರವಿ ಬೆಳಗೆರೆ ಅವರು ಘಟನೆ ನಡೆದ ಸ್ಥಳಕ್ಕೇ ಹೋಗಿ ವಸ್ತುಸ್ಥಿತಿ ಅಧ್ಯಯನ ಮಾಡಿ ಬರೆದ ಕೃತಿಯನ್ನು ಯಥಾವತ್ತಾಗಿ ತೆರೆ ಮೇಲೆ ತರುತ್ತಿದ್ದೇವೆ. ಭಾವನಾ ಮೇಡಂ ಅವರೂ ನಮಗೆ ಸಾಥ್ ನೀಡುತ್ತಿದ್ದಾರೆ. ಇದರಲ್ಲಿ ತುಂಬಾ ಕಂಟೆಂಟ್ ಇರೊದ್ರಿಂದ ಚಿತ್ರವನ್ನು ಎರಡು ಭಾಗದಲ್ಲಿ ಹೇಳುತ್ತಿದ್ದೇವೆ. ಮೊದಲ ಭಾಗದ ಸ್ಕ್ರಿಪ್ಟ್ ಈಗಾಗಲೇ ರೆಡಿ ಇದೆ. ಸಿದ್ದಪ್ಪ ಅವರ ಹತ್ಯೆಯಾಗುವವರೆಗೂ ನಡೆಯುವ ಘಟನೆಗಳನ್ನು ಇದರಲ್ಲಿ ದಾಖಲಿಸಿದ್ದೇನೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಹೋಗುತ್ತಿದ್ದೇವೆ ಎಂದರು.

ಭಾವನಾ ಬೆಳಗೆರೆ ಮಾತನಾಡುತ್ತ ಅಪ್ಪನ ಪಾತ್ರ ಮಾಡಲು ನನಗೆ ತುಂಬಾ ಖುಷಿಯಾಗ್ತಿದೆ. ಹಿಂದೆ ಬಂದಿದ್ದ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಒಂದು ಕಾಲದಲ್ಲಿ ಭೀಮೆಯ ತಟದಲ್ಲಿ ರಕ್ತದೋಕುಳಿಯೇ ಹರಿದಿತ್ತು. ಆ ಘಟನೆಯಲ್ಲಿ 60-70 ತಲೆಗಳು ಉರುಳಿದ್ದವು. ಆ ಜಿದ್ದು ಈಗಲೂ ಇದೆ. ಒಂದು ಮರಕ್ಕೆ ಹುಟ್ಟಿಕೊಳ್ಳುವಂಥ ದ್ವೇಷವದು. ನಾವು ಅವರ ಮನೆಗೆ ಹೋಗಿ ಊಟ ಮಾಡಿದ್ದೇವೆ. ಅಪ್ಪ ಬರೆದ ಪುಸ್ತಕದಲ್ಲಿ ಹೇಗಿದೆಯೋ ಹಾಗೇ ಚಿತ್ರವೂ ಬರಬೇಕೆನ್ನುವುದು ನನ್ನ ಆಸೆ ಎಂದರು.
ಛಾಯಾಗ್ರಾಹಕ ಕೆ.ಎಸ್.ಚಂದ್ರಶೇಖರ್ ಮಾತನಾಡುತ್ತ ಇದು ರಿಯಲಿಸ್ಟಿಕ್ ಸಬ್ಜೆಕ್ಟ್ ಆಗಿರುವುದರಿಂದ ಹಾಗೇ ಚಿತ್ರಿಸಬೇಕು. ನನಗೂ ಇದು ಹೊಸದು ಎಂದರು.
ಸಂಗೀತ ನಿರ್ದೇಶಕ ಲೋಕಿ ತವಸ್ಯ ಮಾತನಾಡಿ ಒಂದು ಪ್ಯಾಟ್ರನ್ ನಲ್ಲಿ ಇಡೀ ಸಿನಿಮಾ ಕಟ್ಟಿಕೊಡಬೇಕು ಎಂದು ಬಾಬು ಹೇಳಿದ್ದಾರೆ. ಗೋಪಾಲ ವಾಜಪೇಯಿ ಅವರ ಒಂದು ಹಾಡನ್ನು ಬಳಸಿಕೊಳ್ಳುತ್ತಿದ್ದೇವೆ ಎಂದರು.

ನಿರ್ಮಾಪಕಿಯರಾದ ಸುಮ ಹಾಗೂ ಶೃತಿ ಅನಿಲ್ ಕುಮಾರ್ ಮಾತನಾಡಿ ಈ ಮೊದಲು ಕಾದಂಬರಿ ಆಧಾರಿತ ಚಿತ್ರ ಮಾಡಿದ್ದೆವು. ಈಗಲೂ ಬೆಳಗೆರೆ ಅವರ ಕೃತಿ ಆಧರಿಸಿ ಮಾಡುತ್ತಿದ್ದೇವೆ ಮಾಡುತ್ತಿದ್ದೇವೆ ಎಂದರು.
ಈ ಚಿತ್ರದಲ್ಲಿ ಯುವನಟ ಲಿಖಿತ್ ಚಂದಪ್ಪ ಹರಿಜನ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಜಯವರ್ಧನ, ಸಯ್ಯಾಜಿ ಶಿಂಧೆ, ಶರತ್ ಲೋಹಿತಾಶ್ವ, ಸೋನು ಸೂದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಹರೀಶ್ ಕೊಮ್ಮೆ ಅವರ ಸಂಕಲನ, ರವಿವರ್ಮ ಅವರ ಸಾಹಸ ಸಂಯೋಜನೆ, ಬಾಬುಖಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.